Karnataka Assembly Elections 2023: ಚಾಮುಂಡೇಶ್ವರಿ ಎಲೆಕ್ಷನ್ ರೀತಿ ವರುಣ ರೋಚಕ!
ವರುಣ ಕ್ಷೇತ್ರದ ಚುನಾವಣೆ ಒಂದು ರೀತಿಯಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಇದ್ದಾಗ 2006ರಲ್ಲಿ ನಡೆದ ಚಾಮುಂಡೇಶ್ವರಿ ಉಪ ಚುನಾವಣೆಯನ್ನು ನೆನಪಿಸುತ್ತಿದೆ. ಆಗಲೂ ಗಲಾಟೆಗಳು ನಡೆದಿದ್ದವು. ಈಗಲೂ ನಡೆಯುತ್ತಿವೆ.
ಅಂಶಿ ಪ್ರಸನ್ನಕುಮಾರ್
ಮೈಸೂರು(ಏ.30): ಮಾಜಿ ಮುಖ್ಯಮಂತ್ರಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ವಿ.ಸೋಮಣ್ಣ ಕಣದಲ್ಲಿರುವ ವರುಣ ರಾಜ್ಯದಲ್ಲೇ ಅತ್ಯಂತ ಪ್ರತಿಷ್ಠಿತ ಕ್ಷೇತ್ರ. ಒಬ್ಬರು 2ನೇ ಬಾರಿ ಮುಖ್ಯಮಂತ್ರಿಯಾಗಲು ಯತ್ನಿಸುತ್ತಿದ್ದರೆ, ಮತ್ತೊಬ್ಬರಿಗೆ ಇಲ್ಲಿ ಗೆದ್ದು ತಮ್ಮ ಪಕ್ಷ ಅಧಿಕಾರಕ್ಕೇನಾದರೂ ಬಂದರೆ ಪ್ರಮುಖ ಗದ್ದುಗೆ ಸಿಗಬಹುದೆನ್ನುವ ಲೆಕ್ಕಾಚಾರ.
ವರುಣ ಕ್ಷೇತ್ರದ ಚುನಾವಣೆ ಒಂದು ರೀತಿಯಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಇದ್ದಾಗ 2006ರಲ್ಲಿ ನಡೆದ ಚಾಮುಂಡೇಶ್ವರಿ ಉಪ ಚುನಾವಣೆಯನ್ನು ನೆನಪಿಸುತ್ತಿದೆ. ಆಗಲೂ ಗಲಾಟೆಗಳು ನಡೆದಿದ್ದವು. ಈಗಲೂ ನಡೆಯುತ್ತಿವೆ.
ಸೋಮಣ್ಣ ಪ್ರವೇಶಕ್ಕೂ ಮೊದಲು ಸಿದ್ದರಾಮಯ್ಯರಿಗೆ ವರುಣ ಅತ್ಯಂತ ‘ಸುರಕ್ಷಿತ ಕ್ಷೇತ್ರ’ ಎಂದು ಎಣಿಸಲಾಗಿತ್ತು. ಸಿದ್ದರಾಮಯ್ಯ ಕೂಡ ‘ನಾನು ನಾಮಪತ್ರ ಸಲ್ಲಿಸಲು ಮಾತ್ರ ಬರುತ್ತೇನೆ. ಉಳಿದಂತೆ ಯತೀಂದ್ರ ನೋಡಿಕೊಳ್ಳುತ್ತಾರೆ’ ಎಂದಿದ್ದರು. ಯಾವಾಗ ಸೋಮಣ್ಣ ಅಭ್ಯರ್ಥಿ ಎಂದು ಗೊತ್ತಾಯಿತೋ ನಾಮಪತ್ರ ಸಲ್ಲಿಕೆ ಹಿಂದಿನ ದಿನವೇ ಮೈಸೂರಿಗೆ ಬಂದಿಳಿದು ಪ್ರಮುಖರ ಸಭೆ ನಡೆಸಿದರು. ನಾಮಪತ್ರ ಸಲ್ಲಿಕೆ ದಿನ ಸಾರ್ವಜನಿಕ ಸಭೆ, ನಂತರ ರಾರಯಲಿ ನಡೆಸಿದರು. ಇದಾದ ನಂತರ ಜೆಡಿಎಸ್ ತನ್ನ ಅಭ್ಯರ್ಥಿ ಬದಲಿಸಿ ಟಿ.ನರಸೀಪುರದ ಮಾಜಿ ಶಾಸಕ, ಪ.ಜಾತಿಯ ಡಾ.ಎನ್.ಎಲ್.ಭಾರತೀಶಂಕರ್‌ರಿಗೆ ಟಿಕೆಟ್ ನೀಡಿದ್ದು, ಬಿಎಸ್ಪಿಯಿಂದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಕಣಕ್ಕಿಳಿದಿದ್ದು, ಸೋಮಣ್ಣ ಅಬ್ಬರದ ಪ್ರಚಾರ ತಿಳಿದು ಪುತ್ರ ಯತೀಂದ್ರ ಕೋರಿಕೆ ಮೇರೆಗೆ ಮತ್ತೊಂದು ದಿನ ಬಂದು ಬೆಳಗ್ಗೆಯಿಂದ ರಾತ್ರಿವರೆಗೆ ಪ್ರಚಾರ ನಡೆಸಿದರು. ಇದೀಗ ಮೇ 4ರಿಂದ ಮತದಾನವರೆಗೆ ಮೈಸೂರಿನಲ್ಲೇ ಬಿಡಾರ ಹೂಡಲಿದ್ದಾರೆಂಬ ಮಾಹಿತಿ ಬಂದಿದೆ. ಅಪ್ಪನನ್ನು ಗೆಲ್ಲಿಸಲೇಬೇಕು ಎಂದು ತೀರ್ಮಾನಿಸಿರುವ ಯತೀಂದ್ರ ವರುಣದಲ್ಲೇ ಇದ್ದುಕೊಂಡು ಪ್ರತಿನಿತ್ಯ ಪ್ರಚಾರ ನಡೆಸಿದ್ದಾರೆ.
ಇನ್ನಷ್ಟು ಪ್ರಗತಿ ಸಾಧಿಸಲು ಬಿಜೆಪಿ ಬೆಂಬಲಿಸಿ: ನಳಿನ್ ಕುಮಾರ್ ಕಟೀಲ್ ಮನವಿ
ಶುರುವಾಗಿದೆ ಹೊಸ ಆಟ:
ಸೋಮಣ್ಣ ಚಾಮರಾಜನಗರದ ಜೊತೆಗೆ ವರುಣದಲ್ಲೂ ಗೆಲ್ಲಲೇಬೇಕೆಂದು ಹೋರಾಟ ನಡೆಸಿದ್ದಾರೆ. ಶತಾಯಗತಾಯ ಸಿದ್ದರಾಮಯ್ಯರನ್ನು ಹಣಿಯಲೇಬೇಕು ಎಂದುಕೊಂಡಿರುವ ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟಿ.ನರಸೀಪುರದಲ್ಲಿ ‘ಅಹಿಂದ’ ಸಮಾವೇಶ ನಡೆಸಿ, ಪಕ್ಷದ ಅಭ್ಯರ್ಥಿ ಡಾ.ಭಾರತೀಶಂಕರ್‌ರನ್ನು ಗೆಲ್ಲಿಸಲೇಬೇಕು ಎಂದು ಕರೆ ನೀಡಿದ್ದಾರೆ. ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ತಮ್ಮ ಮತ ಚದುರಿ ಹೋಗದಂತೆ ನೋಡಿಕೊಳ್ಳಲು ಕಣದಲ್ಲಿರುವುದಾಗಿ ಹೇಳಿದ್ದಾರೆ.
‘1978ರಲ್ಲಿ ನಾನು ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯನಾಗಿ ರಾಜಕೀಯ ಪ್ರವೇಶ ಮಾಡಿ, ಮುಖ್ಯಮಂತ್ರಿ ಹುದ್ದೆವರೆಗೆ ತಲುಪಿದ್ದೇನೆ. ಕೊನೇ ಚುನಾವಣೆಯನ್ನು ಕೂಡ ಸ್ವಗ್ರಾಮ ಇರುವ ವರುಣದಿಂದಲೇ ಎದುರಿಸಿ, ಚುನಾವಣಾ ರಾಜಕೀಯ ನಿವೃತ್ತಿ ಪಡೆಯಲು ಬಯಸಿದ್ದೇನೆ. ಮತ್ತೊಮ್ಮೆ ಸಿಎಂ ಆಗೋ ಅವಕಾಶವಿದೆ. ಆದ್ದರಿಂದ ಬೆಂಬಲಿಸಿ, ಗೆಲ್ಲಿಸಿ’ ಎಂದು ಸಿದ್ದರಾಮಯ್ಯ ಭಾವನಾತ್ಮಕ ಅಸ್ತ್ರ ಪ್ರಯೋಗಿಸಿದ್ದಾರೆ. ‘ಗೋವಿಂದರಾಜನಗರದಂತೆ ವರುಣವನ್ನು ಅಭಿವೃದ್ಧಿಪಡಿಸುತ್ತೇನೆ. ನೀವು ಬೆಂಬಲಿಸಿದರೆ ಉನ್ನತ ಸ್ಥಾನ ಸಿಗಬಹುದು’ ಎಂದು ಸೋಮಣ್ಣ ಕೂಡ ಅಭಿವೃದ್ಧಿ ಮಂತ್ರ ಪ್ರಯೋಗಿಸಿದ್ದಾರೆ.
ಇಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆಯೇ ನೇರ ಹಣಾಹಣಿ. ಕ್ಷೇತ್ರ ರಚನೆಯಾದ ನಂತರ ನಡೆದಿರುವ ಮೂರು ಚುನಾವಣೆಗಳಲ್ಲೂ ಕಾಂಗ್ರೆಸ್ ಗೆದ್ದು ಬೀಗಿದೆ. ಸಿದ್ದರಾಮಯ್ಯ ಮೇಲಿನ ಪ್ರೀತಿ ಇದಕ್ಕೆ ಕಾರಣ. ಈಗಲೂ ಅವರಿಗೆ ವಾತಾವರಣ ಪೂರಕವಾಗಿಯೇ ಇದೆ. ಜೆಡಿಎಸ್ ಹಾಗೂ ಬಿಎಸ್ಪಿ ತಮ್ಮ ಮತಗಳನ್ನು ತಾವೇ ಪಡೆದರೆ ಫಲಿತಾಂಶದ ಮೇಲೆ ಅಂಥ ಪರಿಣಾಮ ಆಗದು. ಆದರೆ ವೀರಶೈವ ಲಿಂಗಾಯತರ ಜೊತೆಗೆ ಪ.ಪಂಗಡ, ಎಡಗೈ ಮತಗಳು ಒಂದೆಡೆ ಚಲಾವಣೆಯಾಗಿ ಕಾಂಗ್ರೆಸ್‌ನಲ್ಲಿ ಒಳೇಟು ಹಾಗೂ ಬೇರೆ ಪಕ್ಷಗಳ ಮತಗಳು ಮತ್ತೊಂದು ಪಕ್ಷಕ್ಕೆ ವರ್ಗಾವಣೆಯಾದಲ್ಲಿ 2006ರ ಚಾಮುಂಡೇಶ್ವರಿ ಉಪ ಚುನಾವಣೆಯಂತೆ ಈ ಬಾರಿ ವರುಣದ ಫಲಿತಾಂಶ ರೋಚಕತೆಯಿಂದ ಕೂಡಿರುತ್ತದೆ.
ಜಾತಿ ಲೆಕ್ಕಾಚಾರ
ವೀರಶೈವ-ಲಿಂಗಾಯತರು ಸುಮಾರು 65 ಸಾವಿರ, ಪರಿಶಿಷ್ಟಜಾತಿ 35 ಸಾವಿರ, ಪ.ಪಂಗಡ 30 ಸಾವಿರ, ಕುರುಬರು 25 ಸಾವಿರ, ಮುಸ್ಲಿಮರು 10 ಸಾವಿರ, ಉಪ್ಪಾರರು 8 ಸಾವಿರ, ಒಕ್ಕಲಿಗರು 6,500, ಇತರೆ 35 ಸಾವಿರ ಮತದಾರರು ಕ್ಷೇತ್ರದಲ್ಲಿದ್ದಾರೆ.
ವರುಣಾ ಬಿಜೆಪಿ ಅಭ್ಯರ್ಥಿ ಸೋಮಣ್ಣಗೆ ಗೇಟ್ ಪಾಸ್ ಕೊಟ್ಟ ಗ್ರಾಮಸ್ಥರು!
2018ರ ಫಲಿತಾಂಶ
ಯತೀಂದ್ರ ಸಿದ್ದರಾಮಯ್ಯ(ಕಾಂಗ್ರೆಸ್)- 96,435
ತೋಟದಪ್ಪ ಬಸವರಾಜು (ಬಿಜೆಪಿ)- 37,819
ಎಸ್.ಎಂ.ಅಭಿಷೇಕ್ (ಜೆಡಿಎಸ್)- 28,123
ಸಿದ್ದರಾಮಯ್ಯ, ವಿ. ಸೋಮಣ್ಣ, ಡಾ.ಎನ್.ಎಲ್. ಭಾರತೀಶಂಕರ್, ಎಂ. ಕೃಷ್ಣಮೂರ್ತಿ
ಕಾಂಗ್ರೆಸ್‌ನಿಂದ ಡಾ.ಯತೀಂದ್ರ ಮತ್ತೆ ಸ್ಪರ್ಧಿಸುತ್ತಾರೆಂಬ ಕಾರಣಕ್ಕೆ ಬಿಜೆಪಿ ಟಿಕೆಟ್‌ಗೆ ಕ್ಷೇತ್ರದಿಂದ ಒಂದು ಡಜನ್ ಆಕಾಂಕ್ಷಿಗಳಿದ್ದರು. ಯಾವಾಗ ಸಿದ್ದರಾಮಯ್ಯ ವರುಣದಿಂದ ಕಣಕ್ಕಿಳಿಯುತ್ತಾರೆಂಬುದು ಖಚಿತವಾಯಿತೋ ಆಗ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರರನ್ನು ಕಣಕ್ಕಿಳಿಸಬೇಕೆಂಬ ಆಗ್ರಹ ಕೇಳಿ ಬಂತು. ಆದರೆ ಯಡಿಯೂರಪ್ಪ ಮಾತ್ರ ವಿಜಯೇಂದ್ರ ಶಿಕಾರಿಪುರದಿಂದಲೇ ಕಣಕ್ಕಿಳಿಯುತ್ತಾರೆ ಎಂದು ಪಟ್ಟುಹಿಡಿದರು. ಆಗ ಸಾಧ್ಯವಾದರೆ ಗೆಲ್ಲಬೇಕು, ಇಲ್ಲವೇ ಬೇರೆಡೆ ಪ್ರಚಾರಕ್ಕೆ ಹೋಗದಂತೆ ಸಿದ್ದರಾಮಯ್ಯ ಅವರನ್ನು ವರುಣದಲ್ಲೇ ಕಟ್ಟಿಹಾಕಬೇಕು ಎಂಬ ಉದ್ದೇಶ ಇಟ್ಟುಕೊಂಡು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮಣ್ಣ ಹೆಸರು ಆಖೈರುಗೊಳಿಸಿದರು. ಅಲ್ಲದೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು, ನೀವು ಇಲ್ಲಿಂದ ಗೆದ್ದಲ್ಲಿ ಪ್ರಮುಖ ಜವಾಬ್ದಾರಿ ನೀಡುವ ಭರವಸೆಯೊಂದಿಗೆ ವರುಣ ಜೊತೆಗೆ ಚಾಮರಾಜನಗರದಿಂದಲೂ ಟಿಕೆಟ್ ನೀಡುವುದಾಗಿ ಹೇಳಿದ್ದರಿಂದ ಸೋಮಣ್ಣ ಸಮ್ಮತಿಸಿದರು ಎನ್ನಲಾಗಿದೆ.
ಭುಗತಗಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿಗೆ ಧಿಕ್ಕಾರ, ಸಿದ್ದರಾಮಯ್ಯಗೆ ಜೈಕಾರ ಹಾಕಿ ಪ್ರಚಾರಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ. ಇದಲ್ಲದೆ ಸಿದ್ದರಾಮಯ್ಯ ಹುಟ್ಟೂರು ಸಿದ್ದರಾಮನಹುಂಡಿಯಲ್ಲಿ ಸೋಮಣ್ಣ ಪ್ರಚಾರಕ್ಕೆ ಹೋದಾಗ ಉಭಯ ಪಕ್ಷಗಳ ನಡುವೆ ಗಲಾಟೆ ಪ್ರಕರಣ ತೀವ್ರ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.