ವಾಲ್ಮೀಕಿ, ಮುಡಾ ಅಕ್ರಮ ಹಂಚಿಕೆ ಹಗರಣ ಗದ್ದಲಕ್ಕೆ ಮುಂಗಾರು ಕಲಾಪವೇ ಬಲಿ: ಧರಣಿ, ಕೋಲಾಹಲ

ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಕೋರಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ಪಟ್ಟು ಬಿಡದ ಹಿನ್ನೆಲೆಯಲ್ಲಿ ವಿಧಾನಮಂಡಲದಲ್ಲಿ ಕೋಲಾಹಲ ಸೃಷ್ಟಿಯಾಗಿ ಕೊನೆಗೆ ಉಭಯ ಸದನಗಳ ಕಲಾಪವೇ ಬಲಿಯಾಯಿತು. 
 

Valmiki Muda illegal allocation scandal Monsoon proceedings postponed indefinitely gvd

ವಿಧಾನಸಭೆ (ಜು.26): ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಕೋರಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ಪಟ್ಟು ಬಿಡದ ಹಿನ್ನೆಲೆಯಲ್ಲಿ ವಿಧಾನಮಂಡಲದಲ್ಲಿ ಕೋಲಾಹಲ ಸೃಷ್ಟಿಯಾಗಿ ಕೊನೆಗೆ ಉಭಯ ಸದನಗಳ ಕಲಾಪವೇ ಬಲಿಯಾಯಿತು. ಗುರುವಾರ ಉಭಯ ಸದನಗಳ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದರಿಂದ ನಿಗದಿತ ಅವಧಿಗಿಂತ ಒಂದು ದಿನ ಮೊದಲೇ ಅಧಿವೇಶನ ಮೊಟಕುಗೊಂಡಿತು. ವಾಸ್ತವವಾಗಿ ಶುಕ್ರವಾರ ಕೊನೆಯ ದಿನವಾಗಿತ್ತು.

ಬಿಜೆಪಿ ಮಂಡಿಸಿದ ನಿಲುವಳಿ ಸೂಚನೆ ಎರಡೂ ಸದನಗಳಲ್ಲಿಯೂ ತಿರಸ್ಕರಿಸಲ್ಪಟ್ಟಿದ್ದರಿಂದ ಬಿಜೆಪಿ-ಜೆಡಿಎಸ್‌ ಸದಸ್ಯರು ಉಭಯ ಸದನಗಳಲ್ಲಿ ಬುಧವಾರ ಅಹೋರಾತ್ರಿ ಧರಣಿ ನಡೆಸಿದರು. ಚರ್ಚೆಗೆ ಅವಕಾಶ ನೀಡದಿರುವುದನ್ನು ಖಂಡಿಸಿ ಪ್ರತಿಭಟನೆಯನ್ನು ಎರಡೂ ಸದನಗಳಲ್ಲಿಯೂ ಗುರುವಾರ ಮುಂದುವರಿಸಿದ ಪರಿಣಾಮ ತೀವ್ರ ಗದ್ದಲ ಉಂಟಾಯಿತು. ಪ್ರತಿಪಕ್ಷಗಳು ಪಟ್ಟು ಹಿಡಿದರೂ ಸೊಪ್ಪು ಹಾಕದ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್‌ ಹಾಗೂ ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಚರ್ಚೆಗೆ ಅವಕಾಶ ನೀಡಲಿಲ್ಲ.

ಪ್ರಕೃತಿ, ಚಾಮುಂಡಿದೇವಿ ಕಾಂಗ್ರೆಸ್‌ ಸರ್ಕಾರದ ಪರವಿದೆ: ಸಿಎಂ ಸಿದ್ದರಾಮಯ್ಯ

ತೀವ್ರ ಗದ್ದಲ, ಗೊಂದಲ ಸೃಷ್ಟಿಯಾಗಿ ಕಲಾಪಕ್ಕೆ ಅಡ್ಡಿಯಾದ್ದರಿಂದ ನಿಗದಿತ ಅವಧಿಗೆ ಕಲಾಪ ಮುಗಿಸಲು ಸಾಧ್ಯವಾಗಲಿಲ್ಲ. ಒಂಭತ್ತು ದಿನಗಳ ಕಾಲ ನಡೆಯಬೇಕಿದ್ದ ಕಲಾಪ ಒಂದು ದಿನ ಮೊಟಕಾಗಿ ಎಂಟು ದಿನ ನಡೆಯಿತು. ಕಳೆದ ವಾರ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಕಲಾಪಕ್ಕೆ ಅಡ್ಡಿಯನ್ನುಂಟು ಮಾಡಿದರೆ, ಈ ವಾರ ಮುಡಾ ಹಗರಣ ಕಲಾಪವನ್ನೇ ನುಂಗಿ ಹಾಕಿತು. ಬುಧವಾರ ಮತ್ತು ಗುರುವಾರ ಇಡೀ ದಿನ ಸದನದ ಕಲಾಪವೇ ಸರಿಯಾಗಿ ನಡೆಯಲಿಲ್ಲ. ಪ್ರತಿಪಕ್ಷಗಳ ಧರಣಿ ನಡುವೆಯೇ ಸಭಾಧ್ಯಕ್ಷರು ಕೆಲವು ಕಾರ್ಯಕಲಾಪಗಳನ್ನು ನಡೆಸಿದರು. 

ಚರ್ಚೆಗೆ ಅವಕಾಶ ನೀಡದ ಕ್ರಮ ಖಂಡಿಸಿ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರಾಸಬದ್ಧ ಘೋಷಣೆಗಳನ್ನು ಸರ್ಕಾರಕ್ಕೆ ಚಾಟಿ ಬೀಸುವ ಪ್ರಯತ್ನ ಮಾಡಲಾಯಿತು. ನಿಲುವಳಿ ಸೂಚನೆ ಅತ್ಯಗತ್ಯ ಮತ್ತು ತುತು ಆಗಿರಬೇಕು ಅಥವಾ ಅದು ಸಾರ್ವಜನಿಕ ಮಹತ್ವದ್ದಾಗಿರಬೇಕು ಎಂಬುದು ಸಭಾಧ್ಯಕ್ಷರ ಸ್ಪಷ್ಟನೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದ ಬಗ್ಗೆ ತುರ್ತಾಗಿರುವ ಕಾರಣ ಚರ್ಚೆಗೆ ಅವಕಾಶ ನೀಡಲಾಯಿತು. ತನಿಖೆ ನಡೆಯುತ್ತಿದ್ದರೂ ಚರ್ಚೆಗೆ ಅವಕಾಶ ಕೊಟ್ಟಿದ್ದೇವೆ. ಇ.ಡಿ.ಗೆ ಸಂಬಂಧ ಪಟ್ಟ ವಿಚಾರವೂ ತುರ್ತಾಗಿರುವುದರಿಂದ ಚರ್ಚೆಗೆ ಅವಕಾಶ ನೀಡಲಾಯಿತು. 

ಅಲ್ಲದೇ, ಶಾಸಕ ಶಿವಲಿಂಗೇಗೌಡರ ದೇವರಾಜ ಅರಸು ಟ್ರಕ್ ಟರ್ಮಿನಲ್ ವಿಚಾರದ ಮೇಲಿನ ನಿಲುವಳಿ ಸೂಚನೆ ಚರ್ಚೆಗೆ ಅವಕಾಶ ಕೊಡಲಾಯಿತು ಎನ್ನುವುದು ಸಭಾಧ್ಯಕ್ಷರ ವಾದವಾಗಿತ್ತು. ಮೈಸೂರು ಮುಡಾ ಹಗರಣ ವಿಚಾರ ಕಳೆದ 10 ವರ್ಷಗಳ ಹಿಂದೆ ಆಗಿರುವ ಘಟನೆ. ಆ ಬಗ್ಗೆ ನ್ಯಾಯಾಂಗ ತನಿಖೆ ನಡೆಯುತ್ತಿದೆಯಲ್ಲದೇ, ಲೋಕಾಯುಕ್ತದಲ್ಲಿಯೂ ದೂರು ದಾಖಲಾಗಿದೆ. ಈಗ ನಡೆದಿರುವ ಘಟನೆಯಲ್ಲ. ಚರ್ಚೆಗೆ ಅವಕಾಶ ನೀಡಿದರೆ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗುತ್ತದೆ. ಅಲ್ಲದೇ, ಮುಂದಿನ ಸಭಾಧ್ಯಕ್ಷರಿಗೆ ಇದು ಉದಾಹರಣೆಯಾಗಿ, ಅನುಸರಿಸುವ ಸಾಧ್ಯತೆ ಇದೆ. ಹೀಗಾಗಿ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪರಿಣಾಮ ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು.

ಗದ್ದಲದಲ್ಲೇ ವಿಧೇಯಕ, ನಿರ್ಣಯಗಳ ಅಂಗೀಕಾರ: ಗದ್ದಲದ ಮಧ್ಯೆ ವಿಧಾನಸಭೆಯಲ್ಲಿ 12 ಮಸೂದೆಗಳನ್ನು ಅಂಗೀಕರಿಸಿದರೆ, ವಿಧಾನಪರಿಷತ್‌ನಲ್ಲಿ 24 ವಿಧೇಯಕಗಳು ಅಂಗೀಕಾರಗೊಂಡಿವೆ. ಅಲ್ಲದೇ ಕೇಂದ್ರ ಸರ್ಕಾರದ ನೀಟ್‌ಗೆ ವಿರೋಧ, ‘ಒಂದು ದೇಶ ಒಂದು ಚುನಾವಣೆ’ ನೀತಿಯನ್ನು ಅನುಷ್ಠಾನಗೊಳಿಸದಂತೆ ಒತ್ತಾಯ, ವಿಧಾನಸಭೆ ಹಾಗೂ ಲೋಕಸಭೆ ಕ್ಷೇತ್ರಗಳ ಪುನರ್‌ವಿಂಗಡಣೆಯನ್ನು 1971ರ ಜನಸಂಖ್ಯೆ ಆಧಾರದ ಮೇಲೆಯೇ ನಡೆಸುವಂತೆ ಆಗ್ರಹಿಸುವುದು ಸೇರಿ ಕೇಂದ್ರದ ವಿರುದ್ಧ ಉಭಯ ಸದನಗಳಲ್ಲಿ ನಾಲ್ಕು ನಿರ್ಣಯಗಳನ್ನು ಮಂಡಿಸಿ ಅಂಗೀಕಾರ ಪಡೆಯಲಾಯಿತು.

ಚನ್ನಪಟ್ಟಣದ ಎನ್‌ಡಿಎ ಮೈತ್ರಿಯಲ್ಲಿ ಒಡಕು: ಉಪಚುನಾವಣೆ ಟಿಕೆಟ್‌ಗಾಗಿ ತೀವ್ರ ಪೈಪೋಟಿ

ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕ ಅಂಗೀಕಾರಕ್ಕೆ ವಿಧಾನಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಂಟಿ ಸದನ ಸಮಿತಿ ರಚನೆಗೆ ಒಪ್ಪಿಗೆ ನೀಡಲಾಯಿತು. ಸದನ ಸಮಿತಿ ವರದಿ ನೀಡಿದ ಬಳಿಕವೇ ವಿಧೇಯಕಕ್ಕೆ ಅಂಗೀಕಾರ ಪಡೆದುಕೊಳ್ಳಲಾಗುತ್ತದೆ. ಕೊನೆಯ ಎರಡು ದಿನಗಳ ಕಾಲ ಯಾವುದೇ ಸಾರ್ವಜನಿಕ ಹಿತಾಸಕ್ತಿಯ ಸಂಬಂಧಪಟ್ಟ ವಿಷಯಗಳ ಕುರಿತು ಚರ್ಚೆ ನಡೆಯದೆ ಬರೀ ಗದ್ದಲದಲ್ಲಿಯೇ ಮುಂಗಾರು ಅಧಿವೇಶನವನ್ನು ಮುಕ್ತಾಯಗೊಳಿಸಲಾಯಿತು.

Latest Videos
Follow Us:
Download App:
  • android
  • ios