Asianet Suvarna News Asianet Suvarna News

ವಿ.ಸೋಮಣ್ಣ ಬಿಜೆಪಿ ಪಕ್ಷ ಬಿಡಲ್ಲ: ಮಾಜಿ ಸಚಿವ ರಾಮದಾಸ್ ಸ್ಪಷ್ಟನೆ

ಮಾಜಿ ಸಚಿವ ವಿ. ಸೋಮಣ್ಣ ಹಾಗೂ ಅರವಿಂದ್ ಲಿಂಬಾವಳಿ ಅವರು ಗೃಹಸಚಿವ ಪರಮೇಶ್ವರ್ ಅವರನ್ನು ಭೇಟಿ ಮಾಡಿರುವುದಕ್ಕೆ ಏನೋ ಅರ್ಥ ಕಲ್ಪಿಸುವುದು ಬೇಡ ಎಂದು ಮಾಜಿ ಸಚಿವ ಎಸ್.ಎ ರಾಮದಾಸ್ ಅವರು ಮಡಿಕೇರಿಯಲ್ಲಿ ಹೇಳಿದ್ದಾರೆ. 

V Somanna will not leave BJP party Says Former minister SA Ramadas gvd
Author
First Published Nov 23, 2023, 9:43 PM IST

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು 

ಕೊಡಗು (ನ.23): ಮಾಜಿ ಸಚಿವ ವಿ. ಸೋಮಣ್ಣ ಹಾಗೂ ಅರವಿಂದ್ ಲಿಂಬಾವಳಿ ಅವರು ಗೃಹಸಚಿವ ಪರಮೇಶ್ವರ್ ಅವರನ್ನು ಭೇಟಿ ಮಾಡಿರುವುದಕ್ಕೆ ಏನೋ ಅರ್ಥ ಕಲ್ಪಿಸುವುದು ಬೇಡ ಎಂದು ಮಾಜಿ ಸಚಿವ ಎಸ್.ಎ ರಾಮದಾಸ್ ಅವರು ಮಡಿಕೇರಿಯಲ್ಲಿ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು ಎಲ್ಲವನ್ನು ಸರಿಮಾಡಿಕೊಂಡು ಮುಂದಿನ ಚುನಾವಣೆಗೆ ಒಟ್ಟಾಗಿ ಹೋಗುತ್ತೇವೆ. ಹೊಸದಾಗಿ ರಾಜ್ಯ ಅಧ್ಯಕ್ಷರಾಗಿ ಬಂದಿರುವ ವಿಜಯೇಂದ್ರ ಆ ಕೆಲಸವನ್ನು ಮಾಡುತ್ತಾರೆ ಎಂದಿದ್ದಾರೆ. ವಿ ಸೋಮಣ್ಣ ಅವರು 6 ನೇ ತಾರೀಕಿಗೆ ನಿರ್ಧಾರ ತಿಳಿಸುತ್ತೇನೆ ಎಂದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಕೆಲವು ಸಂದರ್ಭದಲ್ಲಿ ವೈಯಕ್ತಿಕವಾಗಿ ಕೆಲವು ನಿರ್ಧಾರ ಮಾಡುತ್ತಾರೆ. 

ಆ ಭಾವನೆಗಳನ್ನು ತುಲನಾತ್ಮಕವಾಗಿ ಚಿಂತಿಸಿ ನಿರ್ಧರಿಸುತ್ತಾರೆ. ಆ ದೃಷ್ಟಿಯಲ್ಲಿ ನೋಡುವುದಾದರೆ ಬಿಜೆಪಿಯಲ್ಲೇ ಉಳಿದುಕೊಳ್ಳುತ್ತೇನೆ ಎಂದು ನಿರ್ಧಾರ ಮಾಡಬಹುದು ಎಂದಿದ್ದಾರೆ. ಹಿರಿಯರೊಂದಿಗೆ ಮಾತನಾಡದೆ ರಾಜ್ಯಾಧ್ಯಕ್ಷರ ಆಯ್ಕೆ ಮಾಡಲಾಗಿದೆ ಎಂಬ ಹೇಳಿಕೆ ವಿಚಾರಕ್ಕೆ ಎಲ್ಲಾ ಸಮಯದಲ್ಲಿ ಎಲ್ಲಾ ನಿರ್ಧಾರಗಳು ಸಂತೋಷ ಕೊಡಲ್ಲ. ನಮ್ಮ ತತ್ವ ಸಿದ್ಧಾಂತಗಳ ಆಧಾರದಲ್ಲಿ ಹೋಗಬೇಕ ಅಥವಾ ಬಿಡಬೇಕಾ ಎನ್ನುವ ನಿರ್ಧಾರ ಇರುತ್ತದೆ. ಆ ನಿರ್ಧಾರವನ್ನು ಆಯಾ ರಾಜಕಾರಣಿಗಳು ತೆಗೆದುಕೊಳ್ಳುತ್ತಾರೆ. ಹಾಗಾಗಿ ಸೋಮಣ್ಣ ಅವರು ಹಿರಿಯರಿದ್ದಾರೆ. ಅವರು ಬೇರೆ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದುಕೊಂಡಿದ್ದೇನೆ. 

ಬೇಸಿಗೆಗೂ ನಾಲ್ಕು ತಿಂಗಳು ಮೊದಲೇ ಬತ್ತಿದ ಚಿಕ್ಲಿಹೊಳೆ ಜಲಾಶಯ: ರೈತರಲ್ಲಿ ಆತಂಕ

ಯಾರನ್ನೋ ಭೇಟಿಯಾದ ಕೂಡಲೇ ಬಿಜೆಪಿಗೆ ಏನೋ ಆಯ್ತು ಎನ್ನುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ವಿಧಾನಸಭಾ ಅಧಿವೇಶನಕ್ಕೆ ಸಚಿವ ಜಮೀರ್ ಅಹಮ್ಮದ್ ಖಾನ್ ಅವರನ್ನು ಬಿಡಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಹೇಳಿರುವುದು ಸರಿಯೇ ಇದೆ. ಬಿಡಲ್ಲ ಎಂದರೆ ಅದು ದೈಹಿಕವಾಗಿ ಅಲ್ಲ. ಬದಲಾಗಿ ಎಲ್ಲಾ ರೀತಿಯಿಂದಲೂ ಕೂಡ ಬಿಡಲ್ಲ ಎಂದಿದ್ದಾರೆ. ಲೋಕಸಭೆ ಆಗಿರಬಹುದು ಅಥವಾ ವಿಧಾನಸಭೆ ಆಗಿರಬಹುದು. ಅಲ್ಲಿ ಅಧ್ಯಕ್ಷರಾಗಿ ಕೂರುವವರಿಗೆ ಸಂವಿಧಾನಬದ್ಧವಾಗಿ ಸ್ಥಾನ ಕೊಡಲಾಗಿದೆ. ಒಬ್ಬ ನ್ಯಾಯಾಧೀಶ ಯಾವ ಧರ್ಮದವರೆಂದು ಯೋಚನೆ ಮಾಡಲ್ಲ. 

ಅಲ್ಲಿಗೆ ಹೋದ ಕೂಡಲೇ ಮೈಲಾರ್ಡ್ ಎಂದು ಹೇಳುತ್ತೇವೆ. ಅದೇ ರೀತಿ ಸ್ಪೀಕರ್ ಒಬ್ಬ ಯಾವುದೇ ಸಮಾಜ, ಧರ್ಮದವರಾಗಿರಲಿ, ಆ ಸ್ಥಾನಕ್ಕೆ ಗೌರವವಿದೆ. ಆದರೆ ರಾಜಕೀಯವಾಗಿ ಇದನ್ನು ಉಪಯೋಗಿಸಲಾಗಿದೆ. ಇದು ಕೇವಲ ರಾಜಕೀಯ ಪಕ್ಷಗಳಿಗೆ ಮಾಡುವ ಅಪಮಾನವಲ್ಲ. ಅದು ಆ ಸ್ಥಾನ, ಸಂವಿಧಾನಕ್ಕೆ ಮಾಡಿದಂತ ಅವಮಾನ. ಆದ್ದರಿಂದ ಸಂವಿಧಾನಕ್ಕೆ ವಿರೋಧ ಮಾಡುವವರನ್ನು ವಿಧಾನಸಭೆಗೆ ಬಿಡಬಾರದು ಎನ್ನುವುದು ನಮ್ಮ ಚಿಂತನೆ. ಅದನ್ನು ನಮ್ಮ ಪಕ್ಷದ ಅಧ್ಯಕ್ಷರು ಹೇಳಿದ್ದಾರೆ. ನಮ್ಮ ಶಾಸಕರು, ವಿಪಕ್ಷ ನಾಯಕರು ಅದರ ವಿರುದ್ಧ ಏನು ಮಾಡಬೇಕೋ ಹಾಗೆ ಮಾಡುತ್ತಾರೆ ಎಂದು ಹೇಳಿದ್ದಾರೆ. 

ಕಾಂತರಾಜ್ ವರದಿ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಜಾರಿಯಾಗಲ್ಲ ಎಂದು ಹೇಳಿದ್ದಾರೆ. ಕಾಂತರಾಜ ವರದಿಯ ಮೂಲಪ್ರತಿ ಮಿಸ್ ಆಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಇದನ್ನು ಜಾರಿ ಮಾಡುವುದಾಗಿದ್ದರೆ ಹಿಂದೆಯೇ ಸಿದ್ದರಾಮಯ್ಯ ಅವರು ಸಿಎಂ ಆಗಿರುವಾಗಲೇ ಜಾರಿ ಮಾಡುತ್ತಿದ್ದರು. ಆದರೆ ಇದು ಹಿಂದೂ ಸಮಾಜವನ್ನು ಒಡೆದಾಳುತ್ತದೆ ಎನ್ನುವುದು ಆ ವರದಿಯಲ್ಲಿ ಇದೆ. ಹೀಗಾಗಿ ಆ ವರದಿಯನ್ನು ಸಿದ್ದರಾಮಯ್ಯ ಅವರು ಜಾರಿ ಮಾಡಲಿಲ್ಲ. ಈಗಲೂ ಅದನ್ನು ಜಾರಿ ಮಾಡುವುದಿಲ್ಲ. 

ಎಚ್‌ಡಿಕೆ ಹೇಳಿದಂತೆ ಕೀಳುಮಟ್ಟಕ್ಕೆ ಇಳಿದಿದ್ರೆ ರಾಜಕೀಯ ನಿವೃತ್ತಿ: ಡಿ.ಕೆ.ಶಿವಕುಮಾರ್‌

ಬದಲಾಗಿ ಕೇಂದ್ರದಲ್ಲಿ ರಾಹುಲ್ ಗಾಂಧಿಯವರನ್ನು ಮೆಚ್ಚಿಸುವುದಕ್ಕಾಗಿ ಮತ್ತು ರಾಹುಲ್ ಗಾಂಧಿಯವರು ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಗಳನ್ನು ಗಮನದಲ್ಲಿ ಇರಿಸಿಕೊಂಡು ಒಬಿಸಿ ಜಾತಿಗಣತಿ ಮಾಡಲಾಗುವುದು ಎಂದಿದ್ದಾರೆ.  ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಹೀಗೆ ಮಾಡುತ್ತಿದ್ದಾರೆ ಅಷ್ಟೆ. ಜೊತೆಗೆ ಈ ಆರು ತಿಂಗಳಲ್ಲಿ ಈ ಸರ್ಕಾರದ ಮೇಲೆ ಒಬಿಸಿ ಸಮುದಾಯಕ್ಕೆ ಭ್ರಮನಿರಸನವಾಗಿದೆ. ಇದನ್ನು ಬೇರೆಡೆ ಗಮನ ಸೆಳೆಯುವುದಕ್ಕಾಗಿ ಕಾಂತರಾಜ ವರದಿ ವಿಚಾರವನ್ನು ಮುನ್ನೆಲೆಗೆ ತರಲಾಗಿದೆ. ಈ ವರದಿ ಜಾರಿಯಾಗಲ್ಲ ಎಂದು ಹೇಳಿದ್ದಾರೆ.

Follow Us:
Download App:
  • android
  • ios