Asianet Suvarna News Asianet Suvarna News

Kodagu: ಬೇಸಿಗೆಗೂ ನಾಲ್ಕು ತಿಂಗಳು ಮೊದಲೇ ಬತ್ತಿದ ಚಿಕ್ಲಿಹೊಳೆ ಜಲಾಶಯ: ರೈತರಲ್ಲಿ ಆತಂಕ

ಬರೋಬ್ಬರಿ 6 ತಿಂಗಳವರೆಗೆ ಮಳೆ ಸುರಿಯುವ ಕೊಡಗು ಜಿಲ್ಲೆಯಲ್ಲಿ ಈ ಬಾರಿ ಕೇವಲ ಒಂದೆರಡು ತಿಂಗಳು ಮಾತ್ರವೇ ಮಳೆ ಸುರಿಯಿತು. ಬಳಿಕ ತೀವ್ರ ಮಳೆ ಕೊರತೆ ಎದುರಾಯಿತು. ಹೀಗಾಗಿ ಮಲೆನಾಡು ಜಿಲ್ಲೆಯಾಗಿರುವ ಕೊಡಗಿನಲ್ಲಿ ಬೇಸಿಗೆಗೆ ಮುನ್ನವೇ ಜಲಾಶಯಗಳೇ ಬತ್ತುತ್ತಿವೆ ಎಂದರೆ ನಿಮಗೆ ಅಚ್ಚರಿಯಾಗಬಹುದು. 

Kodagu News Chiklihole Reservoir dried up four months Before Summer gvd
Author
First Published Nov 22, 2023, 9:43 PM IST

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ನ.22): ಬರೋಬ್ಬರಿ 6 ತಿಂಗಳವರೆಗೆ ಮಳೆ ಸುರಿಯುವ ಕೊಡಗು ಜಿಲ್ಲೆಯಲ್ಲಿ ಈ ಬಾರಿ ಕೇವಲ ಒಂದೆರಡು ತಿಂಗಳು ಮಾತ್ರವೇ ಮಳೆ ಸುರಿಯಿತು. ಬಳಿಕ ತೀವ್ರ ಮಳೆ ಕೊರತೆ ಎದುರಾಯಿತು. ಹೀಗಾಗಿ ಮಲೆನಾಡು ಜಿಲ್ಲೆಯಾಗಿರುವ ಕೊಡಗಿನಲ್ಲಿ ಬೇಸಿಗೆಗೆ ಮುನ್ನವೇ ಜಲಾಶಯಗಳೇ ಬತ್ತುತ್ತಿವೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಆದರೂ ಇದು ಸತ್ಯ. ಕುಶಾಲನಗರ ತಾಲ್ಲೂಕಿನಲ್ಲಿ ಇರುವ ಚಿಕ್ಲಿಹೊಳೆ ಜಲಾಶಯ 0.18 ಟಿಎಂಸಿ ಸಾಮರ್ಥ್ಯವನ್ನು ಹೊಂದಿರುವ ಚಿಕ್ಕ ಜಲಾಶಯ. ಕೊಡಗು ಜಿಲ್ಲೆಯಲ್ಲಿ ತುಂಬಾ ಮಳೆ ಸರಿಯುವುದರಿಂದ ಜಲಾಶಯದಲ್ಲಿ ಮಾರ್ಚಿ ಕೊನೆಯವರೆಗೆ ನೀರು ಇರುತಿತ್ತು. 

ಆದರೆ ಈ ಮಳೆಗಾಲದಲ್ಲಿ ಕೇವಲ ಜುಲೈ ತಿಂಗಳಲ್ಲಿ ಸ್ವಲ್ಪದಿನ ಮತ್ತು ಆಗಸ್ಟ್ ತಿಂಗಳಿನಲ್ಲಿ ಕೆಲವೇ ದಿನಗಳು ಮಾತ್ರವೇ ಮಳೆ ಸುರಿದಿದ್ದರಿಂದ ಜಲಾಶಯಗಳು ಭರ್ತಿಯಾಗಿದ್ದು ಕಡಿಮೆ. ಹೀಗಾಗಿ ಮಳೆಗಾಲ ಮುಗಿದು ಚಳಿಗಾಲದ ಆರಂಭದಲ್ಲೇ ಜಲಾಶಯಗಳು ಭತ್ತಲಾರಂಭಿಸಿವೆ. ಚಿಕ್ಲಿಹೊಳೆ ಜಲಾಶಯವಂತು ಈಗಾಗಲೇ ಬಹುತೇಕ ಬತ್ತಿಹೋಗಿದ್ದು ತಗ್ಗು ಪ್ರದೇಶಗಳಲ್ಲಿ ಮಾತ್ರವೇ ನೀರು ನಿಂತಿದೆ. ಜಲಾಶಯದಲ್ಲಿ ಮುಳುಗಡೆಯಾಗಿದ್ದ ಎಲ್ಲಾ ಮರಗಳು ಕಾಣಿಸುತ್ತಿವೆ. ಜಲಾಶಯದ ಒಳಭಾಗದಲ್ಲಿನ ಗುಂಡಿಗಳು ಕೂಡ ಕಾಣಿಸುತ್ತಿವೆ. ಈ ಜಲಾಶಯ ತುಂಬಿತೆಂದರೆ ಅರ್ಧಚಂದ್ರಾಕೃತಿಯಲ್ಲಿ ನೀರು ಜಲಾಶಯದಿಂದ ಹೊರ ಹರಿಯುತಿತ್ತು. 

ಹೋಗು ಅಂದರೆ ಹೋಗೋಕೆ ತಾಳಿ ಕಟ್ಟಿದ ಹೆಂಡತಿ ನಾನಲ್ಲ: ಸಿ.ಎಂ.ಇಬ್ರಾಹಿಂ

ಆದರಿಂದಲೇ ನೋಡುವುದಕ್ಕೆ ಇದು ಮಿನಿ ನಯಾಗರದಂತೆ ಕಾಣುತಿದ್ದರಿಂದ ಸಾವಿರಾರ ಸಂಖ್ಯೆಯ ಪ್ರವಾಸಿಗರು ಬಂದು ವೀಕ್ಷಿಸುತ್ತಿದ್ದರು. ಅದರೆ ಈಗ ಜಲಾಶಯವೇ ಭತ್ತಿಹೋಗುತ್ತಿರುವುದು ಜನರನ್ನು ಆತಂಕಕ್ಕೆ ದೂಡಿದೆ. ಇದೇ ಜಲಾಶಯವನ್ನು ನಂಬಿ ಜಲಾಶಯದ ಸುತ್ತಮುತ್ತಲ ಗ್ರಾಮಗಳಾದ ರಂಗಸಮುದ್ರ, ಕಂಬಿಬಾಣೆ, ವಾಲ್ನೂರು ತ್ಯಾಗತ್ತೂರು ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಕುಡಿಯುವ ನೀರಿಗೆ ಆಧಾರವಾಗಿತ್ತು. ಜೊತೆಗೆ ಬೇಸಿಗೆ ಬೆಳೆಗೆ ಸುತ್ತಮುತ್ತಲ ಹಲವಾರು ಗ್ರಾಮಗಳ ಸಾವಿರಾರು ರೈತರು ಇದನ್ನೇ ನಂಬಿದ್ದರು. ಇದೀಗ ಜಲಾಶಯ ಬತ್ತುತ್ತಿರುವುದರಿಂದ ಜನರು, ರೈತರು ಆತಂಕ ಎದುರಿಸುವಂತೆ ಆಗಿದೆ. 

ಜೊತೆಗೆ ಜಲಾಶಯದ ಸುತ್ತಮುತ್ತ ಸಾಕಷ್ಟು ಅರಣ್ಯ ಪ್ರದೇಶವಿದ್ದು ಈ ಅರಣ್ಯದೊಳಗಿನ ಪ್ರಾಣಿಗಳು ಕೂಡ ಇದೇ ಜಲಾಶಯದ ನೀರನ್ನು ಕುಡಿದು ಬದುಕುತ್ತಿದ್ದವು. ಆದರೆ ಜಲಾಶಯದ ನೀರು ಹಿಂಗಿ ಹೋಗುತ್ತಿರುವುದರಿಂದ ವನ್ಯಜೀವಿಗಳಿಗೂ  ಮುಂದೆ ಕಷ್ಟ ಎದುರಾಗುವ ಸಾಧ್ಯತೆ ಇದೆ. ನವೆಂಬರ್ ತಿಂಗಳಲ್ಲಿಯೇ ಈ ಸ್ಥಿತಿ ಇದ್ದರೆ ಮಾರ್ಚಿ, ಏಪ್ರಿಲ್ ತಿಂಗಳಲ್ಲಿ ಎಂತಹ ಪರಿಸ್ಥಿತಿ ಎದುರಾಗಬಹುದು. ನಮ್ಮ ಗತಿ ಏನು ಎಂದು ರೈತರು ಭಯಪಡುವಂತೆ ಆಗಿದೆ. ವ್ಯಕ್ತಿಯೊಬ್ಬರು ಚಿಕ್ಲಿಹೊಳೆ ಜಲಾಶಯದಲ್ಲಿ ಮೀನು ಸಾಕಾಣಿಕೆಗೆ ಬರೋಬ್ಬರಿ 5 ಲಕ್ಷ ಮೀನು ಮರಿಗಳನ್ನು ಬಿಟ್ಟಿದ್ದರು. ಈಗ ಜಲಾಶಯವೇ ಬರಿದಾಗುತ್ತಿರುವುದು ಸಾವಿರಾರು ರೂಪಾಯಿ ವ್ಯಯಿಸಿದ ಮೀನು ಸಾಕಾಣಿಕೆಗೆ ಮುಂದಾಗಿದ್ದ ರೈತ ನಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. 

ಯಾರು ಬೇಕಾದರೂ ಪೋಸ್ಟರ್ ಅಂಟಿಸಿಕೊಳ್ಳಲಿ, ಬೇಡ ಎನ್ನುವುದಿಲ್ಲ: ಎಚ್‌.ಡಿ.ಕುಮಾರಸ್ವಾಮಿ

2017 ರಲ್ಲಿ ಜಲಾಶಯದ ನೀರು ಒಂದಷ್ಟು ಕಡಿಮೆಯಾಗಿತ್ತು. ಅದೂ ಕೂಡ ಮಾರ್ಚಿ ತಿಂಗಳ ಕೊನೆಯಲ್ಲಿ ನೀರು ಕಡಿಮೆಯಾಗಿತ್ತು. ಆದರೀಗ ನವೆಂಬರ್ ತಿಂಗಳಲ್ಲೇ ಜಲಾಶಯ ಬತ್ತಿರುವುದು ರೈತರನ್ನು ಚಿಂತೆಗೆ ದೂಡಿದೆ. ಬೇಸಿಗೆ ಸಂದರ್ಭದಲ್ಲಿ ಜಲಾಶಯದಲ್ಲಿ ಹೂಳು ಎತ್ತಿದರೆ ಸಾಕಷ್ಟು ನೀರು ಸಂಗ್ರಹವಾಗುತ್ತದೆ. ಆಗ ಅನುಕೂಲವಾಗುತ್ತದೆ. ಆದರೆ ಭಾರೀ ಪ್ರಮಾಣದಲ್ಲಿ ಜಲಾಶಯದಲ್ಲಿ ಹೂಳು ತುಂಬಿರುವುದರಿಂದ ಈ ರೀತಿ ಇಷ್ಟು ಶೀಘ್ರವೇ ನೀರು ಬತ್ತಿಹೋಗುತ್ತಿದೆ ಎಂದು ರೈತ ಮೋಹನ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios