ನಾನು ಸನ್ಯಾಸಿ ಅಲ್ಲ, ಅಧ್ಯಕ್ಷ ಹುದ್ದೆ ಆಕಾಂಕ್ಷಿ: ಮಾಜಿ ಸಚಿವ ವಿ.ಸೋಮಣ್ಣ
ನನಗಿಂತ ಬುದ್ಧಿವಂತರು, ಕೆಲಸ ಮಾಡುವವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ನನ್ನದೇನೂ ತಕರಾರಿಲ್ಲ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ವಿ.ಸೋಮಣ್ಣ ಮಾರ್ಮಿಕವಾಗಿ ಹೇಳಿದ್ದಾರೆ.
ಬೆಂಗಳೂರು (ಜೂ.26): ನನಗಿಂತ ಬುದ್ಧಿವಂತರು, ಕೆಲಸ ಮಾಡುವವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ನನ್ನದೇನೂ ತಕರಾರಿಲ್ಲ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ವಿ.ಸೋಮಣ್ಣ ಮಾರ್ಮಿಕವಾಗಿ ಹೇಳಿದ್ದಾರೆ. ಭಾನುವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸನ್ಯಾಸಿ ಅಲ್ಲ. ನಾನು ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿ. ಕೆಲಸ ಮಾಡುವವರಿಗೆ ಕೆಲಸ ನೀಡುವಂತೆ ಕೇಳುತ್ತಿದ್ದೇನೆ. ಆದರೆ, ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವುದು ಅಥವಾ ಬಿಡುವುದು ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದು. ನನಗಿಂತ ಕೆಲಸ ಮಾಡುವವರು, ಬುದ್ಧಿವಂತರು ಸಾಕಷ್ಟುಜನರಿದ್ದು, ಅವರಿಗೆ ನೀಡುವುದಾದರೆ ನನ್ನದೇನು ತಕರಾರು ಇಲ್ಲ. ಅದರಿಂದ ನನಗೇನು ಮುಜುಗರವೂ ಆಗುವುದಿಲ್ಲ ಎಂದು ತಿಳಿಸಿದರು.
ಒಂದು ವಿಷಯ ಮಾತ್ರ ಸತ್ಯ. ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಿ ಅಥವಾ ಬಿಡಲಿ. ನಾನು ಮಾತ್ರ ಸುಮ್ಮನೆ ಕೂರುವವನಲ್ಲ. ನಿದ್ದೆ ಮಾಡುವವನಲ್ಲ. ಯಾರು ಪಕ್ಷಕ್ಕೆ ಕೆಲಸ ಮಾಡುತ್ತಾರೋ ಅವರಿಗೂ ನಿದ್ರಿಸಲು ಬಿಡುವವನಲ್ಲ. ನನಗೆ ಇದೊಂದು ಪರ್ವ ಕಾಲ. ಕಠಿಣ ಶ್ರಮವಹಿಸಿ ಕೆಲಸ ಮಾಡುವ ಭಾವನೆ ಹೊಂದಿದ್ದೇನೆ. ಸದ್ಯ ನನಗೆ 72 ವರ್ಷ ವಯಸ್ಸು. ನನಗೆ ಒಂದು ಕಾತುರತೆ ಇದೆ. ಏನು ಕಳೆದುಕೊಂಡಿದ್ದೇವೆಯೋ ಅದನ್ನು ಪಡೆಯಬೇಕು ಎಂಬ ಹಠವೂ ಇದೆ. ಇದು ನನ್ನೊಬ್ಬನ ಆಸೆಯಲ್ಲ. ಎಲ್ಲರ ಆಸೆಯಾಗಿದೆ. ಪಕ್ಷ ಕೊಡುವ ಜವಾಬ್ದಾರಿಯನ್ನು ಯಾವ ರೀತಿ ನಿಭಾಯಿಸಬೇಕು ಎನ್ನುವುದು ನನಗೆ ಚೆನ್ನಾಗಿ ತಿಳಿದಿದೆ ಎಂದರು.
ನನಗೆ 100 ದಿನ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕೊಡಿ, ಪಕ್ಷವನ್ನು ಸಂಘಟಿಸುವೆ: ವಿ.ಸೋಮಣ್ಣ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಜಿಗಜಿಣಗಿಯಿಂದ ಟವೆಲ್: ಬಿಜೆಪಿಯಲ್ಲಿ ದಲಿತರು ರಾಜ್ಯದ ಅಧ್ಯಕ್ಷ ಆಗಬಾರದೇ? ಎನ್ನುವ ಮೂಲಕ ತಾವೂ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ವಿಜಯಪುರ ಲೋಕಸಭಾ ಕ್ಷೇತ್ರದ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದ ರಾಜ್ಯಾಧ್ಯಕ್ಷ ಆಗಬೇಕೆಂಬ ಆಶಯ ಇರುವುದು ಸಹಜವೆಂದು ಮಾಜಿ ಸಚಿವ ವಿ.ಸೋಮಣ್ಣ ಬಳಿಕ ಮಾಜಿ ಸಚಿವ, ಸಂಸದ ರಮೇಶ್ ಜಿಗಜಿಣಗಿ ಈಗ ತಮ್ಮ ಬಯಕ ಹೊರ ಹಾಕಿದ್ದಾರೆ.
ತುಮಕೂರು ಲೋಕಸಭೆ ಕ್ಷೇತ್ರಕ್ಕೆ ಸೋಮಣ್ಣ ಸ್ಪರ್ಧೆ: ಸಂಸದ ಜಿ.ಎಸ್.ಬಸವರಾಜು
ಬಿಜೆಪಿ ರಾಜ್ಯಾಧ್ಯಕ್ಷ ಯಾರು ಆಗಬೇಕು? ಎಂಬ ಬಗ್ಗೆ ಬಹಿರಂಗ ಚರ್ಚೆ ಮಾಡುವುದು ಸರಿಯಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ರಾಷ್ಟ್ರೀಯ ನಾಯಕರೇ ಆಯ್ಕೆ ಮಾಡುತ್ತಾರೆ. ನಳಿನಕುಮಾರ್ ಕಟೀಲ… ಅವಧಿ ಮುಗಿದಿದೆ ಎಂಬುದನ್ನು ಗಮನಿಸಿದ್ದೇನೆ ಎಂದರು. ನಾನೂ ಬಿಜೆಪಿಯ ಹಿರಿಯ ನಾಯಕ. ಅವಕಾಶ ಕೊಟ್ಟರೆ ಪಕ್ಷದ ರಾಜ್ಯಾಧ್ಯಕ್ಷನಾಗುವೆ. ಬಿಜೆಪಿಯಲ್ಲಿ ದಲಿತರು ರಾಜ್ಯದ ಅಧ್ಯಕ್ಷ ಆಗಬಾರದೆಂಬ ನಿಯಮವೇನಿಲ್ಲ. ಎಲ್ಲಿ ಕೇಳಬೇಕು ಎಂಬುದು ನನಗೆ ಗೊತ್ತಿದೆ, ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ವರಿಷ್ಠರಲ್ಲಿ ಕೋರುತ್ತೇನೆ ಎಂದು ಹೇಳಿದರು.