ಬೆಂಗಳೂರು (ಸೆ. 25): 2014 ರಲ್ಲಿ ಮಂತ್ರಿಯಾಗುವ ಆಸೆಯಿಂದ ಸುರೇಶ್‌ ಅಂಗಡಿ ಫಿರೋಜ್‌ ಶಾ ರಸ್ತೆಯ ವರ್ತುಲ ನಿವಾಸ ತೆಗೆದುಕೊಂಡಿದ್ದರು. ಆದರೆ ಅಲ್ಲಿ ಅದೃಷ್ಟಕೂಡಿಬರಲಿಲ್ಲ. ಹೀಗಾಗಿ ಯಡಿಯೂರಪ್ಪ ತಮ್ಮ ಸೌತ್‌ ಅವೆನ್ಯೂ ನಿವಾಸ ಖಾಲಿ ಮಾಡಿ ಬೆಂಗಳೂರಿಗೆ ಹೋದಾಗ ಅಂಗಡಿ ಅಲ್ಲಿಗೆ ವಾಸ್ತವ್ಯ ಬದಲಾಯಿಸಿದರು.

ಮಂತ್ರಿಯೇನೋ ಆದರು, ಆದರೆ ವಿಧಿ ಕೈ ಕೊಟ್ಟು ಗಟ್ಟಿಮುಟ್ಟಾಗಿದ್ದ ಅಂಗಡಿ ಅವರನ್ನು ವಶಕ್ಕೆ ತೆಗೆದುಕೊಂಡು ಹೋಯಿತು. ಅಂದ ಹಾಗೆ ಸುರೇಶ ಅಂಗಡಿ ಇರುತ್ತಿದ್ದ ನಿವಾಸದಲ್ಲಿ 25 ವರ್ಷ ಮಾಜಿ ಪ್ರಧಾನಿ ಚಂದ್ರಶೇಖರ ಇರುತ್ತಿದ್ದರು. ಆದರೆ ಪ್ರಧಾನಿ ಆಗಿ ಇದ್ದದ್ದು ಕೇವಲ ನಾಲ್ಕೇ ತಿಂಗಳು.

"

ನಾರಾಯಣರಾವ್‌ ದುರದೃಷ್ಟ

ದೇವರಾಜ ಅರಸ್‌ ಕಾಲದಿಂದಲೂ ಕಾಂಗ್ರೆಸ್‌ ಎಂದು ಓಡಾಡುತ್ತಿದ್ದ ಧರಂಸಿಂಗ್‌ರ ಶಿಷ್ಯ ಬಿ.ನಾರಾಯಣರಾವ್‌ ಶಾಸಕ ಆಗಿದ್ದು ಮಾತ್ರ 2018ರಲ್ಲಿ. 2004 ರಲ್ಲಿ ಸೋನಿಯಾ ಗಾಂಧಿ ಎದುರು ನಿಂತು ಕಾಂಗ್ರೆಸ್‌ಗೆ ಹಿಂದುಳಿದವರು, ಮುಸ್ಲಿಮರು, ದಲಿತರು ಮೂಲ ಮತದಾರರು ಎಂದು ಹೇಳಿದಾಗ ಸೋನಿಯಾ ನಾರಾಯಣರನ್ನು ಕರೆದು ಮಾತನಾಡಿಸಿದ್ದರು. ನಾರಾಯಣರಾವ್‌ ದುಡ್ಡಿನ ಬಲದಿಂದ ಅಲ್ಲ ಒಬ್ಬ ಸಾಮಾನ್ಯ ಕಾರ್ಯಕರ್ತರಾಗಿ ಶಾಸಕರಾದವರು. ಇಷ್ಟುಬೇಗ ಹೋಗಬಾರದಿತ್ತು.

ತ. ನಾ. ನಲ್ಲಿ ಕರುಣಾನಿಧಿ, ಜಯಲಲಿತಾ ಇಲ್ಲದ ಮೊದಲ ಚುನಾವಣೆ: ರಜನಿಗಾಗಿ ಕಾದು ಕಾದು ಬಿಜೆಪಿ ಸುಸ್ತು!

ಬಿಹಾರ ಡಿಜಿಪಿ ಬಿಜೆಪಿ ಅಭ್ಯರ್ಥಿ!

ಸುಶಾಂತ ಸಿಂಗ್‌ರದು ಆತ್ಮಹತ್ಯೆ ಅಲ್ಲ ಹತ್ಯೆ ಎಂದು ಚೀರಿ ಹೇಳುತ್ತಿದ್ದ ಬಿಹಾರದ ಡಿಜಿಪಿ ಗುಪ್ತೇಶ್ವರ ಪಾಂಡೆ ಪೊಲೀಸ್‌ ಪದವಿಗೆ ರಾಜೀನಾಮೆ ನೀಡಿ ಬಕ್ಸರ್‌ನಿಂದ ಬಿಜೆಪಿ ಅಭ್ಯರ್ಥಿ ಆಗಲಿದ್ದಾರೆ. ಪಾಂಡೆ 2009ರಲ್ಲಿ ಕೂಡ ಒಮ್ಮೆ ಬಿಜೆಪಿ ಟಿಕೆಟ್‌ಗೆ ಪ್ರಯತ್ನ ಮಾಡಿದ್ದರು. ಆದರೆ ಟಿಕೆಟ್‌ ಸಿಕ್ಕಿರಲಿಲ್ಲ.

ಮಗನ ಅಂತಿಮ ದರ್ಶನ ಇಲ್ಲದ್ದಕ್ಕೆ ಕಣ್ಣೀರಿಟ್ಟ ಅಂಗಡಿ ತಾಯಿ

ಅದೇಕೋ ಏನೋ ಪಾಂಡೆಯಿಂದ ಹಿಡಿದು ಅಣ್ಣಾಮಲೈವರೆಗೆ ಅನೇಕ ರಿಗೆ ಮಾಧ್ಯಮಗಳ ಪ್ರಚಾರ ಸಿಕ್ಕ ತಕ್ಷಣ ಚುನಾವಣೆಗೆ ಧುಮುಕಬೇಕು ಅನ್ನಿಸುತ್ತದೆ. ಅಥವಾ ಭವಿಷ್ಯದ ಚುನಾವಣೆ ತಯಾರಿಗಾಗಿಯೇ ಮಾಧ್ಯಮಗಳನ್ನು ಬಳಸುತ್ತಾರೋ ಏನೋ ಯಾರಿಗೆ ಗೊತ್ತು. ಅಂದಹಾಗೆ ಇದೆಲ್ಲ ಬೇಡವೋ ಬೇಡ ಎಂದು ರಾಮವಿಲಾಸ್‌ ಪಾಸ್ವಾನ್‌ ನೇರವಾಗಿ ಪತ್ರಕರ್ತರಿಗೆ ಟಿಕೆಟ್‌ ಕೊಟ್ಟು ಕಣಕ್ಕೆ ಇಳಿಸುತ್ತೇವೆ ಎಂದು ಹೇಳುತ್ತಿದ್ದಾರೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ