ನಾವು ಕಾಂಗ್ರೆಸ್‌ನಂತೆ ಸುಳ್ಳು ಹೇಳುವುದಿಲ್ಲ. ಜನಪರ ಯೋಜನೆ ಜಾರಿಗೊಳಿಸಿ, ಜನರ ಮುಂದೆ ಬಂದಿದ್ದೇವೆ. ಗ್ಯಾರಂಟಿ ಎನ್ನುವ ಕಾಂಗ್ರೆಸ್ಸನ್ನು ಜನರು ಈ ಚುನಾವಣೆಯಲ್ಲಿ ಗ್ಯಾರಂಟಿಯಾಗಿಯೇ ಮನೆಗೆ ಕಳಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಮನವಿ ಮಾಡಿದರು.

ಬಳ್ಳಾರಿ (ಮಾ.08): ನಾವು ಕಾಂಗ್ರೆಸ್‌ನಂತೆ ಸುಳ್ಳು ಹೇಳುವುದಿಲ್ಲ. ಜನಪರ ಯೋಜನೆ ಜಾರಿಗೊಳಿಸಿ, ಜನರ ಮುಂದೆ ಬಂದಿದ್ದೇವೆ. ಗ್ಯಾರಂಟಿ ಎನ್ನುವ ಕಾಂಗ್ರೆಸ್ಸನ್ನು ಜನರು ಈ ಚುನಾವಣೆಯಲ್ಲಿ ಗ್ಯಾರಂಟಿಯಾಗಿಯೇ ಮನೆಗೆ ಕಳಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಮನವಿ ಮಾಡಿದರು. ಇಲ್ಲಿನ ಡಾ. ರಾಜ್‌ಕುಮಾರ ರಸ್ತೆಯಲ್ಲಿರುವ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಯೋಜನೆಗಳ ‘ಫಲಾನುಭವಿಗಳ ಸಮ್ಮೇಳನ’ಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಉಚಿತವಾಗಿ 200 ಯುನಿಟ್‌ ವಿದ್ಯುತ್‌ ನೀಡುವುದಾಗಿ ಕಾಂಗ್ರೆಸ್‌ ಹೇಳುತ್ತಿದೆ. ಇವರ ಪಕ್ಷವೇ ಆಡಳಿತದಲ್ಲಿರುವ ರಾಜ್ಯದಲ್ಲಿ ಹೇಳಿದ ಭರವಸೆಗಳನ್ನು ಈಡೇರಿಸಿಲ್ಲ. ಛತ್ತೀಸ್‌ಗಡದಲ್ಲಿ ನಿರುದ್ಯೋಗ ಭತ್ಯೆ ನೀಡುತ್ತೇವೆ ಎಂದರು. ರಾಜಸ್ತಾನದಲ್ಲಿ 10 ದಿನದಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ರಾಹುಲ್‌ಗಾಂಧಿಯೇ ಭರವಸೆ ನೀಡಿದರು. ಈವರೆಗೆ ನಿರುದ್ಯೋಗ ಭತ್ಯೆ ಸಿಗಲಿಲ್ಲ. ಸಾಲಮನ್ನಾ ಆಗಲಿಲ್ಲ. ಇದು ಕಾಂಗ್ರೆಸ್‌ನ ನೀತಿ. ಉದ್ರಿ ಭಾಷಣ ಮಾಡುವುದರಲ್ಲಿ ಕಾಂಗ್ರೆಸ್‌ನವರು ನಿಸ್ಸೀಮರು ಎಂದು ಕುಟುಕಿದರಲ್ಲದೆ, ಕಾಂಗ್ರೆಸ್‌ ಯಾರನ್ನಾದರೂ ಕೊಂದಾದರೂ ಅಧಿಕಾರಕ್ಕೆ ಬರುವ ಪಕ್ಷ ಎಂದು ಕಥೆಯೊಂದನ್ನು ಉದಾಹರಿಸಿ ಹೇಳಿದರು.

ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳ ಜಾರಿಗೆ ತರಲ್ಲ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಬಳಿಕ ದೇಶ ಪ್ರಗತಿಯತ್ತ ಮುಖವೊಡ್ಡಿದೆ. ಈ ಹಿಂದೆ ಕಾಂಗ್ರೆಸ್‌ ಸರ್ಕಾರದಲ್ಲಿ ವಿದ್ಯುತ್‌ ಇರುತ್ತಿರಲಿಲ್ಲ. ಈಗ ವಿದ್ಯುತ್‌ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಗಿದೆ. ಅಗತ್ಯಕ್ಕಿಂತಲೂ ಹೆಚ್ಚುಪಟ್ಟು ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ದೇಶದ 2.56 ಕೋಟಿ ಬಡ ಕುಟುಂಬದ ಮನೆಗಳಿಗೆ ಉಚಿತ ವಿದ್ಯುತ್‌ ನೀಡಲಾಗಿದೆ. ಹರ್‌ಘರ್‌ ನಲ್‌ಜಲ್‌ ಯೋಜನೆಯಡಿ 14 ಕೋಟಿ ಮನೆಗಳಿಗೆ ನಳಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಕೊರೋನಾದಿಂದ ಇಡೀ ವಿಶ್ವವೇ ತತ್ತರಿಸಿತ್ತು. 

ಆದರೆ, ಮೋದಿ ಅವರು ಕೋವಿಡ್‌ನಿಂದ ದೇಶವನ್ನು ರಕ್ಷಣೆ ಮಾಡಲು ತೆಗೆದುಕೊಂಡ ನಿರ್ಧಾರದಿಂದ 130 ಕೋಟಿ ಜನರಿಗೆ ಲಸಿಕೆ ನೀಡಲಾಯಿತು. ಕೋವಿಡ್‌ ಸಂದರ್ಭದಲ್ಲಿ ಭಾರತ ಕೈಗೊಂಡ ನಿಲುವಿನಿಂದ ವಿಶ್ವದ ಮುಂದುವರಿದ ಅನೇಕ ರಾಷ್ಟ್ರಗಳು ಬೆರಗುಗಣ್ಣಿನಿಂದ ನೋಡಿದವು. ಪ್ರಧಾನಿ ಮೋದಿ ಅವರು ದೇಶ ಜನರ ರಕ್ಷಣೆಗಾಗಿ ಕೈಗೊಂಡ ನಿಲುವುಗಳು ವಿಶ್ವಕ್ಕೆ ಮಾದರಿ ಎನಿಸಿದವು ಎಂದರು. ಕಾಂಗ್ರೆಸ್‌ ಮಾತ್ರ ಬರೀ ಸುಳ್ಳುಗಳನ್ನು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ ಎಂದು ಟೀಕಿಸಿದರಲ್ಲದೆ, ಕಾಂಗ್ರೆಸ್ಸಿಗರಂತೆ ನಾವು ಗ್ಯಾರಂಟಿ ಕಾರ್ಡ್‌ ಹಿಡಿದು ಬಂದವರಲ್ಲ. ಕೆಲಸ ಮಾಡಿ ಅಂಕಗಳನ್ನು ನೀಡಿ ಎಂದು ಜನರ ಬಳಿ ಬಂದಿದ್ದೇವೆ ಎಂದರು.

ಸಚಿವ ಹಾಲಪ್ಪ ಬಸಪ್ಪ ಆಚಾರ ಮಾತನಾಡಿ, ಈ ಹಿಂದೆ ಭಾರತ ವಿಶ್ವದ ಕಡೆ ನೋಡುತ್ತಿತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ವಿಶ್ವವೇ ಭಾರತದ ಕಡೆ ನೋಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಯಾವುದೇ ಮಧ್ಯವರ್ತಿ ಹಾಗೂ ದಲ್ಲಾಳಿಗಳ ಹಾವಳಿಯಿಲ್ಲದೆ ನೇರವಾಗಿ ಫಲಾನುಭವಿಗಳ ಕೈಗೆ ಸೇರುತ್ತಿದೆ. ಈ ಹಿಂದೆ ಮಹಿಳೆಯೊಬ್ಬರು ದೇಶದ ಪ್ರಧಾನಿಯಾಗಿದ್ದರು. ಆದರೆ, ಮಹಿಳೆಯರ ಸಂಕಷ್ಟನಿವಾರಿಸಲಿಲ್ಲ. ಆದರೆ, ಮೋದಿ ಅವರು ಉಜ್ವಲ ಯೋಜನೆ ಮೂಲಕ ದೇಶದ 9 ಕೋಟಿ ಮನೆಗಳಿಗೆ ಸಿಲಿಂಡರ್‌ ವಿತರಿಸಿ, ಮಹಿಳೆಯರ ಕಣ್ಣೀರು ಒರೆಸಿದ್ದಾರೆ. ಆಯುಷ್ಮಾನ್‌, ಜಲಜೀವನ್‌ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿ, ಜನಹಿತ ಕಾಯುವ ಕೆಲಸವನ್ನು ಡಬಲ್‌ ಎಂಜಿನ್‌ ಸರ್ಕಾರ ಮಾಡಿದೆ ಎಂದರು.

ಸಚಿವ ಶ್ರೀರಾಮುಲು ಮಾತನಾಡಿ, ಕಾಂಗ್ರೆಸ್‌ನವರು ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದಾರೆ. ಪಿಎಸ್‌ಐ ಹಗರಣ ಸೇರಿದಂತೆ ಅನೇಕ ಹಗರಣಗಳನ್ನು ಹೊರತಂದು ತನಿಖೆ ಮಾಡಿಸುತ್ತಿರುವುದು ಬಿಜೆಪಿ ಸರ್ಕಾರವೇ ಹೊರತು ಕಾಂಗ್ರೆಸ್‌ ಅಲ್ಲ ಎಂದರು. ಸಂಸದ ವೈ. ದೇವೇಂದ್ರಪ್ಪ, ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಮಾತನಾಡಿದರು. ವಿಧಾನಪರಿಷತ್‌ ಸದಸ್ಯ ವೈ.ಎಂ. ಸತೀಶ್‌, ಜವಳಿ ನಿಗಮ ಅಧ್ಯಕ್ಷ ಗುತ್ತಿಗನೂರು ವಿರುಪಾಕ್ಷಗೌಡ, ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್‌, ಮಾಜಿ ಸಂಸದೆ ಶಾಂತಾ, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಎಡಿಸಿ ಪಿ.ಎಸ್‌. ಮಂಜುನಾಥ, ಜಿಪಂ ಸಿಇಒ ರಾಹುಲ್‌ ಶರಣಪ್ಪ ಸಂಕನೂರು ಇತರರಿದ್ದರು. ಇದೇ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಚೆಕ್‌ ವಿತರಣೆ ಮಾಡಲಾಯಿತು. ಕಾಂಗ್ರೆಸ್‌ ಶಾಸಕರು ಸಮಾರಂಭಕ್ಕೆ ಗೈರಾಗಿದ್ದರು.

ಹಣ ಕೊಟ್ಟು ಜನರನ್ನು ತರುವುದು ಜೆಡಿಎಸ್‌, ಕಾಂಗ್ರೆಸ್‌ ಸಂಸ್ಕೃತಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಉಗ್ರಗಾಮಿಗಳು ರಾಹುಲ್‌ಗಾಂಧಿಯ ಕಾಕಾನ ಮಕ್ಕಳಾ?: ರಾಹುಲ್‌ಗಾಂಧಿಯವರನ್ನು ಉಗ್ರಗಾಮಿಗಳು ಭೇಟಿಯಾಗಿದ್ದರಂತೆ. ಇದನ್ನು ರಾಹುಲ್‌ಗಾಂಧಿಯೇ ಹೇಳಿದ್ದಾರೆ. ಹಾಗಾದರೆ ಉಗ್ರಗಾಮಿಗಳು ರಾಹುಲ್‌ಗಾಂಧಿ ಕಾಕಾ(ಚಿಕ್ಕಪ್ಪ)ನ ಮಕ್ಕಳಾ? ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ವಾಗ್ದಾಳಿ ನಡೆಸಿದರು. ಉಗ್ರವಾದಿಗಳು ಭೇಟಿಯಾಗಿದ್ದರು ಎನ್ನಲು ಅವರೇನು ನಿಮ್ಮ ಸಂಬಂಧಿಕರಾ ನಿಮ್ಮ ತಂದೆಯವರನ್ನು ಕೊಂದವರ ಪರವಾಗಿ ಮಾತನಾಡುತ್ತೀರಾ? ಬೇರೆ ದೇಶಗಳಲ್ಲಿ ಬಾಯಿಗೆ ಬಂದಂತೆ ಮಾತನಾಡಿ ದೇಶದ ಮರ್ಯಾದೆ ಕಳೆಯುತ್ತೀರಾ ಎಂದು ತರಾಟೆಗೆ ತೆಗೆದುಕೊಂಡರಲ್ಲದೆ, ಪುಲ್ವಾಮ ದಾಳಿ, ಕುಕ್ಕರ್‌ ಬಾಂಬ್‌ ಪ್ರಕರಣಗಳ ಕುರಿತು ಹಗುರವಾಗಿ ಮಾತನಾಡಿರುವ ರಾಹುಲ್‌ಗಾಂಧಿ ಹಾಗೂ ಡಿ.ಕೆ. ಶಿವಕುಮಾರ್‌ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.