ಸಮಾವೇಶಗಳಿಗೆ ಹಣ ಕೊಟ್ಟು ಜನರನ್ನು ಕರೆತರುವುದು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸಂಸ್ಕೃತಿ. ನಮ್ಮ ಪಕ್ಷದಲ್ಲಿ ಯಾವ ಕಾಲಕ್ಕೂ ಈ ರೀತಿ ಹಣ ಕೊಟ್ಟು ಜನರನ್ನು ಕರೆತರುವ ವ್ಯವಸ್ಥೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. 

ಮದ್ದೂರು (ಮಾ.04): ಸಮಾವೇಶಗಳಿಗೆ ಹಣ ಕೊಟ್ಟು ಜನರನ್ನು ಕರೆತರುವುದು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸಂಸ್ಕೃತಿ. ನಮ್ಮ ಪಕ್ಷದಲ್ಲಿ ಯಾವ ಕಾಲಕ್ಕೂ ಈ ರೀತಿ ಹಣ ಕೊಟ್ಟು ಜನರನ್ನು ಕರೆತರುವ ವ್ಯವಸ್ಥೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ತಾಲೂಕಿನ ಗೆಜ್ಜಲಗೆರೆ ಕಾಲೋನಿ ಬಳಿ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಮಾ.12ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿರುವ ಹಿನ್ನೆಲೆಯಲ್ಲಿ ಶುಕ್ರವಾರ ಕೇಂದ್ರ ಸಚಿವ ಪ್ರಹಾದ ಜೋಶಿ ಕಾರ್ಯಕ್ರಮ ನಡೆಯುವ ಸ್ಥಳ ಪರಿಶೀಲನೆ ನಡೆಸಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಂಗ್ರೆಸ್‌ ಸಮಾವೇಶಗಳಿಗೆ 500 ರು. ಕೊಟ್ಟು ಜನರನ್ನು ಕರೆತನ್ನಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿಕೆ ನೀಡಿದ್ದಾರೆ. ಬಿಜೆಪಿಯಲ್ಲಿ ಅಂತಹ ಸಂಸ್ಕೃತಿ ಇಲ್ಲ. ಬಿಜೆಪಿಯಲ್ಲಿ ಮೋದಿ ಅಥವಾ ಅಮಿತ್‌ ಶಾ ರಾಜ್ಯಕ್ಕೆ ಬಂದರೆ ಕಾರ್ಯಕರ್ತರು ವಾಹನಗಳ ವ್ಯವಸ್ಥೆಯನ್ನಷ್ಟೇ ಮಾಡುವರು. ಜನರು ಸ್ವ-ಇಚ್ಛೆಯಿಂದ ಸಮಾವೇಶಗಳಿಗೆ ಬಂದು ಭಾಗವಹಿಸುತ್ತಾರೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.

ಲೋಕಾಯುಕ್ತ ದಾಳಿಗೆ ಸರ್ಕಾರವೇ ಸೂಚನೆ ನೀಡಿತ್ತಾ?: ಶಾಸಕ ಬೋಪಯ್ಯ

ಈಗಾಗಲೇ ಬೆಳಗಾವಿ, ಹುಬ್ಬಳ್ಳಿ ನಗರಗಳಲ್ಲಿ ನರೇಂದ್ರ ಮೋದಿ ಅವರ ಬೃಹತ್‌ ಸಮಾವೇಶಗಳು ನಡೆದಿವೆ. ಈ ಎರಡು ಕಾರ್ಯಕ್ರಮಗಳಿಗಿಂತ ಮಂಡ್ಯ ಕಾರ್ಯಕ್ರಮ ವಿಭಿನ್ನವಾಗಿರಬೇಕು. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದ ಪ್ರತಿ ಮನೆಯಿಂದ ಒಬ್ಬೊಬ್ಬ ಕಾರ್ಯಕರ್ತರನ್ನು ಕರೆತರುವ ವ್ಯವಸ್ಥೆ ಮಾಡಬೇಕೆಂದು ಸಲಹೆ ನೀಡಿದರು. ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಮಾತನಾಡಿ, ಜಿಲ್ಲೆಗೆ ಪ್ರಥಮ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದಾರೆ. ಈ ಹಿಂದೆ ಕರ್ನಾಟಕದ ಬೇರೆ ಜಿಲ್ಲೆಗಳಲ್ಲಿ ನಡೆದ ರೋಡ್‌ ಶೋಗಳಿಗಿಂತ ಮಂಡ್ಯದಲ್ಲಿ ಬೆಸ್ವ್‌ ರೋಡ್‌ ಶೋ ಆಗಬೇಕು. ಇದರಿಂದ ಇಡೀ ದೇಶವೇ ಮಂಡ್ಯವನ್ನು ತಿರುಗಿ ನೋಡುವಂತೆ ಮಾಡಬೇಕು ಎಂದರು.

ಸಂಸದ ಪ್ರತಾಪ್‌ ಸಿಂಹ ಮಾತನಾಡಿ, ಮಂಡ್ಯ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬದ್ಧವಾಗಿವೆ. ದಶಪಥ ಹೆದ್ದಾರಿಗೆ ಮಂಡ್ಯ ಜನರ ಬಹುದೊಡ್ಡ ಕೊಡುಗೆ ಇದೆ. ಹೆದ್ದಾರಿಯಿಂದ ಜಿಲ್ಲೆಯ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ ಎಂದರು. ಕೆ.ಆರ್‌.ಪೇಟೆಯಲ್ಲಿ ನಾರಾಯಣಗೌಡರು ಮಾತ್ರ ಬಿಜೆಪಿ ಬಾವುಟ ಹಾರಿಸಿದ್ದಾರೆ. ಅದೇ ರೀತಿ ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲೂ ಸಹ ಬಿಜೆಪಿ ಬಾವುಟವನ್ನು ಹಾರಿಸಲಿದ್ದೇವೆ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್‌ ಅಂದರೆ ಜಾತಿ ಮಧ್ಯೆ ಒಡೆದಾಳುವ ಪಕ್ಷ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣಗೌಡ, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್‌ ಕುಮಾರ್‌ ಸುರಾನ, ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್‌, ಜಿಲ್ಲಾಧಿಕಾರಿ ಗೋಪಾಲಕೃಷ್ಣ, ಸಿಇಒ ಶಾಂತಹುಲ್ಮನಿ, ಎಸ್ಪಿ ಎನ್‌.ಯತೀಶ್‌, ತಾಲೂಕು ಅಧ್ಯಕ್ಷ ಪಣ್ಣೆದೊಡ್ಡಿ ರಘು, ಮನ್‌ಮುಲ್‌ ನಿರ್ದೇಶಕಿ ರೂಪಾ, ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳಾದ ಎಸ್‌.ಪಿ.ಸ್ವಾಮಿ, ಅಶೋಕ್‌ ಜಯರಾಂ, ಫೈಟರ್‌ ರವಿ, ಡಾ.ಇಂದ್ರೇಶ್‌, ಯಮದೂರು ಸಿದ್ದರಾಜು ಮುಖಂಡರಾದ ಟಿಎಪಿಸಿಎಂಎಸ್‌ ಅಧ್ಯಕ್ಷ ಮಹದೇವು, ಮನುಕುಮಾರ್‌, ಹನುಮಂತೇಗೌಡ, ಜಿ.ಸಿ.ಮಹೇಂದ್ರ, ಡಾಬಾ ಕಿಟ್ಟಿ, ಮೋಹನ್‌, ಎಂ.ಸಿ.ಸಿದ್ದು ಮತ್ತಿತರರು ಇದ್ದರು.