ಪ್ರಧಾನಿ ಮೋದಿಯವರನ್ನು 'ಭಯೋತ್ಪಾದಕ' ಎಂದು ಕರೆದಿದ್ದಾರೆ ಎನ್ನಲಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಅಸಭ್ಯ ಹೇಳಿಕೆ ನೀಡಿದ್ದಾರೆನ್ನಲಾದ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕರ ಈ ನಡವಳಿಕೆಯು ಅವರ ‘ವಿಕೃತ ಮನಸ್ಥಿತಿ ಎಂದು ಕಿಡಿ

ಹುಬ್ಬಳ್ಳಿ (ಏ.22): ತಮಿಳುನಾಡು ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಭಯೋತ್ಪಾದಕ’ ಎಂದು ಕರೆದಿರುವ ಹಾಗೂ ರಾಹುಲ್ ಗಾಂಧಿ ಅವರು ಅಸಭ್ಯ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ನಾಯಕರ ಇಂತಹ ನಡವಳಿಕೆಯು ಅವರ ‘ವಿಕೃತ ಮನಸ್ಥಿತಿ’ ಮತ್ತು ‘ಸೋಲಿನ ಹತಾಶೆ’ಯನ್ನು ಪ್ರತಿಬಿಂಬಿಸುತ್ತದೆ ಎಂದು ಗುಡುಗಿದ್ದಾರೆ.

Add Asianetnews Kannada as a Preferred SourcegooglePreferred

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಖಂಡಿಸಿರುವ ಜೋಶಿ, ‘ನಕಲಿ ಗಾಂಧಿ ಕುಟುಂಬದ ಓಲೈಕೆಗಾಗಿ ದಶಕಗಳ ಕಾಲ ದುರಾಡಳಿತ ನಡೆಸಿದ ಮಲ್ಲಿಕಾರ್ಜುನ ಖರ್ಗೆಯವರು, ತಮ್ಮ ಸ್ವಕ್ಷೇತ್ರವನ್ನೇ ಅಭಿವೃದ್ಧಿಪಡಿಸದೆ ಜನರಿಗೆ ದ್ರೋಹ ಬಗೆದಿದ್ದಾರೆ. ಈಗ ದೇಶದ ಹೆಮ್ಮೆಯ ಪ್ರಧಾನಿಯನ್ನು ಭಯೋತ್ಪಾದಕ ಎಂದು ಕರೆಯುವ ಮೂಲಕ ತಮ್ಮ ಕೆಳಮಟ್ಟದ ರಾಜಕಾರಣವನ್ನು ಪ್ರದರ್ಶಿಸಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧವೂ ವಾಗ್ದಾಳಿ ನಡೆಸಿದ್ದು, ‘ಇದು ರಾಹುಲ್ ಗಾಂಧಿಯವರ ದುರಹಂಕಾರದ ಪರಮಾವಧಿ. ಸಾರ್ವಜನಿಕ ಬದುಕಿನಲ್ಲಿ ಘನತೆ ಮತ್ತು ಸಂಸ್ಕಾರ ಬಹುಮುಖ್ಯ. ಆದರೆ ರಾಹುಲ್ ಗಾಂಧಿಯವರ ಅಸಡ್ಡೆ ಹಾಗೂ ಅನಾಗರಿಕ ಮಾತುಗಳು ಅವರ ನೈಜತೆಯನ್ನು ಬಯಲು ಮಾಡಿದೆ’ ಎಂದು ಕುಟುಕಿದ್ದಾರೆ.