ಸುಳ್ಳು ಆರೋಪ ಮಾಡಿದ್ದಕ್ಕೆ ರಾಹುಲ್ ಗಾಂಧಿಯವರಿಗೆ ಜಾಮೀನು ರಹಿತ ವಾರೆಂಟ್ ಆಯ್ತು, ಅದಾದ ನಂತರ ಇಂತಹ ಕೃತ್ಯಗಳು ಶುರುವಾಗಿವೆ ಎಂದು ರಾಜ್ಯ ಸರ್ಕಾರ, ಕಾಂಗ್ರೆಸ್ ಮುಖಂಡರ ವಿರುದ್ಧ ನೂತನ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹರಿಹಾಯ್ದರು.

ಹುಬ್ಬಳ್ಳಿ (ಜೂ.14): ನಮ್ಮ ಕ್ಷೇತ್ರದ ಜನತೆ ನನಗೆ ಸತತವಾಗಿ 5 ನೇ ಬಾರಿಗೆ ಆಶೀರ್ವಾದ ಮಾಡಿದ್ದಾರೆ. ನಮ್ಮ ನೆಚ್ಚಿನ ಮೋದಿಯವರು ನನ್ನ ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳುವ ಮೂಲಕ ನನಗೆ ಮತ್ತೊಂದು ಅವಕಾಶ ಕೊಟ್ಟಿದ್ದಾರೆ. ಅವರಿಗೆ ಕೃತಜ್ಞತೆಯನ್ನ ಸಲ್ಲಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನುಡಿದರು.

ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಇಂದು ಹುಬ್ಬಳ್ಳಿಗೆ ಆಗಮಿಸಿ ಮಾತನಾಡಿದ ಸಚಿವರು, ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರದ ಜೊತೆಗೆ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆಗಳನ್ನು ಕೊಟ್ಟಿದ್ದಾರೆ. ಭವಿಷ್ಯದ ಸೌರ ವಿದ್ಯುತ್ ದೃಷ್ಟಿಯಿಂದ ಕೊಡುಗೆ ಕೊಡುವ ಖಾತೆಯಾಗಿದೆ. ದೇಶಕ್ಕೆ ಆಹಾರ ಭದ್ರತೆ ಒದಗಿಸುವ ಖಾತೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ದೇಶದಲ್ಲಿ ಜಗತ್ತಿನ ಅತಿ ದೊಡ್ಡ ಆಹಾರ ಭದ್ರತೆಯನ್ನು ನಿರ್ಮಾಣ ಮಾಡಿದ್ದಾರೆ. ಗ್ರಾಹಕರ ಹಿತ ಸಂರಕ್ಷಣೆ ನನ್ನ ಮೇಲೆ ವಿಶ್ವಾಸವಿತ್ತು ಈ ಖಾತೆಯನ್ನು ನೀಡಿದ್ದಾರೆ ಎಂದರು.

ಹೆಚ್‌ಡಿ ಕುಮಾಸ್ವಾಮಿ ಮುಂದೆ ದೇಶದ ಪ್ರಧಾನಿ ಆಗಬಹುದು: ಜಿಟಿ ದೇವೇಗೌಡ

ಬಿಎಸ್‌ವೈ ವಿರುದ್ಧ ಅರೆಸ್ಟ್ ವಾರೆಂಟ್‌ಗೆ ಕಿಡಿ:

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಜಾಮೀನುರಹಿತ ಅರೆಸ್ಟ್ ವಾರೆಂಟ್ ಜಾರಿ ಮಾಡಿರುವ ವಿಚಾರಕ್ಕೆ ಕಿಡಿಕಾರಿದ ಸಚಿವರು, ಸುಳ್ಳು ಆರೋಪ ಮಾಡಿದ್ದಕ್ಕೆ ರಾಹುಲ್ ಗಾಂಧಿಯವರಿಗೆ ಜಾಮೀನು ರಹಿತ ವಾರೆಂಟ್ ಆಯ್ತು, ಅದಾದ ನಂತರ ಇಂತಹ ಕೃತ್ಯಗಳು ಶುರುವಾಗಿವೆ. ಹಿರಿಯ ವ್ಯಕ್ತಿಗೆ ಈ ರೀತಿ ಆರೋಪ ಹೊರಿಸುವುದು ಅಪಚಾರ ಮಾಡಿದಂತೆ. ನಾಗೇಂದ್ರ ರಾಜೀನಾಮೆ ಸಿದ್ದರಾಮಯ್ಯ ಬುಡಕ್ಕೆ ಬರುತ್ತೆ ಅನ್ನೋ ಕಾರಣಕ್ಕೆ ವಿಷಯಾಂತರ ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ. ಸ್ವತಃ ಸರ್ಕಾರ ಹೋಗಿ ಅರೆಸ್ಟ್‌ಗೆ ಆದೇಶ ತೆಗೆದುಕೊಂಡಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಕೋರ್ಟ್‌ನಲ್ಲಿ ಅರೆಸ್ಟ್ ವಾರೆಂಟ್ ಜಾರಿ ಮಾಡುವಂತೆ ಸರ್ಕಾರವೇ ಮನವಿ ಮಾಡಿಕೊಂಡಿದೆ. ಈ ಪ್ರಕರಣ ನಡೆದ ಆರು ತಿಂಗಳಾಗಿದೆ. ಆದರೆ ಆಗ ಇದೇ ಗೃಹಮಂತ್ರಿಗಳು‌ ಇದು ಸತ್ಯಕ್ಕೆ ದೂರವಾಗಿದೆ ಅಂದಿದ್ದರು. ಈಗ ಅಗತ್ಯ ಬಿದ್ದರೆ ಬಂಧಿಸುತ್ತೇವೆ ಎನ್ನುತ್ತಾರೆ. ಇದರಲ್ಲಿ ಸರ್ಕಾರದ ಪಾತ್ರವಿದೆ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬುದು ಸ್ಪಷ್ಟವಾಗಿದೆ. ಬಿಜೆಪಿ ಮತ್ತು ಯಡಿಯೂರಪ್ಪರನ್ನ ತುಳಿಯಬಹುದು ಅಂತಾ ನೀವು ಭಾವಿಸಿದ್ರೆ ನಾನು ಪುನಃ ಪುಟಿದೇಳುತ್ತೇವೆ ಎಂದು ವಾಗ್ದಾಳಿ ನಡೆಸಿದರು. 

ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧೆಗೆ ಸಿದ್ಧತೆ ನಡೆಸಿದ್ರಾ ದರ್ಶನ್? ಸಿಪಿವೈ ಸ್ಫೋಟಕ ಹೇಳಿಕೆ

ಲೋಕಸಭಾ ಚುನಾವಣೆಯಲ್ಲಿ ಒಂಬತ್ತು ಸ್ಥಾನಕ್ಕೆ ನೀವು ಸಮಾಧಾನ ಪಡುವ ಸ್ಥಿತಿ ಇದೆ. ವಾಲ್ಮೀಕಿ ಹಗರಣದಲ್ಲಿ 187 ಕೋಟಿ ರೂಪಾಯಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಅದರಲ್ಲಿ ಸಿಎಂ ಸಿದ್ದರಾಮಯ್ಯ ಅವರದ್ದೇ ಕೈವಾಡ ಇರುವುದರಿಂದ ಭಯದಿಂದ ವಿಷಯಾಂತರ ಮಾಡಲು ಯಡಿಯೂರಪ್ಪನವರನ್ನು ಟಾರ್ಗೆಟ್ ಮಾಡ್ತಾ ಇದ್ದಾರೆ. ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.