ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಪ್ರಯತ್ನಿಸಿದೆ. ಆದರೆ ಶೆಟ್ಟರ್ ನನ್ನ ಮಾತು ಕೇಳಲಿಲ್ಲ ಎಂದು ಎಂದು ಕೇಂದ್ರ ಸಚಿವ ಜೋಶಿ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಏ.18): ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಪ್ರಯತ್ನಿಸಿದೆ. ಆದರೆ ಶೆಟ್ಟರ್ ನನ್ನ ಮಾತು ಕೇಳಲಿಲ್ಲ. ಪಕ್ಷ ಕಟ್ಟುವ ಕಾರ್ಯವನ್ನು ನಾವು ಮುಂದುವರಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ ಹೇಳಿದ್ದಾರೆ. ಶೆಟ್ಟರ್ ಬಿಜೆಪಿ ಬಿಟ್ಟು ಹೋಗಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ ಅವರು ಶೆಟ್ಟರ್ ಅವರನ್ನ ಪಕ್ಷದಲ್ಲಿ ಉಳಿಸಿಕೊಳ್ಳಲು ನಾನು ಕೊನೆಯ ಕ್ಷಣದ ವರೆಗೂ ಪ್ರಯತ್ನಿಸಿದ್ದೇನೆ. ರಾಜ್ಯಸಭೆಗೆ ಆಯ್ಕೆಯಾಗಿ ಕೇಂದ್ರಕ್ಕೆ ಬನ್ನಿ ನಾನು ಹೈಕಮಾಂಡ್ ಜೊತೆ ಮಾತನಾಡ್ತೇನೆ ಎಂದು ಶೆಟ್ಟರ್ ಗೆ ಮನವಿ ಮಾಡಿದ್ದೆ. ಆದರೆ ಶೆಟ್ಟರ್ ನನ್ನ ಮಾತು ಕೇಳಲಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಶೆಟ್ಟರ್ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದರು.
ಶೆಟ್ಟರ್ ಇಲ್ಲದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡದಲ್ಲಿ ಪಕ್ಷಕ್ಕಾಗುವ ಡ್ಯಾಮೇಲ್ ಕಂಟ್ರೋಲ್ ಮಾಡಲು ಅಖಾಡಕ್ಕಿಳಿದಿರುವ ಜೋಶಿ, ಇಂದು ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ವೇಳೆ ಸಾಥ್ ನೀಡಿದರು. ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಅರವಿಂದ ಬೆಲ್ಲದ್ ಹಾಗೂ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಅಮೃತ್ ದೇಸಾಯಿ ನಾಮಪತ್ರ ಸಲ್ಲಿಕೆ ವೇಳೆ ಸಾಥ್ ನೀಡಿದ ಜೋಶಿ ಬಿಜೆಪಿ ಅಭ್ಯರ್ಥಿಗಳಿಗೆ ನೈತಿಕ ಸ್ಥೈರ್ಯ ತುಂಬಿದರು. ಹುಬ್ಬಳ್ಳಿ ಧಾರವಾಡದಲ್ಲಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಬಳಿಕ ಚಿಕ್ಕೋಡಿಗೆ ತೆರಳಿದ ಜೋಶಿ, ನಿಖಿಲ್ ಕತ್ತಿ ಅವರ ನಾಮಪತ್ರ ಸಲ್ಲಿಕೆಗೆ ಸಾಕ್ಷಿಯಾದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಪ್ರಲ್ಹಾದ್ ಜೋಶಿ, ಶೆಟ್ಟರ್ ಪಕ್ಷ ಬಿಟ್ಟು ಹೋಗಬಾರದಿತ್ತು. ಅವರನ್ನ ಉಳಿಸಿಕೊಳ್ಳಲು ನಾನು ಕೊನೆಯ ಕ್ಷಣದ ವರೆಗೂ ರಾಜ್ಯಸಭೆ ಮೂಲಕ ಕೇಂದ್ರಕ್ಕೆ ಬನ್ನಿ, ಸಚಿವರಾಗಿ ಎಂದು ಮನವಿ ಮಾಡಿದೆ. ಆದರೆ, ಶೆಟ್ಟರ್ ಯಾವುದಕ್ಕೂ ಒಪ್ಪಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಶೆಟ್ಟರ್ ಹೋದರೂ ಹುಬ್ಬಳ್ಳಿ ಧಾರವಾಡದಲ್ಲಿ ಪಕ್ಷಸ ಜೊತೆ ಕಾರ್ಯಕರ್ತರಿದ್ದಾರೆ. ಬಿಜೆಪಿ ಅಭ್ಯರ್ಥಿಗಳು ಚಿಂತಿಸುವ ಅಗತ್ಯವಿಲ್ಲ. ನಾವು ಪಕ್ಷ ಕಟ್ಟುವ ಕಾರ್ಯದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ತೇವೆ ಎಂದು ಜೋಶಿ ಹೇಳಿದರು.
ಮಂಡ್ಯದಲ್ಲಿ ಹೆಚ್‌ಡಿಕೆ ಸೋಲಿಸಲು ಮೆಗಾ ಪ್ಲಾನ್: ಸುಮಲತಾ-ರಮ್ಯಾ ಕಣಕ್ಕೆ,
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಹುಬ್ಬಳ್ಳಿ ಧಾರವಾಡ ಕಾರ್ಯಕರ್ತರ ಜೊತೆ ಸಭೆ ನಡೆಸಲಿದ್ದಾರೆ. ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಬಂದು ಪ್ರಚಾರ ಮಾಡಲಿದ್ದಾರೆ. ಬಿಜೆಪಿ ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಜೋಶಿ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
ಅಫಜಲಪುರದಲ್ಲಿ ಸಂಧಾನ ವಿಫಲ: ಸಹೋದರರ ಕಾಳಗ, ನಾನೇ ಗೆಲ್ಲಲಿ ಆಶೀರ್ವದಿಸೆಂದು
ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.
