ರಾಜ್ಯ ಚುನಾವಣೆಗೆ ಸಚಿವ ಪಿಯೂಷ್ ಗೋಯೆಲ್ ಬಿಜೆಪಿ ಉಸ್ತುವಾರಿ?
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯೆಲ್ ಅವರನ್ನು ಕರ್ನಾಟಕ ವಿಧಾನಸಭೆಯ ಚುನಾವಣೆಯ ಬಿಜೆಪಿ ಉಸ್ತುವಾರಿಯನ್ನಾಗಿ ನೇಮಿಸುವ ನಿರೀಕ್ಷೆಯಿದೆ. ಚುನಾವಣೆ ವೇಳೆ ಒಬ್ಬ ಕೇಂದ್ರ ಸಚಿವರನ್ನು ಉಸ್ತುವಾರಿಯನ್ನಾಗಿ ನೇಮಿಸುವ ಪದ್ಧತಿ ಬಿಜೆಪಿ ನಡೆಸಿಕೊಂಡು ಬಂದಿದೆ.
ಬೆಂಗಳೂರು (ಫೆ.03): ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯೆಲ್ ಅವರನ್ನು ಕರ್ನಾಟಕ ವಿಧಾನಸಭೆಯ ಚುನಾವಣೆಯ ಬಿಜೆಪಿ ಉಸ್ತುವಾರಿಯನ್ನಾಗಿ ನೇಮಿಸುವ ನಿರೀಕ್ಷೆಯಿದೆ. ಚುನಾವಣೆ ವೇಳೆ ಒಬ್ಬ ಕೇಂದ್ರ ಸಚಿವರನ್ನು ಉಸ್ತುವಾರಿಯನ್ನಾಗಿ ನೇಮಿಸುವ ಪದ್ಧತಿ ಬಿಜೆಪಿ ನಡೆಸಿಕೊಂಡು ಬಂದಿದೆ. ಕಳೆದ 2018ರ ವಿಧಾನಸಭಾ ಚುನಾಣೆ ವೇಳೆ ಆಗಿನ ಕೇಂದ್ರ ಸಚಿವರಾಗಿದ್ದ ಪ್ರಕಾಶ್ ಜಾವಡೇಕರ್ ಅವರನ್ನು ಪಕ್ಷದ ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು. ಈ ಬಾರಿಯ ಚುನಾವಣೆಗೆ ಗೋಯೆಲ್ ಉಸ್ತುವಾರಿಯಾಗಿ ನೇಮಕಗೊಳ್ಳುವುದು ಬಹುತೇಕ ನಿಶ್ಚಿತವಾಗಿದೆ. ಪಕ್ಷದ ರಾಜ್ಯ ಉಸ್ತುವಾರಿಯಾಗಿ ಅರುಣ್ ಸಿಂಗ್ ಅವರು ಯಥಾರೀತಿ ಮುಂದುವರೆಯಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇಂದು ಬಿಜೆಪಿ ಕೋರ್ ಕಮಿಟಿ ಸಭೆ, ನಾಳೆ ಕಾರ‍್ಯಕಾರಿಣಿ: ಮುಂಬರುವ ಚುನಾವಣೆಗೆ ಭರದ ಸಿದ್ಧತೆ ನಡೆಸಿರುವ ಆಡಳಿತಾರೂಢ ಬಿಜೆಪಿಯ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆ ಶುಕ್ರವಾರ ನಡೆಯಲಿದೆ. ಬಜೆಟ್ ಅಧಿವೇಶನದ ಬಳಿಕ ರಾಜ್ಯದ ನಾಲ್ಕು ದಿಕ್ಕುಗಳಿಂದ ಹಮ್ಮಿಕೊಳ್ಳಲು ಉದ್ದೇಶಿಸಿರುವ ರಥಯಾತ್ರೆಯ ರೂಪರೇಷೆ ಬಗ್ಗೆ ಈ ಸಭೆಯಲ್ಲಿ ಚರ್ಚೆಯಾಗಲಿದೆ. ವೇಳಾಪಟ್ಟಿಅಂತಿಮಗೊಳಿಸಿ, ತಂಡಗಳನ್ನು ರಚಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಜತೆಗೆ ಪಕ್ಷ ಸಂಘಟನೆ ಬಲಪಡಿಸುವ ಉದ್ದೇಶದಿಂದ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ.
ಭವಾನಿ ಸ್ಪರ್ಧೆ ಕಗ್ಗಂಟು ದೇವೇಗೌಡ ಅಂಗಳಕ್ಕೆ?: ನಾಳೆ ಎಚ್‌ಡಿಕೆ ಸಭೆ
ನಾಳೆ ಕಾರ್ಯಕಾರಿಣಿ: ಶನಿವಾರ ರಾಜ್ಯ ಬಿಜೆಪಿಯ ವಿಶೇಷ ಕಾರ್ಯಕಾರಿಣಿ ಸಭೆಯೂ ನಡೆಯಲಿದ್ದು, ಕೋರ್ ಕಮಿಟಿಯಲ್ಲಿ ಕೈಗೊಂಡ ತೀರ್ಮಾನಗಳ ಅನುಷ್ಠಾನದ ಬಗ್ಗೆ ಸಮಾಲೋಚನೆ ನಡೆಸುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.
ಮೋದಿ ಕಾರ‍್ಯಕ್ರಮಕ್ಕೆ 15 ಸಾವಿರ ಕಾರ‍್ಯಕರ್ತರು: ಗುಬ್ಬಿ ಬಳಿ ಇರುವ ಎಚ್‌ಎಎಲ್‌ನ ಉದ್ಘಾಟನೆಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ತಾಲೂಕಿನಿಂದ ಸುಮಾರು 15 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಶಾಸಕ ಮಸಾಲಾ ಜಯರಾಮ್ ಹೇಳಿದರು. ತಮ್ಮ ಗೃಹ ಕಚೇರಿಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ ನೂರಾರು ಮಂದಿಯ ಪಕ್ಷ ಸೇರ್ಪಡೆ ಕಾರ್ಯಕ್ರಮದ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಅದರಂತೆಯೇ ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿಯ ಶಾಸಕರು ಪುನರ್ ಆಯ್ಕೆ ಆಗುವುದರಲ್ಲಿ ಸಂದೇಶವಿಲ್ಲ ಎಂದರು.
ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಪರಮೇಶ್ವರ್ ರಾಜೀನಾಮೆ: ಮನವೊಲಿಕೆಗೆ ನಾಯಕರ ಕಸರತ್ತು
ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಆಗಿರುವ ಹಾಗೂ ಆಗಬೇಕಿರುವ ನೂರಾರು ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇನ್ನಿತರ ಮಂತ್ರಿಗಳು ಫೆಬ್ರವರಿ ಅಂತ್ಯದೊಳಗೆ ಚಾಲನೆ ನೀಡಲಿದ್ದಾರೆ. ಅಂದು ಮೂವತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೇರಿಸಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಶಾಸಕ ಮಸಾಲಾ ಜಯರಾಮ್ ಹೇಳಿದರು.