ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಚಾರ್ಜ್ ಶೀಟ್ ವಿಚಾರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ. ಕುಶಾಲನಗರದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮೊದಲು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿ ಎಂದಿದ್ದಾರೆ.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಫೆ.25):
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಮೇಲೂ ಸಾಕಷ್ಟು ಚಾರ್ಜ್ ಶೀಟ್ ಸಲ್ಲಿಕೆ ಆಗಿದ್ದು, ಕೋರ್ಟಿನಲ್ಲಿ ಇವೆ. ಮೊದಲು ಅವರು ಕೂಡ ಅವುಗಳಿಂದ ಪಾರಾಗುವುದನ್ನು ನೋಡಿಕೊಳ್ಳಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.

ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಲೋಕಾಯುಕ್ತದಿಂದ ತಮ್ಮ ಪರವಾಗಿ ವರದಿ ಬರೆಸಿಕೊಂಡಿದ್ದಾರೆ ಎಂಬ ಕೇಂದ್ರ ಸಚಿವ ಎಚ್ ಡಿಕೆ ಹೇಳಿಕೆಗೆ ಹೀಗೆ ಪ್ರತಿಕ್ರಿಯಿಸಿದರು. ಮಾನ್ಯ ಕುಮಾರಸ್ವಾಮಿ ಅವರಿಗೆ ಅವರದೇ ಆದ ನೂರೆಂಟು ಸಮಸ್ಯೆ ಇವೆ. ಅದರಿಂದ ಪಾರಾಗುವುದಕ್ಕೆ ಮೊದಲು ಗಮನಕೊಡಲಿ ಎಂದರು. ಮುಂದೆ ಏನಾಗುತ್ತದೆಯೋ ಹೇಳುವುದಕ್ಕೆ ಆಗಲ್ಲ. ಅವುಗಳ ಮೇಲೆ ಗಮನಕೊಟ್ಟು ಪಾರಾಗುವುದಕ್ಕೆ ನೋಡಲಿ ಎಂದು ಹೇಳಿದರು.

ಕುಮಾರಸ್ವಾಮಿ ಅವರು ಮಾಡಿರುವುದನ್ನು ಸಿದ್ದರಾಮಯ್ಯನವರೊಂದಿಗೆ ಹೋಲಿಸಲಾಗಲ್ಲ. ಸಿದ್ದರಾಮಯ್ಯನವರು ರಾಜಕೀಯ ಜೀವನ ಹೇಗೆ ನಡೆಸಿದ್ದಾರೆ. ಅದು ರಾಜ್ಯದ ಜನತೆಗೆ ಗೊತ್ತಿದೆ. ಕುಮಾರಸ್ವಾಮಿ ಹೇಳುದನ್ನು ಯಾರು ಒಪ್ಪುವುದಿಲ್ಲ. ಲೋಕಾಯುಕ್ತ ಸಂಸ್ಥೆ ಸ್ವಾಯತ್ತ ಸಂಸ್ಥೆಯಾಗಿದ್ದು, ಅದರ ತನಿಖೆ ಬಗ್ಗೆ ನಂಬಿಕೆ ಇಲ್ಲದಿದ್ದರೆ ಮೇಲ್ಮನವಿ ಹೋಗಲಿ. ಬೇರೆ ರೀತಿ ಕಾನೂನು ಹೋರಾಟ ಮಾಡಲಿ. ಆದರೆ ಆ ಸಂಸ್ಥೆಯನ್ನೇ ಅನುಮಾನದಿಂದ ನೋಡುವುದು ಬೇಡ. ಅನುಮಾನದಿಂದ ನೋಡಿದರೆ ನಾಳೆ ಆ ಸಂಸ್ಥೆ ಹೇಗೆ ಉಳಿಯುತ್ತದೆ. ತನಿಖೆಯನ್ನು ಸಿಬಿಐಗೆ ವಹಿಸಿ ಅಂತ ಕೆಲವರು ಹೈಕೋರ್ಟ್‌ಗೆ ಹೋದರು. ಆದರೆ, ನ್ಯಾಯಾಧೀಶರು ಅದರ ಅಗತ್ಯವಿಲ್ಲ ಎಂದಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಅವರ ಹೆಸರನ್ನು ಹೇಳದೆ ಅವರಿಗೂ ತಿರುಗೇಟು ನೀಡಿದರು.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ್ದು ಮುಚ್ಚುವ ಕೆಲಸ, ಅಭಿವೃದ್ಧಿ ಮಾಡುವುದಲ್ಲ: ಹಣ ಕೊಡದ ಡಿಸಿ ವಿರುದ್ಧ ರೇವಣ್ಣ ಕಿಡಿ

ಕಾಂಗ್ರೆಸ್ ಹೈಕಮಾಂಡನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿಯಾಗುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅದರಲ್ಲಿ ತಪ್ಪೇನಿಲ್ಲ. ಹೈಕಮಾಂಡನ್ನು ಭೇಟಿ ಆಗಬಾರದು ಅಂತ ಇದೆಯಾ, ಅದರಲ್ಲಿ ತಪ್ಪೇನಿದೆ? ನಾನೂ ಕೂಡ ಹೈಕಮಾಂಡನ್ನು ಭೇಟಿಯಾಗಿ ಬಂದಿದ್ದೇನೆ. ಆದರೆ, ನೀವು ಅದನ್ನು ಹೇಳಿಲ್ಲ, ತೋರಿಸಿಲ್ಲ. ಸಿಎಂ ಸ್ಥಾನಕ್ಕಾಗಿ ಡಿಕೆಶಿ ಅವರು ಹೈಕಮಾಂಡ್ ಅನ್ನು ಭೇಟಿಯಾಗಿದ್ದಾರಾ ಎಂಬ ಪ್ರಶ್ನೆಗೆ ಸಿಎಂ ಸ್ಥಾನ ಕೇಳಿ ಯಾರು ಹೈಕಮಾಂಡನ್ನು ಭೇಟಿಯಾಗುತ್ತಿಲ್ಲ. ಸಿಎಂ ಇರುವಾಗ ಸಿಎಂ ಸ್ಥಾನ ಕೇಳುವುದಕ್ಕೆ ಆಗುತ್ತದೆಯೆ ಎಂದರು.

ಇನ್ನು ಎಂಇಎಸ್ ಕಿಡಿಗೇಡಿಗಳು ಕೆಎಸ್ಆರ್ ಟಿಸಿ ಸಿಬ್ಬಂದಿ ಮೇಲೆ ನಡೆಸಿರುವ ಹಲ್ಲೆಯ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್ ಕಾನೂನು ವಿರುದ್ಧ ಯಾರೇ ನಡೆದುಕೊಂಡರೂ ಕ್ರಮ ಕೈಗೊಳ್ಳಲಾಗುವುದು. ಅದರಲ್ಲೂ ಭಾಷೆ ಹೆಸರಿನಲ್ಲಿ ಅನಾವಶ್ಯಕವಾಗಿ ರಾಜಕೀಯ ಮಾಡಲಾಗುತ್ತಿದೆ. ಇದು ಒಪ್ಪುವಂತಹ ವಿಚಾರ ಅಲ್ಲ, ಅಲ್ಲಿ ನಿಂದಿಸುವಂತ ಮತ್ತು ದ್ವೇಶ ಉಂಟು ಮಾಡುವಂತಹ ಕೆಲಸ ಮಾಡಲಾಗಿದೆ. ಇದನ್ನು 90 % ಜನ ಒಪ್ಪುವುದಿಲ್ಲ. ಆದರೆ ಕಿಡಿಗೇಡಿಗಳು ಇಂತಹ ಕೆಲಸ ಮಾಡುತ್ತಿದ್ದಾರೆ. ಆದರೆ ನಾವೆಲ್ಲರೂ ಸಹನೆಯಿಂದ ಇದ್ದು, ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾಗುತ್ತದೆ. ಮುಂದೆ ಈ ರೀತಿ ಆಗದಂತೆ ಕ್ರಮ ತೆಗೆದುಕೊಳ್ಳುವುದು ಅಗತ್ಯ ಎಂದರು.

ಇದನ್ನೂ ಓದಿ: Nikhil Kumaraswamy: ಕ್ಯಾತಗಾನಹಳ್ಳಿ ಜಮೀನು ಸರ್ವೆ ವಿಚಾರ: ಕಮರ್ಷಿಯಲ್ ಬಿಲ್ಡಿಂಗ್ ಕಟ್ಟಿ ಬಾಡಿಗೆ ತಗೋಳ್ತಿಲ್ಲ