Asianet Suvarna News Asianet Suvarna News

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮುಂದೆ ಬೇರೆ ರಾಜ್ಯಕ್ಕೆ ಹೋಗ್ತಾರೆ: ಸಚಿವ ಜಮೀರ್ ಅಹ್ಮದ್‌

ರಾಜ್ಯದ ಜನರ ಮುಂದೆ ಕುಮಾರಸ್ವಾಮಿ ಎಕ್ಸ್‌ಪೋಸ್ ಆಗಿದ್ದು, ಅವರನ್ನು ಯಾರು ನಂಬುವುದಿಲ್ಲ. ಅವರು ರಾಮನಗರ ಬಿಟ್ಟು ಚನ್ನಪಟ್ಟಣಕ್ಕೆ ಬಂದರು. ಈಗ ಚನ್ನಪಟ್ಟಣ ಬಿಟ್ಟು ಮಂಡ್ಯಕ್ಕೆ ಹೋಗಿದ್ದಾರೆ. 

Union Minister HD Kumaraswamy will go to another state next Says Minister Zameer Ahmed gvd
Author
First Published Sep 22, 2024, 4:49 PM IST | Last Updated Sep 22, 2024, 4:48 PM IST

ಚನ್ನಪಟ್ಟಣ (ಸೆ.21): ರಾಜ್ಯದ ಜನರ ಮುಂದೆ ಕುಮಾರಸ್ವಾಮಿ ಎಕ್ಸ್‌ಪೋಸ್ ಆಗಿದ್ದು, ಅವರನ್ನು ಯಾರು ನಂಬುವುದಿಲ್ಲ. ಅವರು ರಾಮನಗರ ಬಿಟ್ಟು ಚನ್ನಪಟ್ಟಣಕ್ಕೆ ಬಂದರು. ಈಗ ಚನ್ನಪಟ್ಟಣ ಬಿಟ್ಟು ಮಂಡ್ಯಕ್ಕೆ ಹೋಗಿದ್ದಾರೆ. ಮುಂದೆ ರಾಜ್ಯವನ್ನೇ ಬಿಟ್ಟು ಬೇರೆ ರಾಜ್ಯಕ್ಕೆ ಹೋಗ್ತಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ವಾಗ್ದಾಳಿ ನಡೆಸಿದರು. ನಗರದ ಆದಿಲ್ ಶಾ ಟಿಪ್ಪು ಮೈದಾನದಲ್ಲಿ ಆಯೋಜಿಸಿದ್ದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅವರನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ.

ಈ ಕ್ಷೇತ್ರ ಬಿಟ್ಟುಹೋಗುವಾಗ ನಿಮ್ಮನ್ನ ಅವರು ಕೇಳಿದರಾ?. ನಿಮ್ಮ ಅನುಮತಿ ಇಲ್ಲದೇ ಅವರು ಮಂಡ್ಯಕ್ಕೆ ಹೋಗಿದ್ದಾರೆ. ಅವರಿಗೆ ಈ ಕ್ಷೇತ್ರದ ಬಗ್ಗೆ ಕಾಳಜಿ ಇದ್ದಿದ್ದರೆ ಈ ಉಪಚುನಾವಣೆಯೇ ಬರುತ್ತಿರಲಿಲ್ಲ ಎಂದು ಕಿಡಿಕಾರಿದರು. ೨೦೧೮ರಲ್ಲಿ ಕಾಂಗ್ರೆಸ್ ೮೦ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಜೆಡಿಎಸ್ ೩೭ ಸ್ಥಾನ ಮಾತ್ರ ಗಳಿಸಿತ್ತು. ಆದರೂ ನಾವು ಕುಮಾರಸ್ವಾಮಿಗೆ ಸಿಎಂ ಸ್ಥಾನ ನೀಡಿದೆವು. ಅವರು ಸಿಎಂ ಆಗಿದ್ದ ಅವಧಿಯಲ್ಲಿ ಎಷ್ಟು ಸೈಟ್ ನೀಡಿದ್ದಾರೆ. ಜಿಲ್ಲೆಯಿಂದ ಎರಡು ಬಾರಿ ಸಿಎಂ ಆದ ಅವರು ಜಿಲ್ಲೆಗೆ ಎಷ್ಟು ವಸತಿ ನೀಡಿದ್ದಾರೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ಗೆ ದ್ರೋಹ ಮಾಡಲು ಹೋಗಬೇಡಿ, ಎಲ್ಲರಿಗೂ ಸ್ಥಾನಮಾನ ಸಿಗಲಿದೆ: ಸಚಿವ ಈಶ್ವರ ಖಂಡ್ರೆ

ಹಿಂದೆ ೨೦೧೩ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಾಮನಗರ ಜಿಲ್ಲೆಗೆ ೩೧ ಸಾವಿರ ಮನೆಗಳನ್ನ ಕೊಟ್ಟಿದ್ದರು. ಆದರೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಇಡೀ ಜಿಲ್ಲೆಗೆ ಕೇವಲ ೬೦೦ ಮನೆ ನೀಡಿದ್ದಾರೆ. ಯಾಕೆ ಕುಮಾರಸ್ವಾಮಿಗೆ ಬಡವರು ಕಾಣಲಿಲ್ವಾ.? ಈಗ ಡಿಸಿಎಂ ಡಿಕೆಶಿ ಅವರ ಶ್ರಮದಲ್ಲಿ ಚನ್ನಪಟ್ಟಣಕ್ಕೆ ೫ ಸಾವಿರ ಮನೆ ಕೊಡುತ್ತಿದ್ದೇವೆ. ಕುಮಾರಸ್ವಾಮಿ ರಾಮನಗರ, ಚನ್ನಪಟ್ಟಣಕ್ಕೆ ಏನು ಮಾಡಿದ್ದಾರೆ.? ಕ್ಷೇತ್ರಕ್ಕೆ ಬಂದು ಅದನ್ನ ಹೇಳಲಿ ಎಂದು ಸವಾಲು ಹಾಕಿದರು. ಚನ್ನಪಟ್ಟಣಕ್ಕೆ ಸ್ಟೇಡಿಯಂ ಬೇಕು ಅಂತ ಮನವಿ ಇದ್ದರೂ ಕುಮಾರಸ್ವಾಮಿ ಮಾಡಿರಲಿಲ್ಲ. ಈಗ ಡಿಸಿಎಂ ಡಿ.ಕೆ.ಶಿವಕುಮಾರ್ ೯ಕೋಟಿ ವೆಚ್ಚದಲ್ಲಿ ಸ್ಟೇಡಿಯಂ ಅಭಿವೃದ್ಧಿ ಮಾಡ್ತಿದ್ದಾರೆ. ೪ ಕೋಟಿ ವೆಚ್ಚದಲ್ಲಿ ಶಾಲಾ ಕಟ್ಟಡ ಅಭಿವೃದ್ಧಿಗೆ ಚಾಲನೆ ಕೊಟ್ಟಿದ್ದಾರೆ ಎಂದರು.

ಚರ್ಚೆಗೆ ಬರಲು ಆಹ್ವಾನ: ಮಾಜಿ ಸಂಸದ ಡಿ.ಕೆ.ಸುರೇಶ್ ಸೋತರು ಕ್ಷೇತ್ರದ ಬಗ್ಗೆ ಕಾಳಜಿ ಇಟ್ಟುಕೊಂಡಿದ್ದಾರೆ. ಆದರೆ ಕುಮಾರಸ್ವಾಮಿ ಅಧಿಕಾರ ಇದ್ದಾಗಲೂ ಏನೂ ಮಾಡಲಿಲ್ಲ. ಕುಮಾರಸ್ವಾಮಿ ಅಧಿಕಾರದಲ್ಲಿ ಇದ್ದ ಅವಧಿಯಲ್ಲಿ ಕ್ಷೇತ್ರಕ್ಕೆ ಎಷ್ಟು ಕೊಡುಗೆ ನೀಡಿದ್ದಾರೆ. ಸುರೇಶ್ ಸೋತ ನಂತರವೂ ಕ್ಷೇತ್ರಕ್ಕೆ ಅನುದಾನ ತರಲು ಎಷ್ಟು ಶ್ರಮಿಸಿದ್ದಾರೆ ಎಂದು ಬೇಕಿದ್ರೆ ಬಹಿರಂಗ ಚರ್ಚೆಗೆ ಕುಮಾರಸ್ವಾಮಿ ಬರಲಿ ಪಂಥಾಹ್ವಾನ ನೀಡಿದರು. ಮಾಜಿ ಸಂಸದ ಡಿ.ಕೆ.ಸುರೇಶ್ ಮಾಡಿರೊ ಕೆಲಸ ಗಿನ್ನೀಸ್ ರೆಕಾರ್ಡ್‌ನಲ್ಲಿ ದಾಖಲಾಗಬೇಕು. ಒಬ್ಬ ಗ್ರಾಪಂ ಸದಸ್ಯನ ರೀತಿ ಅವರು ಕೆಲಸ ಮಾಡಿದ್ದಾರೆ. ಈ ಭಾಗಕ್ಕೆ ಶಾದಿ ಮಹಲ್ ಬೇಕು ಅನ್ನುವ ಮನವಿ ಕೊಟ್ಟಿದ್ದರು. ಹಾಗಾಗಿ ಅದಕ್ಕೆ ಸ್ಯಾಂಕ್ಷನ್ ಮಾಡಿದ್ದೇನೆ. ಅವರಿಗೆ ಕ್ಷೇತ್ರದ ಕುರಿತು ಸಾಕಷ್ಟು ಕಾಳಜಿ ಇದೆ ಎಂದರು.

ನಮ್ಮ ಸರ್ಕಾರ ಇನ್ನೂ ಮೂರುವರೆ ವರ್ಷ ಇರುತ್ತೆ. ಈಗಾಗಲೇ ಐದು ಗ್ಯಾರಂಟಿ ಯೋಜನಗಳ ಜಾರಿ ಮಾಡಿದ್ದೇವೆ. ಮಹಿಳೆಯರು, ಬಡವರಿಗೆ ಇದು ಅನುಕೂಲ ಆಗ್ತಿದೆ. ಆರನೇ ಗ್ಯಾರಂಟಿಯಾಗಿ ವಸತಿ ಯೋಜನೆ ನೀಡುತ್ತಿದ್ದೇವೆ. ಹಾಗಾಗಿ ಜನ ನಮ್ಮ ಪಕ್ಷದ ಮೇಲೆ ನಂಬಿಕೆ ಇಡಬೇಕು ಎಂದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಹಿನ್ನೆಲೆಯಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಹಳ ನಿರೀಕ್ಷೆ ಇತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ನಮಗೆ ಗೆಲುವು ಸಿಗಲಿಲ್ಲ. ಆಗ ಕೆಲ ಮುಖಂಡರು ಈ ಗ್ಯಾರಂಟಿಯಿಂದ ನಮಗೆ ಲಾಭ ಇಲ್ಲ ಅದನ್ನ ತೆಗೆಯಿರಿ ಅಂದರು.  ಆದರೆ ನಮ್ಮ ಸಿಎಂ, ಡಿಸಿಎಂ ಏನೇ ಆದರೂ ಗ್ಯಾರಂಟಿ ಮುಂದುವರೆಸೋಣ, ನಾವು ಗ್ಯಾರಂಟಿ ತಂದಿರೋದು ರಾಜಕೀಯ ಲಾಭಕ್ಕೆ ಅಲ್ಲ. ಎಷ್ಟೇ ಕಷ್ಟ ಆದ್ರೂ ನಾವು ಗ್ಯಾರಂಟಿ ಯೋಜನೆ ಸಮರ್ಪಕವಾಗಿ ನಿಭಾಯಿಸೋಣ ಅಂದರು ಎಂದು ತಿಳಿಸಿದರು.

ಜಾತಿ ಹೆಸರಿನಲ್ಲಿ ಬಿಜೆಪಿ ಮತ: ಕಾಂಗ್ರೆಸ್ ಪಕ್ಷದ ಇತಿಹಾಸ ನೋಡಿ. ಚುನಾವಣೆ ಸಂದರ್ಭದಲ್ಲಿ ಜನರ ಬಳಿ ಹೋಗಿ ಚುನಾವಣೆ ಮಾಡ್ತೀವಿ. ಆದರೆ ಬಿಜೆಪಿಯವರು ಹಿಂದೂ ಮುಸ್ಲಿಂ ಅಂತ ಮತ ಕೇಳುತ್ತಾರೆ. ನಮಗೆ ಯಾವುದೇ ಧರ್ಮ ಬೇಧ ಇಲ್ಲ. ಎಲ್ಲರೂ ಒಂದೇ ಎಂಬ ಭಾವನೆಯಲ್ಲಿ ನಾವು ಹೋಗ್ತಿದ್ದೀವಿ ಎಂದರು.

ರಾಜ್ಯದ ಮೂಲೆ ಮೂಲೆಗೂ ರಸ್ತೆ ಸಂಪರ್ಕ ಕಲ್ಪಿಸಲು ವಿಶೇಷ ಅನುದಾನ: ಸಚಿವ ಸತೀಶ್‌ ಜಾರಕಿಹೊಳಿ

ಸುರೇಶ್ ಅಭ್ಯರ್ಥಿಯಾಗಿಸಲು ಜಮೀರ್ ಮನವಿ: ಚನ್ನಪಟ್ಟಣ ಕ್ಷೇತ್ರ ಸಾಕಷ್ಟು ಬಡವಾಗಿದ್ದು, ಕ್ಷೇತ್ರದ ಹಿತದೃಷ್ಟಿಯಿಂದ ಉಪಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರನ್ನೇ ಕಣಕ್ಕೆ ಇಳಿಸಬೇಕು ಎಂದು ಬಹಿರಂಗ ವೇದಿಕೆಯಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಜಮೀರ್ ಅಹ್ಮದ್ ಖಾನ್ ಮನವಿ ಮಾಡಿದರು. ಚನ್ನಪಟ್ಟಣ ಕ್ಷೇತ್ರ ಸಾಕಷ್ಟು ಬಡವಾಗಿದ್ದು, ತಬ್ಬಲಿಯಾಗಿದೆ. ಈ ಕ್ಷೇತ್ರಕ್ಕೆ ಸಮರ್ಥ ಶಾಸಕರ ಆಯ್ಕೆ ಆಗಬೇಕು. ದಯಮಾಡಿ ಈ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಅವರನ್ನು ಸ್ಪರ್ಧೆಗೆ ಇಳಿಸಿ. ಹೈಕಮಾಂಡ್ ಜತೆ ಮಾತನಾಡಿ ಡಿ.ಕೆ.ಸುರೇಶ್ ಹೆಸರು ಬೆಂಬಲಿಸಿದರು. ಸುರೇಶ್ ಅವರನ್ನೇ ಸ್ಪರ್ಧೆಗೆ ಒಪ್ಪಿಸಿ ಎಂದ ಜಮೀರ್ ಅಹಮ್ಮದ್‌, ಚನ್ನಪಟ್ಟಣ ಉಪ ಚುನಾವಣೆಗೆ ಡಿ.ಕೆ.ಸುರೇಶ್ ನಿಲ್ಲಿಸಿ ಎಂದು ಡಿಕೆಶಿ ಬಳಿ ಮನವಿ ಮಾಡಿದರು.

Latest Videos
Follow Us:
Download App:
  • android
  • ios