ಕಾಂಗ್ರೆಸ್‌ಗೆ ದ್ರೋಹ ಮಾಡಲು ಹೋಗಬೇಡಿ, ಎಲ್ಲರಿಗೂ ಸ್ಥಾನಮಾನ ಸಿಗಲಿದೆ: ಸಚಿವ ಈಶ್ವರ ಖಂಡ್ರೆ
ಕಾಂಗ್ರೆಸ್ಸಿಗೆ ಸೋಲಾಗುತ್ತಿರೋದು ಕಾಂಗ್ರೆಸ್ಸಿನವರಿಂದ, ಕಾಂಗ್ರೆಸ್‌ಗೆ ದ್ರೋಹ ಮಾಡಲು ಹೋಗಬೇಡಿ. ಮುಂದೆ ಎಲ್ಲರಿಗೂ ಸ್ಥಾನಮಾನ ಪಕ್ಷದಲ್ಲಿ ಸಿಗಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಶಿಗ್ಗಾಂವಿ (ಸೆ.21): ಕಾಂಗ್ರೆಸ್ಸಿಗೆ ಸೋಲಾಗುತ್ತಿರೋದು ಕಾಂಗ್ರೆಸ್ಸಿನವರಿಂದ, ಕಾಂಗ್ರೆಸ್‌ಗೆ ದ್ರೋಹ ಮಾಡಲು ಹೋಗಬೇಡಿ. ಮುಂದೆ ಎಲ್ಲರಿಗೂ ಸ್ಥಾನಮಾನ ಪಕ್ಷದಲ್ಲಿ ಸಿಗಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ಶಿಗ್ಗಾಂವಿ ಕ್ರೀಡಾಂಗಣದಲ್ಲಿ ಜರುಗಿದ ಬೂತ್ ಸಮಿತಿ ಸದಸ್ಯರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಕ್ಷಣದಲ್ಲಿ ಉಪಚುನಾವಣೆ ಘೋಷಣೆ ಆಗಬಹುದು, ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣ ಮೂರು ಕಡೆ ಸಿದ್ಧತೆ ನಡೆದಿದೆ. ಹೆದರಿಸಿ ಬೆದರಿಸಿ ಇಡಿ, ಸಿಬಿಐ ಮೂಲಕ ಬಿಜೆಪಿಯವರು ಕಾಂಗ್ರೆಸ್ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದೇವೆ.
೧೬ ತಿಂಗಳಲ್ಲಿ ಕೊಟ್ಟ ಭರವಸೆ ಈಡೇರಿಸಿದ್ದೇವೆ. ಹೊಟ್ಟೆಕಿಚ್ಚಿನಿಂದ ಸರಕಾರ ಬುಡಮೇಲು ಮಾಡಲು ಪ್ರಯತ್ನ ನಡೆಸಿದ್ದಾರೆ. ಯಾವುದೇ ಶಕ್ತಿ ಬಂದ್ರು ಐದು ವರ್ಷ ಏನು ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಅಲುಗಾಡಿಸಲು ಸಾಧ್ಯವಿಲ್ಲ. ಸುಳ್ಳು ಆರೋಪ ಮಾಡಿ, ಸುಳ್ಳೆ ಸತ್ಯ ಮಾಡಲು ಹೊರಟಿದ್ದಾರೆ ಎಂದರು. ಮಾಜಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಶಿಗ್ಗಾಂವಿ ಕಾಂಗ್ರೆಸ್ ಗೆಲ್ಲುವ ಕ್ಷೇತ್ರವಾಗಿದೆ. ಕಾಂಗ್ರೆಸ್ ಸೋಲಲು ಕಾಂಗ್ರೆಸ್ಸೇ ಕಾರಣ. ನಮ್ಮ ಮುಖಂಡರಲ್ಲಿ ಮನವಿ ಮಾಡ್ತೀನಿ. ಪಕ್ಷ ಒಬ್ಬರಿಗೆ ಟಿಕೆಟ್ ಕೊಡುತ್ತೆ. ಟಿಕೆಟ್ ಸಿಗಲಿಲ್ಲ ಅಂತ ಪಕ್ಷಕ್ಕೆ ದ್ರೋಹ ಮಾಡಿದರೆ ಮತ್ತೂ ಇದೇ ಪರಿಸ್ಥಿತಿ ಬರುತ್ತೆ, ಮುಂದೆ ಕಾರ್ಯಕರ್ತರ ಪರಿಸ್ಥಿತಿ ಅಧೋಗತಿ ಎಂದು ಕುಲಕರ್ಣಿ ಹೇಳಿದರು.
ರಾಜ್ಯದ ಮೂಲೆ ಮೂಲೆಗೂ ರಸ್ತೆ ಸಂಪರ್ಕ ಕಲ್ಪಿಸಲು ವಿಶೇಷ ಅನುದಾನ: ಸಚಿವ ಸತೀಶ್ ಜಾರಕಿಹೊಳಿ
ಎಷ್ಟೋ ಜನ ನನಗೆ ಶಿಗ್ಗಾಂವಿಯಿಂದ ಫೋನ್ ಮಾಡ್ತಾ ಇರ್ತಾರೆ, ಕೆಲಸಕ್ಕೆ ಅಂತ, ಆಸ್ಪತ್ರೆಗೆ ಅಂತ ನನಗೆ ಫೋನ್ ಮಾಡ್ತಾರೆ. ಎಲ್ಲಿ ದುಡ್ಡು ಅಲ್ಲಿ ಓಟು ಅನ್ನೋ ಪರಿಸ್ಥಿತಿ ರಾಜಕೀಯದಲ್ಲಿ ಬಂದಿದೆ. ಜಾತ್ಯತೀತ ಜನತಾ ದಳ ಅಂತ ಇತ್ತು ಆದರೀಗ ಅದೂ ಹೋಯ್ತು. ಬಿಜೆಪಿ ಜೊತೆ ಸೇರಿ ಜಾತ್ಯತೀತ ಹೋಯ್ತು. ನನಗೆ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಶಿಗ್ಗಾಂವಿಯಲ್ಲಿ ನಿಲ್ಲು ಅಂದರು. ನಾನು ಸ್ಥಳೀಯರಿಗೇ ಅವಕಾಶ ಕೊಡಿ ಎಂದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಕೆಲವೊಬ್ಬರು ಕಾಂಗ್ರೆಸ್ಸಿನಲ್ಲಿದ್ದು ರಾತ್ರಿ ಬಿಜೆಪಿ ಮಾಡ್ತಾರಂತೆ, ರಾತ್ರಿ ಒಂದು ಪಾರ್ಟಿ, ಹಗಲು ಒಂದು ಪಾರ್ಟಿ ಮಾಡಬಾರದು. ಇರೋದಾದರೆ ಕಾಂಗ್ರೆಸ್ ಜೊತೆ ಇರಿ. ಇಲ್ಲದಿದ್ದರೆ ನಾಳೆಯೇ ಬೊಮ್ಮಾಯಿ ಜೊತೆ ಹೋಗಿ ನಮ್ಮದೇನು ಅಭ್ಯಂತರ ಇಲ್ಲ ಎಂದು ಎಚ್ಚರಿಸಿದರು.
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದಲ್ಲಿ ಮುಂಚೆ ಹೊಂದಾಣಿಕೆ ರಾಜಕೀಯ ಆಗ್ತಾ ಇತ್ತು. ಈಗ ಅದಕ್ಕೆ ಅವಕಾಶ ಇಲ್ಲ, ಪಕ್ಷ ಗಂಭೀರವಾಗಿ ಪರಿಗಣಿಸಿದೆ ಎಂದು ಕೈ ಟಿಕೆಟ್ ಆಕಾಂಕ್ಷಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಶಿಗ್ಗಾಂವಿಯಲ್ಲಿ ಹೊಂದಾಣಿಕೆ ರಾಜಕೀಯಕ್ಕೆ ಅವಕಾಶ ಇಲ್ಲ. ಚುನಾವಣೆ ಘೋಷಣೆ ಆದ ಮೇಲೆ ಟಿಕೆಟ್ ಘೋಷಣೆ ಮಾಡ್ತೇವೆ. ಪಕ್ಷ ಬಿಟ್ಟು ಹೋಗೋದಾದರೆ ಹೋಗಬಹುದು, ಕೊನೆಗೆ ಪಕ್ಷ ಬಿಟ್ಟು ಹೋಗೋದು ಬೇಡ ಅಂತ ಜಾರಕಿಹೊಳಿ ಎಚ್ಚರಿಕೆ ನೀಡಿದರು.
ಪೀಣ್ಯದಲ್ಲಿ ಸಣ್ಣ ಕೈಗಾರಿಕಾ ನಿಗಮ ಉತ್ಕೃಷ್ಟತಾ ಕೇಂದ್ರ: ಶೋಭಾ ಕರಂದ್ಲಾಜೆ
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ, ಜೆ.ಸಿ. ಚಂದ್ರಶೇಖರ, ಸಲೀಂ ಅಹ್ಮದ, ಮಾಜಿ ಸಂಸದ ಮಂಜುನಾಥ ಕುನ್ನೂರ, ಎಚ್. ಆಂಜನೇಯ, ಶಾಸಕರಾದ ಬಸವರಾಜ ಶಿವಣ್ಣವರ, ಶ್ರೀನಿವಾಸ ಮಾನೆ ಸೇರಿದಂತೆ ಹಲವಾರು ಮುಖಂಡರುಗಳು ಮಾತನಾಡಿದರು. ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಸಚಿವರಾದ ಆರ್. ಶಂಕರ, ಶಾಕೀರ ಸನದಿ, ವಿನೋದ ಅಸೂಟಿ, ವಿಜಯ ಮುಳಗುಂದ, ಸೋಮಣ್ಣಾ ಬೇವಿನಮರದ, ಆರ್.ವಿ. ವೆಂಕಟೇಶ, ಪ್ರಕಾಶ ಕೋಳಿವಾಡ, ಯು.ಬಿ. ಬಣಕಾರ, ಪ್ರೇಮಾ ಪಾಟೀಲ, ಆರ್.ಜೆ. ಮುಲ್ಲಾ, ಯಾಸೀರ್‌ಖಾನ್ ಪಠಾಣ ಹಾಗೂ ವಿವಿಧ ಮುಖಂಡರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪಕ್ಷದ ಹಾವೇರಿ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.