ವಿಪಕ್ಷಗಳು ನನ್ನನ್ನು ಬಗ್ಗು ಬಡಿಯಲು ಹೊರಟಿವೆ, ಆದ್ರೆ ಆಗುತ್ತಾ?: ಎಚ್.ಡಿ.ಕುಮಾರಸ್ವಾಮಿ ಆಕ್ರೋಶ
ನನಗೆ ನೋಟಿಸ್ ಕೂಡ ನೀಡದೆ ನಮ್ಮ ತೋಟದ ಸರ್ವೇಗೆ ಅಧಿಕಾರಿಗಳು ಬಂದಿದ್ದರು. ನೋಟಿಸ್ ಕೊಡದೆ ಹೇಗೆ ಸರ್ವೇಗೆ ಬರುತ್ತೀರಿ. ಈ ರೀತಿ ದಾಳಿ ಮಾಡಿ, ವಿರೋಧ ಪಕ್ಷಗಳನ್ನು ಬಗ್ಗು ಬಡಿಯೋಕೆ ಕಾಂಗ್ರೆಸ್‌ನವರು ಹೊರಟಿದ್ದಾರೆ.

ಹಾಸನ (ಫೆ.16): ನನಗೆ ನೋಟಿಸ್ ಕೂಡ ನೀಡದೆ ನಮ್ಮ ತೋಟದ ಸರ್ವೇಗೆ ಅಧಿಕಾರಿಗಳು ಬಂದಿದ್ದರು. ನೋಟಿಸ್ ಕೊಡದೆ ಹೇಗೆ ಸರ್ವೇಗೆ ಬರುತ್ತೀರಿ. ಈ ರೀತಿ ದಾಳಿ ಮಾಡಿ, ವಿರೋಧ ಪಕ್ಷಗಳನ್ನು ಬಗ್ಗು ಬಡಿಯೋಕೆ ಕಾಂಗ್ರೆಸ್‌ನವರು ಹೊರಟಿದ್ದಾರೆ. ಆದರೆ, ನನ್ನನ್ನು ಬಗ್ಗಿಸಲು ಆಗುತ್ತಾ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. 1985ರಲ್ಲಿ ನಾನು ಚಿತ್ರರಂಗದಲ್ಲಿ ಹಂಚಿಕೆದಾರನಾಗಿದ್ದೆ. ಆಗ 45 ಎಕ್ರೆ ಜಮೀನು ಖರೀದಿಸಿದ್ದೇನೆ.
ಆದರೆ, ನಾನೇನು 200-300 ಎಕ್ರೆ ಲಪಟಾಯಿಸಿದ್ದೇನೆ ಎನ್ನುವ ಹಾಗೆ ಇದಕ್ಕೊಂದು ಎಸ್‌ಐಟಿ ರಚಿಸಿದ್ದಾರೆ. ಕಷ್ಟ ಪಟ್ಟು 45 ಎಕ್ರೆ ಮಾಡಿದ್ದನ್ನೂ ಬಿಡುತ್ತಿಲ್ಲ. ಅದನ್ನೂ ಲಪಟಾಯಿಸಲು ಮುಂದಾಗಿದ್ದಾರೆ. ಭದ್ರತೆಗಾಗಿ ಪೊಲೀಸರನ್ನೂ ಕರೆದುಕೊಂಡು ಬರಬೇಕು ಎಂದಿದ್ದರಂತೆ. ಬೇಕಿದ್ದರೆ, ಇಂಟರ್ ನ್ಯಾಷನಲ್ ಸರ್ವೇಯರ್ ರನ್ನು ಕರೆದುಕೊಂಡು ಬನ್ನಿ ಎಂದು ಕಿಡಿಕಾಡಿದರು. ಶುಕ್ರವಾರ ನನಗೆ ನೋಟಿಸ್ ಕೂಡ ಕೊಡದೆ ನನ್ನ ತೋಟಕ್ಕೆ ಸರ್ವೇ ಮಾಡಲು ಹೊರಟಿದ್ರಂತೆ. ನನ್ನ ಭೂಮಿ ಸರ್ವೇ ಮಾಡುವುದಾದರೆ ನೋಟಿಸ್ ಕೊಡಿ. ನೋಟಿಸ್ ಕೊಡದೆ ಹೇಗೆ ಸರ್ವೇಗೆ ಬರುತ್ತೀರಿ.
ನಾನು ತಯಾರಾಗಿದ್ದೇನೆ. ಎಷ್ಟು ದಿನ ಇಂತಹ ಆಟ ಆಡ್ತೀರಾ ಎಂದು ಕಿಡಿ ಕಾರಿದರು. ಇದು ಸಿದ್ದರಾಮಯ್ಯನವರ ಆಡಳಿತ ವೈಖರಿ ಎಂದು ವ್ಯಂಗ್ಯವಾಡಿದರು. ಯಾವುದಾದರೂ ಕಾನೂನುಬಾಹಿರವಿದ್ದರೆ ತೆಗೆದುಕೊಂಡು ಹೋಗಿ. ನನ್ನ ತಕರಾರಿಲ್ಲ. ಏನೇ ಇದ್ದರೂ ಕಾನೂನಿನ ಪ್ರಕಾರ ಮಾಡಿ ಎಂದರು. ಈ ಪ್ರಕರಣ ಕೋರ್ಟ್‌ನಲ್ಲಿ ಇದೆ. ಅಲ್ಲಿ ಕುಮಾರಸ್ವಾಮಿಯ ಸಂಬಂಧಿಕರು ಎಂಬ ಪ್ರಸ್ತಾಪ ಇದೆ. ದಾಖಲೆಯನ್ನು ಯಾರು ನೋಡಿದ್ದೀರಿ?. ಕಷ್ಟಪಟ್ಟು ಸಂಪಾದನೆ ಮಾಡಿ ಖರೀದಿ ಮಾಡಿರುವ ಭೂಮಿ ಅದು.
ರಾಮನಗರದ ಹೆಸರು ಬದಲಾವಣೆಗೆ ಕುಮಾರಸ್ವಾಮಿಯಿಂದ ಅಡ್ಡಗಾಲು: ಡಿಕೆಶಿ ಕಿಡಿ
ಅಲ್ಲೇನು ರೆಸಾರ್ಟ್ ಮಾಡಿಲ್ಲ, ತೆಂಗು-ಅಡಿಕೆ ಗಿಡ ಹಾಕಿದ್ದೀನಿ. ಈ ರೀತಿ ದಾಳಿ ಮಾಡಿ, ವಿರೋಧ ಪಕ್ಷಗಳನ್ನು ಬಗ್ಗು ಬಡಿಯೊಕೆ ಕಾಂಗ್ರೆಸ್‌ನವರು ಹೊರಟಿದ್ದಾರೆ. ಆದರೆ, ನನ್ನನ್ನು ಬಗ್ಗಿಸಲು ಆಗುತ್ತಾ ಎಂದು ತಿರುಗೇಟು ನೀಡಿದರು. ಹಿಂದೆ ಯಡಿಯೂರಪ್ಪನವರ ಕಾಲದಲ್ಲೂ ತನಿಖೆ ಮಾಡಿದ್ದರು. ಏನೂ ಸಿಗಲಿಲ್ಲ. ಎಲ್ಲರ ಕಾಲದಲ್ಲೂ ಇದು ನಡೆಯುತ್ತಲೇ ಇದೆ. ಕೋಟಿಗಟ್ಟಲೆ ಲೂಟಿ ಹೊಡೆದು ಇವರೆಲ್ಲ ಮಾಡಿಕೊಂಡಿದ್ದಾರಲ್ಲಾ, ಅದನ್ನು ಕೇಳೋರೇ ಇಲ್ಲ ಎಂದರು.