ಸಿಡಿ ಫ್ಯಾಕ್ಟರಿ ಬಂದ್ ಆಯ್ತು ಎಂಡಿಎ ಫ್ಯಾಕ್ಟರಿ ಶುರುವಾಯ್ತು: ಡಿಕೆಶಿ ವಿರುದ್ಧ ಎಚ್‌ಡಿಕೆ ಪರೋಕ್ಷ ಆರೋಪ

ಸಿಎಂ ಖುರ್ಚಿ ಮೇಲೆ ಕಣ್ಣಿಟ್ಟವರಿಂದ ಎಂಡಿಎ ಹಗರಣ ಬಯಲು ಎಂದು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು. 

union minister hd kumaraswamy slams on dcm dk shivakumar over muda scam issue gvd

ಮೈಸೂರು (ಜು.06): ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟವರಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಹಗರಣ ಬಯಲಾಗಿದೆ. ಮುಖ್ಯಮಂತ್ರಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ಸಿಗರಿಂದಲೇ ಪಿತೂರಿ ನಡೆಯುತ್ತಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಹೊಸ ‘ಬಾಂಬ್‌’ ಸಿಡಿಸಿದ್ದಾರೆ. ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಹಾಗೂ ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಷ್ಟು ದಿನ ಹೊರಗೆ ಬಾರದ ಹಗರಣ ಈಗ ಬಂದಿದ್ದು ಯಾಕೆ? 

ಇದರ ಹಿಂದೆ ಮುಖ್ಯಮಂತ್ರಿ ಕುರ್ಚಿ ಮೇಲೆ ಟವೆಲ್ ಹಾಕಿರುವವರ ಪಾತ್ರ ಇದೆ. ಈಗಿನ ಮುಖ್ಯಮಂತ್ರಿ ತೆಗೆದು ತಾವು ಆ ಸ್ಥಾನದಲ್ಲಿ ಕೂರಬೇಕೆಂದು ಕಾಯುತ್ತಿದ್ದಾರೆ. ಅವರು ಸಿದ್ದರಾಮಯ್ಯ ಅವರ ಇಮೇಜ್ ಹಾಳು ಮಾಡಲು ಕಾರ್ಯತಂತ್ರ ರೂಪಿಸಿದ್ದಾರೆ. ಸಿ.ಡಿ. ಫ್ಯಾಕ್ಟರಿ ಬಂದ್ ಆಯ್ತು, ಈಗ ಮುಡಾ ಫ್ಯಾಕ್ಟರಿ ಶುರುವಾಯ್ತು ಎಂದು ಲೇವಡಿ ಮಾಡಿದರು. ಈ ಹಗರಣದ ವಿರುದ್ಧ ಬಿಜೆಪಿಯವರು ಹೋರಾಟ ಮಾಡುತ್ತಿದ್ದಾರೆ ಅಷ್ಟೆ. ಆದರೆ, ಹಗರಣ ಆಚೆ ಬರಲು ಕಾಂಗ್ರೆಸ್‌ನವರೇ ಒಳಗೊಳಗೆ ಕುಮ್ಮಕ್ಕು ಕೊಡುತ್ತಿದ್ದಾರೆ. ಈ ಬಗ್ಗೆ ನನಗೆ ಮಾಹಿತಿ ಇದೆ. ಮುಡಾ ಹಗರಣವನ್ನು ಮುಂದಿಟ್ಟುಕೊಂಡು ದೊಡ್ಡ ಪ್ರಚಾರ ಪಡೆಯುವ ಹಿಂದೆ ಕಾಂಗ್ರೆಸ್ಸಿಗರ ಸಂಚು ಅಡಗಿದೆ. 

ಮುಡಾದಲ್ಲಿ ಸಿಎಂ ಮಾಡಿರುವ ವ್ಯವಹಾರಗಳ ದಾಖಲಾತಿ ತೆಗೆದು, ವಕೀಲರನ್ನಿಟ್ಟು ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ಸಿಗರಿಂದಲೇ ಪಿತೂರಿ ನಡೆದಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆದಿರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಸರೇಳದೇ ಟಾಂಗ್ ನೀಡಿದರು. ಮುಖ್ಯಮಂತ್ರಿ ಪತ್ನಿಗೆ ಆ ಜಾಗ ಹೇಗೆ ಬಂತು ಅಂತಲೂ ನನಗೆ ಗೊತ್ತಿದೆ. ತಮ್ಮ ಪತ್ನಿಯ ಜಾಗದ ವಿಚಾರದಲ್ಲಿ 62 ಕೋಟಿ ರು. ಪರಿಹಾರ ಕೇಳುವ ಮುಖ್ಯಮಂತ್ರಿ ಅವರು ಭೂಮಿ ಕಳೆದುಕೊಂಡು ಬೀದಿಯಲ್ಲಿ ನಿಂತಿರುವ ರೈತರಿಗೂ ಅದೇ ರೀತಿ ಪರಿಹಾರ ಕೊಡಿಸಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.

ಮುಡಾದಲ್ಲಿ ಹಗರಣವೇ ಆಗಿಲ್ಲ: ಎಚ್‌ಡಿಕೆಗೆ ಸಚಿವ ಬೈರತಿ ಸುರೇಶ್ ತಿರುಗೇಟು

ಆ ದೇವರು ಮೆಚ್ಚುತ್ತಾನಾ?: ಸಿಎಂ ಪತ್ನಿಗೆ 14 ಸೈಟ್ ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾನೂನು ಸಲಹೆಗಾರ ಈಗ ಎಂಎಲ್ಎ ಆಗಿದ್ದಾರೆ. ಅವರು ಸಿಎಂ ಪರ ಸುಧೀರ್ಘವಾಗಿ ಮಾತನಾಡಿದ್ದಾರೆ. 62 ಕೋಟಿ ರೂ. ಪರಿಹಾರ ನೀಡಬೇಕು ಎಂದಿದ್ದಾರೆ. ಆದರೆ, ಹಲವು ಅಭಿವೃದ್ಧಿ ‌ಹೆಸರಿನಲ್ಲಿ ಭೂ ಸ್ವಾಧೀನವಾಗಿದೆ. ಆ ರೈತರು ಇನ್ನೂ ಕೂಡ ಬೀದಿಯಲ್ಲಿ ಅಲೆದಾಡುತ್ತಿದ್ದಾರೆ. ಅವರಿಗೆ ರೇಟ್ ಫಿಕ್ಸ್ ಮಾಡುವಾಗ ಹೇಗೆ ಮಾಡುತ್ತೀರಾ? ರೈತರನ್ನ ಬೀದಿಗೆ ನಿಲ್ಲಿಸಿದ್ದೀರಿ ಇದು ಸರೀನಾ? ನಿಮ್ಮ ಪತ್ನಿಯ ಹಣ ಕೇಳುತ್ತಾ ಇದ್ದೀರಲ್ಲಾ ಆ ದೇವರು ಮೆಚ್ಚುತ್ತಾನಾ ಎಂದು ಪ್ರಶ್ನಿಸಿದರು.

Latest Videos
Follow Us:
Download App:
  • android
  • ios