ಭಯ ಭಕ್ತಿ ಇಲ್ಲದೆ ಜನರಿಗೆ ಟೋಪಿ ಹಾಕುವ ಸರ್ಕಾರ ಬೇಕೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಆಶಯ ಹೊಂದಿದ್ದು, ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ದೂರಿದರು.
ಹಲಗೂರು (ಜ.06): ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಆಶಯ ಹೊಂದಿದ್ದು, ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ದೂರಿದರು. ಮದ್ದೂರು ರಸ್ತೆಯ ಹಲಗೂರು ಪ್ರೌಢಶಾಲಾ ವಿದ್ಯಾ ಸಂಸ್ಥೆ ಆವರಣದಲ್ಲಿ ಕ್ರಿಯಾಶೀಲ ಆಸ್ಪತ್ರೆ, ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ, ವಿಕ್ಟೋರಿಯಾ ಆಸ್ಪತ್ರೆ ಬೆಂಗಳೂರು ಸಹಯೋಗದಲ್ಲಿ ನಡೆದ ಬೃಹತ್ ಆರೋಗ್ಯ ಉಚಿತ ತಪಾಸಣೆ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಕಾರ್ಖಾನೆಗಳನ್ನು ಸ್ಥಾಪಿಸಿ ನಿರುದ್ಯೋಗಿಗಳಿಗೆ ಕೆಲಸ ಕೊಡಿಸುವ ಆಶಯ ಹೊಂದಿದ್ದೇನೆ. ಆದರೆ, ರಾಜ್ಯ ಸರ್ಕಾರ ಇದಕ್ಕೆ ಸಹಕಾರ ನೀಡುತ್ತಿಲ್ಲ. ಸರ್ಕಾರ ಸಹಕಾರ ನೀಡಿದರೆ ಕೈಗಾರಿಕೆಗಳನ್ನು ಸ್ಥಾಪನೆಗೆ ಕ್ರಮ ವಹಿಸುವುದಾಗಿ ತಿಳಿಸಿದರು. ವೋಟಿಗಾಗಿ ಈ ಸರ್ಕಾರ ಗೃಹಲಕ್ಷ್ಮಿ ಹೆಸರಿನಲ್ಲಿ ನಿಮ್ಮ ತೆರಿಗೆ ಹಣವನ್ನು ನಿಮಗೆ ಲಂಚ ನೀಡುತ್ತಿದೆ. ಆಶ್ರಯ ಯೋಜನೆಯಲ್ಲಿ ಮನೆ ಪಡೆಯಲು ಫಲಾನುಭವಿಗಳು ಸರ್ಕಾರಕ್ಕೆ 12 ಸಾವಿರ ರು. ಲಂಚ ನೀಡಬೇಕು. ಇಂತಹ ಸರ್ಕಾರ ನಿಮಗೆ ಬೇಕೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಶೇ.60ರಷ್ಟು ಕಮಿಷನ್, ಹಣ ಲೂಟಿಗೂ ಒಂದು ಇತಿಮಿತಿ ಇಲ್ಲವಾ?: ಎಚ್‌ಡಿಕೆ ಕಿಡಿ
ಹಾಲಿಗೆ 5 ರು. ಬಾಕಿ ಪ್ರೋತ್ಸಾಹ ಧನ ಹಲವು ತಿಂಗಳಾದರೂ ನೀಡಿಲ್ಲ. ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನಿಲ್ಲಿಸಲಾಗಿದೆ. ಈ ರೀತಿಯ ಸರ್ಕಾರದ ನಡವಳಿಕೆಯಿಂದ ಬೇಸತ್ತು ಎಷ್ಟು ಗುತ್ತಿಗೆದಾರರು, ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು. ಭಯ ಭಕ್ತಿ ಇಲ್ಲದೆ ಜನರಿಗೆ ಟೋಪಿ ಹಾಕುವ, ಮೋಸಗಾರರು ರಕ್ಷಣೆಗೆ ಇರುವಂತ ಸರ್ಕಾರ ಬೇಕೆ. ಐದು ಗ್ಯಾರಂಟಿಗಳನ್ನು ನೀಡುತ್ತೇವೆ ಎಂದು ಅದಕ್ಕೆ ಹಲವು ಕಂಡೀಶನ್ ಹಾಕಿದರು. ಒಂದು ಮನೆಗೆ 200 ಯೂನಿಟ್ ವಿದ್ಯುತ್ ಉಚಿತ, ಆದರೆ, ಬಳಕೆ ಹೆಚ್ಚಾದರೆ ಪಾವತಿ ಮಾಡಬೇಕು. ರೈತರ ಪಂಪ್ ಸೆಟ್ ಟಿಸಿ ಕೆಟ್ಟರೇ ಹೊಸದಾಗಿ ಟಿಸಿ ಹಾಕಲು 2.30 ಲಕ್ಷ ರು. ಕಟ್ಟಬೇಕು. ಈಗಿನ ಪರಿಸ್ಥಿತಿಯಲ್ಲಿ ರೈತರಿಂದ ಇದು ಸಾಧ್ಯವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸರ್ಕಾರ ಸೆಸ್ ಹೆಚ್ಚಿಸಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿದರು. ಹಾಲಿನ ದರ ಏರಿಕೆ ಜೊತೆಗೆ ನೀರಿಗೂ ದರವನ್ನು ಏರಿಸುತ್ತಾರೆ. ಅಗತ್ಯ ವಸ್ತುಗಳ ಎಲ್ಲಾ ದರ ಏರಿಸಿ ಸರ್ಕಾರ ನಡೆಸುತ್ತಾ ನಿಮಗೆ 2000 ರು. ನೀಡುತ್ತಿದ್ದಾರೆ. ನಾನು ಕೂಡ ಈ ರೀತಿಯ ಸರ್ಕಾರ ನಡೆಸಿದರೆ ಒಂದು ಮನೆಗೆ 10 ಸಾವಿರ ರು. ನೀಡುತ್ತಿದ್ದೆ ಎಂದರು. ದೇಶದಲ್ಲಿ ದುಡ್ಡಿನ ಸಮಸ್ಯೆ ಇಲ್ಲ. ಆದರೆ, ಅದನ್ನು ಸರಿಯಾಗಿ ವಿನಿಯೋಗ ಮಾಡುತ್ತಿಲ್ಲ. ರೈತರು ಹಾಗೂ ಸಾರ್ವಜನಿಕರಿಗೆ ವಂಚನೆ ಮಾಡಿದ ವ್ಯಕ್ತಿಗಳಿಗೆ ಬೆಂಬಲ ನೀಡುತ್ತಿದೆ. ಇಂತಹ ಸರ್ಕಾರಗಳಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದರು.
ರಸ್ತೆಗಲ್ಲ, ಇಡೀ ರಾಜ್ಯಕ್ಕೆ ಸಿದ್ದರಾಮಯ್ಯ ಹೆಸರಿಡಿ: ಎಚ್.ಡಿ.ಕುಮಾರಸ್ವಾಮಿ ಲೇವಡಿ
ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದರೂ ಹೋರಾಟ ಮಾಡದೆ ಕುಳಿತಿರುವುದು ಸರಿಯಲ್ಲ. ಈ ಎಲ್ಲಾ ವ್ಯವಸ್ಥೆಗಳಿಂದ ಮುಂದೆ ನಿಮಗೆ ಕಷ್ಟ ತಿಳಿಯುತ್ತದೆ. ಜನರೇ ನೀವು ಬುದ್ಧಿವಂತರಾಗಿ ನಮಗೆ ಬೇಕಾಗಿರುವುದು ಸ್ವಾಭಿಮಾನದ ಬದುಕು ಎಂದು ಎಚ್ಚರಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಒಕ್ಕಲಿಗರ ಸಂಘದ ಖಜಾಂಜಿ ನೆಲ್ಲಿಗೆರೆ ಬಾಲಕೃಷ್ಣ, ಕಿಮ್ಸ್ ಉಮೇಶ್, ಹಲಗೂರು ವಿದ್ಯಾ ಸಂಸ್ಥೆ ಅಧ್ಯಕ್ಷ ಎಚ್.ಎಂ.ಆನಂದ್ ಕುಮಾರ್ ಮತ್ತು ಸದಸ್ಯರು, ಮುಖಂಡರಾದ ಕಂಸಾಗರದ ರವಿ, ವಿಶ್ವನಾಥ, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್, ಪುಟ್ಟಸ್ವಾಮಿ, ಪುಟ್ಟರಾಮು, ಜಯಸಿಂಹ, ನಂದನ, ಕೆ.ಸಿ.ಗೌಡ, ನಿತ್ಯಾನಂದ, ಜಯರಾಮ್ ಸೇರಿದಂತೆ ಇತರರು ಇದ್ದರು.