ಕಾಂಗ್ರೆಸ್ ಅಧಿವೇಶನದಲ್ಲಿ ನಕಲಿ ಗಾಂಧಿಗಳ ದರ್ಬಾರ್: ಕುಮಾರಸ್ವಾಮಿ ವ್ಯಂಗ್ಯ
ಗಾಂಧೀಜಿ ಸಂಘಟಿತ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಅವರ ಹೆಸರಿನಲ್ಲಿ ಕಾರ್ಯಕ್ರಮ ಮಾಡುವುದಕ್ಕೆ ನನ್ನ ತಕರಾರಿಲ್ಲ. ಅದಕ್ಕೊಂದು ಅರ್ಥ ಬರುವ ರೀತಿಯಲ್ಲಿ ವ್ಯವಸ್ಥೆ ಜಾರಿಯಲ್ಲಿರಬೇಕಿತ್ತು. ಹಾಗೆ ನೋಡಿದರೆ ಗಾಂಧೀಜಿ ಪರಿಕಲ್ಪನೆಯ ರಾಮರಾಜ್ಯ ಇವತ್ತು ಕರ್ನಾಟಕದಲ್ಲಿದೆಯಾ ಎಂದು ಪ್ರಶ್ನಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಮಂಡ್ಯ(ಡಿ.27): ಬೆಳಗಾವಿಯಲ್ಲಿ ನಡೆದಿರುವ ಕಾಂಗ್ರೆಸ್ ಅಧಿವೇಶನದ ಕಟೌಟ್‌ಗಳಲ್ಲಿ ಗಾಂಧೀಜಿ ಫೋಟೋ ನೋಡಲಿಲ್ಲ. ಆದರೆ, ನಕಲಿ ಗಾಂಧಿಗಳ ಫೋಟೋಗಳನ್ನು ಆಕಾಶದೆತ್ತರಕ್ಕೆ ಹಾಕಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.
ನಗರದ ಜಿಲ್ಲಾ ಪಂಚಾಯಿತಿ ಎದುರು ಸುದ್ದಿಗಾರರೊಂದಿಗೆ ಮಾತನಾಡಿ, ಗಾಂಧೀಜಿ ಸಂಘಟಿತ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಅವರ ಹೆಸರಿನಲ್ಲಿ ಕಾರ್ಯಕ್ರಮ ಮಾಡುವುದಕ್ಕೆ ನನ್ನ ತಕರಾರಿಲ್ಲ. ಅದಕ್ಕೊಂದು ಅರ್ಥ ಬರುವ ರೀತಿಯಲ್ಲಿ ವ್ಯವಸ್ಥೆ ಜಾರಿಯಲ್ಲಿರಬೇಕಿತ್ತು. ಹಾಗೆ ನೋಡಿದರೆ ಗಾಂಧೀಜಿ ಪರಿಕಲ್ಪನೆಯ ರಾಮರಾಜ್ಯ ಇವತ್ತು ಕರ್ನಾಟಕದಲ್ಲಿದೆಯಾ ಎಂದು ಪ್ರಶ್ನಿಸಿದರು.
ನಿರುದ್ಯೋಗ ಸಮಸ್ಯೆ ನಿವಾರಣೆಗೆ ಒತ್ತು: ಕೇಂದ್ರ ಸಚಿವ ಕುಮಾರಸ್ವಾಮಿ
ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿಲ್ಲ. ಸರಿಯಾದ ಚಿಕಿತ್ಸೆ ಇಲ್ಲದೆ ಬಾಣಂತಿಯರು, ಮಕ್ಕಳು ಸಾಯುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸ್‌ಗಳಿಲ್ಲ. ೨.೭೫ ಲಕ್ಷ ಸರ್ಕಾರಿ ನೌಕರಿ ಖಾಲಿ ಇಟ್ಟುಕೊಂಡಿದ್ದಾರೆ. ಪ್ರತಿನಿತ್ಯ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಏನು ಹೇಳುತ್ತೀರಿ? ಕಾಂಗ್ರೆಸ್ ಅಧಿವೇಶನ ಮಾಡುತ್ತಿರುವವರು ಅಸಲಿ ಕಾಂಗ್ರೆಸ್ಸಿಗರಲ್ಲ, ನಕಲಿ ಕಾಂಗ್ರೆಸ್ಸಿಗರು ಎಂದು ವ್ಯಂಗ್ಯವಾಡಿದರು.
ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರದಲ್ಲಿ ಕಾಂಗ್ರೆಸ್ ವಿಸರ್ಜನೆ ಮಾಡುವಂತೆ ಗಾಂಧೀಜಿ ಆಗಲೇ ಹೇಳಿದ್ದರು. ಆಲಿಬಾಬ ಮತ್ತು ೪೦ ಮಂದಿ ಕಳ್ಳರು ಇದ್ದಾರಲ್ಲ, ಆ ರೀತಿಯ ಕಾಂಗ್ರೆಸ್ ಈಗ ಆಡಳಿತ ನಡೆಸುತ್ತಿದೆ. ಇದು ಜನಪರ ಕೆಲಸ ಮಾಡುವ ಕಾಂಗ್ರೆಸ್ ಅಲ್ಲ. ಗ್ಯಾರಂಟಿ... ಗ್ಯಾರಂಟಿ ಅಂತಾರೆ, ಇನ್ನು ೨ ಸಾವಿರ ಕೊಡಲಿ ನಮ್ಮ ಅಭ್ಯಂತವಿಲ್ಲ. ಆದರೆ ತೆರಿಗೆ ಯಾವ ರೀತಿ ಹಾಕ್ತಿದ್ದೀರಾ?
೨ ಲಕ್ಷ ಕೋಟಿ ರು. ಸಾಲ ಮಾಡಿ ಕೊಡಲು ನೀವೇ ಬೇಕಾ? ಆ ಸಾಲ ತೀರಿಸುವವರು ಯಾರು? ಜನಸಾಮಾನ್ಯರೇ ತೀರಿಸಬೇಕಲ್ವಾ? ಎಂದು ಕುಟುಕಿದರು.
ಸೂರಿಲ್ಲದವರಿಗೆ ಮನೆ ಕೊಡಲು ಈ ಸರ್ಕಾರದಿಂದ ಸಾಧ್ಯವಾಗಿಲ್ಲ. ಸರ್ಕಾರ ಪೊಲೀಸ್ ಅಧಿಕಾರಿಗಳನ್ನು ಯಾವ ರೀತಿ ನಡೆಸಿಕೊಳ್ಳುತ್ತಿದೆ. ಸಿ.ಟಿ. ರವಿ ಭೇಟಿ ಮಾಡಲು ಬಿಜೆಪಿ ಅವರಿಗೆ ಸ್ಟೇಷನ್‌ನಲ್ಲೇ ಅವಕಾಶ ಕೊಟ್ಟರು ಎಂಬ ಕಾರಣಕ್ಕೆ ಸಸ್ಪೆಂಡ್ ಮಾಡಿದರು. ರವಿ ತಲೆಗೆ ಹೊಡೆದರಲ್ಲ ಅದರ ವಿರುದ್ಧ ಏನು ಕ್ರಮ ಕೈಗೊಂಡಿದೆ. ಗೃಹ ಸಚಿವ ಹೆಬ್ಬೆಟ್ಟು, ಅವರ ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂಬುದೇ ಅವರಿಗೆ ಗೊತ್ತಿಲ್ಲ ಎಂದು ಟೀಕಿಸಿದರು.
ಸಿ.ಟಿ.ರವಿ ಕ್ಷಮೆ ಕೇಳಿದ್ದರೆ ಮರ್ಯಾದೆ ಉಳೀತಿತ್ತು: ಸಚಿವ ಚಲುವರಾಯಸ್ವಾಮಿ
ಗಾಂಧೀಜಿ ಹೆಸರು ಹೇಳಿದರೆ ಎಲ್ಲವೂ ಆಗೋಲ್ಲ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ಕೋಟ್ಯಾಂತರ ರುಪಾಯಿ ಜನಗಳ ದುಡ್ಡು ಖರ್ಚು ಮಾಡಿ ಏನು ಸಂದೇಶ ಕೊಡುತ್ತಿದ್ದೀರಾ? ಇದು ನಾಗರಿಕ ಸರ್ಕಾರವಾ? ಹಿಂದೆಂದೂ ಇಂತಹ ವಾತಾವರಣ ರಾಜ್ಯದಲ್ಲಿರಲಿಲ್ಲ. ಮುಂದಿನ ದಿನ ಎಲ್ಲಿ ಹೋಗಿ ನಿಲ್ಲಲಿದೆ ಎಂಬುದು ಗೊತ್ತಿಲ್ಲ ಎಂದರು.
೯ ಕೋಟಿ ಗೋಲ್ಡ್ ವಂಚನೆ ಪ್ರಕರಣದಲ್ಲಿ ಸೆಂಟ್ರಲ್ ಮಿನಿಸ್ಟರ್ ಪಿಎ ಕೈವಾಡ ಎಂಬ ಐಶ್ವರ್ಯಗೌಡ ಆರೋಪದ ಬಗ್ಗೆ ಕೇಳಿದಾಗ, ಯಾವ ಸೆಂಟ್ರಲ್ ಮಿನಿಸ್ಟರ್ ಕೈವಾಡ ಎಂದು ಹೇಳಲಿ ಎಂದಷ್ಟೇ ಹೇಳಿದರು.