ಜಾತ್ಯತೀತ ಜನತಾ ದಳ (ಜೆಡಿಎಸ್‌) ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ವಿಧಾನಸಭೆ ಚುನಾವಣೆಯಲ್ಲಿ ಕೇವಲ 25-30 ಸ್ಥಾನಗಳನ್ನು ಪಡೆದುಕೊಂಡು ಕಾಂಗ್ರೆಸ್‌ ಬಳಿ ಹೋಗಲಿದ್ದು, ಭ್ರಷ್ಟಾಚಾರದಲ್ಲಿ ಮುಂಚೂಣಿಯಲ್ಲಿರುವ ಕಾಂಗ್ರೆಸ್‌ ಜೊತೆ ಸರ್ಕಾರ ರಚನೆ ಮಾಡಲಿದೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ಬೆಂಗಳೂರು (ಮಾ.04): ಜಾತ್ಯತೀತ ಜನತಾ ದಳ (ಜೆಡಿಎಸ್‌) ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ವಿಧಾನಸಭೆ ಚುನಾವಣೆಯಲ್ಲಿ ಕೇವಲ 25-30 ಸ್ಥಾನಗಳನ್ನು ಪಡೆದುಕೊಂಡು ಕಾಂಗ್ರೆಸ್‌ ಬಳಿ ಹೋಗಲಿದ್ದು, ಭ್ರಷ್ಟಾಚಾರದಲ್ಲಿ ಮುಂಚೂಣಿಯಲ್ಲಿರುವ ಕಾಂಗ್ರೆಸ್‌ ಜೊತೆ ಸರ್ಕಾರ ರಚನೆ ಮಾಡಲಿದೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ದೇವನಹಳ್ಳಿಯ ಜೂನಿಯರ್‌ ಕಾಲೇಜು ಮೈದಾನದಲ್ಲಿ ಬಿಜೆಪಿಯ ‘ವಿಜಯ ಸಂಕಲ್ಪ’ ನಾಲ್ಕನೇ ಯಾತ್ರೆಗೆ ಹಸಿರು ನಿಶಾನೆ ತೋರಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನತೆಯ ಮುಂದಿಟ್ಟು, ಕಾಂಗ್ರೆಸ್‌-ಜೆಡಿಎಸ್‌ ವಿರುದ್ಧ ಕಿಡಿಕಾರಿದರು. ಜೆಡಿಎಸ್‌ ತಮ್ಮ ಕುಟುಂಬದಲ್ಲಿ ಟಿಕೆಟ್‌ ಹಂಚಿಕೊಂಡು ಪರಿವಾರವಾದಕ್ಕೆ ಜೋತು ಬಿದ್ದಿರುವ ಪಕ್ಷ. ಜೆಡಿಎಸ್‌ ಕುಟುಂಬದ ಬಗ್ಗೆ ಚಿಂತನೆ ಮಾಡುತ್ತದೆಯೇ ಹೊರತು ಬಡವರ ಬಗ್ಗೆ ಚಿಂತಿಸಲು ಸಾಧ್ಯವಿಲ್ಲ ಎಂದು ಹರಿಹಾಯ್ದರು.

ಕಾಂಗ್ರೆಸ್‌ ಅಂದರೆ ಜಾತಿ ಮಧ್ಯೆ ಒಡೆದಾಳುವ ಪಕ್ಷ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಮುಂದಿನ ಚುನಾವಣೆಯಲ್ಲಿ ವೈಮಾನಿಕ, ರಕ್ಷಣಾ, ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿಯೂ ಕರ್ನಾಟಕ ಮತ್ತು ದೇಶವನ್ನು ಮೊದಲನೇ ಸ್ಥಾನಕ್ಕೆ ಕೊಂಡೊಯ್ದಿರುವ ಬಿಜೆಪಿಗೆ ಮತ ನೀಡಬೇಕೇ? ಅಥವಾ ಪರಿವಾರವಾದಕ್ಕೆ ಅಂಟಿಕೊಂಡಿರುವ ಜೆಡಿಎಸ್‌ಗೆ ಮತ್ತು ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನದಲ್ಲಿರುವ ಕಾಂಗ್ರೆಸ್‌ಗೆ ಮತ ನೀಡಬೇಕೇ ಎಂಬ ಬಗ್ಗೆ ಜನತೆ ತೀರ್ಮಾನಿಸಬೇಕು. ರಾಜ್ಯ ಮತ್ತು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಯಾವ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯಬೇಕು ಎಂಬುದನ್ನು ಜನರೇ ನಿರ್ಧರಿಸಬೇಕು ಎಂದು ಕರೆ ನೀಡಿದರು.

ಪಿಎಫ್‌ಐ ಬ್ಯಾನ್‌ ಮಾಡಿದ ಬಿಜೆಪಿಗೆ ಮತ ನೀಡಬೇಕೇ? ಭಯೋತ್ಪಾದಕರಿಗೆ ಉತ್ತೇಜನ ನೀಡುವ ಕಾಂಗ್ರೆಸ್‌ ಬೆಂಬಲಿಸಬೇಕೇ ಎಂಬುದನ್ನು ನಿರ್ಣಯಿಸಬೇಕು. ರಾಜ್ಯದ ಬಡವರ ಕುರಿತು ಕೇವಲ ಬಿಜೆಪಿ ಚಿಂತನೆ ಮಾಡಲಿದೆ. ಕೌಟುಂಬಿಕ ಪಕ್ಷಗಳಿಂದ ಇದು ಸಾಧ್ಯವಿಲ್ಲ. ಬೆಂಗಳೂರು-ಮೈಸೂರು ದಶಪಥ ರಸ್ತೆಯನ್ನು ಎಂಟು ಸಾವಿರ ಕೋಟಿ ರು. ವೆಚ್ಚ ಮಾಡಿ ನಿರ್ಮಿಸಿದ್ದೇವೆ. ವಂದೇ ಭಾರತ್‌ ಹೈಸ್ಪೀಡ್‌ ರೈಲು, ಚೆನ್ನೈ-ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ರೈಲ್ವೆ ಕಾರಿಡಾರ್‌ ಕಾಮಗಾರಿಯನ್ನು ಪ್ರಾರಂಭಿಸಿದ್ದೇವೆ. ಮೆಟ್ರೋ ರೈಲು ಯೋಜನೆಗೆ 15 ಸಾವಿರ ಕೋಟಿ ರು. ಒದಗಿಸಿದ್ದೇವೆ. ಸ್ಯಾಟಲೈಟ್‌ ಟೌನ್‌ಶಿಪ್‌ ನಿರ್ಮಾಣ ಮಾಡಲಾಗಿದೆ. ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರವನ್ನು ಸೆಟಲೈಟ್‌ ಟೌನ್‌ ಆಗಿ ಮಾಡುತ್ತಿದ್ದೇವೆ ಎಂದು ವಿವರಿಸಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್‌ ಉದ್ಘಾಟನೆ ಮಾಡಲಾಗಿದೆ. ಬೆಂಗಳೂರು ನಗರದ ಮಹತ್ವ ಕುರಿತು ನಮಗೆ ಅರಿವಿದೆ. ವಿಮಾನ ನಿಲ್ದಾಣ ಮತ್ತಷ್ಟುವಿಸ್ತರಣೆ ಮಾಡುವ ಅಗತ್ಯ ಇದ್ದರೆ ಅದಕ್ಕೂ ಅನುದಾನ ನೀಡಲು ಸಿದ್ಧ. ಈಸ್‌ ಆಫ್‌ ಡುಯಿಂಗ್‌ ಬಿಸ್‌ನೆಸ್‌ನಲ್ಲಿ ಮೊದಲ ಸ್ಥಾನ ಪಡೆದ ಕರ್ನಾಟಕಕ್ಕೆ ಅಭಿನಂದನೆಗಳು. ಗರಿಷ್ಠ ಯೂನಿ ಕಾರ್ನರ್‌ ಸ್ಟಾರ್ಟಪ್‌ಗಳಿವೆ. ಬ್ಯಾಹ್ಯಾಕಾಶ ಕ್ಷೇತ್ರದಲ್ಲಿ ಶೇ.25ರಷ್ಟು ಕರ್ನಾಟಕದ ಪಾಲು ಇದೆ. ರಕ್ಷಣಾ ಕ್ಷೇತ್ರದಲ್ಲಿ ಶೇ.57ಕ್ಕಿಂತ ಹೆಚ್ಚು ಪಾಲನ್ನು ಕರ್ನಾಟಕ ನೀಡುತ್ತಿದೆ. ಉದ್ಯೋಗ ನೀಡುವ ವಿಚಾರ ಸಂಬಂಧ ಕರ್ನಾಟಕದಲ್ಲಿ ಶೇ.250ರಷ್ಟುಏರಿಕೆ ಕಂಡು ಬಂದಿದೆ ಎಂದು ರಾಜ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸುರಕ್ಷತೆಗೆ ಆದ್ಯತೆ ಕೊಟ್ಟಿದ್ದಾರೆ. 

ಎಲ್ಲೆಲ್ಲೋ ನಡೆಯುತ್ತಿರುವ ಭ್ರಷ್ಟಾಚಾರ ಪ್ರಕರಣ ನಮಗೇಕೆ? ಜಿಲ್ಲೆಯಲ್ಲೇ ಸಾಕಷ್ಟು ಹಗರಣಗಳಿವೆ: ಸುಮಲತಾ

ಯುಪಿಎ ಅವಧಿಯಲ್ಲಿ ಪಾಕಿಸ್ತಾನದ ಭಯೋತ್ಪಾದಕರು ಒಳನುಸುಳಿ ದೇಶದ ಸೈನಿಕರನ್ನು ಹತ್ಯೆ ಮಾಡುತ್ತಿದ್ದರು. ಆದರೆ, ಬಿಜೆಪಿ ಸರ್ಕಾರ ಭಯೋತ್ಪಾದನೆಯನ್ನು ಮಟ್ಟಹಾಕಿ ಸಮರ್ಥವಾಗಿ ಎದುರಿಸಿದ್ದೇವೆ ಎಂದು ಹೇಳಿದರು. ಸಮಾರಂಭದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌, ಸಾಮಾಜಿಕ ನ್ಯಾಯ ಇಲಾಖೆಯ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಕಂದಾಯ ಸಚಿವ ಆರ್‌.ಅಶೋಕ್‌, ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಸಣ್ಣ ಕೈಗಾರಿಕೆ ಸಚಿವ ಎಂ.ಟಿ.ಬಿ.ನಾಗರಾಜ್‌, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಇತರರು ಉಪಸ್ಥಿತರಿದ್ದರು.