ಉತ್ತರ ಕರ್ನಾಟಕದಲ್ಲಿ ಇಂದು ಅಮಿತ್ ‘ಶೋ’
ಇಂದು ಬೆಳಗ್ಗೆ ಕುಂದಗೋಳದಲ್ಲಿ ಬೃಹತ್ ರೋಡ್ ಶೋ ನಡೆಸಿ, ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಲಿದ್ದಾರೆ. ಒಂದೆರಡು ಮನೆಗಳಿಗೆ ಕರಪತ್ರ ವಿತರಿಸಿ, ಮಿಸ್ಡ್ ಕಾಲ್ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಜತೆಗೆ, ದಕ್ಷಿಣ ಭಾರತದ ಮೊದಲ ವಿಧಿ-ವಿಜ್ಞಾನ ವಿವಿ ಕ್ಯಾಂಪಸ್‌ಗೆ ಧಾರವಾಡದಲ್ಲಿ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
ಹುಬ್ಬಳ್ಳಿ/ಬೆಳಗಾವಿ(ಜ.28): ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭರ್ಜರಿ ಪ್ರಚಾರಕ್ಕೆ ಮುಂದಾಗಿರುವ ಬಿಜೆಪಿ, ಶನಿವಾರ ಮುಂಬೈ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ಚುನಾವಣಾ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭರ್ಜರಿ ಶೋಗೆ ಸಿದ್ಧತೆ ನಡೆಸಿದೆ. ಶುಕ್ರವಾರ ರಾತ್ರಿಯೇ ಹುಬ್ಬಳ್ಳಿಗೆ ಆಗಮಿಸಿರುವ ಅಮತ್ ಶಾ, ಶನಿವಾರ ಬೆಳಗ್ಗೆ ಕುಂದಗೋಳದಲ್ಲಿ ಬೃಹತ್ ರೋಡ್ ಶೋ ನಡೆಸಿ, ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಲಿದ್ದಾರೆ. ಒಂದೆರಡು ಮನೆಗಳಿಗೆ ಕರಪತ್ರ ವಿತರಿಸಿ, ಮಿಸ್ಡ್ ಕಾಲ್ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಜತೆಗೆ, ದಕ್ಷಿಣ ಭಾರತದ ಮೊದಲ ವಿಧಿ-ವಿಜ್ಞಾನ ವಿವಿ ಕ್ಯಾಂಪಸ್‌ಗೆ ಧಾರವಾಡದಲ್ಲಿ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
ಬಳಿಕ, ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿ ನಡೆಯಲಿರುವ ‘ವಿಜಯ ಸಂಕಲ್ಪ’ದ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಕಿತ್ತೂರು, ಖಾನಾಪುರ, ಬೈಲಹೊಂಗಲ ಮತಕ್ಷೇತ್ರಗಳನ್ನು ಗುರಿಯಾಗಿರಿಸಿ ಈ ಸಮಾವೇಶ ನಡೆಯಲಿದ್ದು, ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಸಂಜೆ, ಬೆಳಗಾವಿಯ ಹೋಟೆಲ್‌ನಲ್ಲಿ ಹಿರಿಯ ನಾಯಕರ ಜೊತೆ ಪಕ್ಷದ ಸಂಘಟನಾತ್ಮಕವಾಗಿ ಪ್ರತ್ಯೇಕವಾಗಿ ಎರಡು ಸಭೆ ನಿಗದಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಜ.12ರಂದು ಹುಬ್ಬಳ್ಳಿಯಲ್ಲಿ ನಡೆದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮೋದಿ ಬಂದು ಹೋಗಿ 15 ದಿನಗಳೊಳಗೆ ಅಮಿತ್ ಶಾ ಭೇಟಿ ನೀಡುತ್ತಿರುವುದು ಈ ಭಾಗದ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತಿತರ ಮುಖಂಡರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ವಿಧಿ ವಿಜ್ಞಾನ ವಿವಿಗೆ ಶಂಕು:
ಧಾರವಾಡದ ಕೃಷಿ ವಿವಿಯಲ್ಲಿ ರಾಷ್ಟ್ರೀಯ ವಿಧಿ-ವಿಜ್ಞಾನ ವಿವಿ ಕ್ಯಾಂಪಸ್ ನಿರ್ಮಾಣಗೊಳ್ಳುತ್ತಿದೆ. ಕೇಂದ್ರ ಸರ್ಕಾರ ಅನುಮತಿ ನೀಡಿದ ಬಳಿಕ ಹದಿನೈದು ದಿನಗಳಲ್ಲಿ ಶಂಕುಸ್ಥಾಪನೆ ನೆರವೇರಿಸುತ್ತಿರುವುದು ಇದರ ವಿಶೇಷ. ಅಪರಾಧಗಳ ಪತ್ತೆ ಹಚ್ಚುವಲ್ಲಿ ವಿಧಿ ವಿಜ್ಞಾನ ಶಾಸ್ತ್ರದ ಮಹತ್ವ ಬಹಳಷ್ಟಿದೆ. ಇದನ್ನು ಶಾಸ್ತ್ರಬದ್ಧವಾಗಿ ಅಧ್ಯಯನ ಮಾಡಲು ದಕ್ಷಿಣ ಭಾರತದಲ್ಲಿ ವಿವಿಗಳು ಇರಲಿಲ್ಲ. ಇದೀಗ ಧಾರವಾಡದಲ್ಲಿ ಸ್ಥಾಪನೆಯಾಗುತ್ತಿರುವುದು ಮೊದಲನೆಯದು. ದೇಶದ 9ನೆಯ ವಿವಿ ಇದಾಗಲಿದೆ. ಸದ್ಯ ಗುಜರಾತ್‌ನ ವಿಧಿ ವಿಜ್ಞಾನ ವಿಶ್ವ ವಿದ್ಯಾಲಯದ ಕ್ಯಾಂಪಸ್ ಇದಾಗಿದ್ದು, ಪೂರ್ಣ ಪ್ರಮಾಣದಲ್ಲಿ ವಿವಿ ಪ್ರಾರಂಭವಾದ ಮೇಲೆ ಪ್ರತ್ಯೇಕ ವಿವಿಯಾಗಿ ಇದು ಮಾರ್ಪಡಲಿದೆ. ಕೃಷಿ ವಿವಿಯ ಕ್ಯಾಂಪಸ್‌ನಲ್ಲಿಯೇ 50 ಎಕರೆ ಜಾಗದಲ್ಲಿ ಈ ವಿವಿ ಸ್ಥಾಪನೆಯಾಗಲಿದೆ.
ಎಲ್ಲೆಡೆ ಕೇಸರಿಮಯ:
ಅಮಿತ್ ಶಾ ಅವರು ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ಕುಂದಗೋಳಕ್ಕೆ ಆಗಮಿಸಲಿದ್ದಾರೆ. ಇದಕ್ಕಾಗಿ ಕುಂದಗೋಳದ ಶಂಕ್ರಪ್ಪ ಹಾಲಣ್ಣನವರ ಅವರ ಜಮೀನಿನಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಶಾ ಭೇಟಿ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಹುಬ್ಬಳ್ಳಿ, ಎಂ.ಕೆ. ಹುಬ್ಬಳ್ಳಿ, ಕುಂದಗೋಳ ಪಟ್ಟಣಗಳು ಕೇಸರಿಮಯವಾಗಿವೆ. ಎಲ್ಲೆಡೆ ಬಿಜೆಪಿ ಬ್ಯಾನರ್, ಬಂಟಿಂಗ್‌್ಸ, ಕಟೌಟ್‌ಗಳಿಂದ ರಾರಾಜಿಸುತ್ತಿವೆ.
ಬೆಳಗಾವಿ: ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿಗೆ ಶಕ್ತಿ ತುಂಬಲು ಚುನಾವಣಾ ಚಾಣಕ್ಯ ಅಮಿತ್ ಶಾ ಆಗಮನ..!
ಕಾಂಗ್ರೆಸ್ ಕ್ಷೇತ್ರಕ್ಕೆ ಲಗ್ಗೆ:
ಕುಂದಗೋಳ ಕ್ಷೇತ್ರ ಕಾಂಗ್ರೆಸ್ ಆಳ್ವಿಕೆಯಲ್ಲಿದೆ. 2008ರಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತ್ತು. ನಂತರ 2013, 2018, 2019ರ ಮೂರೂ ಚುನಾವಣೆಗಳಲ್ಲಿ (ಒಂದು ಉಪಚುನಾವಣೆ) ಕಾಂಗ್ರೆಸ್ ಗೆಲುವಿನ ನಗೆ ಬೀರಿತ್ತು. ಇದೀಗ ಈ ಕ್ಷೇತ್ರದಲ್ಲಿ ಹೇಗಾದರೂ ಮಾಡಿ ಕಮಲ ಅರಳಿಸುವ ಇರಾದೆ ಬಿಜೆಪಿಯದ್ದು. ಈ ಹಿನ್ನೆಲೆಯಲ್ಲಿ ಶಾ ಅವರು ರೋಡ್ ಶೋ ನಡೆಸುತ್ತಿರುವುದು ಮಹತ್ವ ಪಡೆದಂತಾಗಿದೆ.
ಏನೇನು ಕಾರ್ಯಕ್ರಮ?
ಹುಬ್ಬಳ್ಳಿ (ಬೆಳಿಗ್ಗೆ)
- ಕೆಎಲ್‌ಇ ಕಾಲೇಜು ಅಮೃತ ಮಹೋತ್ಸವ ಉದ್ಘಾಟನೆ
- ಧಾರವಾಡದಲ್ಲಿ ವಿಧಿವಿಜ್ಞಾನ ವಿವಿ ಕ್ಯಾಂಪಸ್‌ಗೆ ಶಂಕು
- ಕುಂದಗೋಳದಲ್ಲಿ ಒಂದೂವರೆ ಕಿ.ಮೀ. ರೋಡ್ ಶೋ
- ಕುಂದಗೋಳದ ಶಂಭುಲಿಂಗ ದೇವಸ್ಥಾನದಲ್ಲಿ ಪೂಜೆ
- ಕುಂದಗೋಳದಲ್ಲಿ ಗೋಡೆ ಚಿತ್ರ ರಚಿಸಿ ವಿಜಯ ಸಂಕಲ್ಪ ಅಭಿಯಾನದಲ್ಲಿ ಭಾಗಿ
- ಕೆಲವು ಮನೆಗಳಿಗೆ ಭೇಟಿ ನೀಡಿ ಬಿಜೆಪಿ ಕರಪತ್ರ ವಿತರಣೆ
- ಮಿಸ್ಡ್ ಕಾಲ್ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
ಬೆಳಗಾವಿ (ಮಧ್ಯಾಹ್ನ)
- ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಭಾಗಿ