Asianet Suvarna News Asianet Suvarna News

ಸಚಿವ ಸಂಪುಟ ವಿಸ್ತರಣೆ: ದೇಖೇಂಗೆ ಎಂದ ಅಮಿತ್‌ ಶಾ..!

2 ದಿನಗಳ ಕಾಲ ರಾಜ್ಯಕ್ಕೆ ಭೇಟಿ ನೀಡಿದಾಗಲೂ ಸಂಪುಟ ವಿಸ್ತರಣೆ ಬಗ್ಗೆ ಹೆಚ್ಚಿನ ಚರ್ಚೆಗೆ ಅವಕಾಶ ನೀಡದೆ ‘ದೇಖೇಂಗೆ.. ಎಂದಷ್ಟೇ ಹೇಳಿದ ಅಮಿತ್‌ ಶಾ. 

Union Home Minister Amit Shah Talks Over Karnataka Cabinet Expansion grg
Author
First Published Jan 1, 2023, 6:17 AM IST

ಬೆಂಗಳೂರು(ಜ.01): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಇನ್ನೂ ಅನಿಶ್ಚಿತತೆಯಲ್ಲೇ ಮುಂದುವರೆದಿದೆ. ರಾಷ್ಟ್ರೀಯ ಬಿಜೆಪಿಯ ಪ್ರಭಾವಿ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು 2 ದಿನಗಳ ಕಾಲ ರಾಜ್ಯಕ್ಕೆ ಭೇಟಿ ನೀಡಿದಾಗಲೂ ಸಂಪುಟ ವಿಸ್ತರಣೆ ಬಗ್ಗೆ ಹೆಚ್ಚಿನ ಚರ್ಚೆಗೆ ಅವಕಾಶ ನೀಡದೆ ‘ದೇಖೇಂಗೆ...’ (ನೋಡೋಣ) ಎಂದಷ್ಟೇ ಹೇಳಿದ್ದಾರೆ. ಹೀಗಾಗಿ, ಸಂಪುಟ ವಿಸ್ತರಣೆ ಕುರಿತಂತೆ ದೆಹಲಿಯಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಶೂನ್ಯಮಾಸ ನಡೆಯುತ್ತಿದೆ. ಸಾಮಾನ್ಯವಾಗಿ ಈ ಶೂನ್ಯಮಾಸದಲ್ಲಿ ರಾಜಕೀಯ ಶುಭ ಕಾರ್ಯಗಳು ಕಡಮೆ. ಒಂದು ವೇಳೆ ವರಿಷ್ಠರು ಸಂಪುಟ ವಿಸ್ತರಣೆಗೆ ಒಪ್ಪಿಗೆ ನೀಡಿದರೂ ಸಂಕ್ರಾಂತಿ ಬಳಿಕ ನಡೆಯಬಹುದು ಎಂಬ ಮಾತು ಕೇಳಿಬರುತ್ತಿದೆ.

ಪೊಲೀಸ್‌ ವ್ಯವಸ್ಥೆಗೆ ರಣ ನೀತಿ ಬೇಕು: ಗೃಹ ಸಚಿವ ಅಮಿತ್‌ ಶಾ

ಮತ್ತೆ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿರುವ ಮಾಜಿ ಸಚಿವರಾದ ಕೆ.ಎಸ್‌.ಈಶ್ವರಪ್ಪ ಹಾಗೂ ರಮೇಶ್‌ ಜಾರಕಿಹೊಳಿ ಅವರು ಇದೇ ತಿಂಗಳ 19ರಿಂದ ಬೆಳಗಾವಿಯಲ್ಲಿ ಆರಂಭಗೊಂಡ ಅಧಿವೇಶನಕ್ಕೆ ಗೈರು ಹಾಜರಾಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದರು. ಈಶ್ವರಪ್ಪ ಅವರು ಬಹಿರಂಗವಾಗಿಯೇ ಅತೃಪ್ತಿ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಬೊಮ್ಮಾಯಿ ಅವರು ಉಭಯ ನಾಯಕರನ್ನು ಕರೆಸಿಕೊಂಡು ಮಾತನಾಡಿ, ‘ವರಿಷ್ಠರ ಜತೆ ಮಾತುಕತೆ ನಡೆಸುವೆ’ ಎಂಬ ಭರವಸೆ ನೀಡಿ ಸಮಾಧಾನಗೊಳಿಸಿದ್ದರು.

ಅದರ ಬೆನ್ನಲ್ಲೇ ಕಳೆದ ವಾರ ಬೊಮ್ಮಾಯಿ ಅವರು ದೆಹಲಿಗೆ ತೆರಳಿ ಅಮಿತ್‌ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಬಂದಿದ್ದರು. ಆಗಲೂ ಸಂಪುಟ ವಿಸ್ತರಣೆ ಬಗ್ಗೆ ಹೆಚ್ಚು ಆಸಕ್ತಿ ತೋರದ ಅಮಿತ್‌ ಶಾ ಅವರು, ‘ಹೇಗಿದ್ದರೂ ನಾನು ನಾಲ್ಕೈದು ದಿನಗಳಲ್ಲಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದೇನೆ. ಅಲ್ಲೇ ಮಾತನಾಡೋಣ’ ಎಂದಿದ್ದರು. ಇದನ್ನೇ ಬೊಮ್ಮಾಯಿ ಅವರು ಈಶ್ವರಪ್ಪ ಮತ್ತು ಜಾರಕಿಹೊಳಿ ಅವರಿಗೆ ಹೇಳಿದ್ದರು.

ನೋಡೋಣ ಎಂದಷ್ಟೇ ಹೇಳಿದ ಶಾ!:

ಆ ಪ್ರಕಾರ ಅಮಿತ್‌ ಶಾ ಅವರು ರಾಜ್ಯಕ್ಕೆ ಆಗಮಿಸಿದ ಅಮಿತ್‌ ಶಾ ಅವರು ಮುಂದಿನ ಚುನಾವಣೆ ಗುರಿಯಾಗಿಸಿಕೊಂಡು ಪಕ್ಷ ಸಂಘಟನೆ ಬಗ್ಗೆ ಅನೇಕ ಮುಖಂಡರೊಂದಿಗೆ ಅದರಲ್ಲೂ ಹಳೆ ಮೈಸೂರು ಭಾಗದಲ್ಲಿ ಸಂಘಟನೆ ಬಲಪಡಿಸುವ ಬಗ್ಗೆ ಚರ್ಚೆ ನಡೆಸಿದರು. ಆದರೆ, ಸಂಪುಟ ವಿಸ್ತರಣೆ ಬಗ್ಗೆ ಹೆಚ್ಚಿನ ಚರ್ಚೆ ನಡೆಸಲು ಮುಂದಾಗಲಿಲ್ಲ. ರಾಜ್ಯ ನಾಯಕರು ಈ ಬಗ್ಗೆ ಪ್ರಸ್ತಾಪಿಸಿದಾಗ ‘ದೇಖೇಂಗೆ..’ ಎಂದಷ್ಟೇ ತಣ್ಣನೆಯ ಮಾತು ಹೇಳಿ ವಿಷಯ ಬದಲಾಯಿಸಿದರು ಎಂದು ಮೂಲಗಳು ತಿಳಿಸಿವೆ.

ಐಟಿಬಿಪಿ ಯೋಧರಿಗೆ ವರ್ಷದಲ್ಲಿ 100 ದಿನ ಕುಟುಂಬ ಸ್ನೇಹಿ ಕರ್ತವ್ಯ: ಅಮಿತ್‌ ಶಾ

ಶಾ ಭೇಟಿಗೆ ಜಾರಕಿಹೊಳಿ ವಿಫಲ ಯತ್ನ:

ಈ ನಡುವೆ ಶನಿವಾರ ಬೆಳಗ್ಗೆ ರಮೇಶ್‌ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸಂಪುಟದಲ್ಲಿ ಅವಕಾಶ ನೀಡುವ ಬಗ್ಗೆ ಒತ್ತಾಯ ಮಂಡಿಸಿದರು. ಅಮಿತ್‌ ಶಾ ಅವರನ್ನೇ ನೇರವಾಗಿ ಭೇಟಿ ಮಾಡಿ ಮನವಿ ಸಲ್ಲಿಸುವುದಕ್ಕೂ ಅವರು ಮುಂದಾಗಿದ್ದರು. ಇದಕ್ಕೆ ಬೊಮ್ಮಾಯಿ ಅವರೂ ಸಮ್ಮತಿಸಿ ಕರೆದೊಯ್ಯಲು ಸಿದ್ಧರಾಗಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಅಮಿತ್‌ ಶಾ ಅವರ ಭೇಟಿ ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ಸಂಕ್ರಾಂತಿ ಬಳಿಕ ಕೇಂದ್ರ ಸಂಪುಟ ಪುನಾರಚನೆ?

ನವದೆಹಲಿ: ಮಕರ ಸಂಕ್ರಾಂತಿಯ ನಂತರ ಹಾಗೂ ಫೆಬ್ರವರಿಯ ಬಜೆಟ್‌ ಅಧಿವೇಶನಕ್ಕೆ ಮುನ್ನ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನಾರಚನೆ ಆಗುವ ಸಾಧ್ಯತೆ ಇದೆ. 2024ರ ಲೋಕಸಭಾ ಚುನಾವಣೆ ಹಾಗೂ ಈ ವರ್ಷ ನಡೆಯಲಿರುವ 9 ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹಲವು ಬದಲಾವಣೆಗಳನ್ನು ಮಾಡುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios