ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್‌ನ ಮೂಲ ಸೂತ್ರಧಾರಿಯನ್ನು ಬಂಧಿಸದೆ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ. ಸ್ಟಿಂಗ್ ವಿಚಾರ ಮರೆಮಾಚಲು ಆರೆಸ್ಸೆಸ್ ಪಥಸಂಚಲನಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದಿದ್ದಾರೆ. ರಾಹುಲ್ ಗಾಂಧಿ ಹೋಗಿದ್ದೆಲಿಗೆ?

ಹುಬ್ಬಳ್ಳಿ (ಅ.25): ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್‌ನಿಂದಾಗಿ ಕಾಂಗ್ರೆಸ್ ಪಕ್ಷದೊಳಗೆ ಕೋಲಾಹಲ ಸೃಷ್ಟಿಸಿದ್ದಾರೆ. ಸಿದ್ದರಾಮಯ್ಯ 'ಇದು ನಮ್ಮ ಸರ್ಕಾರವಲ್ಲ' ಎಂದು ಅಸಮಾಧಾನಗೊಂಡಿದ್ದಾರೆ. ಇನ್ನೊಂದೆ ಆರೆಸ್ಸೆಸ್ ಪಥಸಂಚಲನ ವಿಚಾರದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಎರಡೂ ವಿಚಾರಗಳಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಸ್ಟಿಂಗ್ ಆಪರೇಷನ್, ಆರೆಸ್ಸೆಸ್ ಪಥಸಂಚಲನ ಕುರಿತಾಗಿ ಏನು ಹೇಳಿದರೂ ನೋಡೋಣ.

ಸ್ಟಿಂಗ್ ಆಪರೇಷನ್ ಸೂತ್ರಧಾರಿಯನ್ನ ಮೊದಲು ಬಂಧಿಸಿ

ಸ್ಟಿಂಗ್ ವಿಚಾರದಲ್ಲಿ ರಾಜ್ಯ ಸರ್ಕಾರ ಇಬ್ಬಗೆ ನೀತಿ ಅನುಸರಿಸುತ್ತಿದೆ. ವಿಡಿಯೋ ಶೇರ್ ಮಾಡಿದವರನ್ನು ಬಂಧಿಸಿದೆ. ಇನ್ನು ಕೆಲವರನ್ನ ಬಂಧಿಸುವ ಯತ್ನ ನಡೆಯುತ್ತಿದೆ. ಸ್ಟಿಂಗ್ ಆಪರೇಷನ್ ನಡೆಸಿರೋದು ಸ್ವಪಕ್ಷದವರೇ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್‌ನ ಮಹಿಳಾ ಮುಖಂಡರೊಬ್ಬರಿಗೆ ಪೊಲೀಸರು ಶೋಕಾಸ್ ನೋಟಿಸ್ ನೀಡಿದ್ದಾರೆ. ಆದರೆ ಸ್ಟಿಂಗ್ ಆಪರೇಷನ್ ಮೂಲ ಸೂತ್ರಧಾರಿಯನ್ನು ಬಂಧಿಸಿಲ್ಲ ಇದು ಕಾಂಗ್ರೆಸ್‌ನ ಡಬಲ್ ಸ್ಟಾಂಡರ್ಡ್ ನೀತಿ ತೋರಿಸುತ್ತಿದೆ. ಮೊದಲು ಆ ಸೂತ್ರಧಾರಿಯನ್ನ ಬಂಧಿಸಿ ಎಂದು ಆಗ್ರಹಿಸಿದರು.

ಸಿದ್ದರಾಮಯ್ಯರನ್ನ ಅವಮಾನಿಸಲು, ಅವರ ತೇಜೋವಧೆ ಮಾಡಲು ಪಕ್ಕಾ ಪ್ಲಾನ್ ಮಾಡಿದವರು ಯಾರು? ಎಂದು ಪ್ರಶ್ನಿಸಿದ ಸಚಿವರು, ವೀಡಿಯೋ ದಲ್ಲಿ ಕಾಣಿಸಿಕೊಂಡ ಮಹಿಳೆ ಯೂ ಟರ್ನ್ ವಿಚಾರದ ಬಗ್ಗೆಯೂ ಪ್ರಸ್ತಾಪಿಸಿ, ಆ ಮಹಿಳೆಗೆ ಈಗ ಸೂತ್ರಧಾರಿಗಳು ಏನು ಹೇಳಿಕೊಟ್ಟಿದ್ದಾರೋ ಅದನ್ನು ಹೇಳಿರುತ್ತಾಳೆ. ಬೋಗಸ್ ಹೊಸ ಕಥೆ ಕಟ್ಟಿ ಹಳೆಯ ಪ್ರಕರಣ ಮುಚ್ಚಿಹಾಕಲು ಸಾಧ್ಯವಿಲ್ಲ. ಹಾಗಾದ್ರೆ ಈ ಹಿಂದೆ ಈ ಮಹಿಳೆಯೇ ಯಾಕೆ ಹಾಗೆ ಹೇಳಿದ್ದರು? ಈಗ್ಯಾಕೆ ಯುಟರ್ನ್ ಹೇಳಿಕೆ ನೀಡುತ್ತಿದ್ದಾಳೆ? ಇದೆಲ್ಲವೂ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಸರ್ಕಾರದಿಂದ ದ್ವೇಷದ ರಾಜಕಾರಣ: ಪ್ರಲ್ಹಾದ್ ಜೋಶಿ ಕಿಡಿ

ಆರೆಸ್ಸೆಸ್ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಪಥಸಂಚಲನಕ್ಕೆ ಕೆಲವೆಡೆ ಅನುಮತಿ ನೀಡಿಲ್ಲ. ನೀತಿ ಸಂಹಿತೆ ನೆಪ ಹೇಳಲಾಗಿದೆ. ಆದರೆ ಚುನಾವಣೆ ನೀತಿ ಸಂಹಿತೆ ಇದ್ದರೂ ಹುಬ್ಬಳ್ಳಿಯಲ್ಲಿ ಅನುಮತಿ ನೀಡಿದ್ದಾರೆ. ಆರೆಸ್ಸೆಸ್ ಪಥಸಂಚಲನ ಇಂದು ನಿನ್ನೆಯದಲ್ಲ, ಕಳೆದ 70 ವರ್ಷಗಳಿಂದಲೂ ದೇಶಾದ್ಯಂತ ಪಥಸಂಚಲನ ನಡೆದಿದೆ. ಬೇರೆಯವರಿಗೆ ಸಹಿಷ್ಣು ಪಾಠ ಮಾಡುವ ಕಾಂಗ್ರೆಸ್ ವಾಸ್ತವದಲ್ಲಿ ಅದೇ ಪಕ್ಷವೇ ದ್ವೇಷದ ರಾಜಕಾರಣ ಮಾಡುತ್ತಿದೆ. ಪಥಸಂಚಲನಕ್ಕೆ ಕಳೆದ ಬಾರಿಯೂ ಅಡ್ಡಿಪಡಿಸಿದ್ದರು. ಈ ಬಾರಿಯೂ ಕೋಡ್ ಆಫ್ ಕಂಡಕ್ಟ್ ಅಂತ ಅನೇಕ ಕಡೆ ಕಾರಣ ನೀಡಿ ಅನುಮತಿ ನೀಡಿಲ್ಲ. ಆದರೆ ಹುಬ್ಬಳ್ಳಿಯಲ್ಲಿ ಇವತ್ತು ಪಥಸಂಚಲನ ಇದೆ. ಇಲ್ಲಿ ಚುನಾವಣೆಯೂ ನಡೆದಿದೆ. ಆದರೂ ಇಲ್ಲಿನ ಪೊಲೀಸರು ಅನುಮತಿ ನೀಡಿದ್ದಾರೆ ಎಂದರು.

ಸ್ಟಿಂಗ್ ವಿಷಯ ಡೈವರ್ಟ್ ಮಾಡಲು ಆರೆಸ್ಸೆಸ್ ವಿಚಾರ ಮುನ್ನಲೆಗೆ

ಕಾಂಗ್ರೆಸ್ ಸರ್ಕಾರ ಸ್ಟಿಂಗ್ ವಿಚಾರವನ್ನು ಡೈವರ್ಟ್ ಮಾಡಲು ಆರೆಸ್ಸೆಸ್ ವಿಚಾರ ಎಳೆದು ತರುವ ಪ್ರಯತ್ನ ಮಾಡ್ತಿದೆ. ಸ್ಟಿಂಗ್ ಹಿಂದೆ ಯಾರಿದ್ದಾರೆ? ನಿಮ್ಮದೇ ಪಕ್ಷದ ನಾಯಕರು. ಇದನ್ನ ಯತೀಂದ್ರ ಅವರೇ ಓಪನ್ ಆಗಿ ಹೇಳಿದ್ದಾರೆ. ಇದರಿಂದ ಗೊತ್ತಾಗುತ್ತಿದೆ ಕಾಂಗ್ರೆಸ್‌ನಲ್ಲಿ ಬೆಂಕಿ ಹೊತ್ತಿಕೊಂಡು ಉರಿಯುತ್ತಿದೆ. ಈಗ ಇವರ ಪರಿಸ್ಥಿತಿ ಹೇಗಾಗಿದೆ ಎಂದರೆ ಜ್ವಾಲಾಮುಖಿ ಕೆಳಗೆ ಕುಳಿತಂತಾಗಿದೆ. ಹೀಗಾಗಿ ಸ್ಟಿಂಗ್ ವಿಚಾರ ಡೈವರ್ಟ್ ಮಾಡಲು ಈ ರೀತಿ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ಇನ್ನು ರಾಹುಲ್ ಗಾಂಧಿ ವಿದೇಶಕ್ಕೆ ಹಾರಿದ ವಿಚಾರ ಪ್ರಸ್ತಾಪಿಸಿದ ಸಚಿವರು, ರಾಹುಲ್ ಗಾಂಧಿ ಸೋಲಿನ ಸೆಂಚುರಿ ಬಾರಿಸಿದ್ದಾರೆ. ದೆಹಲಿ ಪ್ರತಿಭಟನೆ ವಿಫಲವಾಗುತ್ತಿದ್ದಂತೆ ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿದ್ದಾರೆ. ಅವರು ಎಲ್ಲಿ ಹೋಗಿದ್ದಾರೆ, ಯಾಕೆ ಹೋಗಿದ್ದಾರೆ ಅಂತಾ ಯಾರಿಗೂ ಗೊತ್ತಿಲ್ಲ. ಸಿಕ್ರೇಟ್ ಆಗಿ ಎಲ್ಲಿ ಹೋಗ್ತಿದ್ತಾರೆ, ಯಾರನ್ನು ಭೇಟಿ ಮಾಡ್ತಿದ್ದಾರೆ? ವಿರೋಧ ಪಕ್ಷದ ನಾಯಕರಾಗಿ ಹೊಣೆಗಾರಿಕೆ ಇಲ್ಲದೆ ಇದನ್ನೆಲ್ಲ ಅವರು ಯಾಕೆ ಮಾಡುತ್ತಿದ್ದಾರೆ. ಹೋಗಿರುವ ವಿವರಗಳನ್ನೆಲ್ಲ ಯಾಕೆ ಮುಚ್ಚಿಡುತ್ತಿದ್ದಾರೆ.? ಎಂದು ಪ್ರಶ್ನಿಸಿದರು.