ನವೆಂಬರ್ 3 ರಂದು ಮುಂಬೈನ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆ 'ಬಿಲ್ಲು ಮತ್ತು ಬಾಣವನ್ನು ಬಳಸದಂತೆ ಚುನಾವಣಾ ಆಯೋಗ ಎರಡೂ ಬಣಗಳನ್ನು ನಿರ್ಬಂಧಿಸಿತ್ತು. ಈ ಹಿನ್ನೆಲೆ ಉದ್ಧವ್‌ ಠಾಕ್ರೆ ಬಣ ಈ ನಿರ್ಧಾರದ ವಿರುದ್ಧ ಸುಪ್ರೀಂಕೋರ್ಟ್‌ ಮೊರೆ ಹೋಗುವ ಸಾಧ್ಯತೆ ಇದೆ. 

ನವದೆಹಲಿ: ತನ್ನ ಅಧಿಕೃತ ಚಿಹ್ನೆಯಾಗಿದ್ದ ಬಿಲ್ಲು-ಬಾಣ (Bow and Arrow) ಹಾಗೂ ಪಕ್ಷದ ಹೆಸರನ್ನು ಚುನಾವಣಾ ಆಯೋಗ (Election Commission) ಮುಟ್ಟುಗೋಲು ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ತ್ರಿಶೂಲ ಅಥವಾ ಉದಯಿಸುತ್ತಿರುವ ಸೂರ್ಯ ಅಥವಾ ಬೆಳಗುತ್ತಿರುವ ದೀವಟಿಗೆ ಚಿಹ್ನೆಯನ್ನು (Symbol) ಮುಂಬೈನ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ (By Election) ಬಳಸಲು ಅನುಮತಿ ನೀಡುವಂತೆ ಉದ್ಧವ್‌ ಠಾಕ್ರೆ (Uddhav Thackeray) ನೇತೃತ್ವದ ಬಣ ಚುನಾವಣಾ ಆಯೋಗವನ್ನು ಕೋರಿದೆ. ಇದಲ್ಲದೆ ಪಕ್ಷ 3 ಹೆಸರನ್ನೂ (Names) ಶಿಫಾರಸು ಮಾಡಿದೆ. ಅವು- ಶಿವಸೇನಾ ಬಾಳಾಸಾಹೇಬ್‌ ಠಾಕ್ರೆ, ಶಿವಸೇನಾ ಬಾಳಾಸಾಹೇಬ್‌ ಪ್ರಬೋಧಂಕರ್‌, ಶಿವಸೇನಾ ಉದ್ಧವ್‌ ಬಾಳಾಸಾಹೇಬ ಠಾಕ್ರೆ.

ಉದ್ಧವ್‌ ಠಾಕ್ರೆ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಬಣಗಳು ತಮ್ಮದೇ ಅಧಿಕೃತ ಶಿವಸೇನೆ ಎಂದು ವಾದಿಸಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಶನಿವಾರ ಮುಟ್ಟುಗೋಲು ಹಾಕಿಕೊಂಡಿತ್ತು. ಈ ನಡುವೆ, ‘ಶಿವಸೇನೆ ಬಾಳಾಸಾಹೇಬ್‌ ಠಾಕ್ರೆ’, ‘ಶಿವಸೇನೆ ಉದ್ಧವ್‌ ಬಾಳಾಸಾಹೇಬ್‌ ಠಾಕ್ರೆ’ ಸೇರಿದಂತೆ ಮೂರು ಹೆಸರುಗಳನ್ನು ಪಕ್ಷದ ಅಧಿಕೃತ ಹೆಸರಾಗಿ ಬಳಸಲು ಆಯೋಗದ ಅನುಮತಿಯನ್ನು ಉದ್ಧವ್‌ ಠಾಕ್ರೆ ಬಣ ಕೋರಿದೆ ಎಂದು ಮೂಲಗಳು ಹೇಳಿವೆ. 

ಇದನ್ನು ಓದಿ: Shiv Sena ಪಕ್ಷದ ಹೆಸರು, ಚಿಹ್ನೆ ಮುಟ್ಟುಗೋಲು: ಚುನಾವಣಾ ಆಯೋಗ ಮದ್ಯಂತರ ಆದೇಶ

ಆದರೆ ಏಕನಾಥ್‌ ಶಿಂಧೆ ಬಣ ಯಾವ ಚಿಹ್ನೆ ಕೇಳಿದೆ ಎಂಬುದು ಗೊತ್ತಾಗಿಲ್ಲ. ಇನ್ನು, ಸೋಮವಾರ ಮಧ್ಯಾಹ್ನ 1ರ ಒಳಗೆ ಚಿಹ್ನೆಗಾಗಿ ಅರ್ಜಿ ಸಲ್ಲಿಸಲು ಚುನಾವಣಾ ಆಯೋಗ ಗಡುವು ನೀಡಿದೆ.

4682 ನಕಲಿ ಅಫಿಡವಿಟ್‌:
ತಮ್ಮದೇ ನೈಜ ಶಿವಸೇನೆ ಎಂದು ಬಿಂಬಿಸಲು ಶಿವಸೇನೆಯ ಉದ್ಧವ್‌ ಠಾಕ್ರೆ ಬಣ 4682 ನಕಲಿ ಅಫಿಡವಿಟ್‌ಗಳನ್ನು ತಯಾರಿಸಿದ್ದು, ಅವು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಅನಾಮಧೇಯರ ವಿರುದ್ಧ ನಕಲಿ ಹಾಗೂ ವಂಚನೆ ಸಂಬಂಧ ಪ್ರಕರಣ ದಾಖಲಿಸಿದ್ದಾರೆ. ಈ ಅಫಿಡವಿಟ್ಟುಗಳನ್ನು ಠಾಕ್ರೆ ಬಣ ಚುನಾವಣಾ ಆಯೋಗಕ್ಕೆ ಸಲ್ಲಿಸಲು ಉದ್ದೇಶಿಸಿತ್ತು.

ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿ ಇಂದು ಸುಪ್ರೀಂಕೋರ್ಟ್‌ ಮೊರೆ..?

ಪಕ್ಷದ ಚುನಾವಣಾ ಚಿಹ್ನೆಯನ್ನು ಸ್ಥಗಿತಗೊಳಿಸಿದ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ ಸೋಮವಾರ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಉಪಚುನಾವಣೆ ಹಿನ್ನೆಲೆ ಉದ್ಧವ್‌ ಠಾಕ್ರೆ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಗುಂಪುಗಳು ಮುಂದಿನ ತಿಂಗಳು ಪಕ್ಷದ ಹೆಸರನ್ನು ಬಳಸದಂತೆ ಚುನಾವಣಾ ಆಯೋಗ ಶನಿವಾರ ನೀಡಿರುವ ಮಧ್ಯಂತರ ಆದೇಶದಲ್ಲಿ ನಿರ್ಬಂಧಿಸಿತ್ತು. 

ಇದನ್ನೂ ಓದಿ: ಶಿವ ಸೇನೆ ಯಾರ ಪಕ್ಷ? ಸುಪ್ರೀಂ ವಿಚಾರಣೆಯಲ್ಲಿ ಉದ್ಧವ್ ಠಾಕ್ರೆ ಬಣಕ್ಕೆ ತೀವ್ರ ಹಿನ್ನಡೆ!

ನವೆಂಬರ್ 3 ರಂದು ಮುಂಬೈನ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಪಕ್ಷದ ಹೆಸರು ಮತ್ತು ಅದರ ಚುನಾವಣಾ ಚಿಹ್ನೆ 'ಬಿಲ್ಲು ಮತ್ತು ಬಾಣವನ್ನು ಬಳಸದಂತೆ ಚುನಾವಣಾ ಆಯೋಗ ಎರಡೂ ಬಣಗಳನ್ನು ನಿರ್ಬಂಧಿಸಿದೆ.

ಈ ಮಧ್ಯೆ, ಚುನಾವಣಾ ಆಯೋಗದ ನಿರ್ಧಾರವನ್ನು "ಅನ್ಯಾಯ" ಎಂದು ಕರೆದ ಉದ್ಧವ್‌ ಠಾಕ್ರೆ,, "ನಾವು ಜನರ ಬಳಿಗೆ ಹೋಗಿ ಉಪಚುನಾವಣೆಯನ್ನು ಎದುರಿಸಬೇಕಾಗಿರುವುದರಿಂದ ನನ್ನ ಪಕ್ಷಕ್ಕೆ ಚಿಹ್ನೆ ಮತ್ತು ಹೆಸರನ್ನು ಶೀಘ್ರವಾಗಿ ಅಂತಿಮಗೊಳಿಸುವಂತೆ ನಾನು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇನೆ. ಚುನಾವಣಾ ಆಯೋಗದ ನಿರ್ಧಾರದಿಂದ ನಾನು ಆಘಾತಕ್ಕೊಳಗಾಗಿದ್ದೇನೆ, ಆದರೆ ನನ್ನ ವಿಶ್ವಾಸವು ಅಲುಗಾಡಿಲ್ಲ ಮತ್ತು ಸೇನಾ ಬೆಂಬಲಿಗರ ಮೇಲಿನ ನನ್ನ ನಂಬಿಕೆಯೂ ಹೋಗಿಲ್ಲ ಎಂದೂ ಉದ್ಧವ್‌ ಠಾಕ್ರೆ ಹೇಳಿದ್ದಾರೆ.