ಶಿವಸೇನೆ ಹೆಸರು, ಚಿಹ್ನೆಯನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕಿಕೊಂಡಿದೆ. ಏಕನಾಥ್ ಶಿಂಧೆ- ಉದ್ಧವ್ ಠಾಕ್ರೆ ಕಿತ್ತಾಟದ ಕಾರಣ ಚುನಾವಣಾ ಆಯೋಗ ಈ ಮಧ್ಯಂತರ ಆದೇಶ ನೀಡಿದೆ. ಅಲ್ಲದೆ, ಉಪಚುನಾವಣೆಯಲ್ಲಿ ಬೇರೆ ಚಿಹ್ನೆಗೆ ಅರ್ಜಿ ಸಲ್ಲಿಕೆಗೆ ಸೂಚನೆ ನೀಡಿದೆ.
ಮುಂಬೈ: ಶಿವಸೇನೆಯ (Shiv Sena) ‘ಬಿಲ್ಲು ಬಾಣ’ (Bow and Arrow) ಚಿಹ್ನೆಗಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ (Eknath Shinde) ಹಾಗೂ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ಬಣದ ಕಚ್ಚಾಟದ ನಡುವೆಯೇ ಪಕ್ಷದ ಹೆಸರು ಹಾಗೂ ಚಿಹ್ನೆ ಬಳಕೆಗೆ ಚುನಾವಣಾ ಆಯೋಗ (Election Commission) ಮಧ್ಯಂತರ ತಡೆ ನೀಡಿದೆ. ಹೆಸರು, ಚಿಹ್ನೆಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿರುವ ಚುನಾವಣಾ ಆಯೋಗ, ಶೀಘ್ರ ನಡೆಯಲಿರುವ ಪೂರ್ವ ಅಂಧೇರಿ (East Andheri) ಉಪಚುನಾವಣೆಯಲ್ಲಿ (By Election) ಇವರೆಡನ್ನೂ ಬಳಸುಂತಿಲ್ಲ ಎಂದು ಶಿಂಧೆ ಹಾಗೂ ಉದ್ಧವ್ ಬಣಕ್ಕೆ ಸೂಚಿಸಿದೆ.
ಮುಂದಿನ ಆದೇಶದವರೆಗೂ ಶಿವಸೇನೆಯ ಹೆಸರು ಹಾಗೂ ಚಿಹ್ನೆಯ ಬಳಕೆಯನ್ನು ಫ್ರೀಜ್ ಮಾಡಲಾಗಿದೆ. ಅಕ್ಟೋಬರ್ 10 ರಂದು ಪೂರ್ವ ಅಂಧೇರಿ ಉಪಚುನಾವಣೆ ನಡೆಯಲಿದ್ದು, ಅದರಲ್ಲಿ ಏಕನಾಥ್ ಶಿಂಧೆ ಬಣ ಹಾಗೂ ಉದ್ಧವ್ ಠಾಕ್ರೆ ಬಣ ಪ್ರತ್ಯೇಕ ಹೆಸರು ಹಾಗೂ ಚಿಹ್ನೆಗೆ ಸೋಮವಾರ ಮಧ್ಯಾಹ್ನ 1ರ ಒಳಗೆ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಿದೆ. ಎರಡೂ ಬಣಗಳು ತಮ್ಮದೇ ನೈಜ ಶಿವಸೇನೆ ಎಂದು ಚುನಾವಣಾ ಆಯೋಗದ ಮೆಟ್ಟಿಲೇರಿದ್ದವು.
ಇದನ್ನು ಓದಿ: ಶಿವ ಸೇನೆ ಯಾರ ಪಕ್ಷ? ಸುಪ್ರೀಂ ವಿಚಾರಣೆಯಲ್ಲಿ ಉದ್ಧವ್ ಠಾಕ್ರೆ ಬಣಕ್ಕೆ ತೀವ್ರ ಹಿನ್ನಡೆ!
ಶಿವಸೇನೆಯ ಬಿಲ್ಲು ಮತ್ತು ಬಾಣದ ಗುರುತಿಗಾಗಿ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬಣದ ನಡುವೆ ಹೋರಾಟ ನಡೆಯುತ್ತಿರುವಾಗಲೇ, ಚಿಹ್ನೆಯನ್ನು ತಮಗೆ ನೀಡುವಂತೆ ಕೋರಿ ಏಕನಾಥ್ ಶಿಂಧೆ ಬಣ ಶುಕ್ರವಾರ ಕೇಂದ್ರ ಚುನಾವಣಾ ಆಯೋಗವನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಉದ್ಧವ್ ಬಣಕ್ಕೆ ಆಯೋಗ ನೋಟಿಸ್ ಜಾರಿ ಮಾಡಿದೆ.
ನವೆಂಬರ್ 3 ರಂದು ಅಂಧೇರಿ ಪೂರ್ವ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಅಲ್ಲಿ ದಿವಂಗತ ಶಾಸಕ ರಮೇಶ್ ಅವರ ಪತ್ನಿ ರುತುತಾ ಅವರನ್ನು ಕಣಕ್ಕೆ ಇಳಿಸಲು ಉದ್ಧವ್ ಬಣ ನಿರ್ಧರಿಸಿದೆ. ಹೀಗಾಗಿ ಉದ್ಧವ್ ಬಣಕ್ಕೆ ಚಿಹ್ನೆ ನೀಡುವುದನ್ನು ತಪ್ಪಿಸಲು ಆಯೋಗಕ್ಕೆ ಶಿಂಧೆ ಬಣ ಮನವಿ ಸಲ್ಲಿಸಿದೆ. ಈ ಹಿನ್ನೆಲೆ ಚಿಹ್ನೆ ನೀಡಬಾರದು ಎಂದು ಕೋರುವ ಸಲುವಾಗಿ ಈ ಭೇಟಿ ಕೈಗೊಳ್ಳಲಾಗಿತ್ತು.
ಇದನ್ನೂ ಓದಿ: ಕಪಿಲ್ ಸಿಬಲ್ ಆವೇಶದ ನಡುವೆಯೂ ಶಿವಸೇನೆ ವಿವಾದವನ್ನು ಮತ್ತೆ ಮುಂದೂಡಿದ ಸುಪ್ರೀಂ ಕೋರ್ಟ್!
