Lok Sabha Elections 2024: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮತ್ತೊಬ್ಬಈಶ್ವರಪ್ಪ ಕಣಕ್ಕೆ!
ಶಿವಮೊಗ್ಗದಲ್ಲಿ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಡಿ.ಎಸ್.ಈಶ್ವರಪ್ಪ ಎಂಬುವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದು, ಎಲ್ಲರ ಗಮನ ಸೆಳೆದಿದೆ.
ಶಿವಮೊಗ್ಗ (ಏ.17): ಶಿವಮೊಗ್ಗದಲ್ಲಿ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಡಿ.ಎಸ್.ಈಶ್ವರಪ್ಪ ಎಂಬುವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದು, ಎಲ್ಲರ ಗಮನ ಸೆಳೆದಿದೆ. ಶಿಕಾರಿಪುರದ ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷರಾದ ಡಿ.ಎಸ್.ಈಶ್ವರಪ್ಪ ಅವರು ಮಂಗಳವಾರ ಜಿಲ್ಲಾಧಿಕಾರಿ ಗುರುದತ್ ಹೆಗಡೆಯವರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಇದೊಂದು ರಾಜಕೀಯ ತಂತ್ರಗಾರಿಕೆ ಎಂದು ಕ್ಷೇತ್ರದಲ್ಲಿ ಗುಸು, ಗುಸು ಕೇಳಿ ಬರುತ್ತಿದೆ. ಡಿಎಸ್ ಈಶ್ವರಪ್ಪ ಒಟ್ಟು 27 ಲಕ್ಷ ರೂಪಾಯಿ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಡಿಎಸ್ ಈಶ್ವರಪ್ಪ ಪತ್ನಿಯ ಹೆಸರಿನಲ್ಲಿ 10 ಎಕರೆ ಜಮೀನು ಹೊಂದಿದ್ದಾರೆ. ಹೆಸರಿನ ಆರಂಭದಲ್ಲಿ ಡಿಎಸ್ ಇರೋ ಕಾರಣ ಕೆಎಸ್ ಈಶ್ವರಪ್ಪ ಅವರಿಗೆ ತೊಂದರೆ ಆಗುತ್ತಾ ಎಂಬ ಪ್ರಶ್ನೆಯೊಂದು ಮೂಡಿದೆ.
ಸಂಘ-ಪರಿವಾರ ಕಾರ್ಯಕರ್ತರ ಬೆಂಬಲ: ಯಾವ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ಪರಿಶುದ್ಧವಾಗಿರಬೇಕು ಎಂಬುದು ಆರ್‌ಎಸ್ಎಸ್ ಹೇಳುತ್ತದೆ. ನಾನೂ ಕೂಡ ಆರ್‌ಎಸ್‌ಎಸ್ ಕಾರ್ಯಕರ್ತನಾಗಿದ್ದು, ಈ ಪರಿಶುದ್ಧತೆ ತತ್ವದ ಹಿನ್ನೆಲೆಯಲ್ಲಿ ಬಿಜೆಪಿ ಶುದ್ಧೀಕರಣದ ಕಾರ್ಯಕ್ಕೆ ಮುಂದಾಗಿದ್ದೇನೆ. ಹೀಗಾಗಿ ಅನೇಕ ಸಂಘ ಪರಿವಾರದ ಕಾರ್ಯಕರ್ತರು ಈ ಚುನಾವಣೆಯಲ್ಲಿ ನನ್ನ ನಿಲುವನ್ನು ಒಪ್ಪಿ ನನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂದು ಸ್ವತಂತ್ರ ಅಭ್ಯರ್ಥಿ ಕೆ. ಎಸ್. ಈಶ್ವರಪ್ಪ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಆರ್‌ಎಸ್‌ಎಸ್ ಎಂದೂ ರಾಜಕೀಯವಾಗಿ ಗುರುತಿಸಿಕೊಂಡಿಲ್ಲ. ನೇರವಾಗಿ ಯಾವುದೇ ಪಕ್ಷದ ಪರ ಸಂಘ ಕೆಲಸ ಮಾಡುವುದಿಲ್ಲ. ಕಾರ್ಯಕರ್ತರಿಗೆ ಸಂಸ್ಕಾರ ಕೊಡುತ್ತದೆ. ಆದರೆ ಆ ಸಂಘಟನೆಯಲ್ಲಿ ಇರುವವರು ಯಾವುದೇ ಪಕ್ಷ ಮತ್ತು ಅಭ್ಯರ್ಥಿ ಬೆಂಬಲಿಸುವ ಸ್ವಾತಂತ್ರ್ಯ ಹೊಂದಿದ್ದಾರೆ. ಈ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಲಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷದಿಂದ ಡಮ್ಮಿ ಅಭ್ಯರ್ಥಿ ಎಂಬ ನನ್ನ ಮಾತಿಗೆ ಮಧು ಬಂಗಾರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಬೇರೇನು ಹೇಳಬೇಕೆಂದು ಅವರೇ ಹೇಳಲಿ, ಅದರಂತೆ ಕರೆಯುತ್ತೇನೆ ಎಂದು ವ್ಯಂಗ್ಯವಾಡಿದರು.
ಲೋಕಸಭೆಯಲ್ಲಿ ಲೀಡ್ ಕೊಡದಿದ್ದರೆ ನಾನು ಮಂತ್ರಿ ಸ್ಥಾನ ಬಿಡಬೇಕಾಗುತ್ತೆ: ಸಚಿವ ದರ್ಶನಾಪುರ
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೊಂದಾಣಿಕೆಯಾಗಿದೆ. ಒಂದರ್ಥದಲ್ಲಿ ಇವರು ಚುನಾವಣಾ ಪಾರ್ಟ್‌ನರ್ಸ್. ಹೀಗಾಗಿಯೇ ಕಾಂಗ್ರೆಸ್ ಎಲ್ಲಿಯೂ ಸರಿಯಾದ ಪ್ರಚಾರ ಮಾಡುತ್ತಿಲ್ಲ. ಯಾವುದೇ ಗ್ರಾಮೀಣ ಪ್ರದೇಶದಲ್ಲಿ ಅವರ ಪ್ರಚಾರದ ಯಾವುದೇ ಅಂಶ ಕಾಣುತ್ತಿಲ್ಲ. ಬದಲಾಗಿ ಅವರ ಹೊಂದಾಣಿಕೆಯ ರಾಜಕಾರಣ ಢಾಳಾಗಿ ಕಾಣಿಸುತ್ತಿದೆ. ಇಷ್ಟು ಮಾತ್ರವಲ್ಲ, ಆ ಎರಡೂ ಪಕ್ಷದ ಅಭ್ಯರ್ಥಿಗಳು ಎಲ್ಲಿಯೂ ಪರಸ್ಪರ ಟೀಕಿಸುತ್ತಿಲ್ಲ. ಬದಲಾಗಿ ಇಬ್ಬರೂ ನನ್ನನ್ನು ಟೀಕಿಸುತ್ತಿದ್ದಾರೆ. ಇಂತಹ ಯಾವುದೇ ಟೀಕೆಗೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.