Asianet Suvarna News Asianet Suvarna News

ಹಿಮಾಚಲ ಪ್ರದೇಶದಲ್ಲಿ ಸಿಎಂ ಸ್ಥಾನಕ್ಕೆ ಜಿದ್ದಾಜಿದ್ದಿ, ಪ್ರತಿಭಾ ಸಿಂಗ್‌-ಸುಖ್ವಿಂದರ್‌ ಫೈಟ್‌!

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷದ ಗೆಲುವಿನೊಂದಿಗೆ ಉಡುಗೊರೆ ಎನ್ನುವ ರೀತಿಯಲ್ಲಿ ಸಿಎಂ ಗಾದಿಗೆ ಕಚ್ಚಾಟ ಕೂಡ ಪ್ರಾರಂಭವಾಗದೆ. ಹಿಮಾಚಲ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷೆ ಪ್ರತಿಭಾ ಸಿಂಗ್‌ ಹಾಗೂ ಪ್ರಚಾರ ಸಮಿತಿಯ ಚೇರ್ಮನ್‌ ಸುಖ್ವಿಂದರ್‌ ಸಕ್ಕು ನಡುವೆ ಸಿಎಂ ಸ್ಥಾನಕ್ಕಾಗಿ ಜಿದ್ದಾಜಿದ್ದಿ ಆರಂಭವಾಗಿದೆ.

Tussle over CM post in Himachal Pradesh Congress MLA Shimla Meeting Sukhwinder Sukhu Pratibha Singh san
Author
First Published Dec 9, 2022, 4:43 PM IST

ಶಿಮ್ಲಾ (ಡಿ.9): ಹಿಮಾಚಲ ಪ್ರದೇಶದಲ್ಲಿ ಮುಖ್ಯಮಂತ್ರಿ ಗಾದಿಯ ವಿಚಾರವಾಗಿ ಕಾಂಗ್ರೆಸ್‌ನಲ್ಲಿ ಕಿತ್ತಾಟ ಶುರುವಾಗಿದೆ. ಹಿಮಾಚಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್ ಬೆಂಬಲಿಗರು ಶುಕ್ರವಾರ ಶಿಮ್ಲಾದಲ್ಲಿ ಪಕ್ಷದ ಅಬ್ಸರ್ವರ್‌ ಆಗಿದ್ದ ನಾಯಕರ ವಾಹನಗಳನ್ನು ತಡೆದು ಘೋಷಣೆಗಳನ್ನು ಕೂಗಿದ್ದಲ್ಲದೆ, ತಮ್ಮ ರಾಣಿ ಸಾಹಿಬಾ ಅವರನ್ನು ಸಿಎಂ ಮಾಡುವಂತೆ ಒತ್ತಾಯಿಸಿದ್ದಾರೆ. ಇನ್ನೊಂದೆಡೆ, ಪ್ರಚಾರ ಸಮಿತಿ ಅಧ್ಯಕ್ಷ ಸುಖ್ವಿಂದರ್ ಸಕ್ಕು ಕೂಡ ಕಾಂಗ್ರೆಸ್ ಪಕ್ಷದ ಸಂಕಷ್ಟಕ್ಕೆ ಕಾರಣವಾಗಿದ್ದಾರೆ. ಶುಕ್ರವಾರ ಶಿಮ್ಲಾದಲ್ಲಿ ಗೆದ್ದ ಎಲ್ಲಾ ಶಾಸಕರ ಸಭೆ ಕರೆಯಲಾಗಿತ್ತು. ಆದರೆ. ಸುಖ್ವಿಂದರ್‌ ಸಕ್ಕು ತಮಗೆ ಬೆಂಬಲ ನೀಡಿರುವ 18 ಮಂದಿ ಶಾಸಕರೊಂದಿಗೆ ಈ ಸಭೆಗೆ ಆಗಮಿಸಿರಲಿಲ್ಲ. ಈ ನಡುವೆ ಸುಖ್ವಿಂದರ್‌ ಸಕ್ಕು ಕೂಡ ಮುಂದಿನ ಮುಖ್ಯಮಂತ್ರಿ ತಾವೇ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಪ್ರತಿಭಾ ಸಿಂಗ್‌ ಅವರ ಕಟ್ಟಾ ವಿರೋಧಿ ಎನ್ನುವಂತೆ ಇವರನ್ನು ಪರಿಗಣನೆ ಮಾಡಲಾಗಿದೆ. ಇದಕ್ಕಿಂತ ಅಚ್ಚರಿಯಾದ ಸಂಗತಿ ಏನೆಂದರೆ, ಹಿಮಾಚಲ ಪ್ರದೇಶದ ರಾಜ್ಯ ಉಸ್ತುವಾರಿ ರಾಜೀವ್ ಶುಕ್ಲಾ, ಛತ್ತೀಸ್‌ಗಢ ಮುಖ್ಯಮಂತ್ರಿ ಮತ್ತು ವೀಕ್ಷಕ ಭೂಪೇಶ್ ಬಾಘೇಲ್ ಮತ್ತು ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹೂಡಾ ಮಾತ್ರ ಸರ್ಕಾರ ರಚನೆಗೆ ಹಕ್ಕು ಸ್ಥಾಪನೆ ಮಾಡಲು ರಾಜ್ಯಪಾಲರ ಭೇಟಿಯಾಗಿದ್ದರು. ಈ ಅವಧಿಯಲ್ಲಿ ಹಿಮಾಚಲ ಪ್ರದೇಶದ ಕಾಂಗ್ರೆಸ್ ನಾಯಕರು ಅಥವಾ ಶಾಸಕರು ಯಾರೂ ಅವರೊಂದಿಗೆ ಇದ್ದಿರಲಿಲ್ಲ. 

ಹೋಲಿ ಲಾಡ್ಜ್‌ನಲ್ಲಿ ಕಾಂಗ್ರೆಸ್‌ನ ಅಬ್ಸರ್ವರ್‌ ಹಾಗೂ ರಾಜ್ಯ ಉಸ್ತುವಾರಿಯನ್ನು ಭೇಟಿಯಾದ ಪ್ರತಿಭಾ ಸಿಂಗ್‌, ಎಲ್ಲಾ ಶಾಸಕರು ತಮಗೆ ಬೆಂಬಲ ನೀಡಿದ್ದಾರೆ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಾಗಲಿ, ಬಿಕ್ಕಟ್ಟಾಗಲು ಎದುರಾಗಿಲ್ಲ ಎಂದು ಹೇಳಿದರು. ಈ ನಡುವೆ ಕಸುಂಪ್ಟಿ ಶಾಸಕ ಅನಿರುದ್ಧ್ ಸಿಂಗ್ ತಮ್ಮ ಬೆಂಬಲಿಗರೊಂದಿಗೆ ಶಿಮ್ಲಾ ತಲುಪಿದ್ದಾರೆ. ಅವರು ಹೋಟೆಲ್ ಹಿಮ್ಲ್ಯಾಂಡ್ನಲ್ಲಿ ವಾಸವಿರಲು ಅವರು ಯೋಜನೆ ರೂಪಿಸಿದ್ದಾರೆ.ಥಿಯೋಗ್‌ನಿಂದ ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಶಾಸಕ ಮತ್ತು ಮಾಜಿ ರಾಜ್ಯಾಧ್ಯಕ್ಷ ಕುಲದೀಪ್ ರಾಥೋಡ್ ಕೂಡ ಪಕ್ಷದ ಕಚೇರಿಗೆ ಆಗಮಿಸಿದ್ದರು. ಇದಕ್ಕೂ ಮುನ್ನ ರಾಥೋಡ್ ಅವರು ರಾಜ್ಯಾಧ್ಯಕ್ಷೆ ಪ್ರತಿಭಾ ಸಿಂಗ್ ಅವರನ್ನು ಭೇಟಿ ಮಾಡಲು ಹೋಲಿ ಲಾಡ್ಜ್‌ಗೆ ತೆರಳಿದ್ದರು.

ಚಂಡೀಗಢದಲ್ಲಿ ನಡೆದಿತ್ತು ಸಭೆ: ಗುರುವಾರ ಚುನಾವಣೆಯ ಫಲಿತಾಂಶ ಬಂದ ಬೆನ್ನಲ್ಲಿಯೇ ಚಂಡೀಗಢದಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿತ್ತು. ಇದಾದ ಬಳಿಕ ಸುಖವಿಂದರ್ ಸಿಂಗ್ ಸಕ್ಕು ಬೆಂಬಲಿಗರಾಗಿದ್ದ ಬಹುತೇಕ ಶಾಸಕರು ಚಂಡೀಗಢದಲ್ಲಿಯೇ ಉಳಿದುಕೊಂಡಿದ್ದರು ಆದರೆ, ಸಂಜೆಯ ವೇಳೆಗೆ ಸಭೆಯನ್ನು ಶಿಮ್ಲಾಕ್ಕೆ ಸ್ಥಳಾಂತರ ಮಾಡಲಾಗಿತ್ತು.
ಸಿಎಂ ಸ್ಥಾನಕ್ಕಾಗಿ ಲಾಬಿ:  ಸಿಎಂ ಸ್ಥಾನದ ಆಕಾಂಕ್ಷಿಗಳು ನಿನ್ನೆ ರಾತ್ರಿಯಿಂದಲೇ ಸಭೆ ನಡೆಸುತ್ತಲೇ ಇದ್ದಾರೆ. ಪ್ರತಿಭಾ ಸಿಂಗ್, ಮುಖೇಶ್ ಅಗ್ನಿಹೋತ್ರಿ, ಸುಖ್ವಿಂದರ್ ಸಿಂಗ್ ಅವರು ಈಗಾಗಲೇ ಸಾಕಷ್ಟು ಸಭೆ ನಡೆಸಿದ್ದಾರೆ. ಆದರೆ, ಒಮ್ಮತದ ಅಭ್ಯರ್ಥಿ ಇನ್ನೂ ಆಯ್ಕೆಯಾಗಿಲ್ಲ. ಇದರ ನಡುವೆ ಕಾಂಗ್ರೆಸ್‌ ಹೈಕಮಾಂಡ್‌ ಯಾವುದೇ ವಿವಾದಕ್ಕೆ ಈ ವಿಚಾರ ಕಾರಣವಾಗಬಾರದು ಎನ್ನುವ ನಿಟ್ಟಿನಲ್ಲಿ ರಾಜೇಂದ್ರ ರಾಣಾ ಠಾಕೂರ್, ಜ್ವಾಲಿಯಿಂದ ಚಂದ್ರಕುಮಾರ್, ಸೋಲನ್‌ನಿಂದ ಧನಿರಾಮ್ ಶಾಂಡಿಲ್ ಅವರನ್ನು ಚರ್ಚೆಗಾಗಿ ಕಳುಹಿಸಿದೆ.

25 ಮಹಿಳಾ ಅಭ್ಯರ್ಥಿಗಳಲ್ಲಿ ಒಬ್ಬರು ಮಾತ್ರ ವಿಧಾನಸಭೆಗೆ ಆಯ್ಕೆ, ಸಿಎಂ ರೇಸ್‌ನಲ್ಲೂ ಮಹಿಳಾ ಕ್ಯಾಂಡಿಡೇಟ್!

ಹಾಗೇನಾದರೂ ಬೇರೆ ಬಣದವರು ಸಿಎಂ ಆದಲ್ಲಿ, ವಿಕ್ರಮಾದಿತ್ಯ ಸಿಂಗ್‌ ಅವರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂದು ಪ್ರತಿಭಾ ಸಿಂಗ್‌ ಅವರ ಬೆಂಬಲಿಗರು ಒತ್ತಾಯ ಮಾಡಬಹುದು ಎಂದು ಮೂಲಗಳು ಬಹಿರಂಗಪಡಿಸಿವೆ.  ವಿಕ್ರಮಾದಿತ್ಯ ಹಿಮಾಚಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್ ಅವರ ಪುತ್ರ. ಹಾಗೇನಾದರೂ ಆದಲ್ಲಿ ಇದೇ ಮೊದಲ ಬಾರಿಗೆ ಹಿಮಾಚಲ ಪ್ರದೇಶದಲ್ಲಿ ಮುಖ್ಯಮಂತ್ರಿಯೊಂದಿಗೆ ಉಪಮುಖ್ಯಮಂತ್ರಿ ಸ್ಥಾನ ಕೂಡ ರಚಿತವಾಗಲಿದೆ.

Himachal Election Result ಸೋಲಿನ ಬೆನ್ನಲ್ಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಜೈರಾಮ್ ಠಾಕೂರ್!

ಪ್ರತಿಭಾ ಸಿಂಗ್‌ ಸಿಎಂ ಆಗುವುದು ಅನುಮಾನ: ಪ್ರತಿಭಾ ಸಿಂಗ್ ಅವರು ರಾಜ್ಯಾಧ್ಯಕ್ಷೆ ಮಾತ್ರವಲ್ಲದೆ ಮಂಡಿ ಲೋಕಸಭಾ ಕ್ಷೇತ್ರದ ಸಂಸದರು ಆಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷ ಅವರನ್ನು ಸಿಎಂ ಮಾಡಿದರೆ, ಮಂಡಿಯಲ್ಲಿ ಉಪಚುನಾವಣೆ ರಿಸ್ಕ್ ತೆಗೆದುಕೊಳ್ಳಲು ಕಾಂಗ್ರೆಸ್ ಬಯಸುತ್ತಿಲ್ಲ. ಏಕೆಂದರೆ ಮಂಡಿ ಜಿಲ್ಲೆಯಲ್ಲಿ 10 ರಲ್ಲಿ 9 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಪ್ರಬಲ ಪ್ರದರ್ಶನ ನೀಡಿದೆ. ಬಿಜೆಪಿ ಸರ್ಕಾರದಲ್ಲಿ ಸಿಎಂ ಆಗಿದ್ದ ಜೈರಾಮ್ ಠಾಕೂರ್ ಇಲ್ಲಿ ದಾಖಲೆಯ 37 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

Follow Us:
Download App:
  • android
  • ios