ಸಿಎಂ ಬದಲಾವಣೆ: ಈ ಹಿಂದೆ ಮುಖ್ಯಮಂತ್ರಿ ಬದಲಿಸಿದ ಉದಾಹರಣೆ ಕೊಟ್ಟ ಬಿಜೆಪಿ ನಾಯಕ

ಆಗಸ್ಟ್ 15ರ ನಂತರ ಸಿಎಂ ಬಸವರಾಜ ಬೊಮ್ಮಾಯಿ ಬದಲಾವಣೆಯಾಗುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿ. ಇನ್ನು ಈ ಬಗ್ಗೆ ಬಿಜೆಪಿ ಮಾಜಿ ಶಾಸಕ, ಬಿಎಸ್ ಯಡಿಯೂರಪ್ಪನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬಿಜೆಪಿ ನಾಯಕ ಅಚ್ಚರಿ ಹೇಳಿಕೆ ನೀಡಿದ್ದಾರೆ.

Tumakuru BJP Ex MLA Suresh Gowda Hints Basavaraj Bommai Change rbj

ತುಮಕೂರು, (ಆಗಸ್ಟ್.09) : ಕರ್ನಾಟಕದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಮುನ್ನೆಲೆಗೆ ಬಂದಿದೆ. ಆಗಸ್ಟ್ 15ರ ನಂತರ ಸಿಎಂ ಬಸವರಾಜ ಬೊಮ್ಮಾಯಿ ಬದಲಾವಣೆಯಾಗುತ್ತಾರೆ ಎನ್ನುವ ಮಾತುಗಳು ಈ ಹಿಂದೆ  ಕೇಳಿಬಂದಿದ್ದವು. ಆದ್ರೆ, ಅದು ಸಿದ್ದರಾಮೋತ್ಸವ ಉತ್ಸವದಲ್ಲಿ ಕಳೆದುಹೋಗಿತ್ತು. 

ಆದ್ರೆ, ಮೊನ್ನೇ ಅಷ್ಟೇ ಕರ್ನಾಟಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಕೊಟ್ಟು ಹೋದ ಬೆನ್ನಲ್ಲೇ ಇದೀಗ ರಾಜ್ಯದಲ್ಲಿ ಮ್ತತೆ ಸಿಎಂ ಬಸವರಾಜ ಬೊಮ್ಮಾಯಿ ಬದಲಾವಣೆ ಚರ್ಚೆ ಶುರುವಾಗಿದೆ. ಇನ್ನು ಈ ಬಗ್ಗೆ ಬಿಜೆಪಿ ಮಾಜಿ ಶಾಸಕ, ಬಿಎಸ್‌ ಯಡಿಯೂರಪ್ಪನವರ ಆಪ್ತ ಸುರೇಶ್ ಗೌಡ ಅಚ್ಚರಿ ಹೇಳಿಕೆಯೊಂದನ್ನ ನೀಡಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿಯಲ್ಲಿ ವಿಧಾನಸಭಾ ಚುನಾವಣೆಗೆ 6-7 ತಿಂಗಳುಗಳು ಇರಬೇಕಾದರೆಯೇ ಮುಖ್ಯಮಂತ್ರಿ ಬದಲಾವಣೆ ಮಾಡಿದ ಉದಾಹರಣೆ ಇದೆ. ಎಂಟು-10 ತಿಂಗಳು ಇರುವಾಗಲೂ ಬದಲಾವಣೆ ಮಾಡಿದ್ದಾರೆ. ಅದು ಕೇಂದ್ರಕ್ಕೆ ಬಿಟ್ಟ ವಿಷಯ. ಬದಲಾವಣೆ ಆದರೆ ಆಗಸ್ಟ್ 15ರ ಒಳಗೆ ಎಲ್ಲವೂ ಆಗಬಹುದು ಎಂದರು.

ಕರ್ನಾಟಕದಲ್ಲಿ 3ನೇ ಮುಖ್ಯಮಂತ್ರಿ ಕಾಲ ಸನ್ನಿಹಿತ! ಸಂಚಲನ ಮೂಡಿಸಿದ ಟ್ವೀಟ್

ಬಿಜೆಪಿ 2023ರಲ್ಲಿ ರಾಜ್ಯದಲ್ಲಿ ಮತ್ತು 2024ರಲ್ಲಿ ಕೇಂದ್ರದಲ್ಲಿ ಮೋದಿಯವರು ಮತ್ತೆ ಪ್ರಧಾನಿಯಾಗಲು ಪುನಃ ಅಧಿಕಾರ ಹಿಡಿಯುವ ಉದ್ದೇಶದಿಂದ ಪಕ್ಷದಲ್ಲಿ ಕೆಲವು ಬದಲಾವಣೆಗಳು ಆಗಬಹುದು. ಪಾರ್ಟಿಯವರು ಯಾವ ಸಂದರ್ಭದಲ್ಲಿಯೂ ಏನು ಬೇಕಾದರೂ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದಾರೆ.

ಈಗಿರುವ ಮುಖ್ಯಮಂತ್ರಿ  ಬೊಮ್ಮಾಯಿಯವರು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಅವರ 1 ವರ್ಷದ ಅವಧಿಯಲ್ಲಿ ಕೆರೆ ಕಟ್ಟೆಗಳು ತುಂಬಿವೆ. ಆದರೆ ಪಕ್ಷ ಏನು ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.

ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ ಆಗುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಅವರನ್ನು ಭೇಟಿಯಾಗಿದ್ದೆ. ಅವರು ಅದರ ಬಗ್ಗೆ ಮಾತನಾಡಿಲ್ಲ. ಅದು ಮಾಧ್ಯಮದ ಸೃಷ್ಟಿ. ಅವರು ಕೇಂದ್ರ ಸಚಿವೆಯಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರು ಮುಖ್ಯಮಂತ್ರಿ ಆದರೆ ಸಂತೋಷ ಎಂದು ತಿಳಿಸಿದರು. 

ಮುಖ್ಯಮಂತ್ರಿ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ: ಸಿಎಂ ರಾಜಕೀಯ ಕಾರ್ಯದರ್ಶಿ ಹೇಳಿದ್ದಿಷ್ಟು..!

ಕಾಂಗ್ರೆಸ್‌ ಟ್ವೀಟ್
ರಾಜ್ಯದಲ್ಲಿ ಸಿಎಂ ಬದಲಾವಣೆ ವದಂತಿ ಬಗ್ಗೆ ರಾಜ್ಯ ಕಾಂಗ್ರೆಸ್ ಘಟಕ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಕಾಲೆಳೆಯುವ ಪ್ರಯತ್ನ ಮಾಡಿದೆ. ಅಮಿತ್ ಶಾ ಬಂದುಹೋದ ಬಳಿಕ ಮೋಡ ಕವಿದ ವಾತಾವರಣ. 40% ಸರ್ಕಾರದಲ್ಲಿ ‘3ನೇ ಸಿಎಂ’ ಸೀಟು ಹತ್ತುವುದು ಸನ್ನಿಹಿತವಾಗಿದೆ. ಬೊಮ್ಮಾಯಿ ಗೊಂಬೆಯಾಟ ಮುಗಿಯುವ ಹಂತಕ್ಕೆ ಬಂದಿದೆ ಎಂದು ಟ್ವೀಟ್ ಮೂಲಕ ಸಿಎಂ ಬೊಮ್ಮಾಯಿ ಬಗ್ಗೆ ಕಾಂಗ್ರೆಸ್ ಟೀಕೆ ಮಾಡಿದೆ.

ಎಷ್ಟು ಪ್ರಯತ್ನಿಸಿದರೂ ಜನತಾ ಪರಿವಾರಿಯಾಗಿದ್ದ ಬೊಮ್ಮಾಯಿ ಅವರನ್ನ ಕೇಶವ ಕೃಪಾದವರು ‘ಸಂಘಪರಿವಾರಿ’ಯಾಗಿ ಸ್ವೀಕರಿಸಲು ಒಪ್ಪಲೇ ಇಲ್ಲ! ಆಡಿಸಿ ನೋಡು ಎಂದು ಗೊಂಬೆಯಂತಿದ್ದ ಸಿಎಂ ಬೊಮ್ಮಾಯಿಯವರನ್ನು ಬೀಳಿಸಿ ನೋಡಲು ಹೊರಟಿದೆ ಹೈಕಮಾಂಡ್! ಈ ಬದಲಾವಣೆ ಯತ್ನ ಸರ್ಕಾರದ ವೈಫಲ್ಯಕ್ಕೋ, 3 ಸಿಎಂ ಎಂಬ ನಿಮ್ಮ ಸಂಪ್ರದಾಯಕ್ಕೋ ಎಂದು ಬಿಜೆಪಿಗೆ ಟ್ವೀಟ್ ಮೂಲಕ ಕಾಂಗ್ರೆಸ್ ಪ್ರಶ್ನಿಸಿದೆ.

ಎಂ.ಪಿ. ರೇಣುಕಾಚಾರ್ಯ ಹೇಳಿದ್ದಿಷ್ಟು
ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ದಾವಣಗೆರೆಯ ಹೊನ್ನಾಳಿಯಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಗುಂಪು, ಡಿ.ಕೆ.ಶಿವಕುಮಾರ್ ಗುಂಪು, ಖರ್ಗೆ ಗುಂಪುಗಳಾಗಿದ್ದು, ಅವರು ತಮ್ಮಲ್ಲಿನ ಭಿನ್ನಾಭಿಪ್ರಾಯ ಮುಚ್ಚಿಟ್ಟುಕೊಳ್ಳಲು ಬಿಜೆಪಿ ವಿರುದ್ಧ ಮಾತನಾಡುತ್ತಾರೆ. ಅವರು ಮೊದಲು ತಮ್ಮಲ್ಲಿನ ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳಲಿ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಕಾಂಗ್ರೆಸ್​ನವರು ಭ್ರಮಾಲೋಕದಲ್ಲಿದ್ದಾರೆ ಎಂದು ಹೇಳಿರುವ ರೇಣುಕಾಚಾರ್ಯ, ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಗಳ ಬದಲಾವಣೆ ಹೇಳಿಕೆ ಊಹಾಪೋಹವಷ್ಟೇ. ಮುಂದಿನ ಅವಧಿಗೂ ಬಸವರಾಜ್ ಬೊಮ್ಮಾಯಿಯವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂಬುದಾಗಿ ರೇಣುಕಾಚಾರ್ಯ ಹೇಳಿದ್ದಾರೆ.

Latest Videos
Follow Us:
Download App:
  • android
  • ios