ನನ್ನನ್ನು ಲಿಂಗಾಯತ ವಿರೋಧಿ ಎಂದು ಬಿಂಬಿಸಲೆತ್ನ: ಸಿದ್ದರಾಮಯ್ಯ ಕಿಡಿ
ನಾನು ಲಿಂಗಾಯತ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಮಾತನಾಡುವುದೂ ಇಲ್ಲ. ಲಿಂಗಾಯತರಲ್ಲಿ ಉತ್ತಮ ಮಂತ್ರಿಗಳಿದ್ದಾರೆ. ಕಳೆದ ಚುನಾವಣೆಯಲ್ಲಿ 47 ಜನ ಲಿಂಗಾಯತರಿಗೆ ಟಿಕೆಟ್ ನೀಡಿದ್ದೆವು. ಈ ಬಾರಿ 53 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದೇವೆ. ಎಲ್ಲ ಜಾತಿ- ಸಮುದಾಯಗಳನ್ನು ಸಮಾನತೆಯಿಂದ ನೋಡುವ ಪಕ್ಷ ನಮ್ಮದು. ಆದರೆ, ನನ್ನನ್ನು ಲಿಂಗಾಯತ ವಿರೋಧಿ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ: ಸಿದ್ದರಾಮಯ್ಯ
ಸಿರುಗುಪ್ಪ(ಏ.28): ಬಸವರಾಜ ಬೊಮ್ಮಾಯಿ ಕಳ್ಳ ಹಾಗೂ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ. ಇಂತಹ ಭ್ರಷ್ಟ ಮುಖ್ಯಮಂತ್ರಿಯನ್ನು ರಾಜಕೀಯ ಇತಿಹಾಸದಲ್ಲಿಯೇ ನಾನು ನೋಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಪಟ್ಟಣದಲ್ಲಿ ಗುರುವಾರ ಚುನಾವಣೆ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎಂ. ನಾಗರಾಜ್ ಪರ ಮತ ಯಾಚಿಸಿದ ಅವರು, ಸಿಎಂ ಬೊಮ್ಮಾಯಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.
ನಾನು ಲಿಂಗಾಯತ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಮಾತನಾಡುವುದೂ ಇಲ್ಲ. ಲಿಂಗಾಯತರಲ್ಲಿ ಉತ್ತಮ ಮಂತ್ರಿಗಳಿದ್ದಾರೆ. ಕಳೆದ ಚುನಾವಣೆಯಲ್ಲಿ 47 ಜನ ಲಿಂಗಾಯತರಿಗೆ ಟಿಕೆಟ್ ನೀಡಿದ್ದೆವು. ಈ ಬಾರಿ 53 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದೇವೆ. ಎಲ್ಲ ಜಾತಿ- ಸಮುದಾಯಗಳನ್ನು ಸಮಾನತೆಯಿಂದ ನೋಡುವ ಪಕ್ಷ ನಮ್ಮದು. ಆದರೆ, ನನ್ನನ್ನು ಲಿಂಗಾಯತ ವಿರೋಧಿ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ನಾನು ಆ ರೀತಿಯ ವ್ಯಕ್ತಿತ್ವದವನಲ್ಲ. ನನ್ನ ಹೇಳಿಕೆಯನ್ನು ತಿರುಚಲಾಯಿತು. ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಯಿತು. ಆದರೆ, ಅದು ಠುಸ್ ಆಯಿತು ಎಂದರು.
ಹಳೇ ಮೈಸೂರು ಭಾಗದ ಮೇಲೆ 3 ಪಕ್ಷಗಳ ಕಣ್ಣು: ಮೋದಿಗಿಂತ ಮೊದಲೇ ಅಖಾಡಕ್ಕಿಳಿಯಲಿರುವ ದೇವೇಗೌಡರು
8 ಪ್ರಕರಣ ಸಿಬಿಐಗೆ:
ನಾನು ಐದು ವರ್ಷ ಜನಪರ ಆಡಳಿತ ನೀಡಿದ್ದೇನೆ. ಭ್ರಷ್ಟಾಚಾರ ಆರೋಪ ಬಂದರೆ ಅಂದೇ ರಾಜೀನಾಮೆ ನೀಡುತ್ತಿದ್ದೆ. ನನ್ನ ಅವಧಿಯಲ್ಲಿ 8 ಪ್ರಕರಣಗಳನ್ನು ಸಿಬಿಐಗೆ ನೀಡಿದ್ದೇನೆ. ಎಲ್ಲ ಆರೋಪ ಸುಳ್ಳು ಎಂದು ಸಿಬಿಐ ವರದಿ ನೀಡಿತು ಎಂದರು.
ಬಸವರಾಜ ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರಕ್ಕೆ ಪುಷ್ಟಿನೀಡಿತು. ಅದನ್ನು ಪ್ರಶ್ನಿಸಿದರೆ, ಸಾಕ್ಷ್ಯಾಧಾರ ನೀಡಿ ಎನ್ನುತ್ತಿದ್ದಾರೆ. ಗುತ್ತಿಗೆದಾರ ಸಂಘದ ಅಧ್ಯಕ್ಷರೇ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಇನ್ನೇನು ಸಾಕ್ಷ್ಯ ನೀಡಬೇಕು? ಎಂದು ಪ್ರಶ್ನಿಸಿದರು.
Karnataka Assembly Elections 2023: ಶಾಲು, ಶರ್ಟ್, ಟೋಪಿಗೆ ಡಿಮ್ಯಾಂಡ್..!
ಇದೇ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಪ್ರಧಾನಮಂತ್ರಿಗಳು ಭ್ರಷ್ಟರನ್ನು ಪೋಷಿಸುತ್ತಿದ್ದಾರೆ. ನಾ ತಿನ್ನುವುದಿಲ್ಲ. ತಿನ್ನಲು ಬಿಡುವುದಿಲ್ಲ ಎನ್ನುತ್ತಿದ್ದ ಪ್ರಧಾನಮಂತ್ರಿಗಳು ಭ್ರಷ್ಟರ ವಿರುದ್ಧ ಕೈಗೊಂಡಿರುವ ಕ್ರಮಗಳಾದರೂ ಏನು ಎಂದು ಪ್ರಶ್ನಿಸಿದರು.
ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎಂ. ನಾಗರಾಜ, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್, ಮಾಜಿ ಶಾಸಕ ಟಿ.ಎಂ. ಚಂದ್ರಶೇಖರಯ್ಯಸ್ವಾಮಿ, ಎಐಸಿಸಿ ಕಾರ್ಯದರ್ಶಿ ಶೀಲಮ್ಮ, ಬ್ಲಾಕ್ ಸಮಿತಿ ಅಧ್ಯಕ್ಷ ಎನ್. ಕರಿಬಸಪ್ಪ, ಮುಖಂಡರಾದ ನರೇಂದ್ರಸಿಂಹ, ಚೊಕ್ಕ ಬಸವನಗೌಡ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.