ಇಡೀ ರಾಜ್ಯಕ್ಕೆ ಪೂರೈಕೆ ಆಗುವ ಪಕ್ಷಗಳ ಚುನಾವಣಾ ಪ್ರಚಾರ ಸಾಮಗ್ರಿ ತಯಾರಿ ಆಗೋದು ಬೆಂಗಳೂರು ನಗರದ ಬಿನ್ನಿಮಿಲ್‌, ಆರ್‌.ವಿ.ರಸ್ತೆಯಲ್ಲಿ. 

ಮಯೂರ್‌ ಹೆಗಡೆ

ಬೆಂಗಳೂರು(ಏ.28):  ನೀವು ಬಿಜೆಪಿಗರಾಗಿ ಕಮಲದ ಶಾಲು ಧರಿಸಿ ಓಡಾಡಬಹುದು, ಹಸ್ತದ ಟೀಶರ್ಚ್‌ ತೊಟ್ಟು ಕಾಂಗ್ರೆಸ್‌ ಕಟ್ಟಾಳು ಎನ್ನಿಸಿರಬಹುದು, ತೆನೆಹೊತ್ತ ಮಹಿಳೆ ಚಿತ್ರದ ಟೋಪಿ ಹಾಕಿ ಜೆಡಿಎಸ್‌ಗೆ ಜೈ ಎನುತ್ತ ಒಬ್ಬರನ್ನೊಬ್ಬರು ದೂರಬಹುದು. ಆದರೆ, ಈ ಶಾಲು, ಟೋಪಿ, ಶರ್ಟುಗಳೆಲ್ಲ ಒಂದೇ ಗೂಡಿಂದ ಹೊರಬೀಳುತ್ತಿವೆ. ಪ್ರಚಾರದ ಭರಾಟೆಗಾಗಿ ಇವುಗಳೀಗ ಭರ್ಜರಿ ಡಿಮ್ಯಾಂಡ್‌ನಲ್ಲಿವೆ.

ಹೌದು, ನಗರದ ಬಿನ್ನಿಮಿಲ್‌, ಆರ್‌.ವಿ.ರಸ್ತೆ ಸೇರಿ ಇತರೆಡೆಯಿರುವ ಚುನಾವಣಾ ಪ್ರಚಾರ ಸಾಮಗ್ರಿಗಳ ಮಳಿಗೆಗಳಲ್ಲೀಗ ವಹಿವಾಟು ಜೋರಾಗಿದೆ. ಐದು ವರ್ಷಕ್ಕೊಮ್ಮೆ ನಮ್ಮ ಸೀಸನ್‌ ಎನ್ನುತ್ತ ಮಳಿಗೆ ಮಾಲಿಕರು ಬಿಡುವಿಲ್ಲದ ವ್ಯಾಪಾರದಲ್ಲಿ ತೊಡಗಿದ್ದಾರೆ. ಉತ್ತರ ಕರ್ನಾಟಕದ ತುದಿ ಕಲಬುರ್ಗಿ, ಬೀದರ್‌ವರೆಗೆ ಸೇರಿದಂತೆ ರಾಜ್ಯಾದ್ಯಂತ ಪಕ್ಷಗಳ, ಪಕ್ಷೇತರರ ಚಿಹ್ನೆಯ ಬ್ಯಾಡ್ಜ್‌, ಬಾವುಟ, ಶಾಲುಗಳನ್ನು ಅಭ್ಯರ್ಥಿಗಳಿಗೆ ಕಳಿಸಿಕೊಡುತ್ತಿದ್ದಾರೆ.
‘ಕಳೆದ ಆರು ತಿಂಗಳ ಮೊದಲೇ ಸೂರತ್‌ನಿಂದ ಪ್ರಿಂಟ್‌ ಆಗಿರುವ ಬಟ್ಟೆಸೇರಿ ಇತರೆ ಪರಿಕರ ತರಿಸಿಕೊಳ್ಳುತ್ತೇವೆ. ಇಲ್ಲಿ ಕಟಿಂಗ್‌, ಹೊಲಿಗೆ ಮಾಡಿಕೊಂಡು ಶಾಲು, ಶರ್ಟು, ಟೋಪಿ, ಬಾವುಟ, ಬಂಟಿಂಗ್‌್ಸ ಸಿದ್ಧಪಡಿಸಿಕೊಳ್ಳುತ್ತೇವೆ. ಸಾಕಷ್ಟುಜನ ಈ ಕೆಲಸದಲ್ಲಿ ತೊಡಗಿರುತ್ತಾರೆ. ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ಅಭ್ಯರ್ಥಿಗಳು ನಮಗೆ ಆರ್ಡರ್‌ ಕೊಡುತ್ತಾರೆ. ತುಂಬಾ ಅಪರೂಪಕ್ಕೆ ಪಕ್ಷದಿಂದ ಆರ್ಡರ್‌ ಬರುತ್ತದೆ. ಈಗಾಗಲೇ ಬಹುತೇಕ ಎಲ್ಲೆಡೆ ಪೂರೈಕೆ ಮಾಡಲಾಗಿದೆ’ ಎಂದು ಬಿನ್ನಿಮಿಲ್‌ನ ಪ್ರಚಾರ ಸಾಮಗ್ರಿ ಸಗಟು ಮಳಿಗೆ ಮಾಲಿಕರಾದ ಆರ್‌.ಶೇಖರ್‌ ಹೇಳುತ್ತಾರೆ.

ಕೇಸರಿ ಕಲಿಗಳ ಪರ ರಾಜ್ಯದಲ್ಲಿ ಧೂಳೆಬ್ಬಿಸಲಿದೆ 'ನಮೋ' ಸುನಾಮಿ: 8 ಜಿಲ್ಲೆಗಳಲ್ಲಿ ಮೋದಿ ಮೆಗಾ ಕ್ಯಾಂಪೇನ್‌

‘ಕಳೆದ 23 ವರ್ಷಗಳಿಂದ ಚುನಾವಣೆ ಪ್ರಚಾರದ ವಸ್ತುಗಳನ್ನು ಪೂರೈಸುತ್ತಿದ್ದೇವೆ. ಈಚೆಗೆ ಜೆæಡಿಎಸ್‌ ಪಂಚರತ್ನ ಯಾತ್ರೆ, ಕಾಂಗ್ರೆಸ್‌ ಪ್ರಜಾಧ್ವನಿ, ಬಿಜೆಪಿಯ ರಥಯಾತ್ರೆಗೂ ನಾವು ಪ್ರಚಾರ ಸಾಮಗ್ರಿ ಕೊಟ್ಟಿದ್ದೆವು. ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ಬಾರಿ ಪ್ರಚಾರ ಸಾಮಗ್ರಿಗಳ ದರ ಶೇಕಡ 10ರಷ್ಟು ಹೆಚ್ಚಾಗಿದೆ. ಆದರೆ, ಬೇಡಿಕೆ ಅಷ್ಟೇ ಇದೆ. ಲೋಕಸಭಾ ಚುನಾವಣೆಗಿಂತ ವಿಧಾನಸಭೆ ಚುನಾವಣೆಯಲ್ಲೇ ಪ್ರಚಾರ ಸಾಮಗ್ರಿಗೆ ಹೆಚ್ಚು ಬೇಡಿಕೆ ಇರುತ್ತದೆ. ಕಳೆದ ಚುನಾವಣೆಗಿಂತ ಈ ಬಾರಿ ಶೇ.25ರಷ್ಟು ಹೆಚ್ಚು ವ್ಯಾಪಾರವಾಗಿದೆ’ ಎಂದರು.

ಸೋಶಿಯಲ್‌ ಮೀಡಿಯಾದಲ್ಲಿ ಪ್ರಚಾರ ಹೆಚ್ಚಾಗುತ್ತಿದ್ದರೂ ತಳಮಟ್ಟದಲ್ಲಿ ಕಾರ್ಯಕರ್ತರ ಜೋಶ್‌ಗೆ ಶಾಲು, ಶರ್ಟು ಟೋಪಿಗಳು ಕೊಡಲೇಬೇಕಾಗುತ್ತದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.

2008ರಲ್ಲಿ ಲಾಸ್‌ ಪಾಠ

2008ರ ಚುನಾವಣೆ ವೇಳೆ ಆಯೋಗ ಏಕಾಏಕಿ ಬ್ಯಾನರ್‌, ಕಟೌಟ್‌ಗಳನ್ನು ಬ್ಯಾನ್‌ ಮಾಡಿತ್ತು. ಪ್ರಚಾರ ಸಾಮಗ್ರಿ ಮಾರಾಟವಾಗದೆ ಆ ವರ್ಷ ನಮಗೆ ಸಾಕಷ್ಟುನಷ್ಟವಾಯ್ತು. ಅದಾದ ಬಳಿಕ ಕೇವಲ ಶಾಲು, ಟೋಪಿ, ಶರ್ಟುಗಳನ್ನು ಮಾತ್ರ ಅಭ್ಯರ್ಥಿಗಳು ಆರ್ಡರ್‌ ಮಾಡುತ್ತಿದ್ದಾರೆ ಎಂದು ಅಂಗಡಿ ಮಾಲಿಕರು ತಿಳಿಸುತ್ತಾರೆ.

ಚಿಹ್ನೆ ಪ್ರದರ್ಶಿಸದಂತೆ ತಾಕೀತು

ನಾವು ಯಾವುದೇ ಪಕ್ಷದ ಪರವಲ್ಲ, ವಿರುದ್ಧವೂ ಅಲ್ಲ. ನಮ್ಮ ವ್ಯಾಪಾರವಷ್ಟೇ ಮುಖ್ಯ. ಅದಕ್ಕಾಗಿ ಉತ್ಪನ್ನಗಳ ಪ್ರಚಾರವಾಗಲಿ ಎಂದು ಹೊರಗಿಟ್ಟಿದ್ದೆವು. ಆದರೆ, ಆಯೋಗದವರು ಯಾವುದೇ ಪಕ್ಷಗಳ ಚಿಹ್ನೆಯನ್ನು ಮಳಿಗೆ ಹೊರಗೆ ಪ್ರದರ್ಶಿದಂತೆ ಸೂಚಿಸಿದ್ದಾರೆ ಎಂದು ಮಳಿಗೆಯವರು ಹೇಳುತ್ತಾರೆ.