ನಿಜವಾದ ರಾಮ ಭಕ್ತರು ಕಾಂಗ್ರೆಸಿಗರು, ಅವಕಾಶ ಸಿಕ್ಕಾಗ ಅಯೋಧ್ಯೆಗೆ ಹೋಗುತ್ತೇನೆ: ಮಧು ಬಂಗಾರಪ್ಪ

ನಿಜವಾದ ರಾಮಭಕ್ತರು ನಾವು ಕಾಂಗ್ರೆಸಿಗರು. ನಮಗೆ ಎಲ್ಲ ಸಮಾಜ, ಧರ್ಮದ ಬಗ್ಗೆ ಗೌರವ ಇದೆ. ರಾಮ ಮಂದಿರ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಅವಕಾಶ ಸಿಕ್ಕಿದಾಗ ನಾನು ಕೂಡ ಅಯೋಧ್ಯೆಗೆ ಹೋಗುತ್ತೇನೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

True Rama devotees are Congressmen I will go to Ayodhya whenever I get a chance Says Madhu Bangarappa gvd

ಮಂಗಳೂರು (ಜ.12): ನಿಜವಾದ ರಾಮಭಕ್ತರು ನಾವು ಕಾಂಗ್ರೆಸಿಗರು. ನಮಗೆ ಎಲ್ಲ ಸಮಾಜ, ಧರ್ಮದ ಬಗ್ಗೆ ಗೌರವ ಇದೆ. ರಾಮ ಮಂದಿರ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಅವಕಾಶ ಸಿಕ್ಕಿದಾಗ ನಾನು ಕೂಡ ಅಯೋಧ್ಯೆಗೆ ಹೋಗುತ್ತೇನೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಮಂಗಳೂರಿನ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಶನಿವಾರ ಭೇಟಿ ನೀಡಿದ ವೇಳೆ ಅವರು ಸುದ್ದಿಗಾರರಲ್ಲಿ ಮಾತನಾಡಿ, ಅಯೋಧ್ಯೆ ವಿಚಾರದಲ್ಲಿ ಹೈಕಮಾಂಡ್ ನಮಗೆ ಮಾರ್ಗದರ್ಶನ ಕೊಡುವುದು ತಪ್ಪಾ?, ಗೃಹ ಸಚಿವ ಡಾ. ಪರಮೇಶ್ವರ್ ಮತ್ತು ನಾನು ಹೈಕಮಾಂಡ್‌ ಹೇಳಿರುವುದನ್ನೇ ಪಾಲಿಸುತ್ತೇವೆ. 

ಹೈಕಮಾಂಡ್‌ನಿಂದ ನಾನು ಇವತ್ತು ಶಿಕ್ಷಣ ಸಚಿವನಾಗಿದ್ದೇನೆ. ದೇವರಂಥ‌ ಮಕ್ಕಳಿಗೆ ನಾವು ಶಿಕ್ಷಣ ಕೊಡುತ್ತಿದ್ದೇವೆ. ದೇವರಿಗೆ ಪೂಜೆ ಮಾಡುತ್ತೇವೋ ಬಿಡುತ್ತೋವೋ ಗೊತ್ತಿಲ್ಲ, ಆದರೆ ಶಿಕ್ಷಣ ಕೊಡುವುದು ಪುಣ್ಯದ ಕೆಲಸ ಎಂದರು. ಬಿಜೆಪಿಯವರಿಗೆ ಕೆಟ್ಟ ಸ್ವಾಭಾವ ಇದೆ, ದೇವರು ಮತ್ತು ಸಾವಿನಲ್ಲಿ ರಾಜಕೀಯ ಮಾಡುತ್ತಾರೆ. ಈಗ ರಾಮನನ್ನು ತೆಗೊಂಡಿದ್ದಾರೆ. ಹಾಗೆ ರಾಜಕೀಯ ಮಾಡಬೇಡಿ ಎನ್ನುವ ಅಧಿಕಾರ ನಮಗಿಲ್ಲ. ಆದರೆ ರಾಮನ ನಿಜವಾದ ಭಕ್ತರು ನಾವು, ಮಂದಿರ ಉದ್ಘಾಟನೆಗೆ ಕರೆಯದಿದ್ದರೂ ಇಲ್ಲಿಂದಲೇ ರಾಮನ ನಂಬುತ್ತೇವೆ. ನಾನು ಒರಿಜಿನಲ್ ಹಿಂದು, ಯಾರು ಡೂಪ್ಲಿಕೇಟ್‌ ಎಂದು ಅವರೇ ನೋಡಿಕೊಳ್ಳಲಿ ಎಂದು ಸಚಿವ ಮಧು ಬಂಗಾರಪ್ಪ ಟಾಂಗ್‌ ನೀಡಿದರು.

ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಇರುವುದಿಲ್ಲವೋ ಅಂತಹ ಧರ್ಮದಲ್ಲಿ ನಂಬಿಕೆ ಇಲ್ಲ: ಸಿದ್ದರಾಮಯ್ಯ

ನಾನು ಹಿಂದು, ಹಿಂದು ಎಂದು ಹೇಳಿಕೊಂಡು ಹೋಗುವುದಿಲ್ಲ. ಬೇರೆ ಧರ್ಮಕ್ಕೂ ಗೌರವ ನೀಡುವುದು ಒರಿಜಿನಲ್‌ ಹಿಂದು ಮಾತ್ರ. ಹಿಂದು ಎಂದು ಹೇಳಿಕೊಂಡು ಕರಾವಳಿ ಭಾಗದಲ್ಲಿ ಶಾಂತಿ ಕದಡಿರುವುದನ್ನು ಜನತೆ ನೋಡಿದೆ. ಮತಬ್ಯಾಂಕ್‌ಗಾಗಿ ಹಿಂದುತ್ವ ಮಾಡುವ ಕೆಲಸ ಬಿಜೆಪಿಗರದ್ದು ಎಂದರು. ನನಗೆ ಅವಕಾಶ ಸಿಕ್ಕಾಗ ಅಯೋಧ್ಯೆಗೆ ಹೋಗುತ್ತೇನೆ ಅಥವಾ ಎಲ್ಲಿ ಬೇಕಾದರೂ ಹೋಗುತ್ತೇನೆ. ಅಯೋಧ್ಯೆ, ಮಸೀದಿ, ಚರ್ಚ್, ಬುದ್ಧಗಯಾ ಕೂಡ ಹೋಗುತ್ತೇನೆ. ಆದರೆ ಬಂಗಾರಪ್ಪ ಮಗನಾಗಿ ಮತ್ತು‌ ಕಾಂಗ್ರೆಸ್ ಕಾರ್ಯಕರ್ತನಾಗಿ ದೇವರ ಹೆಸರಲ್ಲಿ ರಾಜಕೀಯ ಮಾಡುವುದಿಲ್ಲ ಎಂದರು.

ರಾಮ ಮಂದಿರ ವಿಚಾರದಲ್ಲಿ ಕಾಂಗ್ರೆಸ್ ನಿರ್ಧಾರದಿಂದ ಮುಂದೆ ಅದು ಪಶ್ಚಾತ್ತಾಪ ಪಡಲಿದೆ ಎಂಬ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ಪಶ್ಚಾತ್ತಾಪ ಎಂದು ಹೇಳಲು ಯಡಿಯೂರಪ್ಪ ಯಾರು? ಅವರು ಹೇಳುವುದು ಜನರ ತೀರ್ಮಾನವಾ? ನಮ್ಮ ಭವಿಷ್ಯ ತೀರ್ಮಾನಿಸುವುದು ರಾಜ್ಯದ ಜನರು. ಯಡಿಯೂರಪ್ಪ, ನಳಿನ್ ಕುಮಾರ್‌ ಕಟೀಲ್ ಅಲ್ಲ, ಮತದಾರರು ಹೇಳುತ್ತಾರೆ ಎಂದರು.

ನಳಿನ್‌ ಕುಮಾರ್‌ ರಾಜಿನಾಮೆ ನೀಡಲಿ: ನಾವು ಗ್ಯಾರಂಟಿ ಕೊಡ್ತೀವಿ ಎಂದಾಗ ರಾಜ್ಯದ ಜನರು ಅಧಿಕಾರ ಕೊಟ್ಟರು. ಸಂಸದ ನಳಿನ್ ಕುಮಾರ್‌ ಕಟೀಲ್ ಅವರು ಚರಂಡಿ, ಕಾಲುವೆ ನೋಡಬೇಡಿ, ಹೊಡಿಬಡಿ ಎಂದರು. ಅವತ್ತು ನನ್ನ ರಾಜಿನಾಮೆ ಕೇಳಿದ್ದರು, ಮಾನ ಮರ್ಯಾದೆ ಇದ್ದರೆ ಅವರು ರಾಜೀನಾಮೆ ಕೊಡಲಿ ಎಂದು ಸಚಿವ ಮಧು ಬಂಗಾರಪ್ಪ ಆಗ್ರಹಿಸಿದರು.

ಬಿಜೆಪಿ ಸೋಲಿಗೆ ನಳಿನ್‌ ಕಾರಣ: ರಾಜ್ಯದಲ್ಲಿ ಬಿಜೆಪಿ ಸೋಲಿಗೆ ನಳಿನ್ ಕುಮಾರ್ ಕಟೀಲ್ ಕಾರಣ, ಬಂಗಾರಪ್ಪ ಕೊಟ್ಟ ಭಿಕ್ಷೆಯಲ್ಲಿ ನಳಿನ್ ಕುಮಾರ್‌ ಕಟೀಲ್ ಅಧಿಕಾರ ಪಡೆದಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಹೇಳಿದಂತೆ ಸಾವಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಬಂಗಾರಪ್ಪ ಹೆಸರಿನಲ್ಲಿ ನಳಿನ್ ಕುಮಾರ್‌ ಇಲ್ಲಿ ಸಂಸದರಾಗಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆ ವೇಳೆ ಸಂಸದರ ವಿರುದ್ಧ ಧಿಕ್ಕಾರ ಕೂಗಿದ್ದು ಕಾಂಗ್ರೆಸ್‌ನವರಲ್ಲ, ಬಿಜೆಪಿ, ಬಜರಂಗದಳ ಮತ್ತು ವಿಎಚ್‌ಪಿ ಕಾರ್ಯಕರ್ತರು ಸೇರಿ ಕಾರು ಅಲುಗಾಡಿಸಿದ್ದರು ಎಂಬುದು ಗೊತ್ತಿರಲಿ ಎಂದರು.

ನಳಿನ್‌ ಮತ್ತೆ ಸ್ಪರ್ಧಿಸಿದ್ರೆ ಸೋಲಿಸಲು ಬರ್ತೇನೆ: ನಳಿನ್‌ ಕುಮಾರ್‌ಗೆ ಮತ್ತೆ ಟಿಕೆಟ್‌ ನೀಡೇಕು. ಆಗ ಇಲ್ಲಿಗೆ ನಾನೇ ಬರುತ್ತೇನೆ. ಅವರು ಇಲ್ಲಿ ಸೋಲಬೇಕು. ಅವರಿಗೆ ಚುನಾವಣೆಯಲ್ಲಿ ಏನು ಮಾಡಬೇಕೋ ನಾನು ಇಲ್ಲಿ ಮಾಡುತ್ತೇನೆ. ನಾನು ಕೂಡ ಅದರ ಪಾತ್ರಧಾರ ಆಗುತ್ತೇನೆ. ನಾನು ಯಾರ ಮೇಲೂ ವೈಯಕ್ತಿಕ ಹೋಗಲ್ಲ, ಆದರೆ ಅವರು ನನ್ನ ರಾಜಿನಾಮೆ ಕೇಳಿದ್ದರು, ನನ್ನ ತಂದೆಯವರ ಭಿಕ್ಷೆಯಲ್ಲಿ ನಳಿನ್ ಕುಮಾರ್‌ ಇಲ್ಲಿ ಉಳಿದುಕೊಂಡಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ನಳಿನ್ ಕುಮಾರ್‌ ಕಟೀಲ್ ಅವರು ಇಲ್ಲಿ ಹಿಂದುತ್ವ ಮತ್ತು ಭಾವನಾತ್ಮಕವಾಗಿ ಗೆದ್ದಿದ್ದಾರೆ. ಅವರು ಮಾಡಿದ ಅಭಿವೃದ್ಧಿ ತೋರಿಸಿ, ಮೋದಿ ಹೆಸರು ಬಿಟ್ಟು ಬೇರೆ ಏನು ಮಾಡಿದ್ದಾರೆ? ಅವರು ಪ್ರಗತಿ ತೋರಿಸಿ ಅಧಿಕಾರಕ್ಕೆ ಬಂದಿಲ್ಲ ಎಂದರು.

ಚಾಮರಾಜನಗರ ಕ್ಷೇತ್ರದಿಂದ ಯಾರೇ ಕಾಂಗ್ರೆಸ್ ಅಭ್ಯರ್ಥಿಯಾದರೂ ಗೆಲ್ಲಿಸುತ್ತೇವೆ: ಶಾಸಕ ಅನಿಲ್ ಚಿಕ್ಕಮಾದು

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೋತರೆ ಉಸ್ತುವಾರಿ ಸಚಿವರೇ ಹೊಣೆ ಎಂಬ ಹೈಕಮಾಂಡ್ ಎಚ್ಚರಿಕೆಗೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ಹೈಕಮಾಂಡ್ ಹಾಗೆ ಹೇಳಿದ್ದು ಸರಿ ಇದೆ, ಮತ್ತೆ ಅಧಿಕಾರ ಪುಕ್ಸಟ್ಟೆ ಬರುತ್ತಾ? ಸುಮ್ಮನೆ ಪ್ರಚಾರಕ್ಕೆ ಹೋಗಿ ಬಂದರೆ ಆಗುತ್ತಾ? ಜವಾಬ್ದಾರಿ ತೆಗೋಬೇಕು, ಪಕ್ಷದ ಹೈಕಮಾಂಡ್ ತೀರ್ಮಾನಿಸಿದರೆ ಉಳಿದುಕೊಳ್ಳುತ್ತಾರೆ, ಇಲ್ಲದಿದ್ದರೆ ಏನು ಎನ್ನುವುದು ಅವರಿಗೆ ಬಿಟ್ಟಿದ್ದು. ಇದರಲ್ಲಿ ಏನೂ ತಪ್ಪಿಲ್ಲ, ಹೈಕಮಾಂಡ್‌ ಏನು ಹೇಳುತ್ತಾರೆ ಅದನ್ನೇ ಕೇಳಬೇಕು ಎಂದು ಸಮರ್ಥಿಸಿಕೊಂಡರು.

Latest Videos
Follow Us:
Download App:
  • android
  • ios