ಪೊಲೀಸರಿಂದ ಪೃಥ್ವಿಸಿಂಗ್ ದೂರನ್ನು ತಿರುಚುವ ಪ್ರಯತ್ನ ಮಾಡಲಾಗಿದೆ: ಆರ್.ಅಶೋಕ್
ಬಿಜೆಪಿ ಮುಖಂಡ ಪೃಥ್ವಿಸಿಂಗ್ ದೂರನ್ನು ತಿರುಚುವ ಪ್ರಯತ್ನ ಪೊಲೀಸ್ ಮಾಡಿದ್ದಾರೆ. ನಾವು ಕೊಟ್ಟ ದೂರನ್ನು ತಮಗೆಷ್ಟು ಬೇಕು ಅಷ್ಟು ತಗೊಂಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.
ಬೆಳಗಾವಿ (ಡಿ.09): ಬಿಜೆಪಿ ಮುಖಂಡ ಪೃಥ್ವಿಸಿಂಗ್ ದೂರನ್ನು ತಿರುಚುವ ಪ್ರಯತ್ನ ಪೊಲೀಸ್ ಮಾಡಿದ್ದಾರೆ. ನಾವು ಕೊಟ್ಟ ದೂರನ್ನು ತಮಗೆಷ್ಟು ಬೇಕು ಅಷ್ಟು ತಗೊಂಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಏನ್ ಬೇಕಿದೆ ಅಷ್ಟು ಮಾತ್ರ ಗೃಹ ಸಚಿವರು ಓದಿದ್ದಾರೆ. ಈ ವಿಚಾರ ಮುಂದಿಟ್ಟುಕೊಂಡು ಹೋರಾಟ ಮಾಡುತ್ತೇವೆ ಎಂದರು.
ಅಶೋಕ ವಿಪಕ್ಷ ನಾಯಕ ಆಯ್ಕೆ ವಿರೋಧ ವಿಚಾರಕ್ಕೆ ಉತ್ತರಿಸಿದ ಅವರು, ರಾಜಕಾರಣದಲ್ಲಿ ಒಬ್ಬರು ನಾಯಕರ ಪರ, ವಿರೋಧ ಇರುತ್ತಾರೆ. ಒಬ್ಬರು ಆಯ್ಕೆಯಾದಾಗ ಹೀಗೆ ಹೇಳುತ್ತಾರೆ. ಹಾಗೇ ಕಾಂಗ್ರೆಸ್‌ನಲ್ಲೂ ಡಿಕೆಶಿ ಸಿದ್ದರಾಮಯ್ಯ, ಪರಮೇಶ್ವರ ಸಿದ್ದರಾಮಯ್ಯ ಪರ ವಿರೋಧ ಇದೆ. ಇವೆಲ್ಲವೂ ರಾಜಕಾರಣದಲ್ಲಿ ಕಾಮನ್ ಎಂದರು. ಸಭಾತ್ಯಾಗ ವಿಚಾರದಲ್ಲಿ ಹೊಂದಾಣಿಕೆ ಇಲ್ಲ ಎಂಬ ಪ್ರಶ್ನೆಗೆ ನಿನ್ನೆ ಯತ್ನಾಳ ಅವರು ನನ್ನ ಹತ್ತಿರ ಬಂದು ಹೇಳಿದರು.
ಶಾಸಕ ಯತ್ನಾಳ ಆರೋಪ ಸತ್ಯಕ್ಕೆ ದೂರ: ಸಚಿವ ಜಮೀರ್ ಅಹ್ಮದ್ ಖಾನ್
ಪ್ರತಿದಿನ ಧರಣಿ ಮಾಡಿದರೆ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ ಆಗುತ್ತಿಲ್ಲ. ನೀವು ಸದನದ ಬಾವಿಗೆ ಇಳಿದರೆ ಚರ್ಚೆ ಆಗಲ್ಲ. ಇಲ್ಲಿಗೆ ಬಂದು ಉತ್ತರ ಕರ್ನಾಟಕ ಬಗ್ಗೆ ಚರ್ಚೆ ಆಗಬೇಕು. ಉತ್ತರ ಕರ್ನಾಟಕ ಬಗ್ಗೆ ನಾನು ಮಾಡಬೇಕು. ಹೀಗಾಗಿ ಧರಣಿ ಬೇಡ ಎಂದು ಯತ್ನಾಳ ಹೇಳಿದರು. ನಾನು ಅದಕ್ಕೆ ಮುಂದಿರುವವರನ್ನು ಕರೆದು ಚರ್ಚೆ ಮಾಡಿದೆ. ಇದರಿಂದ ಹಿಂದಿರೋರು ಮುಂದಿರೋರರ ಮಧ್ಯೆ ಕಮ್ಯೂನಿಕೇಷನ್ಸ್ ಗ್ಯಾಪ್ ಆಗಿದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.
ಅಶೋಕ್ ವಿರುದ್ಧ ಬಿಜೆಪಿ ಶಾಸಕರೇ ಗರಂ: ಬೆಳಗಾವಿ ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್‌ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನೀಡಿದ ಉತ್ತರ ವಿರೋಧಿಸಿ ನಡೆಸಿದ ಸಭಾತ್ಯಾಗ ಪ್ರತಿಪಕ್ಷ ಬಿಜೆಪಿಯಲ್ಲಿಯೇ ಗೊಂದಲ, ಅಸಮಾಧಾನಕ್ಕೆ ಕಾರಣವಾಗಿದ್ದು, ಪ್ರತಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧವೇ ಸ್ವಪಕ್ಷೀಯರು ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಪೃಥ್ವಿಸಿಂಗ್ ಮತ್ತು ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಬೆಳಗಾವಿ ಬಿಜೆಪಿ ಮುಖಂಡ ಅಭಿಜಿತ್ ಜವಳ್ಕರ್ ಪ್ರಕರಣ ಸಂಬಂಧ ಧರಣಿ ನಡೆಸಲು ಬಿ.ವೈ.ವಿಜಯೇಂದ್ರ ಮತ್ತಿತರ ಸದಸ್ಯರು ತೀರ್ಮಾನಿಸಿದ್ದರು. ಅಷ್ಟರಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಏಕಾಏಕಿ ಸಭಾತ್ಯಾಗ ಎಂದು ಪ್ರಕಟಿಸಿ ಸದನದಿಂದ ಹೊರ ನಡೆದರು. ಪರಿಣಾಮ ಪಕ್ಷದವರಲ್ಲಿಯೇ ಗೊಂದಲ ಉಂಟಾಯಿತು. ನಂತರ ಅನಿವಾರ್ಯವಾಗಿ ವಿಜಯೇಂದ್ರ ಮತ್ತಿತರರು ಸಹ ಸದನದಿಂದ ಹೊರ ನಡೆದರು.
ಈ ನಡುವೆ, ಶಾಸಕರಾದ ಎಸ್.ಆರ್.ವಿಶ್ವನಾಥ್ ಮತ್ತು ಅಭಯ್ ಪಾಟೀಲ್ ಇಬ್ಬರು ಅಶೋಕ್ ನಡೆಗೆ ಕಿಡಿಕಾರಿದರು. ಎಸ್.ಆರ್.ವಿಶ್ವನಾಥ್ ಅವರಂತೂ ಅಶೋಕ್ ಅವರನ್ನು ‘ಅಡ್ಜಸ್ಟ್‌ಮೆಂಟ್ ಗಿರಾಕಿ’ ಎಂದು ಬೈಯ್ದುಕೊಂಡು, ಸದನಕ್ಕೆ ಆಗಮಿಸುವುದೇ ಇಲ್ಲ ಎಂದು ಕೋಪದಿಂದ ತೆರಳಿದರು. ಅಭಯ್ ಪಾಟೀಲ್, ಧರಣಿ ನಡೆಸುವ ಬದಲು ಸಭಾತ್ಯಾಗ ಮಾಡುವ ತೀರ್ಮಾನ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇಬ್ಬರು ಸಿಂಗ್‌ಗಳಿಂದ ಬಿಜೆಪಿಗೆ ದುಸ್ಥಿತಿ: ಶಾಸಕ ಬಸನಗೌಡ ಯತ್ನಾಳ್
ಸರ್ಕಾರದ ಉತ್ತರವನ್ನು ವಿರೋಧಿಸಿ ಧರಣಿ ಅಥವಾ ಸಭಾತ್ಯಾಗ ನಡೆಸುವ ಕುರಿತು ಸದನದಲ್ಲಿಯೇ ವಿಜಯೇಂದ್ರ, ಸುರೇಶ್ ಕುಮಾರ್, ಸುನೀಲ್ ಕುಮಾರ್ ಅವರು ಅಶೋಕ್ ಬಳಿ ಬಂದು ಚರ್ಚಿಸಿದರು. ಅಶೋಕ್ ಬಳಿಕ ಚರ್ಚಿಸಿದ ನಂತರ ಮತ್ತೊಮ್ಮೆ ಎಸ್.ಆರ್.ವಿಶ್ವನಾಥ್, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಇತರೆ ನಾಯಕರು ಮಾತುಕತೆ ನಡೆಸಿದರು. ಆದರೆ, ಈ ವೇಳೆ ಅಶೋಕ್ ಬಳಿ ಯಾರೂ ಮಾತುಕತೆ ನಡೆಸಲಿಲ್ಲ. ಇದು ಪಕ್ಷದ ಸದಸ್ಯರಲ್ಲಿಯೇ ಒಮ್ಮತ ಮೂಡಲು ಸಾಧ್ಯವಾಗಲಿಲ್ಲ. ಪರಿಣಾಮ ಅಶೋಕ್ ಅವರು ಏಕಾಏಕಿ ಸಭಾತ್ಯಾಗ ಘೋಷಣೆ ಮಾಡಿದ್ದು ಇತರೆ ನಾಯಕರಲ್ಲಿ ಆಶ್ಚರ್ಯವನ್ನುಂಟು ಮಾಡಿತು.