ಬೆಂಗಳೂರು, (ಡಿ.11): ಎಷ್ಟೇ ಮುಷ್ಕರ, ಪ್ರತಿಭಟನೆ ಮಾಡಿದರೂ ಬಗ್ಗದ ರಾಜ್ಯ ಸರ್ಕಾರಕ್ಕೆ ಇನ್ನಷ್ಟು  ಬಿಸಿ ಮುಟ್ಟಿಸಲು ಸಾರಿಗೆ ನೌಕರರು ಮುಂದಾಗಿದ್ದಾರೆ. 

ನಾಳೆಯಿಂದ ಅಂದ್ರೆ ಭಾನುವಾರದಿಂದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಒಮ್ಮತದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಪ್ರತಿಭಟನಾ ನಿರತರೊಂದಿಗೆ ಸರ್ಕಾರ ಮಾತುಕತೆಗೆ ಬರುತ್ತಿಲ್ಲ. ಅಲ್ಲದೆ, ಸೋಮವಾರದಿಂದ ಖಾಸಗಿ ಬಸ್ ಓಡಿಸುವುದಾಗಿಯೂ ಸಾರಿಗೆ ಸಚಿವರು ಹೇಳಿದ್ದಾರೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ನೌಕರರು ಎಲ್ಲ ಡಿಪೋಗಳಲ್ಲಿ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದಾರೆ.

ಸಿಎಂ ಬಿಎಸ್ ಯಡಿಯೂರಪ್ಪಗೆ ತಿರುಗೇಟು ಕೊಟ್ಟ ಕೋಡಿಹಳ್ಳಿ ಚಂದ್ರಶೇಖರ್‌

ಇತ್ತ ಸರ್ಕಾರವೂ ಸಹ ಇದನ್ನ ಪ್ರತಿಷ್ಠೆಗೆ ತೆಗೆದುಕೊಂಡಿದ್ದು, ಪ್ರತಿಭಟನಾ ಸ್ಥಳಕ್ಕೆ ಹೋಗಿ ಧರಣಿ ನಿರತ ಸಾರಿಗೆ ನೌಕರರ ಮನವಿ ಕೇಳುತ್ತಿಲ್ಲ. ಕೇವಲ ಮನೆ ಬನ್ನಿ ಎಂದು ಸಾರಿಗೆ ಸಚಿವರೂ ಆಗಿರುವ ಲಕ್ಷ್ಮಣ ಸವದಿ ಬೇಜವಾಬ್ದಾರಿತನ ಹೇಳಿಕೆ ಕೊಡುತ್ತಿದ್ದಾರೆ.

ಇನ್ನೊಂದೆಡೆ ಪೊಲೀಸ್ ಇಲಾಖೆಯೂ ಸಹ ಸಿಕ್ಕ ಸಿಕ್ಕವರನ್ನ ವಶಕ್ಕೆ ಪಡೆದು ಠಾಣೆಗಳಿಗೆ ಕರೆದುಕೊಂಡು ಹೋಗುವ ಮೂಲಕ ಪ್ರತಿಟನೆ ಹತ್ತಿಕ್ಕುವ ಪ್ರಯತ್ನ ಸಹ ಮಾಡುತ್ತಿದೆ. 

ಸರ್ಕಾರಕ್ಕೆ ಏನು ಕಷ್ಟ..?
ಹೆಂಡತಿ-ಮಕ್ಕಳು, ತಂದೆ-ತಾಯಿಂದಿರನ್ನು ಬಿಟ್ಟು ನೌಕರಿ ಮಾಡುವ ಸಾರಿಗೆ ಸಿಬ್ಬಂದಿಯ ಅಳಲನ್ನ ಸರ್ಕಾರ ಆಲಿಸಬೇಕು. ಅದನ್ನ ಬಿಟ್ಟು ಕೂತಲ್ಲಿಯೇ ಬೇರೆ-ಬೇರೆ ಮಾರ್ಗಗಳಿಂದ ಹೆದರಿಸುತ್ತಿದೆ. ಅಷ್ಟಕ್ಕೂ ಈ ನೌಕರರನ್ನು ಏಕೆ ಸರ್ಕಾರ ನೌಕರರನ್ನಾಗಿ ಮಾಡುತ್ತಿಲ್ಲ..? ಏನಾದ್ರೂ ತೊಂದರೆ ಇದೆನಾ..? ಸರ್ಕಾರ ಇಷ್ಟೇಕೆ ಹುಂಬತನ ಮಾಡುತ್ತಿದೆ..? ಎನ್ನುವುದು ಒಂದೂ ತಿಳಿಯುತ್ತಿಲ್ಲ. 

ಪ್ರಾಧಿಕಾರಿಗಳಿಗೆ ಹಣ.. ದುಡಿಯುವವರಿಗೆ ಇಲ್ವಾ?
ಹೌದು...ಓಟ್ ಬ್ಯಾಂಕ್ ಸಲುವಾಗಿ ಜಾತಿಗೊಂದು ಪ್ರಾಧಿಕಾರಗಳನ್ನ ರಚನೆ ಮಾಡಿ ಅವುಗಳಿಗೆ ಕೋಟಿಗಟ್ಟಲೇ ಹಣ ಕೊಡುತ್ತಿರುವ ಸರ್ಕಾರ, ದುಡಿಯು ಸಾರಿಗೆ ನೌಕರರಿಗೆ ಏಕೆ ಸರಿಯಾಗಿ ತಿಂಗಳಿಗೆ ಸಂಬಳ ಕೊಡಲಾಗುತ್ತಿಲ್ಲ..? ಇನ್ನು ಆರ್ಥಿಕ ಸಂಕಷ್ಟವಿದ್ದು, ಈ ಸಮಯದಲ್ಲಿ ಪ್ರತಿಭಟನೆ ಸರಿಯಲ್ಲ ಎನ್ನುವ ಸಿಎಂ ಯಡಿಯೂರಪ್ಪ ಅವರಿಗೆ ಪ್ರಾಧಿಕಾರಗಳಿಗೆ ಕೋಟ್ಯಾನುಗಟ್ಟಲೇ ಹಣ ಎಲ್ಲಿಂದ ಬಂತು..? ಹೀಗೆ ನಾನಾ ಪ್ರಶ್ನೆಗಳು ಉದ್ಭವಿಸುತ್ತಿವೆ.

ಸರ್ಕಾರ ಈಗಲಾದರೂ ಎಚ್ಚೆತ್ತು ಧರಣಿ ನಿರತ ನೌಕರರ ಬಳಿ ಹೋಗಿ ಅವರ ಬೇಡಿಕೆಗಳಲ್ಲಿ ಕೆಲವಂದಿಷ್ಟಾದರೂ ಈಡೇರಿಸಿ ಸಾರ್ಜನಿಕರ ಹಿತ ಕಾಯಬೇಕಿದೆ. 

ಒಟ್ಟಿನಲ್ಲಿ ಈ ಪ್ರತಿಭಟನೆ ನಾ ಕೊಡೆ ನೀ ಬಿಡೆ ಎಂಬಂತಾಗಿದೆ.