ಮುಂಬರುವ ವಿಧಾನಸಭಾ ಚುನಾವಣೆ ಗುರಿಯಾಗಿಸಿಕೊಂಡು ರಾಜ್ಯ ಸರ್ಕಾರದ ವರ್ಚಸ್ಸು ಹೆಚ್ಚಿಸುವುದು ಮತ್ತು ಪಕ್ಷ ಸಂಘಟನೆ ಬಲಗೊಳಿಸುವ ಉದ್ದೇಶದಿಂದ ಆಡಳಿತಾರೂಢ ಬಿಜೆಪಿಯ ಪ್ರಮುಖರ ‘ಚಿಂತನ ಮಂಥನ’ ಶುಕ್ರವಾರ ನಡೆಯಲಿದೆ.
ಬೆಂಗಳೂರು (ಜು.15): ಮುಂಬರುವ ವಿಧಾನಸಭಾ ಚುನಾವಣೆ ಗುರಿಯಾಗಿಸಿಕೊಂಡು ರಾಜ್ಯ ಸರ್ಕಾರದ ವರ್ಚಸ್ಸು ಹೆಚ್ಚಿಸುವುದು ಮತ್ತು ಪಕ್ಷ ಸಂಘಟನೆ ಬಲಗೊಳಿಸುವ ಉದ್ದೇಶದಿಂದ ಆಡಳಿತಾರೂಢ ಬಿಜೆಪಿಯ ಪ್ರಮುಖರ ‘ಚಿಂತನ ಮಂಥನ’ ಶುಕ್ರವಾರ ನಡೆಯಲಿದೆ. ನಗರದ ಹೊರವಲಯದ ದೇವನಹಳ್ಳಿ-ನಂದಿ ಬೆಟ್ಟದ ಬಳಿಯ ಪ್ರೆಸ್ಟೀಜ್ ಗಾಲ್‌ಫಶೈರ್ ರೆಸಾರ್ಚ್‌ನ ಜೆ.ಡಬ್ಲ್ಯು.ಮ್ಯಾರಿಯಟ್ ಹೋಟೆಲ್‌ನಲ್ಲಿ ಬೆಳಗ್ಗೆ 9ರಿಂದ ಸಂಜೆವರೆಗೆ ನಡೆಯಲಿರುವ ಸಭೆಯಲ್ಲಿ ಸರ್ಕಾರ, ಪಕ್ಷ ಹಾಗೂ ಸಂಘ ಪರಿವಾರದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಈ ಸಭೆಯ ಬಳಿಕ ಸರ್ಕಾರ ಮತ್ತು ಪಕ್ಷದ ಸಂಘಟನಾ ಸ್ವರೂಪದಲ್ಲಿ ಕೆಲವು ಸಣ್ಣ ಪುಟ್ಟಬದಲಾವಣೆಗಳು ನಡೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎನ್ನಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಡಿ.ವಿ.ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಸಂಘ ಪರಿವಾರದ ಮುಖಂಡರಾದ ಮುಕುಂದ್, ತಿಪ್ಪೇಸ್ವಾಮಿ, ನಾಗರಾಜ್, ಸಚಿವರಾದ ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವತ್ಥನಾರಾಯಣ ಸೇರಿದಂತೆ ಸುಮಾರು 50 ಮಂದಿ ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ.
ಬರ್ತ್ ಡೇ ಹೆಸರಲ್ಲಿ ಬೇರೊಂದು ಕ್ಷೇತ್ರದಲ್ಲಿ ಬಲ ಪ್ರದರ್ಶನ, ಶಿವನಗೌಡ ರಾಜಕೀಯ ನಡೆ ಕುತೂಹಲ
ಈ ಸಭೆ ಹಲವು ದಿನಗಳ ಹಿಂದೆಯೇ ನಡೆಯಬೇಕಿತ್ತು. ಆದರೆ, ವಿಧಾನಪರಿಷತ್, ರಾಜ್ಯಸಭಾ ಚುನಾವಣೆಗಳು ಎದುರಾಗಿದ್ದರಿಂದ ಮುಂದೂಡಿ ಕೊನೆಗೆ ಇದೀಗ ಸಮಯ ನಿಗದಿಯಾಗಿದೆ. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಇದೇ ತಿಂಗಳ 28ಕ್ಕೆ ಒಂದು ವರ್ಷ ಪೂರೈಸುತ್ತಿರುವುದರಿಂದ ಸಹಜವಾಗಿಯೇ ಸರ್ಕಾರದ ಸಾಧನೆಯ ಪರಾಮರ್ಶೆ ನಡೆಸುವುದರ ಜೊತೆಗೆ ಚುನಾವಣೆ ಉದ್ದೇಶದಿಂದ ಆಡಳಿತದಲ್ಲಿ ಏನೇನು ಸುಧಾರಣೆ ತರಬೇಕು ಎಂಬುದರ ಬಗ್ಗೆಯೂ ಸಭೆಯಲ್ಲಿ ಸಮಾಲೋಚನೆ ನಡೆಯಲಿದೆ. ಜತೆಗೆ ಬಜೆಟ್ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಜನರ ಮನ ಸೆಳೆಯುವ ಬಗ್ಗೆಯೂ ಪಕ್ಷ ಹಾಗೂ ಸಂಘ ಪರಿವಾರದ ನಾಯಕರು ಮಾರ್ಗದರ್ಶನ ನೀಡಲಿದ್ದಾರೆ ಎನ್ನಲಾಗಿದೆ.
ಪಕ್ಷ ಸಂಘಟನೆ, ಚುನಾವಣೆ ಬಗ್ಗೆ ಚರ್ಚೆ-ಸಿಎಂ: ಶುಕ್ರವಾರದ ಸಭೆಯ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಬಿಜೆಪಿ ಕಚೇರಿಯಲ್ಲಿ ನಾಯಕರ ಪೂರ್ವಭಾವಿ ಸಭೆ ನಡೆಯಿತು. ಈ ಸಭೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ, ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ಕಟೀಲ್ ಮತ್ತಿತರರು ಪಾಲ್ಗೊಂಡಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಶುಕ್ರವಾರ ನಡೆಯುವ ಚಿಂತನ ಸಭೆಯ ಪೂರ್ವಭಾವಿಯಾಗಿ ಚರ್ಚೆ ನಡೆಸಲಾಗಿದೆ. ಸಂಘಟನೆ ವಿಚಾರ, ಪಕ್ಷವನ್ನು ಇನ್ನಷ್ಟುಬಲಪಡಿಸುವುದು, ಮುಂಬರುವ ಚುನಾವಣೆ ಎದುರಿಸುವ ಕುರಿತು ಚರ್ಚಿಸಿ ಅಗತ್ಯ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು.
ಬೆಳಿಗ್ಗೆ 9 ಗಂಟೆಗೆ ಸಭೆ ಆರಂಭವಾಗಲಿದೆ. ಈ ಮೇಲಿನ ವಿಷಯಗಳಲ್ಲದೆ ಬೇರೆ ಬೇರೆ ವಿಷಯಗಳೂ ಚರ್ಚೆಗೆ ಒಳಪಡಬಹುದು. ಮುಕ್ತವಾಗಿ ಚಿಂತನೆಗೆ ನಾವು ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ವಿವರಿಸಿದರು. ಪಕ್ಷದ ರಾಜ್ಯ ಕೋರ್ ಕಮಿಟಿ ಸದಸ್ಯರು, ಸಚಿವ ಸಂಪುಟದ ಕೆಲ ಸದಸ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ. 50ಕ್ಕೂ ಹೆಚ್ಚು ಜನ ರಾಜ್ಯ ಪ್ರಮುಖರೂ ಭಾಗವಹಿಸುವ ಸಭೆ ಇದಾಗಿದೆ. ನಾಳೆ ಚರ್ಚೆಯ ಬಳಿಕ ಸಂಪೂರ್ಣ ಚಿತ್ರಣ ಲಭಿಸಲಿದೆ ಎಂದು ತಿಳಿಸಿದರು.
ಜನ ಸಂಕಷ್ಟದಲ್ಲಿರುವಾಗ ಕಾಂಗ್ರೆಸ್‌ಗೆ ಸಿದ್ದರಾಮೋತ್ಸವ ಬೇಕಾ? ಸಚಿವ ಸಿಸಿ ಪಾಟೀಲ್ ಪ್ರಶ್ನೆ
ನಾಳೆ ಶಾಸಕರಿಗೆ ಸಿಎಂ ಡಿನ್ನರ್ ಪಾರ್ಟಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಸಂಜೆ ಪಕ್ಷದ ಶಾಸಕರಿಗಾಗಿ ರಾತ್ರಿ ಭೋಜನಕೂಟ ಆಯೋಜಿಸಿದ್ದಾರೆ. ಸೋಮವಾರ ನಡೆಯಲಿರುವ ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಮತ್ತು ಇದೇ ತಿಂಗಳ 28ಕ್ಕೆ ತಮ್ಮ ಸರ್ಕಾರಕ್ಕೆ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ನಗರದ ಶಾಂಘ್ರಿಲಾ ಹೋಟೆಲ್‌ನಲ್ಲಿ ಮುಖ್ಯಮಂತ್ರಿಗಳು ಈ ಭೋಜನ ಕೂಟ ಏರ್ಪಡಿಸಿದ್ದಾರೆ ಎನ್ನಲಾಗಿದೆ.
