ಹೌರಾ(ಅ.09): ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವಿರುದ್ಧ ಗುರುವಾರ ನಡೆದ ಹೋರಾಟವು ಭಾರಿ ಹಿಂಸಾಚಾರಕ್ಕೆ ಕಾರಣವಾಗಿದೆ. ಪೊಲೀಸರು ಅಶ್ರುವಾಯು, ಜಲಫಿರಂಗಿ ಪ್ರಯೋಗ ಹಾಗೂ ಲಾಠಿ ಪ್ರಹಾರ ನಡೆಸಿದ್ದರಿಂದ ಹಲವಾರು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಬಿಜೆಪಿ ಕಾರ್ಯಕರ್ತ ಮನೀಶ್‌ ಶುಕ್ಲಾ ಎಂಬುವರ ಹತ್ಯೆಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿದ್ದು, ಬಂಗಾಳದಲ್ಲಿ ಕಾನೂನು- ಸುವ್ಯವಸ್ಥೆ ಕುಸಿದಿದೆ ಎಂದು ಬಿಜೆಪಿ ವತಿಯಿಂದ ಮೂರು ಪ್ರತಿಭಟನಾ ರಾರ‍ಯಲಿಗಳನ್ನು ಗುರುವಾರ ಆಯೋಜಿಸಲಾಗಿತ್ತು.

ತೇಜಸ್ವಿ ನೇತೃತ್ವದಲ್ಲಿ ಸಹಸ್ರಾರು ಯುವ ಬಿಜೆಪಿ ಕಾರ್ಯಕರ್ತರು ಹೌರಾ ಮೈದಾನದಿಂದ ಬಂಗಾಳ ಸಚಿವಾಲಯದತ್ತ ಹೆಜ್ಜೆ ಹಾಕಿದರು. ಮಧ್ಯಾಹ್ನ 12.30ಕ್ಕೆ ಆರಂಭವಾದ ಮೆರವಣಿಗೆ ಮಲ್ಲಿಕ್‌ ಗೇಟ್‌ ತಲುಪುತ್ತಿದ್ದಂತೆ ಪೊಲೀಸರು ತಡೆದರು. ಇದರಿಂದ ತಾಳ್ಮೆ ಕಳೆದುಕೊಂಡ ಕಾರ್ಯಕರ್ತರು ಪೊಲೀಸರ ಮೇಲೆ ಕಲ್ಲು ತೂರಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು. ಜಲಫಿರಂಗಿ ಹಾರಿಸಿದರು. ಕೊನೆಗೆ ಲಾಠಿ ಪ್ರಹಾರ ಮಾಡಿದರು. ಈ ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡರು.

'ಕೊರೋ​ನಾ​ಗಿಂತಲೂ ಮೋದಿ, ಬಿಎ​ಸ್‌ವೈ ಡೇಂಜ​ರ್‌'

ಈ ವಿಷಯ ತಿಳಿಯುತ್ತಿದ್ದಂತೆ ಮತ್ತೆರಡು ಮೆರವಣಿಗೆಗಳಲ್ಲಿ ಆಕ್ರೋಶ ಭುಗಿಲೆದ್ದಿತು. ರಸ್ತೆಗಳಲ್ಲಿ ಟೈರ್‌ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ರಸ್ತೆ ತಡೆ ನಡೆಸಲಾಯಿತು. ಮಮತಾ ಬ್ಯಾನರ್ಜಿ ಸರ್ಕಾರದ ಧೋರಣೆಯನ್ನು ಖಂಡಿಸಲಾಯಿತು. ಕೋಲ್ಕತಾ ಹಾಗೂ ಹೌರಾ ಅಕ್ಷರಶಃ ಯುದ್ಧ ಭೂಮಿಯಂತೆ ಕಂಡುಬಂತು. ಅಂಗಡಿ- ಮುಂಗಟ್ಟುಗಳು ಬಾಗಿಲು ಬಂದ್‌ ಮಾಡಿದವು.

ಬಂಗಾಳದಲ್ಲಿ ಕಾನೂನಿನ ಕಗ್ಗೊಲೆ: ತೇಜಸ್ವಿ

ಕೋಲ್ಕತಾ: ಕಾನೂನು- ಸುವ್ಯವಸ್ಥೆ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಪಶ್ಚಿಮ ಬಂಗಾಳ ಸರ್ಕಾರ ಕ್ರೂರವಾಗಿ ದಾಳಿ ಮಾಡಿದೆ. ಕಾನೂನಿನ ಕಗ್ಗೊಲೆ ನಡೆದ ಕರಾಳ ದಿನ ಇದಾಗಿದೆ. ನಿರ್ದಯವಾಗಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ರಾಷ್ಟ್ರೀಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.

ಪ್ರತಿಭಟನೆ ವೇಳೆ ಕಾರ್ಯಕರ್ತರ ಮೇಲೆ ನೀಲಿ ರಾಸಾಯನಿಕ ಮಿಶ್ರಿತ ನೀರನ್ನು ಸಿಂಪಡಿಸಲಾಗಿದೆ. ಇದು ಮಾನವ ಹಕ್ಕುಗಳ ಸಂಪೂರ್ಣ ಉಲ್ಲಂಘನೆ. ಈ ಸಂಬಂಧ ವಿಚಾರಣೆ ನಡೆಸಬೇಕು ಎಂದು ಗೃಹ ಸಚಿವಾಲಯವನ್ನು ಕೋರುವುದಾಗಿ ಸುದ್ದಿಗಾರರಿಗೆ ತಿಳಿಸಿದರು.

ಬಂಗಾಳ ಪೊಲೀಸರು ಸಿಂಪಡಿಸಿದ ನೀಲಿ ಮಿಶ್ರಿತ ನೀರು ಚುನಾವಣೆ ವೇಳೆ ಬಳಸಲಾಗುವ ಅಳಿಸಲಾಗದ ಶಾಯಿ ಎನ್ನಲಾಗಿದೆ. ಈ ಇಂಕ್‌ ಅನ್ನು ಸುಲಭವಾಗಿ ಅಳಿಸಲು ಆಗುವುದಿಲ್ಲ. ಹೀಗಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.