ರಾಜ್ಯದಲ್ಲಿ ಟಿಪ್ಪು ಯೂನಿವರ್ಸಿಟಿ ಮಾಡ್ತೀವಿ: ಸಿಎಂ ಇಬ್ರಾಹಿಂ ಹೇಳಿಕೆ
ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ಮತ್ತು ಕೆಂಪೇಗೌಡ ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯಗಳನ್ನು ತೆರೆಯಲಾಗುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ಚಿಕ್ಕಬಳ್ಳಾಪುರ (ನ.24): ನಾಡಪ್ರಭು ಕೆಂಪೇಗೌಡ ಅವರ ಪುತ್ಥಳಿಯನ್ನು ವಿಮಾನ ನಿಲ್ದಾಣದಲ್ಲಿ ಅಲ್ಲ, ವಿಧಾನಸಭೆಯ ಮುಂದೆ ನಿರ್ಮಾಣ ಮಾಡುತ್ತೇವೆ. ಜೊತೆಗೆ ಟಿಪ್ಪು ಸುಲ್ತಾನ್ ಮತ್ತು ಕೆಂಪೇಗೌಡ ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯಗಳನ್ನು ತೆರೆಯಲಾಗುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ನಡೆಯುತ್ತಿರುವ ಜೆಡಿಎಸ್ ಪಂಚರತ್ನ ರಥಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗಿನ ಸರ್ಕಾರ ಸ್ಥಳೀಯ ಜನರಿಗೆ ಕಾಣಿಸದ ರೀತಿಯಲ್ಲಿ ವಿಮಾಣ ನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆ ನಿರ್ಮಿಸಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ವಿಧಾನಸೌಧ ಮುಂದೆ ಕೆಂಪೇಗೌಡರ ಪುತ್ಥಳಿ ನಿರ್ಮಿಸುತ್ತೇವೆ. ಇನ್ನು ರಾಜ್ಯದಲ್ಲಿ ಕೆಂಪೇಗೌಡ ಮತ್ತು ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಪ್ರತ್ಯೇಕವಾಗಿ ಹೊಸ ಯೂನಿವರ್ಸಿಟಿ ಆರಂಭ ಮಾಡುತ್ತೇವೆ. ಈ ಮೂಲಕ ನಮ್ಮ ರಾಜ್ಯ ಸರ್ವಜನಾಂಗದ ಶಾಂತಿಯ ತೋಟ ಎಂಬುದನ್ನು ತೋರಿಸುತ್ತೇವೆ ಎಂದು ಹೇಳಿದರು.
ಸಾಬ್ರು, ಗೌಡ್ರು, ದಲಿತರ ಹೆಸರು ಡಿಲೀಟ್: ರಾಜ್ಯದಲ್ಲಿ ಅಧಿಕಾರದಲ್ಲಿರುವ ಸರ್ಕಾರ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಕುತಂತ್ರ ಆರಂಭಿಸಿದ್ದು, ತಮ್ಮ ಪಕ್ಷದ ವಿರುದ್ಧ ಮತ ಚಲಾವಣೆ ಮಾಡುವ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆಯುತ್ತಿದ್ದಾರೆ. ಅಂದರೆ, ಮುಖ್ಯವಾಗಿ ಸಾಬ್ರು, ಗೌಡ್ರು, ದಲಿತರ ಹೆಸರು ವೋಟರ್ ಲೀಸ್ಟ್‌ನಿಂದ ತೆಗೆದಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 23ಲಕ್ಷ ಮತದಾರರ ಹೆಸರು ಡೆಲಿಟ್ ಮಾಡಿದ್ದಾರೆ. ಅವರನ್ನು ಬೆಂಬಲಿಸಬಾರದು. ಇನ್ನು ಸ್ಥಳೀಯವಾಗಿ ಸ್ವಾಭಿಮಾನಿ ರವಿಕುಮಾರ್ ಅವರು ಚುನಾವಣೆಗೆ ನಿಲ್ಲುತ್ತಿದ್ದಾರೆ. ಎಲ್ಲರೂ ಇವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಸಾಲ ಮನ್ನಾ ತಡೆಯಲು ಸಿದ್ದರಾಮಯ್ಯ ಷಡ್ಯಂತ್ರ: ರಾಜ್ಯದಲ್ಲಿ ಕುಮಾಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಎಲ್ಲಿ ಸಾಲ ಮನ್ನಾ ಮಾಡಿ ಹೆಸರು ಮಾಡುತ್ತಾರೆ ಎಂಬ ಚಿಂತನೆಯಿಂದ ಸಿದ್ದರಾಮಯ್ಯ ಅವರಿಗೆ ಹೊಟ್ಟೆ ಕಿಚ್ಚು ಉಂಟಾಗಿತ್ತು. ಹೀಗಾಗಿ, ಸಾಲ ಮನ್ನಾ ಮಾಡದಂತೆ ಷಡ್ಯಂತ್ರವನ್ನೂ ರೂಪಿಸಿದ್ದರು. ಕುಮಾರಸ್ವಾಮಿಗೆ ಹೆಸರು ಬರಬಾರದು ಎನ್ನುವ ದೃಷ್ಟಿಯಿಂದ ಯಡಿಯೂರಪ್ಪ ಜೊತೆ ಕೈಜೋಡಿಸಿ, ಶಾಸಕರನ್ನು ಹೊರಗೆ ಕಳುಹಿಸಿ ಸರ್ಕಾರವನ್ನೇ ಮುಳುಗಿಸಿದರು. ನಾಡಿನ ಒಳಿತಿಗಾಗಿ ಬೆಳಗೆದ್ದು ಸ್ನಾನ ಮಾಡಿ, ಪೂಜೆ ಮಾಡಿ ಕೆಲಸ ಶುರು ಮಾಡಬೇಕು. ಅದು ನಮ್ಮ ಕುಮಾರಸ್ವಾಮಿ ಕುಟುಂಬ ಮಾತ್ರವೇ ಮಾಡುತ್ತದೆ. ಇನ್ನು ರೈತಾಪಿ ವರ್ಗಕ್ಕೆ ದೇವೇಗೌಡರು ನೀಡಿದ ಕೊಡುಗೆ ಅಪಾರ. ಇನ್ನು ಕೆಂಪೇಗೌಡರ ಪುತ್ಥಳಿ ವಿಮಾನ ನಿಲ್ದಾಣದಲ್ಲಿ ಅಲ್ಲ, ವಿಧಾನಸೌಧದ ಮುಂಭಾಗದಲ್ಲಿ ಮಾಡುತ್ತೇವೆ ಎಂದು ಹೇಳಿದರು.