ಸರ್ಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ವಿಷಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಇದು ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ವಿಜಯಾನಂದ ಕಾಶಪ್ಪನವರ್‌ ಸರ್ಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂದು ಸರ್ಕಾರದ ಗಮನ ಸೆಳೆಯಲು ನೋಟಿಸ್‌ ನೀಡಿದ್ದಾರೆ

ಸುವರ್ಣ ವಿಧಾನಸೌಧ : ಸರ್ಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ವಿಷಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಇದು ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

ಕಾಂಗ್ರೆಸ್‌ ಸದಸ್ಯ ವಿಜಯಾನಂದ ಕಾಶಪ್ಪನವರ್‌ ಸರ್ಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂದು ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳೆಯಲು ನೋಟಿಸ್‌ ನೀಡಿದ್ದಾರೆ. ಈ ವಿಚಾರ ಸದನದಲ್ಲಿ ಚರ್ಚೆಗೆ ಬರುವ ಮೊದಲೇ ಹೊರಗೆ ಕೆಲ ಸದಸ್ಯರು ಬೆಂಬಲಿಸಿ ಮಾತನಾಡಿದರೆ, ಪ್ರತಿಪಕ್ಷ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸುವರ್ಣ ವಿಧಾನಸೌಧದಲ್ಲಿ ಮಾತನಾಡಿದ ವಿಜಯಾನಂದ ಕಾಶಪ್ಪನವರ್‌, ಟಿಪ್ಪು ಜಯಂತಿ ಸರ್ಕಾರದಿಂದಲೇ ಆಗಬೇಕು ಎನ್ನುವುದು ತಮ್ಮ ಅಭಿಪ್ರಾಯ. ಈ ಬಗ್ಗೆ ಹೆಚ್ಚಿನ ವಿವರವನ್ನು ಅವಕಾಶ ಸಿಕ್ಕರೆ ಸದನದಲ್ಲೇ ನೀಡುತ್ತೇನೆ ಎಂದು ಹೇಳಿದರು.

ಬಿಜೆಪಿಯವರು ವಿರೋಧ ಮಾಡಲಿ. ಭಾರತ ಜಾತ್ಯತೀತ ದೇಶ. ಅಲ್ಪ‌ಸಂಖ್ಯಾತರು ದೇಶಕ್ಕಾಗಿ ಹೋರಾಟ ಮಾಡಲೇ ಇಲ್ವಾ? ಬಿಜೆಪಿಯವರಿಗೆ ಬೇಡ ಅಂದ್ರೆ ಬಿಡಲಿ. ಬೇಕಾದಾಗ ಯಡಿಯೂರಪ್ಪ, ಶೆಟ್ಟರ್ ಅವರು ಟಿಪ್ಪು ವೇಷಭೂಷಣ ಹಾಕ್ತಾರೆ. ಈಗ ಮಾಡೋದು ಬೇಡ್ವಾ? ಸರ್ವ ಜನಾಂಗವನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಪಕ್ಷ ನಮ್ಮದು ಎಂದರು.

ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್‌ ಅಹಮದ್‌ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೆ ವಿಧಾನಸೌಧದಲ್ಲಿ ಸರ್ಕಾರದಿಂದ ಟಿಪ್ಪು ಜಯಂತಿ ಆಚರಣೆ ಮಾಡುತ್ತಿದ್ದರು. ಆದರೆ, ಕಾರಣಾಂತರಗಳಿಂದ ಅದು ಸ್ಥಗಿತ ಆಗಿದೆ ಅಷ್ಟೇ. ಆದರೆ, ಟಿಪ್ಪು ಅಭಿಮಾನಿಗಳು ಯಾರೂ ಟಿಪ್ಪು ಆಚರಣೆ ನಿಲ್ಲಿಸಿಲ್ಲ. ಈಗ ಸರ್ಕಾರದ ಮುಂದೆ ಪ್ರಸ್ತಾಪ ಇಲ್ಲ. ಟಿಪ್ಪು ಜಯಂತಿಯನ್ನು ನಾವೆಲ್ಲ ಅಭಿಮಾನಿಗಳು ಮಾಡಿಯೇ ತೀರುತ್ತೇವೆ. ಆದರೆ ಸರ್ಕಾರದಿಂದ ಮಾಡಿ ಅಂತ ನಾನು ಹೇಳುವುದಿಲ್ಲಲ್ಲ. ಸದನದಲ್ಲಿ ಚರ್ಚೆಗೆ ಬಂದರೆ ನೋಡೋಣ ಎಂದರು.

ಇಂಧನ ಸಚಿವ ಕೆ.ಜೆ.ಜಾರ್ಜ್‌ ಮಾತನಾಡಿ, ಸರ್ಕಾರದಿಂದ ಟಿಪ್ಪು ಜಯಂತಿ ಆಚರಿಸಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರು ತೀರ್ಮಾನ ತೆಗೆದುಕೊಂಡರೆ ಅದಕ್ಕೆ ನಮ್ಮ ಒಪ್ಪಿಗೆ ಇರುತ್ತದೆ ಎಂದರು.

ಬಿಜೆಪಿ ವಿರೋಧ:

ಸರ್ಕಾರದಿಂದ ಮತ್ತೆ ಟಿಪ್ಪು ಜಯಂತಿ ಆಚರಿಸಬೇಕೆಂಬ ಪ್ರಸ್ತಾವನೆಗೆ ವಿಪಕ್ಷ ನಾಯಕ ಆರ್‌.ಅಶೋಕ್‌ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಕೂಡ ಆಕ್ಷೇಪಿಸಿದ್ದಾರೆ.

ಆರ್‌. ಅಶೋಕ್‌ ಮಾತನಾಡಿ ಅಧಿಕಾರ ಹಂಚಿಕೆ, ನಾಯಕತ್ವ ಬದಲಾವಣೆ ವಿಚಾರ ಮರೆ ಮಾಚಲು, ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಆಗಿರುವ ಅನ್ಯಾಯಗಳ ವಿಚಾರಗಳ ಚರ್ಚೆ ದಿಕ್ಕು ತಪ್ಪಿಸಲು ಮನೆಹಾಳು ಟಿಪ್ಪು, ಹೈದರಾಲಿ ವಿಚಾರಗಳನ್ನು ಕಾಂಗ್ರೆಸ್‌ನವರು ತರುತ್ತಿದ್ದಾರೆ. ಟಿಪ್ಪು ಸುಲ್ತಾನ್ ಖಡ್ಗದಲ್ಲಿ ಪರ್ಶಿಯನ್ ಭಾಷೆ ಇದೆ. ಸಿದ್ದರಾಮಯ್ಯ ಹಿಂದೆ ಟಿಪ್ಪು ಜಯಂತಿ ಮಾಡಿದ್ದರು. ಆಗ ಕೊಡಗಿನಲ್ಲಿ ಸಾವು-ನೋವುಗಳಾದವು. ನಂತರ ಸಿದ್ದರಾಮಯ್ಯ ಸರ್ಕಾರ ಗೋವಿಂದ ಆಯಿತು. ಅವನ್ಯಾರೋ ಒಬ್ಬ ಟಿಪ್ಪು ಬಗ್ಗೆ ಫಿಲಂ ಮಾಡೋಕೆ ಹೋಗಿ ಸುಟ್ಟುಕೊಂಡ. ಮಲ್ಯ ಟಿಪ್ಪು ಖಡ್ಗ ತಂದು ಲಂಡನ್‌ಗೆ ಓಡಿಹೋದ. ಈಗ ಮತ್ತೆ ಸಿದ್ದರಾಮಯ್ಯ ಸರ್ಕಾರ ಕೆಡವಲು ಕಾಶಪ್ಪನವರ್ ಈ ವಿಚಾರ ತಂದಿದ್ದಾರೆ ಅಷ್ಟೆ ಎಂದರು.

ಯತ್ನಾಳ್‌ ಮಾತನಾಡಿ, ಹಿಂದೆ ಟಿಪ್ಪು ಜಯಂತಿ ವಿಚಾರವೇ ಸಿದ್ದರಾಮಯ್ಯ ಸೋಲಿಗೆ ಕಾರಣವಾಯಿತು. ಹಿಂದುಗಳಲ್ಲಿರುವ ಮುಸ್ಲಿಂ ತಳಿಗಳು ಇಂತಹ ಪ್ರಯತ್ನ ಮಾಡುತ್ತಿವೆ. ರಾಹುಲ್ ಗಾಂಧಿ ತಳಿ ಯಾವುದು ಅಂತ ಸಂಶೋಧನೆ ಮಾಡಬೇಕಾಗಿದೆ. ನಮಗೆ‌ ಮೊಘಲ್‌ ಪಾಠ ಮಾಡಿದ್ದರಿಂದ ಬಹಳ ಜನರಿಗೆ ತಪ್ಪು ಮಾಹಿತಿ ಇದೆ. ಟಿಪ್ಪು ಸುಲ್ತಾನ್ ಕಾಲದಲ್ಲಿ ನರಮೇಧ ಆಗಿದೆ. ಮತ್ತೆ ಇಂಥ ‌ಜಯಂತಿ ಮಾಡಿದರೆ ಅನಾಹುತ ಗ್ಯಾರಂಟಿ ಎಂದರು.

ಬಿಎಸ್‌ವೈ, ಶೆಟ್ಟರ್‌ ಟಿಪ್ಪು ವೇಷ ಹಾಕಿದ್ರು

ಟಿಪ್ಪು ಜಯಂತಿ ಸರ್ಕಾರದಿಂದಲೇ ಆಗಬೇಕು. ಭಾರತ ಜಾತ್ಯತೀತ ದೇಶ. ಅಲ್ಪಸಂಖ್ಯಾತರು ದೇಶಕ್ಕಾಗಿ ಹೋರಾಟ ಮಾಡಿಲ್ವಾ? ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌ ಬೇಕೆಂದಾಗ ಟಿಪ್ಪು ವೇಷ ಹಾಕುತ್ತಾರೆ. ಈಗ ಮಾಡೋದು ಬೇಡವಾ?

- ವಿಜಯಾನಂದ ಕಾಶಪ್ಪನವರ್‌, ಕಾಂಗ್ರೆಸ್‌ ಶಾಸಕ

ಟಿಪ್ಪು ಸಿನ್ಮಾ ಮಾಡಿದವ,ಖಡ್ಗ ತಂದವ ಏನಾದ್ರು?

ಟಿಪ್ಪು ಜಯಂತಿ ಮಾಡಿದ ಬಳಿಕ ಸಿದ್ದು ಸರ್ಕಾರ ಗೋವಿಂದ ಆಯಿತು. ಟಿಪ್ಪು ಬಗ್ಗೆ ಸಿನಿಮಾ ಮಾಡಲು ಹೋಗಿ ಅವನ್ಯಾರೋ ಸುಟ್ಟುಕೊಂಡ. ಟಿಪ್ಪು ಖಡ್ಗ ತಂದ ಮಲ್ಯ ಲಂಡನ್‌ಗೆ ಓಡಿಹೋದ. ಈಗ ಸಿದ್ದು ಸರ್ಕಾರ ಕೆಡವಲು ಕಾಶಪ್ಪನವರ್‌ ಟಿಪ್ಪು ವಿಚಾರ ತಂದಿದ್ದಾರೆ.

- ಆರ್‌. ಅಶೋಕ್‌, ಪ್ರತಿಪಕ್ಷ ನಾಯಕ

ಜಯಂತಿ ಮಾಡಿದರೆ ಅನಾಹುತ ಗ್ಯಾರಂಟಿ

ಟಿಪ್ಪು ಸುಲ್ತಾನ್‌ ಕಾಲದಲ್ಲಿ ನರಮೇಧ ಆಗಿದೆ. ಟಿಪ್ಪು ಜಯಂತಿ ಈ ಹಿಂದೆ ಸಿದ್ದು ಸೋಲಿಗೆ ಕಾರಣವಾಯಿತು. ಮತ್ತೆ ಅದನ್ನು ಮಾಡಿದರೆ ಅನಾಹುತ ಗ್ಯಾರಂಟಿ. ಹಿಂದುಗಳಲ್ಲಿರುವ ಮುಸ್ಲಿಂ ತಳಿಗಳು ಇಂತಹ ಯತ್ನ ಮಾಡುತ್ತಿವೆ.

- ಬಸನಗೌಡ ಯತ್ನಾಳ್‌, ಶಾಸಕ