Ticket Fight: ತುಮಕೂರಲ್ಲಿ ಪ್ರಾಬಲ್ಯ ಮೆರೆಯಲು ಬಿಜೆಪಿ ರಣತಂತ್ರ
ಕಲ್ಪತರು ನಾಡು ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ ಕೊರಟಗೆರೆ ಹಾಗೂ ಪಾವಗಡ, ಮೀಸಲು ಕ್ಷೇತ್ರಗಳಾಗಿವೆ. ಮೊದಲೆಲ್ಲಾ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ತುಮಕೂರು ಜಿಲ್ಲೆಯಲ್ಲಿ ಬರ ಬರುತ್ತಾ ಜೆಡಿಎಸ್ ಹಾಗೂ ಬಿಜೆಪಿಯ ಪ್ರಾಬಲ್ಯ ಹೆಚ್ಚುತ್ತಿದೆ.
ಉಗಮ ಶ್ರೀನಿವಾಸ್
ತುಮಕೂರು (ಡಿ.03): ಕಲ್ಪತರು ನಾಡು ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ ಕೊರಟಗೆರೆ ಹಾಗೂ ಪಾವಗಡ, ಮೀಸಲು ಕ್ಷೇತ್ರಗಳಾಗಿವೆ. ಮೊದಲೆಲ್ಲಾ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ತುಮಕೂರು ಜಿಲ್ಲೆಯಲ್ಲಿ ಬರ ಬರುತ್ತಾ ಜೆಡಿಎಸ್ ಹಾಗೂ ಬಿಜೆಪಿಯ ಪ್ರಾಬಲ್ಯ ಹೆಚ್ಚುತ್ತಿದೆ. ಪ್ರಸ್ತುತ ವಿಧಾನಸಭೆಯಲ್ಲಿ ಜಿಲ್ಲೆಯಿಂದ ಅತಿ ಹೆಚ್ಚು, 5 ಮಂದಿ ಬಿಜೆಪಿ ಶಾಸಕರಿದ್ದಾರೆ. ಈ ಬಾರಿಯೂ ಜಿಲ್ಲೆಯಲ್ಲಿ ತನ್ನ ಪ್ರಾಬಲ್ಯ ಮೆರೆಯಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಈ ಮಧ್ಯೆ, ಚುನಾವಣೆ ಹತ್ತಿರವಾಗುತ್ತಿದ್ದಂತೆ ನಾಯಕರ ಪಕ್ಷಾಂತರ ಪರ್ವ ಕೂಡ ಶುರುವಾಗಿದೆ.
1. ತುಮಕೂರು ನಗರ: ಬಿಜೆಪಿ, ಕಾಂಗ್ರೆಸ್, ದಳ ತ್ರಿಕೋನ ಕದನ
ಪ್ರಸ್ತುತ ಈ ಕ್ಷೇತ್ರವನ್ನು ಬಿಜೆಪಿಯ ಜ್ಯೋತಿ ಗಣೇಶ್ ಪ್ರತಿನಿಧಿಸುತ್ತಿದ್ದು, ಈ ಬಾರಿಯೂ ಅವರಿಗೆ ಪಕ್ಷದ ಟಿಕೆಟ್ ಬಹುತೇಕ ಖಚಿತ. ಈ ಹಿಂದೆ, ಈ ಕ್ಷೇತ್ರವನ್ನು ಸತತ ನಾಲ್ಕು ಬಾರಿ ಬಿಜೆಪಿಯಿಂದ ಮಾಜಿ ಶಾಸಕ ಸೊಗಡು ಶಿವಣ್ಣ ಪ್ರತಿನಿಧಿಸಿದ್ದರು.ಮುಸ್ಲಿಂ ಸಮುದಾಯದ ಮತಗಳು ಇಲ್ಲಿ ಗಣನೀಯ ಪ್ರಮಾಣದಲ್ಲಿ ಇರುವುದರಿಂದ ಕಾಂಗ್ರೆಸ್ ಪಕ್ಷ, ತುಮಕೂರು ನಗರ ಕ್ಷೇತ್ರದ ಟಿಕೆಟ್‌ನ್ನು ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ನೀಡುತ್ತಾ ಬಂದಿದೆ. ಹೀಗಾಗಿ, ಶಿಕ್ಷಣ ಸಂಸ್ಥೆಯನ್ನು ಹೊಂದಿರುವ ಶಫಿ ಅಹಮದ್, ಅವರ ಅಳಿಯ ರಫೀಕ್ ಅಹಮದ್, ರಾರಯಂಕ್ ನಜೀರ್ ಇಲ್ಲಿಂದ ಶಾಸಕರಾಗಿದ್ದರು. ಈ ಹಿಂದೆ ಲಕ್ಷ್ಮೇನರಸಿಂಹಯ್ಯನವರು ಜನತಾದಳದಿಂದ ಗೆದ್ದು ಸಚಿವರಾಗಿದ್ದರು. ನಂತರದ ದಿನಗಳಲ್ಲಿ ಜನತಾದಳ, ಜೆಡಿಎಸ್ ಆಗಿ ಪರಿವರ್ತನೆಗೊಂಡಿದ್ದರೂ, ಈವರೆಗೆ ಜೆಡಿಎಸ್, ತುಮಕೂರು ನಗರ ವಿಧಾನಸಭಾ ಕ್ಷೇತ್ರವನ್ನು ಗೆದ್ದಿಲ್ಲ. ಸತತ ಎರಡು ಬಾರಿ ಸೋತಿರುವ ಜೆಡಿಎಸ್‌ನ ಗೋವಿಂದರಾಜು ಈ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಜೊತೆಗೆ, ಬೆಂಗಳೂರಿನ ಬೊಮ್ಮನಹಳ್ಳಿಯ ಅಟ್ಟಿಕಾ ಬಾಬು ಕೂಡ ಜೆಡಿಎಸ್ ಟಿಕೆಟ್‌ಗೆ ಪೈಪೋಟಿ ನಡೆಸುತ್ತಿದ್ದಾರೆ.
Ticket Fight: ಜೆಡಿಎಸ್-ಕೈ ನೆಲದಲ್ಲಿ ಮೊದಲ ಬಾರಿ ತ್ರಿಕೋನ ಕದನ?
2. ತುಮಕೂರು ಗ್ರಾಮಾಂತರ: ಮತ್ತೆ ಗೌರಿಶಂಕರ್, ಸುರೇಶ್‌ಗೌಡ ಫೈಟ್ ಪಕ್ಕಾ
ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಹೊಸದಾಗಿ ರೂಪುಗೊಂಡ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಸತತ ಎರಡು ಬಾರಿ ಬಿಜೆಪಿಯ ಸುರೇಶಗೌಡ ಶಾಸಕರಾಗಿದ್ದರು. ಬಳಿಕ, ಈ ಕ್ಷೇತ್ರಕ್ಕೆ ಬಂದ ಮಾಜಿ ಸಚಿವ ಸಿ.ಚೆನ್ನಿಗಪ್ಪ ಅವರ ಪುತ್ರ ಗೌರಿಶಂಕರ್, ಜೆಡಿಎಸ್‌ನಿಂದ ಗೆದ್ದು ಶಾಸಕರಾಗಿದ್ದಾರೆ. ಈ ಬಾರಿಯೂ ಜೆಡಿಎಸ್‌ನಿಂದ ಹಾಲಿ ಶಾಸಕ ಗೌರಿಶಂಕರ್ ಸ್ಪರ್ಧಿಸುವುದು ಖಚಿತ. ಬಿಜೆಪಿಯಿಂದ ಸುರೇಶಗೌಡ ಸ್ಪರ್ಧಿಸಲಿದ್ದಾರೆ. ಇನ್ನು, ಕಾಂಗ್ರೆಸ್‌ನಿಂದ ಹಲವು ಹೆಸರುಗಳು ಕೇಳಿ ಬರುತ್ತಿದ್ದು, ಈ ಪೈಕಿ ಮಾಜಿ ಶಾಸಕ ಎಚ್.ನಿಂಗಪ್ಪನವರ ಹೆಸರು ಮುಂಚೂಣಿಯಲ್ಲಿದೆ.
3. ತಿಪಟೂರು: ನಾಗೇಶ್ ವಿರುದ್ಧ ಸ್ಪರ್ಧೆಗೆ 3 ಕಾಂಗ್ರೆಸ್ಸಿಗರ ಯತ್ನ
ಪ್ರಸ್ತುತ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಎರಡು ಬಾರಿ ಶಾಸಕರಾಗಿರುವ ಬಿ.ಸಿ.ನಾಗೇಶ್, ಬಿಜೆಪಿಯಿಂದ ಮತ್ತೆ ಅದೃಷ್ಟಪರೀಕ್ಷೆಗೆ ಇಳಿಯಲಿದ್ದಾರೆ. ಕಾಂಗ್ರೆಸ್‌ನಿಂದ ಎರಡು ಬಾರಿ ಶಾಸಕರಾಗಿದ್ದ ಮಾಜಿ ಶಾಸಕ ಕೆ.ಷಡಕ್ಷರಿ, ನಗರಾಭಿವೃದ್ಧಿ ಪ್ರಾಧಿಕಾರದ ಶಶಿ ಲೋಕೇಶ್ವರ್, ಶಾಂತಕುಮಾರ್ ಸೇರಿದಂತೆ ಹಲವರು ಪಕ್ಷದ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದಾರೆ. ಇನ್ನು ಜೆಡಿಎಸ್, ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದೆ.
4. ಶಿರಾ: ಮತ್ತೆ ಬಿಜೆಪಿ ಇತಿಹಾಸ ಸೃಷ್ಟಿಸುತ್ತಾ?
ಜೆಡಿಎಸ್ ಶಾಸಕರಾಗಿದ್ದ ಬಿ.ಸತ್ಯನಾರಾಯಣ ಅವರ ನಿಧನದಿಂದ ತೆರವಾದ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿಯ ರಾಜೇಶಗೌಡ ಗೆಲ್ಲುವ ಮೂಲಕ ಶಿರಾದಲ್ಲಿ ಬಿಜೆಪಿ ಖಾತೆ ತೆರೆದಿತ್ತು. ಈ ಬಾರಿ ಕೂಡ ಬಿಜೆಪಿಯಿಂದ ರಾಜೇಶಗೌಡ ಅವರೇ ಕಣಕ್ಕಿಳಿಯಲಿದ್ದಾರೆ. ಇನ್ನು, ಕಾಂಗ್ರೆಸ್‌ನಿಂದ ಪಕ್ಷದ ಅತ್ಯಂತ ಹಿರಿಯರಾದ ಜಯಚಂದ್ರ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಸಾಸಲು ಸತೀಶ್ ಕೂಡ ಕಾಂಗ್ರೆಸ್ ಟಿಕೆಟ್‌ಗೆ ಯತ್ನ ನಡೆಸಿದ್ದಾರೆ. ಇನ್ನು, ಜೆಡಿಎಸ್‌ನಿಂದ ಎಸ್.ಆರ್.ಗೌಡ, ನಿವೃತ್ತ ಅಧಿಕಾರಿ ಶಿವರಾಮೇಗೌಡ, ಆರ್.ಉಗ್ರೇಶ್, ಸತ್ಯಪ್ರಕಾಶ್, ಸಿ.ಆರ್. ಉಮೇಶ್, ರವಿಕುಮಾರ್ ಆಕಾಂಕ್ಷಿಗಳಾಗಿದ್ದಾರೆ. ಇಲ್ಲಿ ತ್ರಿಕೋನ ಸ್ಪರ್ಧೆ ನಿಶ್ಚಿತ.
5. ಚಿಕ್ಕನಾಯಕನಹಳ್ಳಿ: ಮಾಧುಸ್ವಾಮಿ ಟಿಕೆಟ್ ಮೇಲೆ ಕಿರಣ್ ಕಣ್ಣು
ಪ್ರಸ್ತುತ ಸಚಿವ ಮಾಧುಸ್ವಾಮಿಯವರು ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದು, ಬಿಜೆಪಿಯಿಂದ ಪುನರಾಯ್ಕೆ ಬಯಸಿದ್ದಾರೆ. ಇವರಿಗೆ ಕಿರಣಕುಮಾರ್ ಸ್ಪರ್ಧೆಯೊಡ್ಡುತ್ತಿದ್ದು, ಬಿಜೆಪಿ ಟಿಕೆಟ್‌ಗೆ ಯತ್ನ ನಡೆಸಿದ್ದಾರೆ. ಜೆಡಿಎಸ್‌ನಿಂದ ಮಾಜಿ ಶಾಸಕ ಸುರೇಶಬಾಬು ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್‌ನಿಂದ ಹಲವರ ಹೆಸರುಗಳು ಚಾಲ್ತಿಯಲ್ಲಿವೆ. ಆ ಪೈಕಿ, ಎಂಟಿಬಿ ಅವರ ಅಳಿಯ ಧನಂಜಯ, ಜಗದೀಶ್, ವೈ.ಸಿ.ಸಿದ್ದರಾಮಯ್ಯ ಮುಂಚೂಣಿಯಲ್ಲಿದ್ದಾರೆ. ಜೊತೆಗೆ, ಬಿಜೆಪಿಯಿಂದ ಟಿಕೆಟ್ ವಂಚಿತರಾದವರು ಕೂಡ ಕಾಂಗ್ರೆಸ್‌ಗೆ ಬಂದು, ಪಕ್ಷದಿಂದ ಸ್ಪರ್ಧಿಸಬಹುದು ಎಂಬ ಗುಸು ಗುಸು ಕೇಳಿ ಬರುತ್ತಿದೆ.
6. ತುರುವೇಕೆರೆ: ಮತ್ತೆ ಹಳಬರ ನಡುವೆ ಸ್ಪರ್ಧೆ ಸಂಭವ
ಬಿಜೆಪಿಯ ಹಾಲಿ ಶಾಸಕ ಮಸಾಲ ಜಯರಾಮ್, ಈ ಕ್ಷೇತ್ರದಲ್ಲಿ ಮತ್ತೆ ಬಿಜೆಪಿಯಿಂದ ಟಿಕೆಟ್ ಬಯಸಿದ್ದಾರೆ. ಜೆಡಿಎಸ್‌ನಿಂದ ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್‌ನಿಂದ ಬೆಮಲ್ ಕಾಂತರಾಜು ಅವರ ಹೆಸರು ಮುಂಚೂಣಿಯಲ್ಲಿದೆ. ಅವರು ಮೂಲತ: ಜೆಡಿಎಸ್‌ನಿಂದ ವಿಧಾನ ಪರಿಷತ್ ಸದಸ್ಯರಾಗಿದ್ದರು. ವರಿಷ್ಠರ ಮುನಿಸಿನಿಂದಾಗಿ ಜೆಡಿಎಸ್ ತೊರೆದು, ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಇನ್ನು, ಕಾಂಗ್ರೆಸ್‌ನಲ್ಲಿ ಹೊರಗಿನಿಂದ ಬಂದವರಿಗೆ ಟಿಕೆಟ್ ಕೊಡಬೇಡಿ. ಪಕ್ಷದಲ್ಲಿದ್ದವರಿಗೆ ಕೊಡಿ ಎಂಬ ಕೂಗು ಕೇಳಿ ಬಂದಿದೆ. ಹೀಗಾಗಿ, ಕಾಂಗ್ರೆಸ್‌ನಿಂದ ಎನ್.ಆರ್. ಜಯರಾಮ್, ಗೀತಾ ರಾಜಣ್ಣ, ವಸಂತಕುಮಾರ್, ಸುಬ್ರಹ್ಮಣ್ಯ ಶ್ರೀಕಂಠೇಗೌಡ ಅವರ ಹೆಸರುಗಳು ಕೂಡ ಕೇಳಿ ಬರುತ್ತಿವೆ.
7. ಮಧುಗಿರಿ: ವೀರಭದ್ರಯ್ಯ ವರ್ಸಸ್ ರಾಜಣ್ಣ?
ಏಕಶಿಲಾ ಬೆಟ್ಟಖ್ಯಾತಿಯ ಮಧುಗಿರಿಯಲ್ಲಿ ಜೆಡಿಎಸ್‌ನ ಎಂ.ವಿ.ವೀರಭದ್ರಯ್ಯ ಹಾಲಿ ಶಾಸಕರು. ಜೆಡಿಎಸ್‌ನಿಂದ ಅವರೇ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್. ರಾಜಣ್ಣ ಸ್ಪರ್ಧಿಸಲಿದ್ದಾರೆ. ಬಿಜೆಪಿಯಿಂದ ಭೀಮಣ್ಣ ಕುಂಟೆ, ಹನುಮಂತೇಗೌಡ ಅವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
8. ಕೊರಟಗೆರೆ: ಮತ್ತೆ ಪರಮೇಶ್ವರ್- ಸುಧಾಕರ್ ಲಾಲ್ ಕದನ
ಕೆಪಿಸಿಸಿ ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿರುವ, ಹಾಲಿ ಶಾಸಕರಾಗಿರುವ ಡಾ.ಜಿ.ಪರಮೇಶ್ವರ್, ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿ. ಜೆಡಿಎಸ್‌ನಿಂದ ಮಾಜಿ ಶಾಸಕ ಸುಧಾಕರಲಾಲ್ ಸ್ಪರ್ಧಿ. ಬಿಜೆಪಿಯಿಂದ ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಹೆಸರು ದೊಡ್ಡಮಟ್ಟದಲ್ಲಿ ಕೇಳಿ ಬರುತ್ತಿದೆ. ಉಳಿದಂತೆ ವೈ.ಎಚ್. ಹುಚ್ಚಯ್ಯ, ಮುನಿಯಪ್ಪ, ಗಂಗಹನುಮಯ್ಯ, ಡಾ.ಲಕ್ಷ್ಮೇಕಾಂತ್ ಹೆಸರುಗಳು ಕೂಡ ಮುಂಚೂಣಿಯಲ್ಲಿವೆ. ಇಲ್ಲೂ ಕೂಡ ತ್ರಿಕೋನ ಸ್ಪರ್ಧೆ ಏರ್ಪಡುವ ಸಂಭವವಿದೆ.
9. ಗುಬ್ಬಿ : ಜೆಡಿಎಸ್ ಶಾಸಕನಿಂದ ಕಾಂಗ್ರೆಸ್ ಟಿಕೆಟ್‌ಗೆ ಯತ್ನ!
ಜೆಡಿಎಸ್‌ನಿಂದ ನಾಲ್ಕನೇ ಬಾರಿ ಶಾಸಕರಾಗಿರುವ ಗುಬ್ಬಿಯ ಎಸ್.ಆರ್. ಶ್ರೀನಿವಾಸ್, ಈ ಬಾರಿ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಜೆಡಿಎಸ್ ವರಿಷ್ಠರಿಂದ ಈಗಾಗಲೇ ಅಂತರ ಕಾಯ್ದುಕೊಂಡಿದ್ದು, ಕಾಂಗ್ರೆಸ್ ಮುಖಂಡರ ಜೊತೆ ಸಂಪರ್ಕದಲ್ಲಿದ್ದಾರೆ. ಹೀಗಾಗಿ, ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಸಾಧ್ಯತೆ ಹೆಚ್ಚು. ಇದಕ್ಕೆ ಪುಷ್ಠಿ ಕೊಡುವಂತೆ ಭಾರತ ಜೋಡೋ ಯಾತ್ರೆ ಜಿಲ್ಲೆಗೆ ಬಂದಾಗ ರಾಹುಲ್‌ಗಾಂಧಿಯವರನ್ನು ಸ್ವಾಗತಿಸಲು ಶ್ರೀನಿವಾಸ್ ಹೋಗಿದ್ದರು. ಜೆಡಿಎಸ್, ಈಗಾಗಲೇ ನಾಗರಾಜು ಅವರಿಗೆ ಟಿಕೆಟ್ ಎಂದು ಘೋಷಿಸಿದೆ. ಬಿಜೆಪಿಯಲ್ಲಿ ಮೂರು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದಿಲೀಪ್, ಬೆಟ್ಟಸ್ವಾಮಿ ಹಾಗೂ ಚಂದ್ರಶೇಖರ ಬಾಬು ಬಿಜೆಪಿ ಟಿಕೆಟ್‌ಗೆ ಯತ್ನಿಸುತ್ತಿದ್ದಾರೆ.
10. ಕುಣಿಗಲ್: ಮುದ್ದಹನುಮೇಗೌಡಗೆ ಬಿಜೆಪಿ ಟಿಕೆಟ್?
ಮೂಡಲ್ ಕುಣಿಗಲ್ ಕೆರೆಯಿಂದ ಗಮನ ಸೆಳೆದಿರುವ ಕುಣಿಗಲ್‌ನಲ್ಲಿ ಕಾಂಗ್ರೆಸ್‌ನಿಂದ ಹಾಲಿ ಶಾಸಕ ಡಾ.ರಂಗನಾಥ್ ಅವರೇ ಕಣಕ್ಕಿಳಿಯಲಿದ್ದಾರೆ. ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಕೂಡ ಟಿಕೆಟ್ ಆಕಾಂಕ್ಷಿ. ಇನ್ನು, ಬಿಜೆಪಿಯಿಂದ ಮೂವರ ಹೆಸರು ಕೇಳಿ ಬರುತ್ತಿದೆ. ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಡಿ.ಕೃಷ್ಣಕುಮಾರ್ ಹಾಗೂ ರಾಜೇಶಗೌಡ ಅವರು ಬಿಜೆಪಿ ಟಿಕೆಟ್‌ಗೆ ಯತ್ನಿಸುತ್ತಿದ್ದಾರೆ. ಜೆಡಿಎಸ್‌ನಿಂದ ಡಿ.ನಾಗರಾಜಯ್ಯಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇಲ್ಲೂ ಕೂಡ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.
Ticket Fight: ಬಿಜೆಪಿ ಪಾರುಪಾತ್ಯಕ್ಕೆ ಬ್ರೇಕ್ ಹಾಕುತ್ತಾ ಕಾಂಗ್ರೆಸ್?
11. ಪಾವಗಡ: ವೆಂಕಟರಮಣಪ್ಪ ಸೋಲಿಸಲು ಬಿಜೆಪಿ, ಜೆಡಿಎಸ್ ಯತ್ನ
ಗಡಿನಾಡು ಪಾವಗಡದಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕ ವೆಂಕಟರಮಣಪ್ಪ ಟಿಕೆಟ್ ಆಕಾಂಕ್ಷಿ. ಉಳಿದಂತೆ ವೆಂಕಟರಮಣಪ್ಪ ಅವರ ಪುತ್ರ ವೆಂಕಟೇಶ್, ಕೋಟಟ್ ನರಸಪ್ಪ, ಮಾಜಿ ಸಂಸದ ಚಂದ್ರಪ್ಪ, ರಾಮಚಂದ್ರಪ್ಪ, ಗಾಯತ್ರಿಅವರ ಹೆಸರುಗಳು ಕೂಡ ಕಾಂಗ್ರೆಸ್‌ನಿಂದ ಕೇಳಿ ಬರುತ್ತಿವೆ. ಜೆಡಿಎಸ್‌ನಿಂದ ಕೆ.ಎಂ.ತಿಮ್ಮರಾಯಪ್ಪ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚು. ಕೆ.ನಾರಾಯಣಸ್ವಾಮಿ, ರಾಮಾಂಜಿನಪ್ಪ ಕೂಡ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳು. ಬಿಜೆಪಿಯಿಂದ ಕೃಷ್ಣನಾಯಕ್, ಕೊತ್ತೂರು ಹನುಮಂತರಾಯಪ್ಪ, ಶಿವಕುಮಾರ ಸಾಕೇಲ್, ಶಾಂತಕುಮಾರ್ ಅವರ ಹೆಸರುಗಳು ಕೇಳಿ ಬರುತ್ತಿವೆ.
ಹಾಲಿ ಬಲಾಬಲ
ಒಟ್ಟು ಕ್ಷೇತ್ರಗಳು: 11
ಬಿಜೆಪಿ: 5
ಕಾಂಗ್ರೆಸ್: 3
ಜೆಡಿಎಸ್: 3