ಸ್ವಪಕ್ಷೀಯರ ಮುನಿಸು ಖೂಬಾ ಲೋಕಸಭಾ ಟಿಕೆಟ್‌ಗೆ ಕತ್ತರಿ ಹಾಕುತ್ತಾ?: ಪುತ್ರನ ಕಣಕ್ಕಿಳಿಸಲು ಸಚಿವ ಖಂಡ್ರೆ ತಯಾರಿ
ಲೋಕಸಭಾ ಚುನಾವಣೆಗೆ ಇನ್ನೇನು ಒಂದೆರಡು ತಿಂಗಳು ಮಾತ್ರ ಬಾಕಿ ಇದ್ದು, ಗಡಿ ಜಿಲ್ಲೆ ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ಏರಿದೆ. ಈ ಬಾರಿಯ ಮೋದಿ ಅಲೆಯಲ್ಲಿ ಮತ್ತೆ ಬಿಜೆಪಿ ಗೆಲ್ಲುತ್ತಾ, ಹ್ಯಾಟ್ರಿಕ್ ಹೊಡೆಯುತ್ತಾ ಎಂಬಿತ್ಯಾದಿ ಚರ್ಚೆಗಿಂತ ಕೇಂದ್ರದಲ್ಲಿ ಸಚಿವರಾಗಿರುವ ಹಾಲಿ ಸಂಸದ ಭಗವಂತ ಖೂಬಾ ಅವರಿಗೆ ಟಿಕೆಟ್ ಸಿಗುತ್ತಾ, ಇಲ್ಲವಾ ಎಂಬ ಚರ್ಚೆಯ ಸದ್ದೇ ಹೆಚ್ಚಾಗಿ ಕೇಳಿಸುತ್ತಿದೆ.
ಅಪ್ಪಾರಾವ್ ಸೌದಿ
ಬೀದರ್ (ಜ.26): ಲೋಕಸಭಾ ಚುನಾವಣೆಗೆ ಇನ್ನೇನು ಒಂದೆರಡು ತಿಂಗಳು ಮಾತ್ರ ಬಾಕಿ ಇದ್ದು, ಗಡಿ ಜಿಲ್ಲೆ ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ಏರಿದೆ. ಈ ಬಾರಿಯ ಮೋದಿ ಅಲೆಯಲ್ಲಿ ಮತ್ತೆ ಬಿಜೆಪಿ ಗೆಲ್ಲುತ್ತಾ, ಹ್ಯಾಟ್ರಿಕ್ ಹೊಡೆಯುತ್ತಾ ಎಂಬಿತ್ಯಾದಿ ಚರ್ಚೆಗಿಂತ ಕೇಂದ್ರದಲ್ಲಿ ಸಚಿವರಾಗಿರುವ ಹಾಲಿ ಸಂಸದ ಭಗವಂತ ಖೂಬಾ ಅವರಿಗೆ ಟಿಕೆಟ್ ಸಿಗುತ್ತಾ, ಇಲ್ಲವಾ ಎಂಬ ಚರ್ಚೆಯ ಸದ್ದೇ ಹೆಚ್ಚಾಗಿ ಕೇಳಿಸುತ್ತಿದೆ.
ಈ ಬಾರಿಯೂ ಖೂಬಾ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿ. ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಸಂಸದ ಭಗವಂತ ಖೂಬಾ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಣ್ಣೀರು ಹಾಕಿದ್ದ ಮಾಜಿ ಸಚಿವ, ಶಾಸಕ ಪ್ರಭು ಚವ್ಹಾಣ್ ಈಗಲೂ ಖೂಬಾಗೆ ಟಿಕೆಟ್ ವಿಚಾರವಾಗಿ ಅಪಸ್ವರ ಎತ್ತಿರುವುದು, ಈ ಹಿಂದೆ ಖೂಬಾ ವಿರುದ್ಧ ಬಹಿರಂಗವಾಗಿ ಕಿಡಿ ಕಾರಿದ್ದ ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ ಒಳ ಮುನಿಸು, ಬಿಜೆಪಿಯ ಕೆಲ ಪ್ರಮುಖ ಪದಾಧಿಕಾರಿಗಳ ವಲಸೆ, ಖೂಬಾ ಟಿಕೆಟ್ ಆಕಾಂಕ್ಷೆಗೆ ತೊಡಕಾಗಿದೆ.
ಚಾಮರಾಜನಗರ ಟಿಕೆಟ್‌ಗೆ ಬಿಜೆಪಿ, ಕಾಂಗ್ರೆಸ್‌ನಲ್ಲಿ ಪೈಪೋಟಿ: ಸಿದ್ದರಾಮಯ್ಯ ಪಾಲಿಗಿದು ಪ್ರತಿಷ್ಠೆಯ ಕ್ಷೇತ್ರ!
ಬಿಜೆಪಿಯಲ್ಲಿ ಮಿಂಚಿನ ಸಂಚಾರ ಮೂಡಿಸಿದ ಕೊಳ್ಳುರ್: ಈ ಮಧ್ಯೆ, ರಾಜ್ಯ ಬಿಜೆಪಿ, ಸಂಘ ಪರಿವಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಬಿಜೆಪಿಯ ಹಿರಿಯ ಮುಖಂಡ ಗುರುನಾಥ ಕೊಳ್ಳುರ್ ತಾವೂ ಟಿಕೆಟ್ ಆಕಾಂಕ್ಷಿ ಎನ್ನುತ್ತಿದ್ದಾರೆ. ಇವರ ಜೊತೆ, ಪಕ್ಷದ ಹಿರಿಯ ನಾಯಕ ಸುಭಾಷ ಕಲ್ಲೂರ್ ಅವರನ್ನೊಳಗೊಂಡ 10ಕ್ಕೂ ಹೆಚ್ಚು ಟಿಕೆಟ್ ಆಕಾಂಕ್ಷಿಗಳು, ಮಠಾಧೀಶರ ಸಹಕಾರದೊಂದಿಗೆ ಅಟಲ್ ಬಿಹಾರಿ ವಾಜಪೇಯಿ ಫೌಂಡೇಶನ್ ಹುಟ್ಟು ಹಾಕಿ ಖೂಬಾ ವಿರುದ್ಧ ತೊಡೆ ತಟ್ಟುತ್ತಿದ್ದಾರೆ. ಸುಭಾಷ ಕಲ್ಲೂರ್ ಸಹ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.
ಖರ್ಗೆ ಅತ್ಯಾಪ್ತ ಪಾಟೀಲ್ ‘ಕೈ’ ಟಿಕೆಟ್‌ನಿಂದ ದೂರ ಸರಿದ್ರಾ: ಕಮಲ ಪಾಳಯದಲ್ಲಷ್ಟೇ ಅಲ್ಲ, ಕಾಂಗ್ರೆಸ್‌ನಲ್ಲಿಯೂ ಟಿಕೆಟ್‌ಗಾಗಿ ಫೈಟ್ ಇದೆ. ಇಲ್ಲಿ ಮತ್ತೊಮ್ಮೆ ತಮ್ಮ ಸಾಮ್ರಾಜ್ಯ ಸ್ಥಾಪಿಸಲು ಕಾಂಗ್ರೆಸ್ ನಾಯಕರು ಕಸರತ್ತು ಆರಂಭಿಸಿದ್ದಾರೆ. ಮಾಜಿ ಸಚಿವ, ಜಿಲ್ಲೆಯ ಹಿರಿಯ ರಾಜಕಾರಣಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅತ್ಯಾಪ್ತ, ರಾಜಶೇಖರ ಪಾಟೀಲ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸಲು ಯತ್ನ ನಡೆಯುತ್ತಿದೆ ಎನ್ನಲಾಗಿತ್ತು. ಆದರೆ, ರಾಜ್ಯ ರಾಜಕಾರಣದಿಂದ ದೂರ ಸರಿಯಬೇಕಾದೀತು ಎಂಬ ಅನುಮಾನದಿಂದಲೋ ಏನೋ ಪಾಟೀಲ್ ಅವರು ಇದೀಗ ಟಿಕೆಟ್ ಮಾತಿನಿಂದ ದೂರವುಳಿದಂತೆ ಕಾಣಿಸುತ್ತಿದ್ದಾರೆ. ಆದರೂ, ಖರ್ಗೆ ಸೂಚಿಸಿದರೆ ಕೊನೆ ಕ್ಷಣದಲ್ಲಿ ಅಖಾಡಕ್ಕೆ ಇಳಿಯುವುದರಲ್ಲಿ ಅನುಮಾನವಿಲ್ಲ.
ಲೋಕಸಭೆ ಚುನಾವಣೆ ಟಿಕೆಟ್ ಫೈಟ್: ಕೋಲಾರ ಟಿಕೆಟ್ ಮುನಿಯಪ್ಪಗೋ ಅಥವಾ ಪುತ್ರ, ಅಳಿಯ
ಸಚಿವ ಈಶ್ವರ ಖಂಡ್ರೆ ಅವರ ಹೆಸರು ಲೋಕಸಭೆ ಸ್ಪರ್ಧೆಗಾಗಿ ಮತ್ತೊಮ್ಮೆ ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಉತ್ತಮ ಹೆಸರು ಮಾಡಿರುವ ಖಂಡ್ರೆ, ತಾವು ಕೇಂದ್ರ ರಾಜಕಾರಣಕ್ಕೆ ಇಳಿಯುವ ಬದಲಿಗೆ ತಮ್ಮ ಪುತ್ರ ಸಾಗರ ಖಂಡ್ರೆಯನ್ನು ಕಣಕ್ಕೆ ಇಳಿಸುವ ಸಾಧ್ಯತೆಗಳನ್ನು ಮುಂದಿಟ್ಟುಕೊಂಡು ಪುತ್ರನನ್ನು ಕ್ಷೇತ್ರದಾದ್ಯಂತ ಪ್ರಚಾರಕ್ಕೆ ಇಳಿಸಿದ್ದಾರೆ. ಬಿಜೆಪಿಗೆ ಎಲ್ಲ ರೀತಿಯಿಂದಲೂ ಪ್ರಬಲ ಸ್ಪರ್ಧೆ ನೀಡಬೇಕಾದರೆ ಇಲ್ಲಿ ಹುಮನಾಬಾದ್‌ನ ಪಾಟೀಲ್ ಇಲ್ಲವೇ ಭಾಲ್ಕಿಯ ಖಂಡ್ರೆ ಕುಟುಂಬವೇ ಫಿಟ್ ಎನ್ನುವುದು ಸ್ಪಷ್ಟವಾಗಿದ್ದರೂ ಕೊನೆ ಕ್ಷಣದಲ್ಲಿ ಜಿಲ್ಲೆಯಲ್ಲಿ ಗಮನಾರ್ಹವಾಗಿರುವ ಮರಾಠಾ ಸಮುದಾಯ ಅಥವಾ ಅಲ್ಪಸಂಖ್ಯಾತರ ಪೈಕಿ ಯಾರಿಗಾದರೂ ಟಿಕೆಟ್ ನೀಡಿದರೆ ಅಚ್ಚರಿಯೇನಿಲ್ಲ.