ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಚುನಾವಣಾ ಆಖಾಡಕ್ಕಿಳಿಯಲು ಆಕಾಂಕ್ಷಿ ಅಭ್ಯರ್ಥಿಗಳು ತೆರೆಮರೆಯಲ್ಲಿ ತೀವ್ರ ಕಸರತ್ತು ನಡೆಸಿದ್ದಾರೆ. 

ಸ್ಕಂದಕುಮಾರ್ ಬಿ.ಎಸ್

ಕೋಲಾರ (ಜ.17): ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಚುನಾವಣಾ ಆಖಾಡಕ್ಕಿಳಿಯಲು ಆಕಾಂಕ್ಷಿ ಅಭ್ಯರ್ಥಿಗಳು ತೆರೆಮರೆಯಲ್ಲಿ ತೀವ್ರ ಕಸರತ್ತು ನಡೆಸಿದ್ದಾರೆ. ಬಿಜೆಪಿ ಜೊತೆ ಜೆಡಿಎಸ್‌ ಮೈತ್ರಿ ಮಾಡಿಕೊಂಡಿರುವುದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ- ಜೆಡಿಎಸ್ ಮೈತ್ರಿಕೂಟದ ನಡುವೆ ನೇರ ಹಣಾಹಣಿ ನಡೆಯಲಿದೆ. ಕೋಲಾರ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ. 1991ರಿಂದ ಸತತ 7 ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಕೆ.ಎಚ್.ಮುನಿಯಪ್ಪ ಜಯಗಳಿಸುತ್ತಾ ಬಂದಿದ್ದರು. 

2 ಬಾರಿ ಕೇಂದ್ರದಲ್ಲಿ ಸಚಿವರೂ ಆಗಿದ್ದರು. ಆದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಕಿತ್ತಾಟದ ಪರಿಣಾಮ ಕೆ.ಎಚ್.ಮುನಿಯಪ್ಪ ಸೋಲು ಅನುಭವಿಸಬೇಕಾಯಿತು. ಕಾಂಗ್ರೆಸ್‌ನ ಒಂದು ಬಣ ಶತಾಯಗತಾಯ ಮುನಿಯಪ್ಪ ಅವರನ್ನು ಸೋಲಿಸಲೇಬೇಕು ಎಂದು ಪಣತೊಟ್ಟು ಬಿಜೆಪಿಯ ಎಸ್. ಮುನಿಸ್ವಾಮಿ ಅವರನ್ನು ಪರೋಕ್ಷವಾಗಿ ಬೆಂಬಲಿಸಿತು ಎಂಬ ಆರೋಪಗಳು ಕೇಳಿ ಬಂದವು. ಇದರಿಂದಾಗಿ ಮೊದಲ ಬಾರಿಗೆ ಬಿಜೆಪಿ ಈ ಕ್ಷೇತ್ರವನ್ನು ತನ್ನ ಮಡಿಲಿಗೆ ಹಾಕಿಕೊಂಡಿತು. ಆ ಮೂಲಕ ಕಾಂಗ್ರೆಸ್‌ಗೆ ಬಿಗ್‌ ಶಾಕ್‌ ನೀಡಿತು.

ಹಾನಗಲ್‌ ರೇಪ್‌ ಕೇಸಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ

ಆಕಾಂಕ್ಷಿಗಳ ಪಟ್ಟಿಯಲ್ಲಿ ಮುನಿಯಪ್ಪ ಪುತ್ರ, ಅಳಿಯನ ಹೆಸರು: ಈ ಬಾರಿ ಕಾಂಗ್ರೆಸ್ ನಿಂದ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ಮತ್ತೆ ಕಣಕ್ಕಿಳಿಸಲು ಯೋಚಿಸಲಾಗುತ್ತಿದೆ. ಆದರೆ, ತಮ್ಮ ಮಗ ನರಸಿಂಹರಾಜು ಅವರನ್ನು ಕಣಕ್ಕಿಳಿಸಲು ಮುನಿಯಪ್ಪ ಅವರು ಉತ್ಸುಕತೆ ತೋರುತ್ತಿದ್ದಾರೆ ಎನ್ನಲಾಗುತ್ತಿದೆ. ಇದೇ ವೇಳೆ, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಲಕ್ಕೂರು ನಾರಾಯಣಸ್ವಾಮಿ, ದಲಿತ ಮುಖಂಡ ಸಿ.ಎಂ.ಮುನಿಯಪ್ಪ, ಡಾ.ಮುದ್ದುಮೋಹನ್ ಹಾಗೂ ಕೆ.ಎಚ್.ಮುನಿಯಪ್ಪ ಅವರ ಅಳಿಯ ಚಿಕ್ಕಪೆದ್ದನ್ನ ಅವರ ಹೆಸರುಗಳು ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿ ಬರುತ್ತಿವೆ. ಕಾಂಗ್ರೆಸ್ ಟಿಕೆಟ್‌ಗಾಗಿ ಒಟ್ಟು 11 ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಇನ್ನು, ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಬಹುತೇಕ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯೇ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಬಿಜೆಪಿಯಿಂದ ಹಾಲಿ ಸಂಸದ ಎಸ್. ಮುನಿಸ್ವಾಮಿ ಅವರೇ ಪೇವರಿಟ್‌ ಎನ್ನಲಾಗುತ್ತಿದೆ. ಈ ಮಧ್ಯೆ, ಅವರ ಬದಲಿಗೆ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕೆಂಬ ಒತ್ತಾಯ ಕೂಡ ಬಿಜೆಪಿಯೊಳಗೆ ಕೇಳಿ ಬರುತ್ತಿದೆ. ಹಾಗಾದಲ್ಲಿ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಬಿ.ವಿ.ಮಹೇಶ್ ಅವರ ಹೆಸರುಗಳು ಮುಂಚೂಣಿಯಲ್ಲಿವೆ.

ಗ್ಯಾರಂಟಿ ಟೀಕಿಸಿದ್ದ ಪ್ರಧಾನಿ ಮೋದಿಯಿಂದ್ಲೇ ಈಗ ಗ್ಯಾರಂಟಿ ಪ್ರಚಾರ: ಡಿಕೆಶಿ ವ್ಯಂಗ್ಯ

ಒಂದು ವೇಳೆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಲ್ಲಿ, ಬಂಗಾರಪೇಟೆಯ ಮಲ್ಲೇಶ್ ಮುನಿಸ್ವಾಮಿ ಅಥವಾ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಅವರು ಜೆಡಿಎಸ್‌ನಿಂದ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಇದರ ಜೊತೆಗೆ ದೇವನಹಳ್ಳಿ ನಿಸರ್ಗ ನಾರಾಯಣಸ್ವಾಮಿ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಬಿಜೆಪಿ ತನ್ನ ಕ್ಷೇತ್ರವನ್ನು ಉಳಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರ ಭ್ರಷ್ಟಾಚಾರರಹಿತ ಸರ್ಕಾರದ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದೆ. ಇದೇ ವೇಳೆ, ಈಗ ರಾಜ್ಯದಲ್ಲಿ ತಮ್ಮದೇ ಸರ್ಕಾರವಿದೆ. ಗ್ಯಾರಂಟಿ ಯೋಜನೆಗಳು ಜನರನ್ನು ತಲುಪುತ್ತಿವೆ. ಹೀಗಾಗಿ, ಕ್ಷೇತ್ರವನ್ನು ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂಬುದು ‘ಕೈ’ ನಾಯಕರ ಲೆಕ್ಕಾಚಾರ.