ಬೆಂಗಳೂರಿನಲ್ಲಿ ಮತ್ತೆ 3 'ನಮ್ಮ ಮೆಟ್ರೋ' ಮಾರ್ಗ: ಸರ್ಕಾರಕ್ಕೆ ಪ್ರಸ್ತಾವ
ನಗರದಲ್ಲಿ ಎರಡು ಹಂತದಲ್ಲಿ ‘ನಮ್ಮ ಮೆಟ್ರೋ’ ಕಾಮಗಾರಿ ನಡೆಯುತ್ತಿರುವ ಬೆನ್ನಲ್ಲಿಯೇ ಐಟಿ ಕಾರಿಡಾರ್ ಸಂಪರ್ಕಿಸುವ ಸುಮಾರು 77 ಕಿಲೋ ಮೀಟರ್ ಉದ್ದದ ಮೂರು ಮಾರ್ಗಗಳ ಪ್ರಸ್ತಾವನೆಯನ್ನು ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ಸರ್ಕಾರದ ಮುಂದಿರಿಸಿದೆ.
ಬೆಂಗಳೂರು (ಜೂ.22): ನಗರದಲ್ಲಿ ಎರಡು ಹಂತದಲ್ಲಿ ‘ನಮ್ಮ ಮೆಟ್ರೋ’ ಕಾಮಗಾರಿ ನಡೆಯುತ್ತಿರುವ ಬೆನ್ನಲ್ಲಿಯೇ ಐಟಿ ಕಾರಿಡಾರ್ ಸಂಪರ್ಕಿಸುವ ಸುಮಾರು 77 ಕಿಲೋ ಮೀಟರ್ ಉದ್ದದ ಮೂರು ಮಾರ್ಗಗಳ ಪ್ರಸ್ತಾವನೆಯನ್ನು ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ಸರ್ಕಾರದ ಮುಂದಿರಿಸಿದೆ. ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಬಿಎಂಆರ್‌ಸಿಎಲ್ ಸಭೆಯಲ್ಲಿ ಬಿಎಂಆರ್‌ಸಿಎಲ್ ಅಧ್ಯಕ್ಷ ಅಂಜುಂ ಪರ್ವೇಜ್ ಅವರು ಈ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವೈಟ್‌ಫೀಲ್ಡ್‌ನಿಂದ ಕಾಟಮನಲ್ಲೂರ್ ಗೇಟ್ ಮೂಲಕ ಹೊಸಕೋಟೆವರೆಗಿನ 17 ಕಿ.ಮೀ., ಒಳ ವರ್ತುಲ ರಸ್ತೆ (ಇನ್ನರ್ ರಿಂಗ್‌ರೋಡ್) ಬಳಿ 35 ಕಿ.ಮೀ. ಉದ್ದ, ಹಾಗೂ ಹಳೆ ವಿಮಾನ ನಿಲ್ದಾಣ ರಸ್ತೆಯಿಂದ ಮಾರತಹಳ್ಳಿ ಅಂಡರ್‌ಪಾಸ್-ಕಾಡುಗೋಡಿವರೆಗೆ ಸುಮಾರು 25 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ರೂಪಿಸಲು ಸಭೆಯಲ್ಲಿ ಪ್ರಸ್ತಾವನೆ ಇಡಲಾಗಿದೆ ಎನ್ನಲಾಗಿದೆ. ಈ ಮಾರ್ಗಗಳ ಕುರಿತು ಸಮೀಕ್ಷೆ ಹಾಗೂ ಸಮಗ್ರ ಯೋಜನಾ ವರದಿ ರೂಪಿಸುವ ಕಾರ್ಯ ಇನ್ನಷ್ಟೇ ಆಗಬೇಕಿದೆ.
ಬಿಬಿಎಂಪಿ, ಬಿಡಿಎ ಕಾಮಗಾರಿ ತನಿಖೆಗೆ ವಿಶೇಷ ತಂಡ: ಡಿ.ಕೆ.ಶಿವಕುಮಾರ್
ಪ್ರಸ್ತುತ ಮೆಟ್ರೋ ಮೂರನೇ ಹಂತದ ಯೋಜನೆ ಜೆ.ಪಿ.ನಗರ- ಕೆಂಪಾಪುರ ಕೆರೆ ಹಾಗೂ ಹೊಸಹಳ್ಳಿ-ಕಡಬಗೆರೆ ಮಾರ್ಗದ ಬಗ್ಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಎರಡನೇ ಹಂತದ ಯೋಜನೆಗಳಾದ ಹಳದಿ ಮಾರ್ಗದ ಆರ್.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗ ವರ್ಷಾಂತ್ಯಕ್ಕೆ ಜನಸಂಚಾರಕ್ಕೆ ಮುಕ್ತವಾಗಲಿದೆ. ಜೊತೆಗೆ ರೇಷ್ಮೆ ಕೇಂದ್ರದಿಂದ-ಕೆ.ಆರ್.ಪುರ ಮಾರ್ಗ 2024ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಬ್ರ್ಯಾಂಡ್ ಬೆಂಗಳೂರಿಗೆ ಸುರಂಗ ರಸ್ತೆ ಪ್ರಸ್ತಾಪ: ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆ ಹಾಗೂ ಭವಿಷ್ಯದ ದೃಷ್ಟಿಯಿಂದ ಕೇಂದ್ರ ಭಾಗದಿಂದ ನಗರ ಹೊರ ಹೋಗುವ ಎಲ್ಲ ಮಾರ್ಗಗಳಿಗೆ ಸಂಪರ್ಕ ಕಲ್ಪಿಸುವ ಸುರಂಗ ರಸ್ತೆಗಳ ನಿರ್ಮಾಣ, ಪ್ರಮುಖ ಸ್ಥಳದಲ್ಲಿ ದಿನದ 24 ಗಂಟೆ ವ್ಯಾಪಾರ ವಹಿವಾಟಿಗೆ ಅವಕಾಶ, ಮೆಟ್ರೋ ಮಾರ್ಗ ವಿಸ್ತರಣೆ, ಕೆರೆಗಳ ಶುದ್ಧಿಕರಣ, ಕಾಲಮಿತಿ ಒಳಗೆ ಯೋಜನೆಗಳ ಪೂರ್ಣಗೊಳಿಸುವುದು. ವಿಧಾನಸೌಧದಲ್ಲಿ ಬೆಂಗಳೂರು ಉಪಮುಖ್ಯಮಂತ್ರಿಯೂ ಆಗಿರುವ ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ‘ಬ್ರ್ಯಾಂಡ್ ಬೆಂಗಳೂರು’ ಕುರಿತು ಮೊದಲ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಕ್ಷೇತ್ರದ 42 ಮಂದಿ ತಜ್ಞರು, ಗಣ್ಯರು ನಗರದ ಸಮಗ್ರ ಅಭಿವೃದ್ಧಿ ಸಂಬಂಧ ನೀಡಿರುವ ಸಲಹೆಗಳಿವು.
ಪ್ರಮುಖವಾಗಿ ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸಲು ನಗರದ ಕೇಂದ್ರ ಭಾಗದಿಂದ ಹೊರ ಭಾಗಕ್ಕೆ ತೆರಳುವ ರಸ್ತೆಗಳಿಗೆ ಸಂಪರ್ಕ ಕಲ್ಪಿಸಲು ಸುರಂಗ ರಸ್ತೆಗಳ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ನಿರ್ಮಾಣಕ್ಕೆ ಸರ್ಕಾರ ಹಣ ನೀಡಬಾರದು, 50ರಿಂದ 60 ವರ್ಷ ಗುತ್ತಿಗೆ ಆಧಾರದಲ್ಲಿ ಖಾಸಗಿ ಕಂಪನಿಗಳೇ ಸುರಂಗ ರಸ್ತೆ ನಿರ್ಮಿಸಲಿವೆ. ಗುತ್ತಿಗೆ ಅವಧಿ ಮುಕ್ತಾಯಗೊಂಡ ಬಳಿಕ ಸರ್ಕಾರ ನಿರ್ವಹಣೆ ಮಾಡಬಹುದು ಎಂಬ ಸಲಹೆ ನೀಡಿದರು.
ಅಕ್ಕಿಭಾಗ್ಯ ಕಾಂಗ್ರೆಸ್ ಸ್ವಯಂಕೃತ ಅಪರಾಧ, ಕೇಂದ್ರದ ಮೇಲೆ ಗೂಬೆ ಕೂರಿಸಲೆತ್ನ: ಎಚ್‌ಡಿಕೆ
ನಗರ ಕೆರೆಗಳನ್ನು ಶುದ್ಧಿಕರಣವನ್ನು ಖಾಸಗಿ ಸಂಸ್ಥೆಗಳು ಮಾಡಲಿದ್ದು, ಇದಕ್ಕೆ ಆಗುವ ವೆಚ್ಚವನ್ನು ಖಾಸಗಿ ಸಂಸ್ಥೆಗಳೇ ಭರಿಸಲಿವೆ. ಸೇವೆ ಮಾಡುವುದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಉದ್ಯಮಿಗಳು ಹೇಳಿರುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಸಭೆಯಲ್ಲಿ ಸಚಿವರಾದ ಕೃಷ್ಣಬೈರೇಗೌಡ, ಬೈರತಿ ಸುರೇಶ್, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್, ನಿವೃತ್ತ ಐಎಎಸ್ ಅಧಿಕಾರಿಗಳಾದ ಬಿ ಎಸ್ ಪಾಟೀಲ್, ಸಿದ್ದಯ್ಯ, ರವಿಚಂದ್ರ ಮೊದಲಾದವರಿದ್ದರು.