‘ಇಂದು ಯಾರು ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೋ ಆ ಮಹಾನುಭಾವರೇ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ತೆಗೆದರು’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸದೆ ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರು: ‘ಇಂದು ಯಾರು ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೋ ಆ ಮಹಾನುಭಾವರೇ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ತೆಗೆದರು’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸದೆ ಅಸಮಾಧಾನ ಹೊರಹಾಕಿದ್ದಾರೆ.

‘ಸತ್ಯಕ್ಕೆ ಬೆಲೆ ಇದೆ. ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಒಂದಲ್ಲಾ ಒಂದು ದಿನ ಅದರ ಹೊರೆ ಹೊರಲೇಬೇಕು. ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ, ಅದು ದೈವದಾಟ’ ಎಂದೂ ಅವರು ಕಾಂಗ್ರೆಸ್‌ ಪಕ್ಷದಲ್ಲಿನ ಬೆಳವಣಿಗೆಗಳ ಕುರಿತು ಪರೋಕ್ಷವಾಗಿ ಹೇಳಿದ್ದಾರೆ.

ಪಕ್ಷದ ಬೆಳ್ಳಿಹಬ್ಬದ ಪ್ರಯುಕ್ತ ಜೆಡಿಎಸ್‌ ರಾಜ್ಯ ಕಚೇರಿ ಆವರಣದಲ್ಲಿ ಶುಕ್ರವಾರ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದರು.

ಈ ಹಿಂದೆ ಕುಮಾರಸ್ವಾಮಿ ಅವರು 14-15 ತಿಂಗಳ ಆಡಳಿತದಲ್ಲಿ ರಾಜ್ಯದ ರೈತರ 26 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಿದರು. ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ದುರಂತವೆಂದರೆ, ಅಂದಿನ ಸರ್ಕಾರ ತೆಗೆದವರು ಇಂದು ಮುಖ್ಯಮಂತ್ರಿಯಾಗಿರುವ ಮಹಾನುಭಾವರೇ. ಅವರು 18 ಮಂದಿ ಶಾಸಕರನ್ನು ದೆಹಲಿಗೆ ಕಳುಹಿಸಿದ್ದರು ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿದರು.

ನನ್ನಲ್ಲಿ ಹೋರಾಡುವ ಶಕ್ತಿ ಇದೆ:

ಎಚ್‌.ಡಿ.ದೇವೇಗೌಡರು ಮುಗಿದೇ ಹೋದರು ಎಂದು ಅನೇಕರು ತಿಳಿದುಕೊಂಡಿದ್ದರು. ನನಗೆ ಏನೂ ಆಗಿಲ್ಲ. ನನ್ನಲ್ಲಿ ಪಕ್ಷಕ್ಕಾಗಿ ಹೋರಾಟ ಮಾಡುವ ಶಕ್ತಿ ಇದೆ. ಎರಡು-ಮೂರು ದಿನಕೊಮ್ಮೆ ಡಯಾಲಿಸಿಸ್‌ ಮಾಡುತ್ತಾರೆ. ಅದು ದೊಡ್ಡ ವಿಷಯವಲ್ಲ. ಈ ರಾಜ್ಯದಲ್ಲಿ ನಾನು ಏನು ಮಾಡಿದ್ದೇನೆ, ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಸವಿಸ್ತಾರವಾಗಿ ಮಾತನಾಡುವ ಶಕ್ತಿಯನ್ನು ದೇವರು ನನಗೆ ಕೊಟ್ಟಿದ್ದಾನೆ. ಆ ಕೆಲಸವನ್ನು ನಾನು ಮಾಡುತ್ತೇನೆ ಎಂದರು.

ಮತ್ತೆ ರಾಜ್ಯದಲ್ಲಿ ಪಕ್ಷ ತಲೆ ಎತ್ತಿ ನಿಲ್ಲಬೇಕು:

ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ ಪಕ್ಷ ಮತ್ತೊಮ್ಮೆ ಈ ರಾಜ್ಯದಲ್ಲಿ ತಲೆ ಎತ್ತಿ ನಿಲ್ಲಬೇಕು. ನಾವು ಎನ್‌ಡಿಎ ಮೈತ್ರಿಕೂಟದಲ್ಲಿ ಇದ್ದೇವೆ. ಇದರಲ್ಲಿ ಏನೂ ಮುಚ್ಚುಮರೆಯಿಲ್ಲ. ಕುಮಾರಸ್ವಾಮಿ ಅವರು ಈಗ ಕೇಂದ್ರ ಮಂತ್ರಿಯಾಗಿದ್ದಾರೆ. ಈ ಪಕ್ಷದ ನಾಯಕತ್ವ ವಹಿಸಿ ಎರಡು ಬಾರಿ ಮುಖ್ಯಮಂತ್ರಿ ಆಗಿ ಅನುಭವ ಪಡೆದಿದ್ದಾರೆ. ಈ ರಾಜ್ಯದ ಮೂಲೆ ಮೂಲೆ ಬಗ್ಗೆ ತಿಳಿದುಕೊಂಡಿದ್ದಾರೆ. ಜನರ ಸಮಸ್ಯೆಗಳ ಬಗ್ಗೆ ಗೊತ್ತಿದೆ. ಹೀಗಾಗಿ ಅವರ ನಾಯಕತ್ವದಲ್ಲಿ ಮತ್ತೊಮ್ಮೆ ಜೆಡಿಎಸ್‌ ಈ ರಾಷ್ಟ್ರದಲ್ಲಿ ತಲೆ ಎತ್ತಿ ನಿಲ್ಲಬೇಕು ಎಂಬುದು ನನ್ನ ಆಕಾಂಕ್ಷೆ ಮತ್ತು ಅಭಿಲಾಷೆ ಎಂದು ಗೌಡರು ತಮ್ಮ ಮನದ ಇಂಗಿತ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ ಬಾಬು, ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ, ಹಿರಿಯ ಶಾಸಕ ಎ.ಮಂಜು, ಜೆಡಿಎಸ್‌ ಯುವಕ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಸೇರಿ ಪಕ್ಷದ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಮುಖಂಡರು ಉಪಸ್ಥಿತರಿದ್ದರು.

ಜೆಡಿಎಸ್‌ಗೆ ಮತ್ತೆ ಗೌಡ ರಾಷ್ಟ್ರಾಧ್ಯಕ್ಷ - ಎಚ್‌ಡಿಕೆ ರಾಜ್ಯಾಧ್ಯಕ್ಷ

ಬೆಂಗಳೂರು: ಜೆಡಿಎಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಎಚ್‌.ಡಿ.ದೇವೇಗೌಡ ಮತ್ತು ರಾಜ್ಯಾಧ್ಯಕ್ಷರಾಗಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮುಂದುವರೆಸಲು ಜೆಡಿಎಸ್‌ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ತೀರ್ಮಾನಿಸಲಾಗಿದೆ. ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಪಟ್ಟ ಒಲಿಯಬಹುದು ಎಂಬ ಬಹುದಿನಗಳ ಚರ್ಚೆಗೆ ಈ ಮೂಲಕ ತೆರೆ ಬಿದ್ದಿದೆ.