ಕಾಂಗ್ರೆಸ್‌ನ ಬಣ ರಾಜಕಾರಣ ಸ್ಪಷ್ಟವಾಗಿ ಬಹಿರಂಗಕ್ಕೆ ಬಂದಿದೆ. ಮುಖ್ಯಮಂತ್ರಿ ಹುದ್ದೆ ಬೇಡಿಕೆ ಮುಂದಿಟ್ಟಿರುವ ಡಿ.ಕೆ.ಶಿವಕುಮಾರ್ ಬಣ ನಂಬರ್ ಗೇಮ್‌ಗೆ ಅಣಿಯಾಗುತ್ತಿದ್ದರೆ,5 ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂಬ ನಿಲುವಿಗೆ ಬದ್ಧವಾಗಿರುವ ಬಣ ಪ್ರತಿವ್ಯೂಹಕ್ಕೆ ಸಜ್ಜಾಗುತ್ತಿದೆ.
ಬೆಂಗಳೂರು : ರಾಜ್ಯ ಕಾಂಗ್ರೆಸ್‌ನ ಬಣ ರಾಜಕಾರಣ ಇದೀಗ ಸ್ಪಷ್ಟವಾಗಿ ಬಹಿರಂಗಕ್ಕೆ ಬಂದಿದೆ. ಮುಖ್ಯಮಂತ್ರಿ ಹುದ್ದೆ ಬೇಡಿಕೆ ಮುಂದಿಟ್ಟಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣ ನಂಬರ್ ಗೇಮ್‌ಗೆ ಅಣಿಯಾಗುತ್ತಿದ್ದರೆ, ಐದು ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂಬ ನಿಲುವಿಗೆ ಬದ್ಧವಾಗಿರುವ ಸಿದ್ದರಾಮಯ್ಯ ಬಣ ಪ್ರತಿವ್ಯೂಹಕ್ಕೆ ಸಜ್ಜಾಗುತ್ತಿದೆ.
ಎರಡೂ ಬಣಗಳ ಈ ಮೇಲಾಟದಿಂದಾಗಿ ಕಾಂಗ್ರೆಸ್ ಹೈಕಮಾಂಡ್ ಇಕ್ಕಟ್ಟಿಗೆ ಸಿಲುಕಿದೆ. ಅಧಿಕಾರ ಹಸ್ತಾಂತರಕ್ಕೆ ಹೈಕಮಾಂಡ್ ಮೇಲೆ ಒತ್ತಡವೇರಲು ಶಿವಕುಮಾರ್ ಬಣದ ಶಾಸಕರು ದೆಹಲಿಯಲ್ಲಿ ವರಿಷ್ಠರ ಭೇಟಿ ನಡೆಸುತ್ತಿದ್ದರೆ, ನಗರದಲ್ಲಿ ಡಿಕೆಶಿ ಸಹೋದರರನ್ನು ಶಾಸಕರ ದಂಡೊಂದು ಸತತ ಭೇಟಿ ನಡೆಸಿದೆ.
ಅಷ್ಟೇ ಅಲ್ಲದೆ, ಖುದ್ದು ಡಿ.ಕೆ.ಶಿವಕುಮಾರ್ ಅವರು ಹಾಲಿ ಕಾರಾಗೃಹದಲ್ಲಿರುವ ಕಾಂಗ್ರೆಸ್‌ನ ಇಬ್ಬರು ಶಾಸಕರನ್ನು ದಿಢೀರ್ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಶಿವಕುಮಾರ್ ಬಣ ನಂಬರ್ ಗೇಮ್‌ಗೆ ಕೈ ಹಾಕಿದೆಯೇ ಎಂಬ ಗುಮಾನಿ ಹುಟ್ಟಲು ಕಾರಣವಾಗಿದೆ.
ಶಾಸಕರ ದಂಡಿನ ಹೈಕಮಾಂಡ್ ಭೇಟಿ, ಮುಂದಿನ ವಾರವೂ ಮತ್ತೊಂದು ಶಾಸಕರ ಗುಂಪು ದೆಹಲಿ ಯಾತ್ರೆಗೆ ಸಜ್ಜು, ಇದರ ನಡುವೆಯೇ ನಂಬರ್ ಗೇಮ್‌ನಂತಹ ದಾಳಗಳನ್ನು ಪ್ರಯೋಗಿಸಲು ಡಿ.ಕೆ.ಶಿವಕುಮಾರ್ ಸಜ್ಜಾಗುತ್ತಿದ್ದರೆ, ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಬಣವೂ ತಂತ್ರಗಾರಿಕೆ ಆರಂಭಿಸಿದೆ.
ಸಿಎಂ ಸವಾಲು:
ದಲಿತ ಸಚಿವರ ಡಿನ್ನರ್ ಮೀಟಿಂಗ್ ಮುಂದುವರೆದಿದೆ. ಆಪ್ತ ಹಿರಿಯ ಸಚಿವರು ಪರಸ್ಪರ ನೇರಾನೇರ ಭೇಟಿ ಮೂಲಕ ಯಾವುದೇ ಸಂದರ್ಭಕ್ಕೂ ಸಜ್ಜು ಎಂಬ ಸಂದೇಶ ರವಾನಿಸತೊಡಗಿದ್ದಾರೆ. ಇದರ ನಡುವೆ, ಖುದ್ದು ಮುಖ್ಯಮಂತ್ರಿಯವರೇ ಮುಂದಿನ ಎರಡು ಬಜೆಟ್‌ಗಳನ್ನು ತಾವೇ ಮಂಡಿಸುವ ಹಾಗೂ ಪೂರ್ಣಾವಧಿಗೆ ತಾವೇ ಸಿಎಂ ಎನ್ನುವ ಹೇಳುವ ಮೂಲಕ ಹಸ್ತಾಂತರ ಚರ್ಚೆಗೆ ನೇರ ಸವಾಲು ಎಸೆದಿದ್ದಾರೆ.
ಇದರ ನಡುವೆ ಡಿ.ಕೆ.ಶಿವಕುಮಾರ್ ಬಣದ ಶಾಸಕರು, ‘ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು. ಹೈಕಮಾಂಡ್ ಅಧಿಕಾರ ಹಂಚಿಕೆ ಒಪ್ಪಂದ ಮರೆಯಬಾರದು’ ಎಂದು ಬಹಿರಂಗ ಹೇಳಿಕೆ ಮುಂದುವರೆಸಿದ್ದು, ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಕೊಟ್ಟ ಭರವಸೆ ಈಡೇರಿಸಬೇಕು ಎಂದು ಪರೋಕ್ಷ ಒತ್ತಡ ನಿರ್ಮಾಣಕ್ಕೆ ಯತ್ನಿಸಿದ್ದಾರೆ.
ಇದಕ್ಕೆ ಮಾರುತ್ತರ ನೀಡಿರುವ ಸಿದ್ದರಾಮಯ್ಯ ಬಣದ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು, ಅಧಿಕಾರ ಹಸ್ತಾಂತರ ಒಪ್ಪಂದ ಎಂಬುದು ಬಹಿರಂಗವಾಗಿ ನಡೆದಿಲ್ಲ. ವದಂತಿ ಮಟ್ಟದಲ್ಲಿದೆ. ಆದರೆ, ಕೆಪಿಸಿಸಿ ಅಧ್ಯಕ್ಷರನ್ನು ಲೋಕಸಭಾ ಚುನಾವಣೆ ನಂತರ ಬದಲಾಯಿಸಲಾಗುವುದು ಎಂಬ ಎಐಸಿಸಿ ಆದೇಶ ಲಿಖಿತ ರೂಪದಲ್ಲಿದೆ. ಆ ಭರವಸೆಯೇ ಈಡೇರದಿರುವಾಗ ಇನ್ನು ವದಂತಿ ರೂಪದಲ್ಲಿರುವ ಭರವಸೆಯದ್ದೇನು ಮಹಾ ಎಂಬರ್ಥದ ಹೇಳಿಕೆ ನೀಡಿದ್ದಾರೆ.
ಅಲ್ಲದೆ, ‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮತ್ತು ಡಿ.ಕೆ ಶಿವಕುಮಾರ್ ಅವರು ಏಕೈಕ ಉಪಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಎಐಸಿಸಿ ಲಿಖಿತವಾಗಿ ಸ್ಪಷ್ಟವಾಗಿ ತಿಳಿಸಿತ್ತು. ಈ ನಿರ್ಧಾರವನ್ನು ಎಲ್ಲರೂ ಅನುಸರಿಸಬೇಕು’ ಎಂದಿದ್ದಾರೆ.
ಹೈಕಮಾಂಡ್ ಎಚ್ಚರಿಕೆ:
ಬಣ ರಾಜಕೀಯದ ಸಂಘರ್ಷ ತೀವ್ರವಾಗುತ್ತಿದ್ದಂತೆ ಮಧ್ಯಪ್ರವೇಶಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಯಾವ ಶಾಸಕರೂ ಬಹಿರಂಗ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಿದ್ದಾರೆ.ಆದರೂ ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ತಿಕ್ಕಾಟ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ. ಈ ಎಲ್ಲಾ ಬೆಳವಣಿಗೆಗಳ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರ ಸಂಜೆ ಬೆಂಗಳೂರಿಗೆ ಆಗಮಿಸಿದ್ದು, ಶನಿವಾರ ರಾಜಕೀಯ ಬೆಳವಣಿಗೆಗಳು ತೀವ್ರಗೊಳ್ಳುವ ಸಾಧ್ಯತೆಯಿದೆ.
ದಿಲ್ಲಿಯಲ್ಲಿ ಖರ್ಗೆ ಭೇಟಿ ಮಾಡಿದ ಡಿಕೆಶಿ ಬಣ
ಡಿ.ಕೆ.ಶಿವಕುಮಾರ್ ಬಣದ ಶಾಸಕರಾದ ಕುಣಿಗಲ್ ಶಾಸಕ ರಂಗನಾಥ್, ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್, ಆನೇಕಲ್ ಶಾಸಕ ಶಿವಣ್ಣ, ನೆಲಮಂಗಲ ಶಾಸಕ ಶ್ರೀನಿವಾಸ್, ಶೃಂಗೇರಿ ಶಾಸಕ ರಾಜೇಗೌಡ, ಹೊಸಕೋಟೆ ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ ದೆಹಲಿಯಲ್ಲಿ ಖರ್ಗೆಯವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.
ಡಿಕೆಶಿ ಬಣದ ಶಾಸಕರಿಂದ ನಂಬರ್ ಗೇಮ್‌ಗೆ ಯತ್ನ?
ಗುಂಪುಗಾರಿಕೆ ನನ್ನರಕ್ತದಲ್ಲೇ ಇಲ್ಲ: ಡಿಕೆಶಿನನ್ನ ಬಳಿ ಯಾವ ಬಣವೂ ಇಲ್ಲ, ನಾನು ಯಾವುದೇ ಗುಂಪು ಮಾಡಲು ಇಷ್ಟಪಡುವುದಿಲ್ಲ. ಕಾಂಗ್ರೆಸ್‌ನ 140 ಶಾಸಕರಿಗೂ ನಾನು ಅಧ್ಯಕ್ಷ, ಎಲ್ಲ ಶಾಸಕರೂ ನನಗೆ ಮುಖ್ಯ. ಗುಂಪುಗಾರಿಕೆ ನನ್ನ ರಕ್ತದಲ್ಲೇ ಇಲ್ಲ.- ಡಿ.ಕೆ. ಶಿವಕುಮಾರ್, ಡಿಸಿಎಂ--
ಬೆಂಗಳೂರು : ರಾಜ್ಯ ಕಾಂಗ್ರೆಸ್‌ನಲ್ಲಿ ತೀವ್ರಗೊಂಡಿರುವ ಬಣ ರಾಜಕಾರಣವು ಮತ್ತೊಂದು ಮಜಲಿಗೆ ತಿರುಗಿದ್ದು, ನಂಬರ್ ಗೇಮ್ ಪ್ರಯತ್ನ ಆರಂಭಗೊಂಡಿರುವ ಗುಮಾನಿ ನಿರ್ಮಾಣವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕರ ಬಲ ದೊಡ್ಡ ಪ್ರಮಾಣದಲ್ಲಿದೆ ಎಂದು ಸಿದ್ದರಾಮಯ್ಯ ಬಣ ಆಗಾಗ ಘೋಷಿಸುವ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಬಣವೂ ಶಾಸಕರ ಬಲ ಒಗ್ಗೂಡಿಸುವ ಪ್ರಯತ್ನ ಆರಂಭಿಸಿದೆಯೇ ಎಂಬ ಆಶಂಕೆ ಹುಟ್ಟುವಂತಹ ಬೆಳವಣಿಗೆಗಳು ಶುಕ್ರವಾರ ನಡೆದವು.ಮುಖ್ಯವಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಸಂಜೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ, ಜೈಲಿನಲ್ಲಿರುವ ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ, ಧಾರವಾಡ ಶಾಸಕ ವಿನಯ್ ಕುಲಕರ್ಣಿ ಅವರನ್ನು ಭೇಟಿ ಮಾಡಿದರು.
ಇದಲ್ಲದೆ, ಇಡೀ ದಿನ ಹಲವಾರು ಶಾಸಕರು ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ತಮ್ಮ ಕ್ಷೇತ್ರದ ಕೆಲಸದ ಬಗ್ಗೆ ಚರ್ಚಿಸಲು ಈ ಭೇಟಿ ಎಂದು ಸದರಿ ಶಾಸಕರು ಸ್ಪಷ್ಟನೆ ನೀಡಿದರು. ಈ ಹಂತದಲ್ಲಿ ಸರಣಿ ಭೇಟಿಗಳು ಬೇರೆಯೇ ಅರ್ಥ ಧ್ವನಿಸುವಂತೆ ಮಾಡಿದೆ ಎನ್ನುತ್ತವೆ ಮೂಲಗಳು.ಈ ನಂಬರ್ ಗೇಮ್ ಪ್ರಯತ್ನಕ್ಕೆ ಮೂಲ ಕಾರಣ ಸಿದ್ದರಾಮಯ್ಯ ಬಣವು ಶಾಸಕರ ಬೆಂಬಲ ಸಿದ್ದರಾಮಯ್ಯ ಅವರಿಗೆ ಇದೆ ಎಂದು ಘಂಟಾಘೋಷವಾಗಿ ಹೇಳುವುದು. ಇದರಿಂದಾಗಿ ತಮಗೂ ಶಾಸಕರ ಬೆಂಬಲವಿದೆ ಎಂಬುದನ್ನು ಅಗತ್ಯ ಬಿದ್ದ ಸಂದರ್ಭದಲ್ಲಿ ಪ್ರದರ್ಶಿಸಲು ಶಿವಕುಮಾರ್ ಬಣ ಸಜ್ಜಾಗುತ್ತಿದೆ ಎನ್ನಲಾಗಿದೆ.
ಈ ಬಣದ ಹಿರಿಯ ಶಾಸಕರ ಪ್ರಕಾರ, ಕಳೆದ ಬಾರಿ ಸಿಎಂ ಆಯ್ಕೆ ವೇಳೆ ಶಾಸಕರ ಮತ ಪ್ರಯೋಗ ನಡೆದಿದ್ದಾಗ 20ಕ್ಕೂ ಹೆಚ್ಚು ಶಾಸಕರು ಯಾವುದೇ ನಿಲುವು ಪ್ರಕಟಿಸಿದೇ ಹೈಕಮಾಂಡ್ ನಿರ್ಧಾರಕ್ಕೆ ಸಮ್ಮತ ಎಂದು ಹೇಳಿದ್ದರು.ಹೀಗೆ ನ್ಯೂಟ್ರಲ್ ಇರುವ ಶಾಸಕರ ಜತೆಗೆ ಡಿಕೆಶಿ ಬಣವು 40 ರಿಂದ 50 ಶಾಸಕರ ಬೆಂಬಲವಿದೆ ಎಂದು ಸಾಬೀತು ಪಡಿಸಿದರೆ ತಮಗೆ ಶಾಸಕರ ಬೆಂಬಲವಿರುವುದು ಎಂಬ ಸಿದ್ದರಾಮಯ್ಯ ಬಣದ ಕ್ಲೇಮ್‌ಗೆ ಪ್ರತಿರೋಧ ಒಡ್ಡಬಹುದು ಎಂಬುದು ಲೆಕ್ಕಾಚಾರ. ಹೀಗಾಗಿಯೇ ನಂಬರ್ ಗೇಮ್ ಪ್ರಯತ್ನ ಆರಂಭಗೊಂಡಿದೆ ಎನ್ನಲಾಗುತ್ತಿದೆ.
ಆದರೆ, ಉಭಯ ಬಣದ ಹಿರಿಯ ನಾಯಕರು ಮಾತ್ರ ಇಂತಹ ಯಾವುದೇ ಪ್ರಯತ್ನ ನಡೆದಿಲ್ಲ. ಅದೆಲ್ಲ ಊಹಾಪೋಹ ಎಂದೇ ಹೇಳುತ್ತಾರೆ.-
ಬಹಿರಂಗ ಹೇಳಿಕೆ ನಿಲ್ಲಿಸಿ : ಹೈಕಮಾಂಡ್ ತಾಕೀತು
ಬೆಂಗಳೂರು : ರಾಜ್ಯ ನಾಯಕತ್ವ ಬದಲಾವಣೆ ಬಗ್ಗೆ ಕಾಂಗ್ರೆಸ್ ನಾಯಕರು ಹಾಗೂ ಶಾಸಕರು ಯಾವುದೇ ರೀತಿಯ ಬಹಿರಂಗ ಹೇಳಿಕೆ ನೀಡಬಾರದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸುರ್ಜೇವಾಲಾ ಅವರು, ‘ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ಬಿಜೆಪಿ ಹಾಗೂ ಮಾಧ್ಯಮದ ಒಂದು ವರ್ಗ ಅಪಪ್ರಚಾರ ಮಾಡುತ್ತಿದೆ. ರಾಜ್ಯದಲ್ಲಿ ಉಂಟಾಗುತ್ತಿರುವ ಬೆಳವಣಿಗೆಗಳಿಗೆ ಅವರೇ ಕಾರಣ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ನನಗೆ ತಿಳಿಸಿದ್ದಾರೆ’ ಎಂದಿದ್ದಾರೆ.ಶಾಸಕರಿಗೆ ಎಚ್ಚರಿಕೆ:
ಇದಕ್ಕೆ ಪೂರಕವಾಗಿ ಕೆಲ ಕಾಂಗ್ರೆಸ್ ನಾಯಕರು ಮತ್ತು ಶಾಸಕರ ಅನಗತ್ಯ ಹೇಳಿಕೆಗಳು ಸಹ ಊಹಾಪೋಹಗಳಿಗೆ ಕಾರಣವಾಗಿವೆ. ಪಕ್ಷದವರು ನೀಡುತ್ತಿರುವ ಅಭಿಪ್ರಾಯವನ್ನು ನಾಯಕತ್ವ ಗಮನಿಸುತ್ತಿದೆ. ನಾಯಕತ್ವದ ವಿಷಯ ಬಗ್ಗೆ ಅಥವಾ ಕೆಲವರು ಮಾಡುತ್ತಿರುವ ಅಪಪ್ರಚಾರದ ಕಾರ್ಯಸೂಚಿಗೆ ಕಾಂಗ್ರೆಸ್ ಪಕ್ಷದವರು ಮಣಿಯಬಾರದು. ಇದು ಕಾಂಗ್ರೆಸ್ ನೀಡುತ್ತಿರುವ ಎಚ್ಚರಿಕೆ ಎಂದು ಸುರ್ಜೇವಾಲಾ ಹೇಳಿದ್ದಾರೆ.ದೂರವಾಣಿ ಮೂಲಕ ಚರ್ಚಿಸಿದ್ದೇನೆ:
‘ಕರ್ನಾಟಕದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿದ್ದೇನೆ. ಸೋತಿರುವ ಹಾಗೂ ಬಣ ರಾಜಕೀಯದಿಂದ ಬಳಲುತ್ತಿರುವ ಕರ್ನಾಟಕ ಬಿಜೆಪಿ ಹಾಗೂ ಮಾಧ್ಯಮದ ಒಂದು ವರ್ಗವು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಉದ್ದೇಶಪೂರ್ವಕವಾಗಿ ಅಪಪ್ರಚಾರ ನಡೆಸುತ್ತಿದೆ ಎಂದು ಅವರು ಒಪ್ಪಿಕೊಂಡರು’ ಎಂದು ಸುರ್ಜೇವಾಲಾ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇನ್ನೂ 2 ಬಜೆಟ್ ನಾನೇ ಮಂಡಿಸುತ್ತೇನೆ: ಸಿದ್ದು
ಮೈಸೂರು : ನಾನೇ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತೇನೆ. ನಾನೇ ಇನ್ನೂ ಎರಡು ಬಜೆಟ್ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರು ಕೇಳಿದ ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಿಮಗೆ ಯಾಕೆ ಅನುಮಾನ? ಯಾಕೆ ಮತ್ತೆ ಮತ್ತೆ ಅದನ್ನೇ ಕೇಳುತ್ತೀರಾ? ಹೈಕಮಾಂಡ್ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದೆಯಾ’ ಎಂದು ಪ್ರಶ್ನಿಸಿದರು.ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಎಲ್ಲದನ್ನು ತೀರ್ಮಾನ ಮಾಡುವುದು ಹೈಕಮಾಂಡ್. ಈ ಬಗ್ಗೆ ಹೈಕಮಾಂಡ್ ಇಲ್ಲಿಯವರೆಗೆ ಏನಾದರು ಮಾತನಾಡಿದೆಯಾ? ಇಲ್ಲ ತಾನೇ? ಹಾಗಾದ್ರೆ ಮತೆ ಯಾಕೆ ಆ ಪ್ರಶ್ನೆ? ಹೈಕಮಾಂಡ್ ಹೇಳುವುದನ್ನು ನಾನು ಪಾಲಿಸಬೇಕು, ಶಾಸಕರು ಪಾಲಿಸಬೇಕು ಎಂದರು.
ಇಂದು ಖರ್ಗೆ ಭೇಟಿ:
ದೆಹಲಿಗೆ ಹೋಗಿರುವ ಚೆಲುವರಾಯಸ್ವಾಮಿ ಜೊತೆ ನಾನೇ ಮಾತಾಡಿದ್ದೇನೆ. ಇಲಾಖೆಗೆ ಕೆಲಸದ ಹಿನ್ನೆಲೆಯಲ್ಲಿ ಹೋಗಿದ್ದೇನೆ ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ. ಶಾಸಕರು, ಸಚಿವರು ದೆಹಲಿಗೆ ಹೋಗಬಾರದಾ? ಶಾಸಕರು ದೆಹಲಿಗೆ ಹೋಗಿರುವ ಬಗ್ಗೆ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಮತ್ತೆ ನಾನು ಯಾಕೆ ಈ ಬಗ್ಗೆ ವಿವರಣೆ ಕೊಡಲಿ ಎಂದು ಪ್ರಶ್ನಿಸಿದ ಅವರು, ಶನಿವಾರ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡುತ್ತೇನೆ ಎಂದರು.

