ಇಲಾಖೆಗಳ ವಿಲೀನಕ್ಕೂ, ಗ್ಯಾರಂಟಿ ಯೋಜನೆಗೂ ನಂಟಿಲ್ಲ: ಸಚಿವ ಸತೀಶ್ ಜಾರಕಿಹೊಳಿ
ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಳಗೆ ವಿಲೀನ ಮಾಡುವುದಕ್ಕೂ, ಗ್ಯಾರಂಟಿ ಯೋಜನೆಗೂ ಯಾವುದೇ ಸಂಬಂಧವಿಲ್ಲ. ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಳಗೆ ವಿಲೀನ ಮಾಡುವ ಪ್ರಕ್ರಿಯೆ 10 ವರ್ಷಗಳ ಹಿಂದಯೇ ನಡೆದಿದೆ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ಬೆಳಗಾವಿ (ನ.27): ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಳಗೆ ವಿಲೀನ ಮಾಡುವುದಕ್ಕೂ, ಗ್ಯಾರಂಟಿ ಯೋಜನೆಗೂ ಯಾವುದೇ ಸಂಬಂಧವಿಲ್ಲ. ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಳಗೆ ವಿಲೀನ ಮಾಡುವ ಪ್ರಕ್ರಿಯೆ 10 ವರ್ಷಗಳ ಹಿಂದಯೇ ನಡೆದಿದೆ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಅನುದಾನ ಕೊರತೆಯಾಗಿದ್ದಕ್ಕೆ ಕೃಷಿ ಇಲಾಖೆಯಲ್ಲಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳನ್ನು ವಿಲೀನಗೊಳಿಸಲು ಸರ್ಕಾರ ಮುಂದಾಗಿದೆಯೇ?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೆಲವು ಇಲಾಖೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವ ಅವಶ್ಯಕತೆ ಇಲ್ಲ.
ಹಾಗಾಗಿ ಈ ಇಲಾಖೆಗಳನ್ನು ವಿಲೀನಗೊಳಿಸುವ ಬಗ್ಗೆ 10 ವರ್ಷಗಳ ಹಿಂದೆಯೇ ವರದಿ ಕೊಟ್ಟಿದ್ದಾರೆ. ಈ ರೀತಿ ಹಿಂದಿನ ಸರ್ಕಾರಗಳಲ್ಲೂ ವಿಲೀನ ಪ್ರಕ್ರಿಯೆ ನಡೆದಿವೆ. ಗ್ಯಾರಂಟಿ ಯೋಜನೆಗಳಿಗೂ ಮತ್ತು ಇದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದರು. ಕಾಂತರಾಜ್ ಆಯೋಗದ ವರದಿ ಜಾರಿಯಾದರೆ ಕಾಂಗ್ರೆಸ್ ಸರ್ಕಾರಕ್ಕೆ ತೊಂದರೆಯಾಗುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆಯೋಗದವರು ನಮಗೆ ಇನ್ನೂ ವರದಿಯನ್ನೇ ಕೊಟ್ಟಿಲ್ಲ. ವರದಿ ನೀಡಿದ ನಂತರ, ಅದರ ಬಗ್ಗೆ ಚರ್ಚೆಯಾಗಬೇಕು. ಅದಕ್ಕೆ ಸುದೀರ್ಘ ಪ್ರಕ್ರಿಯೆ ಬಾಕಿ ಇದೆ ಎಂದು ಹೇಳಿದರು.
ಕಾಂತರಾಜ್ ಆಯೋಗದ ವರದಿಯಿಂದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆಯೇ? ಎಂಬ ಪ್ರಶ್ನೆಗೆಪ್ರತಿಕ್ರಿಯಿಸಿದ ಅವರು, ಈ ವರದಿ ನೀಡಲು ಇನ್ನೂ ಎರಡು ತಿಂಗಳು ಸಮಯಾವಕಾಶ ಕೇಳಿದ್ದಾರೆ. ವರದಿ ಬಂದ ಬಳಿಕ ನೋಡೋಣ. ರಾಜ್ಯ ಸರ್ಕಾರ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಈ ಬಗ್ಗೆ ಚರ್ಚಿಸುತ್ತಾರೆ ಎಂದರು. ಬೆಳಗಾವಿಯಲ್ಲಿ ವಿಧಾನಮಂಡಲ ಚಳಿಗಾಲ ಅಧಿವೇಶನಕ್ಕೆ ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರು ಎಲ್ಲ ರೀತಿಯ ಸಿದ್ಧತೆ ಮಾಡಿದ್ದಾರೆ. ಈ ಬಾರಿಯ ಅಧಿವೇಶನ ಯಾವ ತೊಂದರೆಯಿಲ್ಲದೆ, ಸುಗಮವಾಗಿ ನಡೆಯಲಿದೆ. ಅಧಿವೇಶನ ವೇಳೆ ಪ್ರತಿಭಟನೆ ಮಾಡುವವರಿಗೆ ಬೇಡ ಎನ್ನಲಾಗದು. ಆಯಾ ಇಲಾಖೆ ಸಚಿವರು ಮೊದಲೇ ಅವರ ಅಹವಾಲು ಸ್ವೀಕರಿಸಿದರೆ, ಪ್ರತಿಭಟನೆಗಳು ಸ್ವಲ್ಪ ಕಡಿಮೆ ಆಗಬಹುದು ಎಂದು ಹೇಳಿದರು.
ಬಿಜೆಪಿಗೆ ಬಿ.ವೈ.ವಿಜಯೇಂದ್ರ ಹರಕೆಯ ಕುರಿಯಾಗಲಿದ್ದಾರೆ: ಸಚಿವ ಆರ್.ಬಿ.ತಿಮ್ಮಾಪೂರ
ಸಮಯ ಬಂದಾಗ ಶಾಸಕರೊಂದಿಗೆ ವಿದೇಶಕ್ಕೆ: ಬೆಂಬಲಿಗರನ್ನು ವಿದೇಶ ಪ್ರವಾಸಕ್ಕೆ ಕರೆದುಕೊಂಡು ಹೋಗುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಸತೀಶ ಜಾರಕಿಹೊಳಿ, ಈಗ ಖಾಸಗಿಯಾಗಿ ಪ್ರವಾಸಕ್ಕೆ ಹೋಗಿದ್ದೆ. ಮುಂದೆ ಸಮಯ ಬಂದಾಗ ಶಾಸಕರು ಮತ್ತು ಮಾಜಿ ಶಾಸಕರನ್ನು ವಿದೇಶಕ್ಕೆ ಕರೆದುಕೊಂಡು ಹೋಗೋಣ. ಮುಂದೊಂದು ದಿನ ಆ ಸಮಯ ಬರುತ್ತದೆ.