ಈ ಬಾರಿಯ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ಸಿಂದ ಒಬ್ಬ ಸಚಿವರ ಸ್ಪರ್ಧೆಯೂ ಇಲ್ಲ?
ಈ ಬಾರಿಯ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಯಾವೊಬ್ಬ ಸಚಿವರೂ ಸ್ಪರ್ಧಿಸುವ ಸಾಧ್ಯತೆ ಬಹುತೇಕ ಇಲ್ಲ. ಹತ್ತು ಮಂದಿ ಸಚಿವರನ್ನು ಕಣಕ್ಕೆ ಇಳಿಸುವ ಉದ್ದೇಶ ಹೊಂದಿದ್ದ ಕಾಂಗ್ರೆಸ್ ಹೈಕಮಾಂಡ್ ಕಡೆಗೆ ಸಚಿವರ ಒತ್ತಡಕ್ಕೆ ಮಣಿದಿದ್ದು, ಯಾವೊಬ್ಬ ಸಚಿವರನ್ನೂ ಕಣಕ್ಕೆ ಇಳಿಸುತ್ತಿಲ್ಲ.
ಬೆಂಗಳೂರು (ಮಾ.14): ಈ ಬಾರಿಯ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಯಾವೊಬ್ಬ ಸಚಿವರೂ ಸ್ಪರ್ಧಿಸುವ ಸಾಧ್ಯತೆ ಬಹುತೇಕ ಇಲ್ಲ. ಹತ್ತು ಮಂದಿ ಸಚಿವರನ್ನು ಕಣಕ್ಕೆ ಇಳಿಸುವ ಉದ್ದೇಶ ಹೊಂದಿದ್ದ ಕಾಂಗ್ರೆಸ್ ಹೈಕಮಾಂಡ್ ಕಡೆಗೆ ಸಚಿವರ ಒತ್ತಡಕ್ಕೆ ಮಣಿದಿದ್ದು, ಯಾವೊಬ್ಬ ಸಚಿವರನ್ನೂ ಕಣಕ್ಕೆ ಇಳಿಸುತ್ತಿಲ್ಲ. ಬದಲಾಗಿ ಸಚಿವರು ಸೂಚಿಸಿದವರಿಗೆ ಟಿಕೆಟ್ ನೀಡಲು ನಿರ್ಧರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕಡೆ ಕ್ಷಣದವರೆಗೂ ಕೋಲಾರದಿಂದ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಚಾಮರಾಜನಗರದಿಂದ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಕಣಕ್ಕೆ ಇಳಿಸಲು ತೀವ್ರ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ನಡೆಸಿದ್ದರು.
ಆದರೆ, ಅಂತಿಮವಾಗಿ ಸಚಿವರ ಒತ್ತಡಕ್ಕೆ ನಾಯಕತ್ವ ಮಣಿದಿದ್ದು, ಕೋಲಾರಕ್ಕೆ ಮುನಿಯಪ್ಪ ಅವರ ಬದಲಾಗಿ ಡಾ.ಎಲ್.ಹನುಮಂತಯ್ಯ ಅಥವಾ ಮುನಿಯಪ್ಪ ಅವರ ಕುಟುಂಬದವರಲ್ಲಿ ಒಬ್ಬರಿಗೆ (ಅಥವಾ ಮುನಿಯಪ್ಪ ಅವರ ಅಳಿಯ ಚಿಕ್ಕಪೆದ್ದಯ್ಯ, ಇಲ್ಲವೇ ಮಗಳಾದ ಶಾಸಕಿ ರೂಪಕಲಾ ಶಶಿಧರ್) ನೀಡುವಂತೆ ಹೈಕಮಾಂಡ್‌ಗೆ ಸೂಚಿಸಲು ತೀರ್ಮಾನಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇನ್ನು ಚಾಮರಾಜನಗರಕ್ಕೆ ಡಾ.ಎಚ್.ಸಿ.ಮಹದೇವಪ್ಪ ಅವರ ಬದಲಾಗಿ ಶಾಸಕ ದರ್ಶನ್ ಧ್ರುವನಾರಾಯಣ ಅಥವಾ ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಅವರಿಬ್ಬರ ಹೆಸರು ಶಿಫಾರಸುಗೊಳ್ಳಲಿದೆ ಎಂದು ತಿಳಿದುಬಂದಿದೆ.
ಸಿಎಎ ವಿರೋಧಿಸುವ ಕಾಂಗ್ರೆಸ್‌ಗೆ ರಾಷ್ಟ್ರೀಯತೆಯ ಅರಿವಿಲ್ಲ: ಈಶ್ವರಪ್ಪ
ಗೊಂದಲವಿರುವ ಕೆಲ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಎಲ್ಲ ಕ್ಷೇತ್ರಗಳಿಗೂ ಸಂಭವನೀಯರ ಪಟ್ಟಿಯನ್ನು ಕಾಂಗ್ರೆಸ್ ನಾಯಕತ್ವ ಅಖೈರುಗೊಳಿಸಿದ್ದು, ಈ ವಾರಾಂತ್ಯದಲ್ಲಿ ದೆಹಲಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ಈ ಪಟ್ಟಿಯ ಬಗ್ಗೆ ಚರ್ಚೆ ನಡೆಯಲಿದೆ. ಮೂಲಗಳ ಪ್ರಕಾರ ಈ ಸಭೆಯಲ್ಲಿ ಸುಮಾರು 10ರಿಂದ 12 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಣೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
‘ಕನ್ನಡಪ್ರಭ’ಕ್ಕೆ ಸಂಭವನೀಯರ ಪಟ್ಟಿ ಲಭ್ಯವಾಗಿದ್ದು, ಏಕ ಹೆಸರು ಇರುವ ಕ್ಷೇತ್ರಗಳಲ್ಲಿ ಅಚ್ಚರಿಯೆಂಬಂತೆ ಬೀದರ್ ಕ್ಷೇತ್ರಕ್ಕೆ ಸಚಿವ ಈಶ್ವರ್ ಖಂಡ್ರೆ ಅವರ ಪುತ್ರ ಸಾಗರ್ ಖಂಡ್ರೆ ಹೆಸರು ಇದೆ. ಅದೇ ರೀತಿ ರಾಯಚೂರು ಕ್ಷೇತ್ರಕ್ಕೆ ಮಾಜಿ ಐಎಎಸ್ ಅಧಿಕಾರಿ ಕುಮಾರನಾಯ್ಕ್ ಅವರ ಹೆಸರಿದೆ. ಅಲ್ಲದೆ, ಬಳ್ಳಾರಿಯಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಹುಬ್ಬಳ್ಳಿ-ಧಾರವಾಡಕ್ಕೆ ವಿನೋದ್ ಅಸೂಟಿ, ಕಲಬುರಗಿಗೆ ರಾಧಾಕೃಷ್ಣ, ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಜಯಪ್ರಕಾಶ್ ಹೆಗ್ಡೆ, ಚಿತ್ರದುರ್ಗಕ್ಕೆ ಬಿ.ಎನ್. ಚಂದ್ರಪ್ಪ, ಬೆಂಗಳೂರು ಸೆಂಟ್ರಲ್‌ಗೆ -ಮನ್ಸೂರ್ ಅಲಿಖಾನ್, ಬೆಂಗಳೂರು ದಕ್ಷಿಣಕ್ಕೆ ಸೌಮ್ಯ ರೆಡ್ಡಿ ಅವರ ಹೆಸರು ಇದೆ.
ಇನ್ನು ಬೆಂಗಳೂರು ಉತ್ತರಕ್ಕೆ ಕಾಂಗ್ರೆಸ್ ನಾಯಕತ್ವ ಪ್ರಿಯಕೃಷ್ಣ ಅವರ ಹೆಸರನ್ನು ಸೂಚಿಸಿದ್ದು, ಖುದ್ದು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನೇರವಾಗಿ ಪ್ರಿಯಕೃಷ್ಣ ಹಾಗೂ ಅವರ ತಂದೆ ಲೇಔಟ್ ಕೃಷ್ಣಪ್ಪ ಅವರೊಂದಿಗೆ ಚರ್ಚಿಸಿ ಸ್ಪರ್ಧೆಗೆ ಮನವೊಲಿಸಲು ಯತ್ನಿಸಿದ್ದಾರೆ. ಆದರೆ, ಪ್ರಿಯಕೃಷ್ಣ ಸ್ಪರ್ಧೆ ವಿಚಾರದಲ್ಲಿ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ. ದೆಹಲಿ ಸಭೆ ವೇಳೆಗೆ ಪ್ರಿಯಕೃಷ್ಣ ಹಾಗೂ ಕೃಷ್ಣಪ್ಪ ತಮ್ಮ ನಿಲುವು ತಿಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಕಾಂಗ್ರೆಸ್‌ನ ಬಾಕಿ ಉಳಿದ ಕ್ಷೇತ್ರಗಳಲ್ಲಿ ಅತ್ಯಂತ ಗೊಂದಲವಿರುವುದು ಬೆಳಗಾವಿ ಜಿಲ್ಲೆಯ ಎರಡು ಕ್ಷೇತ್ರಗಳು. ಹೀಗಾಗಿ ಈ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಎರಡನೇ ಪಟ್ಟಿಯಲ್ಲಿ ಪ್ರಕಟವಾಗುವ ಸಾಧ್ಯತೆ ಕಡಿಮೆ. ಬೆಳಗಾವಿ ಜಿಲ್ಲೆಯ ಕ್ಷೇತ್ರಗಳಲ್ಲಿ ಗೊಂದಲವಿರುವುದು ಏಕೆಂದರೆ, ಕಾಂಗ್ರೆಸ್ ನಾಯಕತ್ವವು ಚಿಕ್ಕೋಡಿಯಿಂದ ಸಚಿವ ಸತೀಶ್ ಜಾರಕಿಹೊಳಿಗೆ ಪುತ್ರಿ ಪ್ರಿಯಾಂಕಾರನ್ನು ಕಣಕ್ಕೆ ಇಳಿಸುವಂತೆ ಸೂಚಿಸಿದೆ. ಅದೇ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಳಗಾವಿಯಿಂದ ತಮ್ಮ ಪುತ್ರ ಮೃಣಾಲ್ ಅವರನ್ನು ಕಣಕ್ಕೆ ಇಳಿಸಲು ಸಿದ್ಧತೆ ನಡೆಸಿದ್ದಾರೆ. ಜತೆಗೆ ಟಿಕೆಟ್‌ಗೂ ಲಾಬಿ ನಡೆಸಿದ್ದಾರೆ.
ಆದರೆ, ಸತೀಶ್ ಜಾರಕಿಹೊಳಿ ಪ್ರಿಯಾಂಕಾ ಅವರನ್ನು ಲೋಕಸಭೆ ಚುನಾವಣಾ ಕಣಕ್ಕೆ ಇಳಿಸುವ ತೀರ್ಮಾನ ಕೈಗೊಂಡಿಲ್ಲ. ಇದೇ ವೇಳೆ ಬಿಜೆಪಿಯಲ್ಲಿ ಚಿಕ್ಕೋಡಿಯ ಟಿಕೆಟ್ ರಮೇಶ್ ಕತ್ತಿ ಅವರ ಕೈ ತಪ್ಪಿದೆ. ಒಂದು ವೇಳೆ ರಮೇಶ್ ಕತ್ತಿ ಅವರೇನಾದರೂ ಕಾಂಗ್ರೆಸ್ ಕಡೆ ಮುಖ ಮಾಡಿದರೆ, ಅದಕ್ಕೆ ಸತೀಶ್ ಒಪ್ಪಿದರೆ ಆಗ ಇಡೀ ಕ್ಷೇತ್ರದ ಸಮೀಕರಣ ಬದಲಾಗಬಹುದು. ಹೀಗಾಗಿ ಈ ಎರಡು ಕ್ಷೇತ್ರಗಳಲ್ಲಿ ಯಾರು ಕಣಕ್ಕೆ ಇಳಿಯುತ್ತಾರೆ ಎಂಬುದನ್ನು ಕಡೆ ಕ್ಷಣದವರೆಗೂ ಕುತೂಹಲ ಕಾಯ್ದುಕೊಳ್ಳುವ ಸಾಧ್ಯತೆಯಿದೆ.
ಇನ್ನೂ ಎರಡು ಲೋಕಸಭಾ ಕ್ಷೇತ್ರ ಸಿಗುತ್ತಿತ್ತು, ಬೇಡ ಎಂದೆವು: ಎಚ್‌ಡಿಕೆ
ಸಂಭವನೀಯರ ಪಟ್ಟಿ
ಕಲಬುರಗಿ- ರಾಧಾಕೃಷ್ಣ
ರಾಯಚೂರು- ಕುಮಾರನಾಯ್ಕ್
ಬೀದರ್- ಸಾಗರ್ ಖಂಡ್ರೆ (ಸಚಿವ ಈಶ್ವರ್ ಖಂಡ್ರೆ ಪುತ್ರ)
ಬಳ್ಳಾರಿ- ವಿ.ಎಸ್.ಉಗ್ರಪ್ಪ
ಹುಬ್ಬಳ್ಳಿ- ಧಾರವಾಡ- ವಿನೋದ್ ಅಸೂಟಿ
ಉಡುಪಿ - ಚಿಕ್ಕಮಗಳೂರು- ಜಯಪ್ರಕಾಶ್ ಹೆಗ್ಡೆ
ಉತ್ತರ ಕನ್ನಡ- ಅಂಜಲಿ ನಿಂಬಾಳ್ಕರ್
ಚಿತ್ರದುರ್ಗ- ಬಿ.ಎನ್.ಚಂದ್ರಪ್ಪ
ಬೆಂಗಳೂರು ಕೇಂದ್ರ- ಮನ್ಸೂರ್ ಅಲಿಖಾನ್
ಬೆಂಗಳೂರು ದಕ್ಷಿಣ- ಸೌಮ್ಯ ರೆಡ್ಡಿ
ಬಾಗಲಕೋಟೆ- ಅಜಯಕುಮಾರ ಸರನಾಯಕ/ ಸಂಯುಕ್ತ ಪಾಟೀಲ್ (ಸಚಿವ ಶಿವಾನಂದ ಪಾಟೀಲ್ ಪುತ್ರಿ)
ಕೊಪ್ಪಳ- ರಾಜಶೇಖರ್ ಹಿಟ್ನಾಳ್- ಬಸವನಗೌಡ ಬಾದರ್ಲಿ
ದಾವಣಗೆರೆ- ಪ್ರಭಾ ಮಲ್ಲಿಕಾರ್ಜುನ್ / ವಿನಯಕುಮಾರ್
ದಕ್ಷಿಣ ಕನ್ನಡ- ಪದ್ಮರಾಜ್ (ಕುದ್ರೋಳಿ ದೇವಾಲಯ ಮುಖ್ಸಸ್ಥರು)/ ವಿನಯಕುಮಾರ್ ಸೊರಕೆ
ಮೈಸೂರು- ಲಕ್ಷ್ಮಣ್/ ವಿಜಯಕುಮಾರ್
ಚಾಮರಾಜನಗರ- ಶಾಸಕ ದರ್ಶನ್ ಧ್ರುವನಾರಾಯಣ/ ಸುನೀಲ್ ಬೋಸ್ (ಸಚಿವ ಮಹದೇವಪ್ಪ ಪುತ್ರ)
ಬೆಂಗಳೂರು ಉತ್ತರ- ಶಾಸಕ ಪ್ರಿಯಕೃಷ್ಣ/ ರಾಜೀವ್ ಗೌಡ
ಚಿಕ್ಕಬಳ್ಳಾಪುರ- ರಕ್ಷಾ ರಾಮಯ್ಯ/ ವೀರಪ್ಪ ಮೋಯ್ಲಿ
ಕೋಲಾರ- ಡಾ.ಎಲ್. ಹನುಮಂತಯ್ಯ/ ಮುನಿಯಪ್ಪ ಕುಟುಂಬಸ್ಥರು