ಅಡ್ವಾನಿಯವರಿಗೆ ಭಾರತ ರತ್ನ ಕೊಟ್ಟಿದ್ದರಲ್ಲಿ ತಪ್ಪಿಲ್ಲ: ಸಚಿವ ಆರ್.ಬಿ.ತಿಮ್ಮಾಪುರ
ಅಡ್ವಾಣಿ ಅವರು ಹಿರಿಯ ನಾಯಕ, ಭಾರತ ರತ್ನ ಕೊಟ್ಟಿದ್ದರಲ್ಲಿ ಏನೂ ತಪ್ಪಿಲ್ಲ, ಎಲೆಕ್ಷನ್ ಸಮಯದಲ್ಲಿ ಇಂತವೆಲ್ಲಾ ಮಾಡುತ್ತಾರೆ. ಅವರು(ಬಿಜೆಪಿ) ಏನೋ ಪರಿಗಣಿಸಿ ಕೊಟ್ಟಿರುತ್ತಾರೆ. ಅದು ನನ್ನ ಗಮನಕ್ಕೆ ಇಲ್ಲ, ನನಗೇನೂ ಗೊತ್ತಿಲ್ಲ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಬಾಗಲಕೋಟೆ (ಫೆ.04): ಅಡ್ವಾಣಿ ಅವರು ಹಿರಿಯ ನಾಯಕ, ಭಾರತ ರತ್ನ ಕೊಟ್ಟಿದ್ದರಲ್ಲಿ ಏನೂ ತಪ್ಪಿಲ್ಲ, ಎಲೆಕ್ಷನ್ ಸಮಯದಲ್ಲಿ ಇಂತವೆಲ್ಲಾ ಮಾಡುತ್ತಾರೆ. ಅವರು(ಬಿಜೆಪಿ) ಏನೋ ಪರಿಗಣಿಸಿ ಕೊಟ್ಟಿರುತ್ತಾರೆ. ಅದು ನನ್ನ ಗಮನಕ್ಕೆ ಇಲ್ಲ, ನನಗೇನೂ ಗೊತ್ತಿಲ್ಲ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್.ಕೆ. ಅಡ್ವಾಣಿ ಅವರಿಗೆ ಭಾರತ ರತ್ನ ಕೊಟ್ಟು ಸಮಾಧಾನ ಮಾಡಲಾಗುತ್ತಿದೆಯಾ ಎಂಬ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.
ಸಂಸದ ಸುರೇಶ ಹೇಳಿಕೆಗೆ ಸಮರ್ಥನೆ: ಸಂಸದ ಡಿ.ಕೆ. ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅನುದಾನ ಇಲ್ಲದೆ ಈ ಭಾಗದಲ್ಲಿ ಅಭಿವೃದ್ಧಿ ಕುಂಠಿತವಾಗುತ್ತಿದೆ. ಬೇರೆ ರಾಜ್ಯಗಳಿಗೆ ಅನುದಾನ ಕೊಡುತ್ತಾರೆ. ಅದು ಸರಿ ಅಲ್ಲ, ಹೀಗೆಯೇ ಆದರೆ, ಜನರು ಬೇರೆ ರಾಷ್ಟ್ರ ಬೇಕು ಎಂದು ದಂಗೆ ಏಳಬಹುದು ಅನ್ನೋ ದಾಟಿಯಲ್ಲಿ ಹೇಳಿದ್ದಾರೆ. ಅವರೇನು ಬೇರೆ ರಾಷ್ಟ್ರ ಆಗಬೇಕು ಎಂದು ಹೇಳಿಲ್ಲ. ಅದನ್ನೇ ಟ್ವಿಸ್ಟ್ ಮಾಡಬಾರದು. ಕೇಂದ್ರ ಸರ್ಕಾರ ಸರಿಯಾದ ಅಂಕಿ-ಸಂಖ್ಯೆ ಹೇಳಲಿ, ಸುಳ್ಳು ಹೇಳುತ್ತಾರೆ. ಬರಗಾಲಕ್ಕೆ ನಯಾ ಪೈಸೆ ಕೊಟ್ಟಿದ್ದಾರಾ ? ನಮಗೆ ಕೊಡಬೇಕಾದ ಜಿಎಸ್ಟಿ ಹಣ ಕೊಟ್ಟಿದ್ದಾರಾ ? ಏನೂ ಕೊಟ್ಟಿಲ್ಲ ಎಂದು ಸಮರ್ಥಿಸಿಕೊಂಡರು.
ಬಿಜೆಪಿಗರಿಗೆ ಹನುಮ, ರಾಮ ಬೇಕಿಲ್ಲ, ಮತ ಬೇಕಿದೆ: ಸಚಿವ ಆರ್.ಬಿ.ತಿಮ್ಮಾಪುರ
ರಾಜ್ಯದಲ್ಲಿ ಬೀಯರ್ ದರ ಹೆಚ್ಚಳದ ಕುರಿತು ಮಾತನಾಡಿದ ಸಚಿವರು, ಬೀಯರ್ ದರ ಶೇ.10ರಷ್ಟು ಏರಿಕೆ ಮಾಡುತ್ತೇವೆ. ಸಾರಾಯಿ ದರ ಇಲ್ಲ, ₹ 37 ಸಾವಿರ ಕೋಟಿ ಟಾರ್ಗೆಟ್ ಕೊಟ್ಟಿರುವುದಕ್ಕೆ ಉತ್ತರಿಸಿದ ಅವರು, ಟಾರ್ಗೆಟ್ ಏನಿಲ್ಲ, ನೋ ಟಾರ್ಗೆಟ್, ಅಷ್ಟು ಬರಬಹುದು ಎಂಬ ನಿರೀಕ್ಷೆ ಇದೆ, ಅಷ್ಟು ಬರಬಹುದು ಎಂದರು. ಶೆಟ್ಟರ್ ನಂತರ ಸವದಿ ಬಿಜೆಪಿ ಸೇರುತ್ತಾರೆ ಎಂಬ ಎನ್. ರವಿಕುಮಾರ್ ಹೇಳಿಕೆಗೆ ಅಯ್ಯೊ ಇವೆಲ್ಲಾ ಊಹಾಪೋಹದ ಮಾತುಗಳು. ಇವಕ್ಕೆಲ್ಲ ಎಲ್ಲಿ ಉತ್ತರ ಕೊಡೋಕೆ ಆಗುತ್ತೆ. ಇಂತವಕ್ಕೆಲ್ಲ ನಾನು ಉತ್ತರ ಕೊಡಲ್ಲ. ಅವರ(ಸವದಿ) ತಲೆಯಲ್ಲಿ ಏನಿದೆ ಅಂತ ನನಗೇನು ಗೊತ್ತು. ನನಗೆ ತಿಳಿದಂಗ ಯಾರೂ ಹೋಗೋದಿಲ್ಲ. ಸವದಿ ಅವರು ಇಲ್ಲೇ ಇರುತ್ತಾರೆ ಎಂದರು.
ಹಣ ಕೊಟ್ಟು ಖರೀದಿಸುವ ಚಾಳಿ ನಮ್ಮಲ್ಲಿ ನಡೆಯಲ್ಲ: ಲೋಕಸಭೆ ಚುನಾವಣೆ ನಂತರ ಸರ್ಕಾರ ಪತನ ಆಗುತ್ತೆ ಎಂಬ ಬಿಜೆಪಿ ಹೇಳಿಕೆಗೆ ಉತ್ತರಿಸಿದ ಸಚಿವ ತಿಮ್ಮಾಪುರ, ಅವರು (ಬಿಜೆಪಿ) ತಲೆ ಕೆಟ್ಟಂಗೆ ಮಾತನಾಡುತ್ತಾರೆ. ನಮಗೆ ಅಂತದ್ದು ಮಾತಾಡೋಕೆ ಆಗಲ್ಲ. ರಾಜ್ಯದ ಜನರು 136 ಶಾಸಕರನ್ನು ಆಯ್ಕೆ ಮಾಡಿ ಕಳಿಸಿದ್ದಾರೆ. ಭವಿಷ್ಯ ನುಡಿತಾರಾ ಏನೋ ಗೊತ್ತಿಲ್ಲ ? ದೇಶಾದ್ಯಂತ ಹಣ ಕೊಟ್ಟು ಖರೀದಿ ಮಾಡೋ ಚಾಳಿ ಇದೆ. ಆ ಯೋಚನೆ ಏನಾದರೂ ಇಟ್ಟುಕೊಂಡಿರಬೇಕು. ಅದೇನು ಇಲ್ಲಿ ಫಲಿಸೋದಿಲ್ಲ ಎಂದು ಹೇಳಿದರು.
ಪೂರ್ಣಾವಧಿ ಸಿಎಂ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ: ಸಚಿವ ಆರ್.ಬಿ.ತಿಮ್ಮಾಪುರ
ಕೆಲವು ಸಚಿವರನ್ನು ಚುನಾವಣೆಗೆ ನಿಲ್ಲಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ತಿಮ್ಮಾಪುರ, ಅದು ಎಐಸಿಸಿ ಅವರಿಗೆ ಬಿಟ್ಟ ವಿಚಾರ. ಅದು ನನಗೆ ಗೊತ್ತಿಲ್ಲ. ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ತಯಾರಿ ನಡೀತಿದೆ. ಅಭ್ಯರ್ಥಿಗಳು ತುಂಬಾ ಜನರಿದ್ದಾರೆ.. ಹೈಕಮಾಂಡ್ ಏನು ತೀರ್ಮಾನ ಮಾಡುತ್ತಾರೋ ನೋಡಿ ಆಯ್ಕೆ ಮಾಡಬೇಕು ಎಂದು ಹೇಳಿದರು.