ರಾಜ್ಯದಲ್ಲಿ ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಸಲಾಗುತ್ತಿದ್ದು, ಸದ್ಯಕ್ಕೆ ಲೋಡ್ ಶೆಡ್ಡಿಂಗ್ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ವಿಧಾನ ಪರಿಷತ್ (ಫೆ.20): ರಾಜ್ಯದಲ್ಲಿ ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಸಲಾಗುತ್ತಿದ್ದು, ಸದ್ಯಕ್ಕೆ ಲೋಡ್ ಶೆಡ್ಡಿಂಗ್ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು. ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿ, ಮಳೆ ಕೊರತೆ ಹಿನ್ನೆಲೆಯಲ್ಲಿ ಅಣೆಕಟ್ಟೆಗಳ ನೀರಿನಿಂದ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದಿಸಿ ಪೂರೈಕೆ ಮಾಡಲಾಗುತ್ತಿದೆ. ವಿದ್ಯುತ್ ಕೊರತೆ ವೇಳೆ ದಿನವಹಿ ಆಧಾರದಲ್ಲಿ ವಿದ್ಯುತ್ ವಿನಿಮಯ ಕೇಂದ್ರಗಳಿಂದಲೇ ವಿದ್ಯುತ್ ಖರೀದಿಸಲಾಗುತ್ತಿದೆ.
ಉತ್ತರ ಪ್ರದೇಶ ಹಾಗೂ ಪಂಜಾಬ್ ರಾಜ್ಯಗಳಿಂದ ನಿತ್ಯ 8.9 ದಶಲಕ್ಷ ಯೂನಿಟ್ ವಿದ್ಯುತ್ತನ್ನು ಬ್ಯಾಂಕಿಂಗ್ (ಬ್ಯಾಂಕಿಂಗ್/ ಸ್ವಾಪಿಂಗ್ ಆಫ್ ಪವರ್) ಮೂಲಕ ಪಡೆಯಲಾಗುತ್ತಿದೆ ಎಂದರು. ಕಳೆದ ವರ್ಷ ಡಿಸೆಂಬರ್ ಅಂತ್ಯದವರೆಗೆ ರಾಜ್ಯದಲ್ಲಿ 34,44,582 ಕೃಷಿ ಪಂಪ್‌ಸೆಟ್‌ಗಳು ಇದ್ದು, ಇವುಗಳಿಂದ 21,751 ದಶಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗುತ್ತಿದೆ. ರಾಜ್ಯದಲ್ಲಿ ಜ.24ರವರೆಗೆ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 36,697 ಮೆಗಾವ್ಯಾಟ್ ಇದೆ. ಬಹುತೇಕ ರೈತರು ಕೃಷಿ ಪಂಪ್‍ಸೆಟ್‍ಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದರೂ, ಕೃಷಿ ಚಟುವಟಿಕೆಗೆ ತೊಂದರೆಯಾಗಬಾರದೆಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಿಲ್ಲ ಎಂದು ತಿಳಿಸಿದರು.
40 ವಕೀಲರ ಮೇಲೆ ಸುಳ್ಳು ಎಫ್‌ಐಆರ್: ಪಿಎಸ್ಐ ಸಸ್ಪೆಂಡ್ ಮಾಡುವಂತೆ ನ್ಯಾಯವಾದಿಗಳ ಪ್ರತಿಭಟನೆ!
ಐಪಿ ಸೆಟ್ ಪಡೆದು ಸಕ್ರಮ ಮಾಡಿಕೊಳ್ಳುವಂತೆ ರೈತರಿಗೆ ಮನವಿ ಮಾಡುತ್ತಿದ್ದೇವೆ. ಗ್ರಾಮೀಣ ಭಾಗದಲ್ಲಿ ಸಮಸ್ಯೆಯಾದ ಟ್ರಾನ್ಸ್‌ಫಾರ್ಮರ್‌ಗಳನ್ನು 48 ಗಂಟೆಯೊಳಗೆ ಹಾಗೂ ನಗರ ವ್ಯಾಪ್ತಿಯಲ್ಲಿ 24 ಗಂಟೆಯೊಳಗೆ ಕೊಡಿ ಎಂದು ಸೂಚನೆ ನೀಡಿದ್ದೇನೆ ಎಂದರು. ಇದಕ್ಕೂ ಮುನ್ನ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ರಾತ್ರಿ ಸಮಯದಲ್ಲಿ ರೈತರು ಹೊಲಗದ್ದೆಗಳಿಗೆ ಹೋಗಲು ಆಗುವುದಿಲ್ಲ. ಸಾರ್ವಜನಿಕವಾಗಿ ತ್ರಿ ಫೇಸ್ ವಿದ್ಯುತ್ ಯಾವ ವೇಳೆ ಲಭ್ಯವೆಂದು ಮಾಹಿತಿ ನೀಡಲು ಕ್ರಮ ಕೈಗೊಳ್ಳಬೇಕೆಂದು ಎಂದು ಮನವಿ ಮಾಡಿದರು. ಇದಕ್ಕೆ ಸಚಿವರು ಮಾಧ್ಯಮಗಳಲ್ಲಿ ಸಮಯದ ಅವಧಿಯನ್ನು ಪ್ರಕಟ ಮಾಡಲು ಸೂಚಿಲಾಗುವುದು ಎಂದು ಉತ್ತರಿಸಿದರು.
