ಊರಲ್ಲಿ ಹೊಡೆದಾಡಿಸುವ ರಾಜಕಾರಣ ಮಾಡಿಲ್ಲ; ಸಿ.ಟಿ.ರವಿ
- ಊರಲ್ಲಿ ಒಡೆದಾಡಿಸುವ ರಾಜಕಾರಣ ಮಾಡಿಲ್ಲ
- ಶಿವಪುರ ಗ್ರಾಮದಲ್ಲಿ ರಸ್ತೆ ಮತ್ತು ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಶಾಸಕ ಸಿ.ಟಿ ರವಿ
ಚಿಕ್ಕಮಗಳೂರು (ಅ.4) : ಜಾತಿ ಮಾಡಿಕೊಂಡು, ಇದ್ದವರ ಬಳಿಯೇ ಕಿತ್ತುಕೊಂಡು, ಊರಿನಲ್ಲಿ ಒಡೆದಾಡಿಸುವ ರಾಜಕಾರಣವನ್ನು ನಾನು ಮಾಡಿಲ್ಲ. ಕೆಲಸ ಮಾಡಿದ ನಿಯತ್ತಿದೆ. ಈ ಕಾರಣಕ್ಕೆ ಜನ ಬೆಂಬಲವೂ ಇದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು. ಅವರು ಕ್ಷೇತ್ರದ ಶಿವಪುರ ಗ್ರಾಮದಲ್ಲಿ ಸೋಮವಾರ 40 ಲಕ್ಷ ರೂ. ವೆಚ್ಚದ ರಸ್ತೆ ಹಾಗೂ ದೇವಸ್ಥಾನ ಅಭಿವೃದ್ಧಿ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಊರು ಒಡೆದಾಡಿಸಿದರೆ ಒಂದು ಗುಂಪು ವಿರೋಧವಾಗುತ್ತೆ. ಅದು ಯಾವಾಗಲೂ ಯಾವುದೇ ಕೆಲಸ ಕೇಳುವುದಿಲ್ಲ. ಈ ರೀತಿ ರಾಜಕಾರಣ ಮಾಡುವುದು ಸುಲಭ. ಅದನ್ನು ನಾವು ಮಾಡಿಲ್ಲ. ಈ ನಾಲ್ಕು ವರ್ಷದಲ್ಲಿ 16 ಕೋಟಿ ರು. ಅನುದಾನವನ್ನು ಈ ಗ್ರಾಮ ಪಂಚಾಯಿತಿಗೆ ಹಾಕಿದ್ದೇವೆ. ಇದಲ್ಲದೆ ವಿಶೇಷ ಅನುದಾನ ಎಂದು 28 ಲಕ್ಷ ರೂ. ನೀಡಿದ್ದೇವೆ. ಒಂದು ಕಾಲದಲ್ಲಿ ಇಡೀ ವಿಧಾನಸಭಾ ಕ್ಷೇತ್ರಕ್ಕೆ 15 ಕೋಟಿ ಅನುದಾನ ಬರುತ್ತಿರಲಿಲ್ಲ ಎಂದರು.
ಭಾರತ್ ಜೋಡೋ ಯಾತ್ರೆಯಲ್ಲಿ ಡಿಕೆಶಿ ಕಣ್ಣೀರಿಗೆ ಸಿ.ಟಿ.ರವಿ ವ್ಯಂಗ್ಯ
ನನಗಿರುವ ತಾಕತ್ತನ್ನು ಬಳಸಿ ಒಂದೇ ಗ್ರಾಪಂಗೆ 16 ಕೊಟಿ ರೂ.ಗೂ ಹೆಚ್ಚು ಅನುದಾನ ತಂದಿದ್ದರೂ ನನ್ನೆದುರಿಗೆ ಕೆಲವರು ವಿರುದ್ಧ ಮಾತನಾಡುತ್ತಾರೆ. ಆದರೆ ಅದಕ್ಕೆ ಬೆನ್ನು ತೋರಿಸಿ ಓಡಿಹೋಗುವನು ನಾವಲ್ಲ. ವ್ಯಕ್ತಿಗತವಾಗಿ ಸಣ್ಣ ರಾಜಕಾರಣ ಮಾಡಬಾರದು ಎಂದರು.
2020ರಿಂದ 22 ವರೆಗೆ ಬಾಣೂರು ಪಂಚಾಯಿತಿಗೆ 16.74 ಕೋಟಿ ರೂ. ವೆಚ್ಚದ ಕಾಮಗಾರಿ ಮಂಜೂರು ಮಾಡಿಸಲಾಗಿದೆ. ಈಗ 40 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಹಾಗೂ ದೇವಸ್ಥಾನದ ಕಾಮಗಾರಿ ಆರಂಭಿಸಲಾಗುತ್ತಿದೆ. ನಾನು 35 ವರ್ಷದಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. ಈ ಭಾಗಕ್ಕೆ 2008 ರಿಂದ ಶಾಸಕನಾಗಿದ್ದೇನೆ. 2008 ಶಿವಪುರವನ್ನು ಇಂದಿನ ಶಿವಪುರವನ್ನು ಕಣ್ಣಮುಂದೆ ತಂದುಕೊಳ್ಳಿ. ನಾನು ಶಾಸಕರಾಗಿ ಬರುವ ಮುನ್ನ ಇಡೀ ಊರಿನಲ್ಲಿ ಒಂದು ತುಂಡು ಸಿಮೆಂಟ್ ರಸ್ತೆ ಇರಲಿಲ್ಲ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಮಾತನಾಡಿ, ಇಡೀ ಊರಿನ ಅಭಿವೃದ್ಧಿಗೆ ಶಾಸಕರು ಸಹಕರಿಸಿದ್ದಾರೆ. ಈಗಲೂ ಹಲವು ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಬಾಣೂರು ಪಂಚಾಯಿತಿ ಸಮಗ್ರ ಅಭಿವೃದ್ಧಿ ಅವರ ಕಾಳಜಿ. ಈ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸಲು ಜಿಲ್ಲಾಧಿಕಾರಿಗಳ ಜೊತೆ ಶಾಸಕರು ಚರ್ಚಿಸಿದ್ದಾರೆ. ಅವರ ಬೆಂಬಲಕ್ಕೆ ಎಲ್ಲರೂ ಇರಬೇಕು ಎಂದು ಮನವಿ ಮಾಡಿದರು. ಗ್ರಾ.ಪಂ.ಅಧ್ಯಕ್ಷೆ ಮಮತಾ ಜ್ಞಾನೇಂದ್ರ, ಕಡೂರು ತಾಲೂಕು ತಹಸೀಲ್ದಾರ್ ಉಮೇಶ್, ಎಸ್‌ಡಿಎಂಸಿ ಅಧ್ಯಕ್ಷ ಉಮಾಕಾಂತ್ ಉಪಸ್ಥಿತರಿದ್ದರು. ಆರ್‌ಎಸ್‌ಎಸ್ ದೇಶ ಭಕ್ತ ಸಂಘಟನೆ, ಸಿದ್ದರಾಮಯ್ಯ ವಿರುದ್ದ ಸಿ.ಟಿ ರವಿ ಕಿಡಿ