ಭಿನ್ನಾಭಿಪ್ರಾಯ ಇದೆ, ಅಸಮಾಧಾನ ಅಲ್ಲ: ಪರಮೇಶ್ವರ್ ಮೊದಲ ಬಹಿರಂಗ ಹೇಳಿಕೆ
‘ಕೆಲ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯವಿತ್ತು. ಆದರೆ ಅದನ್ನು ಅಸಮಾಧಾನ ಎಂದು ಪರಿಗಣಿಸುವ ಅಗತ್ಯವಿಲ್ಲ. ನನ್ನ ಬಗೆಗಿನ ಎಲ್ಲಾ ವಿಷಯಗಳನ್ನೂ ಸುರ್ಜೇವಾಲಾ ಅವರೊಂದಿಗೆ ಚರ್ಚಿಸಿದ್ದೇನೆ. ಹಲವು ವಿಷಯಗಳ ಕುರಿತು ಮಹತ್ವದ ಚರ್ಚೆಯೇ ನಡೆದಿದೆ’ ಎಂದು ಕೆಪಿಸಿಸಿ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರು (ಫೆ.04): ‘ಕೆಲ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯವಿತ್ತು. ಆದರೆ ಅದನ್ನು ಅಸಮಾಧಾನ ಎಂದು ಪರಿಗಣಿಸುವ ಅಗತ್ಯವಿಲ್ಲ. ನನ್ನ ಬಗೆಗಿನ ಎಲ್ಲಾ ವಿಷಯಗಳನ್ನೂ ಸುರ್ಜೇವಾಲಾ ಅವರೊಂದಿಗೆ ಚರ್ಚಿಸಿದ್ದೇನೆ. ಹಲವು ವಿಷಯಗಳ ಕುರಿತು ಮಹತ್ವದ ಚರ್ಚೆಯೇ ನಡೆದಿದೆ’ ಎಂದು ಕೆಪಿಸಿಸಿ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಭಿನ್ನಾಭಿಪ್ರಾಯ ಇರಬಹುದು. ನಿಜ, ಹಾಗಂತ ಅಸಮಾಧಾನ ಎಂದು ಅರ್ಥೈಸುವುದು ಸರಿಯಲ್ಲ.
ನನ್ನ ಅಭಿಪ್ರಾಯಗಳನ್ನು ಸುರ್ಜೇವಾಲಾ ಅವರಿಗೆ ಹೇಳಿದ್ದೇನೆ. ಮಹತ್ವದ ಚರ್ಚೆಯೇ ನಡೆದಿದೆ ಎಂದರು. ಆದರೆ, ರಾಜೀನಾಮೆ ವಿಚಾರವಾಗಿ ಚಕಾರವೆತ್ತಲಿಲ್ಲ. ‘ನಾನು ಎಂಟು ವರ್ಷಗಳ ಸುದೀರ್ಘ ಕಾಲ ರಾಜ್ಯ ಕಾಂಗ್ರೆಸ್ ಅಧ್ಯಕ್ಷನಾಗಿದ್ದೆ. ಎರಡು ಲೋಕಸಭೆ ಚುನಾವಣೆಯನ್ನು ನಿಭಾಯಿಸಿದ್ದೆ. ಈ ಅನುಭವದ ಆಧಾರದ ಮೇಲೆ ಸುರ್ಜೇವಾಲಾ ಅವರು ನನ್ನನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ ಎಂದರು. ಹತ್ತು ದಿನಗಳ ಹಿಂದೆ ಕರಾವಳಿಯಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ವೇಳೆ ಪರಮೇಶ್ವರ್ ಅವರ ಸಮಿತಿ ಕರಾವಳಿಗಾಗಿ ಸಿದ್ಧಪಡಿಸಿದ್ದ ಪ್ರಣಾಳಿಕೆ ಘೋಷಣೆಗಳನ್ನು ಬಿ.ಕೆ.ಹರಿಪ್ರಸಾದ್ ಅವರು ಪ್ರಕಟಿಸಿದ್ದರು.
ದಾವಣಗೆರೆಯಲ್ಲಿ ಬಿಜೆಪಿ ರಥಯಾತ್ರೆ ಮಹಾಸಂಗಮ: ಸಿ.ಟಿ.ರವಿ
ಇದರಿಂದ ಕೋಪಗೊಂಡ ಪರಮೇಶ್ವರ್ ಅದೇ ದಿನ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಸುರ್ಜೇವಾಲಾ ಅವರು ಸತತ 2 ದಿನಗಳ ಕಾಲ ಭೇಟಿ ಮಾಡಿ ಮನವೊಲಿಕೆ ಮಾಡಿದ್ದು, ಶುಕ್ರವಾರ ಕುರುಡುಮಲೆಯ ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಅತೃಪ್ತಿ ಶಮನಗೊಂಡಿರುವ ಸೂಚನೆ ನೀಡಿದ್ದಾರೆ.
ಪರಮೇಶ್ವರ್ ನಮ್ಮ ಪಕ್ಷದ ಆಸ್ತಿ, ಅಸಮಾಧಾನ ಇಲ್ಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಪರಮೇಶ್ವರ್ ಅವರು ನಮ್ಮ ಪಕ್ಷದ ಆಸ್ತಿ. ಸುದೀರ್ಘ ಕಾಲ ಅವರು ಪಕ್ಷ ಕಟ್ಟಿದ್ದಾರೆ. ಅವರಿಗೆ ಯಾವುದೇ ಅಸಮಾಧಾನ ಇಲ್ಲ. ಇದೀಗ ಅವರ ನೇತೃತ್ವದಲ್ಲೇ ಬೆಂಗಳೂರು ಸಂಚಾರ ದಟ್ಟಣೆ ನಿರ್ವಹಣೆ ಕುರಿತು ಅಧ್ಯಯನ ನಡೆಸಲು ಸಿಂಗಾಪುರಕ್ಕೆ ತಂಡ ತೆರಳುತ್ತಿದೆ ಎಂದು ಹೇಳಿದರು.
ಅಮಿತ್ ಶಾಗೆ ಸಿಡಿ ಷಡ್ಯಂತ್ರ ದಾಖಲೆ ನೀಡಿದೆ: ರಮೇಶ್ ಜಾರಕಿಹೊಳಿ
ರಾಜ್ಯಕ್ಕೆ ಪ್ರಣಾಳಿಕೆ ನೀಡುವಾಗ ಬೆಂಗಳೂರಿಗೆ ಬಂದಿರುವ ಕಳಂಕ ತೊಡದು ಹಾಕುವ ಪ್ರಯತ್ನ ಮಾಡುತ್ತೇವೆ. ದೇಶ ಕರ್ನಾಟಕದ ಮೇಲೆ ಅವಲಂಬಿತವಾಗಿದ್ದು ಹೆಚ್ಚಿನ ಆದಾಯ ರಾಜ್ಯದಿಂದಲೇ ಹೋಗುತ್ತಿದೆ. ಈ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಬರುತ್ತದೆ. ಆಗ ಗ್ರಾಮೀಣ ಪ್ರದೇಶದ ಭಾಗಗಳ ಅಭಿವೃದ್ಧಿಗೆ ಯೋಜನೆ ರೂಪಿಸಬಹುದು. ಈ ವಿಚಾರದ ಬಗ್ಗೆ ಚರ್ಚೆ ಮಾಡಲು ಸುರ್ಜೇವಾಲಾ ಅವರು ಪರಮೇಶ್ವರ್ ಅವರನ್ನು ಭೇಟಿ ಮಾಡಿದ್ದರು ಎಂದರು.