ನೂತನ ವಾರ್ಡ್ ರಚನೆಯಲ್ಲಿಯೂ ಲೋಪದೋಷ: ಮಾಜಿ ಕಾರ್ಪೊರೇಟರ್‌ಗಳ ಆರೋಪ
ಹೈಕೋರ್ಟ್ ಸೂಚನೆ ಮೇರೆಗೆ ಬಿಬಿಎಂಪಿ ವಾರ್ಡ್ ಮರು ವಿಂಗಡಣೆಯಲ್ಲಿನ ಲೋಪ ಸರಿಪಡಿಸಿ ಹೊಸ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಆದರೆ, ಯಾವುದೇ ನಿರ್ದಿಷ್ಟ ಮಾನದಂಡವಿಲ್ಲದೆ ಹೊಸದಾಗಿ ವಾರ್ಡ್ ಮರು ವಿಂಗಡಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಗಿರೀಶ್ ಗರಗ
ಬೆಂಗಳೂರು (ಆ.23): ಹೈಕೋರ್ಟ್ ಸೂಚನೆ ಮೇರೆಗೆ ಬಿಬಿಎಂಪಿ ವಾರ್ಡ್ ಮರು ವಿಂಗಡಣೆಯಲ್ಲಿನ ಲೋಪ ಸರಿಪಡಿಸಿ ಹೊಸ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಆದರೆ, ಯಾವುದೇ ನಿರ್ದಿಷ್ಟ ಮಾನದಂಡವಿಲ್ಲದೆ ಹೊಸದಾಗಿ ವಾರ್ಡ್ ಮರು ವಿಂಗಡಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹೊಸದಾಗಿ ವಾರ್ಡ್ ವಿಂಗಡಣೆ ಮಾಡುವ ವೇಳೆ ಜನಸಂಖ್ಯೆ ಹಾಗೂ ವಿಸ್ತೀರ್ಣದಂತಹ ಅಂಶಗಳಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳಲಾಗಿಲ್ಲ. ಇದು ವಾರ್ಡ್‌ಗಳ ನಡುವೆ ತೀವ್ರ ಅಸಮಾನತೆ ಉಂಟಾಗಲು ಕಾರಣವಾಗಿದೆ ಎಂಬುದು ಮುಖ್ಯ ಆರೋಪ.
ವಾಸ್ತವವಾಗಿ ಹಿಂದಿನ ಸರ್ಕಾರದ ಅವಧಿಯಲ್ಲಿ 35 ಸಾವಿರ ಜನಸಂಖ್ಯೆಯನ್ನು ಸರಾಸರಿಯಾಗಿಟ್ಟುಕೊಂಡು ವಾರ್ಡ್‌ಗಳನ್ನು ರಚಿಸಿತ್ತು. ಅಲ್ಲದೆ ವಾರ್ಡ್‌ಗಳು ನಿರ್ದಿಷ್ಟವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೇ ಇರುವಂತೆ ಮಾಡಲು ಕೆಲ ವಾರ್ಡ್‌ಗಳ ಜನಸಂಖ್ಯೆ ಹೆಚ್ಚು ಅಥವಾ ಕಡಿಮೆ ಮಾಡಲಾಗಿತ್ತು. ಇದರಿಂದ ಒಂದು ವಾರ್ಡ್ ಎರಡು ಅಥವಾ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿಹೋಗುವ ಸಮಸ್ಯೆ ತಪ್ಪಿಸಲಾಗಿತ್ತು. ಆ ಪ್ರಕಾರ ಕೆಲ ವಾರ್ಡ್‌ಗಳ ಜನಸಂಖ್ಯೆ 33 ಸಾವಿರಕ್ಕೆ ಇಳಿದಿದ್ದರೆ, ಇನ್ನೂ ಕೆಲ ವಾರ್ಡ್‌ಗಳ ಜನಸಂಖ್ಯೆ 39 ಸಾವಿರದವರೆಗೆ ಹೆಚ್ಚಾಗಿತ್ತು.
100 ದಿನದಲ್ಲಿ ಎತ್ತಿನಹೊಳೆಯಿಂದ ನಾಲೆಗೆ ನೀರು ಗ್ಯಾರಂಟಿ: ಡಿಕೆಶಿ
ಆದರೆ, ಈ ಮಾನದಂಡವನ್ನು ಹಾಲಿ ಸರ್ಕಾರವು ಮರು ವಿಂಗಡಣೆ ವೇಳೆ ಅನುಸರಿಸಿಲ್ಲ. ಹೊಸದಾಗಿ ರಚಿಸಲಾಗಿರುವ 225 ವಾರ್ಡ್‌ಗಳ ಪೈಕಿ ಅಂದಾಜು 120 ವಾರ್ಡ್‌ಗಳ ಜನಸಂಖ್ಯೆ 36ರಿಂದ 39 ಸಾವಿರ ಜನಸಂಖ್ಯೆಯ ಆಸುಪಾಸಿನಲ್ಲಿವೆ. ಉಳಿದ ವಾರ್ಡ್‌ಗಳು 35 ಸಾವಿರಕ್ಕಿಂತ ಕಡಿಮೆ ಅಥವಾ 40 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿವೆ. ಈ ಕ್ರಮದಿಂದಾಗಿ ಜನಸಂಖ್ಯೆ ಆಧಾರದಲ್ಲಿ ವಾರ್ಡ್‌ಗಳನ್ನು ರಚಿಸುವ ಕ್ರಮ ಸಮರ್ಪಕವಾಗಿ ಪಾಲನೆಯಾಗಿಲ್ಲ ಎಂದು ಮಾಜಿ ಕಾರ್ಪೋರೇಟರ್‌ಗಳು ದೂರುತ್ತಿದ್ದಾರೆ.
ಜನಸಂಖ್ಯೆಯಲ್ಲಿ ಮಾತ್ರವಲ್ಲದೆ, ವಾರ್ಡ್‌ಗಳ ವಿಸ್ತೀರ್ಣತೆಯಲ್ಲೂ ಸಾಕಷ್ಟುವ್ಯತ್ಯಾಸ ಕಂಡುಬಂದಿದೆ. ವರ್ತೂರು ವಾರ್ಡ್‌ನ ವಿಸ್ತೀರ್ಣ 28.40 ಚದರ ಕಿ.ಮೀ.ಗಳಷ್ಟಿದೆ. ಬೆಳತ್ತೂರು ವಾರ್ಡ್ 15.20 ಚದರ ಕಿಮೀ, ಹೊರಮಾವು ವಾರ್ಡ್ 13.10 ಚದರ ಕಿಮೀ ವಿಸ್ತೀರ್ಣವನ್ನು ಹೊಂದಿವೆ. ಅದೇ ಪಾದರಾಯನಪುರ ವಾರ್ಡ್‌ನ ವಿಸ್ತೀರ್ಣ ಕೇವಲ 0.27 ಚದರ ಕಿ.ಮೀ., ರಾಯಪುರ 0.31 ಚದರ ಕಿಮೀ, ಕೆಂಪಾಪುರ ಅಗ್ರಹಾರ 0.33 ಚದರ ಕಿಮೀ ವಿಸ್ತೀರ್ಣವನ್ನು ಹೊಂದಿವೆ. ಹೀಗೆ 20ಕ್ಕೂ ಹೆಚ್ಚಿನ ವಾರ್ಡ್‌ಗಳ ವಿಸ್ತೀರ್ಣ 1 ಚದರ ಕಿಮೀಗಿಂತಲೂ ಕಡಿಮೆ ವಿಸ್ತೀರ್ಣ ಹೊಂದಿದ್ದರೆ, 30ಕ್ಕೂ ಹೆಚ್ಚಿನ ವಾರ್ಡ್‌ಗಳ ವಿಸ್ತೀರ್ಣ 5 ಚದರ ಕಿ.ಮೀ.ಗೂ ಹೆಚ್ಚಿನ ವಿಸ್ತೀರ್ಣ ಹೊಂದಿವೆ. ಇದು ವಾರ್ಡ್‌ಗಳ ಆಡಳಿತ ನಿರ್ವಹಣೆಗೆ ಸಮಸ್ಯೆ ತಂದೊಡ್ಡಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಗಡಿ ಬದಲಿಗಷ್ಟೇ ಮರುವಿಂಗಡಣೆ?: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಲಾದ ವಾರ್ಡ್ ಮರುವಿಂಗಡಣೆಯಲ್ಲಿ ಕಾಂಗ್ರೆಸ್ ಪ್ರಭಾವ ಹೆಚ್ಚಿರುವ ವಾರ್ಡ್‌ಗಳ ಗಡಿಯನ್ನು ಬದಲಿಸಿ, ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪ್ರತಿಕೂಲ ವಾತಾವರಣ ಸೃಷ್ಟಿಯಾಗುವಂತೆ ಮಾಡಲಾಗಿತ್ತು. ಕಾಂಗ್ರೆಸ್ ಮತದಾರರು ಹೆಚ್ಚಿರುವ ಬಡಾವಣೆಗಳನ್ನು ವಿಭಜಿಸಿ ಬೇರೆಬೇರೆ ವಾರ್ಡ್‌ಗಳಿಗೆ ವಿಂಗಡಿಸಿ ಕ್ರಮ ಕೈಗೊಳ್ಳಲಾಗಿತ್ತು ಎಂಬ ಆರೋಪಗಳಿದ್ದವು. ಇದೀಗ ಕಾಂಗ್ರೆಸ್ ಸರ್ಕಾರ ತಮಗೆ ಅನುಕೂಲವಾಗುವಂತೆ ಗಡಿ ನಿಗದಿ ಮಾಡಿಕೊಂಡಿದೆ ಎಂದು ಬಿಜೆಪಿಯ ಮಾಜಿ ಕಾರ್ಪೋರೇಟರ್‌ಗಳು ಆರೋಪಿಸುತ್ತಿದ್ದಾರೆ.
ಹೈಕೋರ್ಟ್ ಸೂಚನೆಯಂತೆ ವಾರ್ಡ್ ಮರುವಿಂಗಡಣೆ: ಬಿಬಿಎಂಪಿಯ 198 ವಾರ್ಡ್‌ಗಳಲ್ಲಿ ಜನಸಂಖ್ಯೆ ವ್ಯತ್ಯಾಸವಿದ್ದು, ಆಡಳಿತಾತ್ಮಕ ಸಮಸ್ಯೆ ಉಂಟಾಗುತ್ತಿದೆ ಎಂಬ ಕಾರಣಕ್ಕಾಗಿ ಹಿಂದಿನ ಸರ್ಕಾರ 35 ಸಾವಿರ ಜನಸಂಖ್ಯೆಗೆ ಒಂದು ವಾರ್ಡ್ ರಚನೆಗೆ ಮುಂದಾಗಿತ್ತು. ಅದರಂತೆ 198 ವಾರ್ಡ್‌ಗಳನ್ನು 243 ವಾರ್ಡ್‌ಗಳನ್ನಾಗಿ ವಿಂಗಡಿಸಲಾಗಿತ್ತು. ಆದರೆ, ಅದರ ವಿರುದ್ಧ ಕೆಲವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ವಾರ್ಡ್ ಮರುವಿಂಗಡಣೆಯಲ್ಲಿನ ಲೋಪಗಳನ್ನು ಸರಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ ಹೊಸದಾಗಿ ವಾರ್ಡ್ ಮರುವಿಂಗಡಣೆ ಮಾಡಿರುವ ರಾಜ್ಯ ಸರ್ಕಾರ, 243 ವಾರ್ಡ್‌ಗಳನ್ನು 225ಕ್ಕೆ ಇಳಿಸಿ ಮರುವಿಂಗಡಣೆ ಮಾಡಿದೆ.
ಹೆಚ್ಚು ಜನಸಂಖ್ಯೆ ಇರುವ ವಾರ್ಡ್‌ಗಳು:
*ಚೌಡೇಶ್ವರಿ: 43,204
*ಕೆಂಪೇಗೌಡ ವಾರ್ಡ್: 43,080
*ಕಮ್ಮಗೊಂಡನಹಳ್ಳಿ: 42,954
*ಮಲ್ಲಸಂದ್ರ: 42930
*ಹೂಡಿ: 42,605
*ಯಲಹಂಕ ಉಪನಗರ: 42,647
ಕಡಿಮೆ ಜನಸಂಖ್ಯೆ ಇರುವ ವಾರ್ಡ್‌ಗಳು:
*ಕೂಡ್ಲು (ಆನೆಕಲ್): 16,757
*ನಾಯಂಡಹಳ್ಳಿ: 32,053
*ಸೋಮೇಶ್ವರ ದೇವಸ್ಥಾನ: 32,064
*ಮನೋರಾಯನಪಾಳ್ಯ: 32,248
*ವಿ.ನಾಗೇನಹಳ್ಳಿ: 32,286
*ಚಲವಾದಿಪಾಳ್ಯ: 32,311
*ಕೆ.ಆರ್.ಮಾರುಕಟ್ಟೆ: 32,311
‘ಅತೃಪ್ತ’ ಸೋಮಶೇಖರ್ ಸದ್ಯದಲ್ಲೇ ದಿಲ್ಲಿಗೆ ದೌಡು: ಕಾಂಗ್ರೆಸ್ ಪಕ್ಷ ಸೇರ್ಪಡೆ?
ಬಿಜೆಪಿ ಸರ್ಕಾರ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು 243 ವಾರ್ಡ್‌ಗಳನ್ನು ರಚಿಸಿತ್ತು. ಅದರಿಂದ ಎಲ್ಲ ವಾರ್ಡ್‌ಗಳು ಒಂದೆ ಸಮವಾಗಿರುತ್ತಿದ್ದವು. ಆದರೀಗ ಜನಸಂಖ್ಯೆಯ ಮಿತಿಯಿಲ್ಲದೆ, ಮಾನದಂಡ ಇಟ್ಟುಕೊಳ್ಳದೆ ವಾರ್ಡ್‌ಗಳನ್ನು ರಚಿಸಲಾಗಿದೆ. ಕಾಂಗ್ರೆಸ್‌ಗೆ ಅನುಕೂಲವಾಗುವಂತೆ ವಾರ್ಡ್‌ಗಳು ರಚನೆಯಾಗಿವೆ.
-ಪದ್ಮನಾಭರೆಡ್ಡಿ, ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ
33 ಸಾವಿರದಿಂದ 42 ಸಾವಿರದವರೆಗೆ ಜನಸಂಖ್ಯೆ ಇರುವಂತೆ ವಾರ್ಡ್‌ಗಳನ್ನು ರಚಿಸಲಾಗಿದೆ. ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡೇ ವಾರ್ಡ್‌ಗಳು ರಚನೆಯಾಗಿವೆ. ಹಿಂದೆ ಮಾಡಿದ್ದ ಲೋಪಗಳನ್ನು ಈಗ ಸರಿಪಡಿಸಲಾಗಿದೆ.
-ಎಂ.ಶಿವರಾಜು, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ